ಪದ್ಯ ೩೫: ಅರ್ಜುನನು ದ್ರೋಣರಿಗೆೆ ಏನು ಹೇಳಿದನು?

ದೇವ ಭಾರದ್ವಾಜ ಬಿಲು ವಿ
ದ್ಯಾ ವಿಷಯ ನವರುದ್ರ ಘನ ಶ
ಸ್ತ್ರಾವಳೀ ನಿರ್ಮಾಣ ನೂತನ ಕಮಲಭವಯೆನುತ
ಕೋವಿದನ ಶರತಿಮಿರವನು ಗಾಂ
ಡೀವಿಯಗಣಿತ ಬಾಣ ಭಾನು ಕ
ರಾವಳಿಯಲಪಹರಿಸಿದನು ಸುರರಾಜಸುತ ನಗುತ (ವಿರಾಟ ಪರ್ವ, ೯ ಸಂಧಿ, ೩೫ ಪದ್ಯ)

ತಾತ್ಪರ್ಯ:
ಹೇ ಭಾರದ್ವಾಜ ದೇವ, ನೀನು ಧರ್ನುವಿದ್ಯೆಯಲ್ಲಿ ನೂತನ ರುದ್ರ, ಶಸ್ತ್ರಾವಳಿಗಳ ಪ್ರಯೋಗದಲ್ಲಿ ನೂತನ ಬ್ರಹ್ಮ, ಎಂದು ಅರ್ಜುನನು ದ್ರೋಣನನ್ನು ಹೊಗಳಿದನು. ದ್ರೋಣನ ಬಾಣಗಳ ಕತ್ತಲನ್ನು ತನ್ನ ಬಾಣಗಳ ಬಿಸಿಲಿನಿಂದ ನಾಶಪಡಿಸಿದನು.

ಅರ್ಥ:
ಭಾರದ್ವಾಜ: ದ್ರೋಣ; ಬಿಲು: ಚಾಪ; ವಿದ್ಯ: ಜ್ಞಾನ; ವಿಷಯ: ವಿಚಾರ; ನವ: ನೂತನ; ರುದ್ರ: ಶಿವನ ಅಂಶ; ಘನ: ಶ್ರೇಷ್ಠ; ಶಸ್ತ್ರ: ಆಯುಧ; ಆವಳಿ: ಗುಂಪು; ನಿರ್ಮಾಣ: ರಚನೆ; ಕಮಲಭವ: ಕಮಲದಲ್ಲಿ ಹುಟ್ಟಿದವ (ಬ್ರಹ್ಮ); ಕೋವಿದ: ಪಂಡಿತ; ಶರ: ಬಾಣ; ತಿಮಿರ: ಕತ್ತಲೆ; ಅಗಣಿತ: ಎಣಿಸಲಾಗದ; ಬಾಣ: ಶರ; ಭಾನು: ರವಿ; ಕರ: ಕಿರಣ, ರಶ್ಮಿ; ಆವಳಿ: ಗುಮ್ಪು; ಅಪಹರಿಸು: ನಾಶಪಡಿಸು, ಸಾಗಿಸು; ಸುರರಾಜ: ಇಂದ್ರ; ಸುತ: ಮಗ; ನಗು: ಹರ್ಷ;

ಪದವಿಂಗಡಣೆ:
ದೇವ +ಭಾರದ್ವಾಜ +ಬಿಲು +ವಿ
ದ್ಯಾ +ವಿಷಯ +ನವರುದ್ರ +ಘನ+ ಶ
ಸ್ತ್ರಾವಳೀ+ ನಿರ್ಮಾಣ +ನೂತನ+ ಕಮಲಭವಯೆನುತ
ಕೋವಿದನ +ಶರ+ತಿಮಿರವನು +ಗಾಂ
ಡೀವಿ+ಅಗಣಿತ +ಬಾಣ +ಭಾನು +ಕ
ರಾವಳಿಯಲ್+ಅಪಹರಿಸಿದನು +ಸುರರಾಜಸುತ +ನಗುತ

ಅಚ್ಚರಿ:
(೧) ದ್ರೋಣರನ್ನು ಹೊಗಳಿದ ಪರಿ – ದೇವ ಭಾರದ್ವಾಜ ಬಿಲು ವಿದ್ಯಾ ವಿಷಯ ನವರುದ್ರ ಘನ ಶಸ್ತ್ರಾವಳೀ ನಿರ್ಮಾಣ ನೂತನ ಕಮಲಭವಯೆನುತ
(೨) ಅರ್ಜುನನ ಕೌಶಲ್ಯ – ಕೋವಿದನ ಶರತಿಮಿರವನು ಗಾಂಡೀವಿಯಗಣಿತ ಬಾಣ ಭಾನು ಕರಾವಳಿಯಲಪಹರಿಸಿದನು ಸುರರಾಜಸುತ ನಗುತ

ಪದ್ಯ ೭: ನಕುಲನ ಸೈನ್ಯದ ಕರಾವಳಿಯ ಆಕ್ರಮಣ ಹೇಗಿತ್ತು?

ತಳಿತು ಬಿಟ್ಟುದು ಸೇನೆ ಪಡುವಣ
ಜಲಧಿಯ ಕರಾವಳಿಗಳಲಿ ಕೇ
ವಳಿಸಿದರು ಕೊಲ್ಲಣಿಗೆಯಲಿ ಕೊಂಡರು ಸುವಸ್ತುಗಳ
ಕಳಿವರಿದು ಹಿಮಗಿರಿಯ ಮೂಲಗೆ
ನಿಲುಕಿ ಸಕಲ ಮ್ಲೇಚ್ಛ ಭೂಪಾ
ವಳಿಯ ಭಂಗಿಸಿ ಹೇರಿಸಿದನೊಂಟೆಗಳಲಾ ಧನವ (ಸಭಾ ಪರ್ವ, ೬ ಸಂಧಿ, ೭ ಪದ್ಯ)

ತಾತ್ಪರ್ಯ:
ನಕುಲನ ಸೇನೆಯು ಪಶ್ಚಿಮ ದಿಕ್ಕಿನ ರಾಜರನ್ನು ಗೆದ್ದು ಆಯಾಸವಿಲ್ಲದೆ ಅನೇಕ ಸುವಸ್ತುಗಳನ್ನು ವಶಪಡಿಸಿಕೊಂಡರು. ಹಿಮಗಿರಿಯ ಮೂಲೆಗೆ ಹೋಗಿ ಮ್ಲೇಚ್ಛರಾಜರನ್ನು ಗೆದ್ದು ಒಂಟೆಗಳ ಮೇಲೆ ಹಣವನ್ನು ಹೇರಿಸಿದರು.

ಅರ್ಥ:
ತಳಿತ: ಕೂಡಿದ, ಚದುರಿದ; ಸೇನೆ: ಸೈನ್ಯ; ಪಡುವಣ: ಪಶ್ಚಿಮ; ಜಲಧಿ: ಸಾಗರ; ಕರಾವಳಿ: ತೀರ; ಕೇವಳಿಸು: ಜೋಡಿಸು; ಕೊಲ್ಲಣಿಗೆ: ಎಡೆಯಾಟ; ಕೊಂಡರು: ತೆಗೆದುಕೊಳ್ಳು; ಸುವಸ್ತು: ಶ್ರೇಷ್ಠವಾದ ವಸ್ತು; ಕಳಿವರಿ: ಮಿತಿಮೀರು; ಹಿಮಗಿರಿ: ಹಿಮದ ಬೆಟ್ಟ; ಮೂಲೆ: ಕೋನೆ; ನಿಲುಕಿ: ಹೋಗಿ, ಸೇರಿ; ಸಕಲ: ಎಲ್ಲಾ; ಭೂಪ: ರಾಜ; ಭೂಪಾವಳಿ: ರಾಜರ ಗುಂಪು; ಭಂಗಿಸು: ನಾಶಮಾಡು; ಹೇರಿಸು: ಪೇರಿಸು; ಧನ: ಐಶ್ವರ್ಯ;

ಪದವಿಂಗಡಣೆ:
ತಳಿತು +ಬಿಟ್ಟುದು +ಸೇನೆ +ಪಡುವಣ
ಜಲಧಿಯ +ಕರಾವಳಿಗಳಲಿ +ಕೇ
ವಳಿಸಿದರು +ಕೊಲ್ಲಣಿಗೆಯಲಿ +ಕೊಂಡರು +ಸುವಸ್ತುಗಳ
ಕಳಿವರಿದು +ಹಿಮಗಿರಿಯ +ಮೂಲಗೆ
ನಿಲುಕಿ +ಸಕಲ +ಮ್ಲೇಚ್ಛ +ಭೂಪಾ
ವಳಿಯ +ಭಂಗಿಸಿ +ಹೇರಿಸಿದನ್+ಒಂಟೆಗಳಲ್+ಆ+ ಧನವ

ಅಚ್ಚರಿ:
(೧) “ಕ” ಕಾರದ ಪದಗಳ ಜೋಡಣೆ: ಕರಾವಳಿಗಳಲಿ ಕೇವಳಿಸಿದರು ಕೊಲ್ಲಣಿಗೆಯಲಿ ಕೊಂಡರು