ಪದ್ಯ ೩೫: ಅರ್ಜುನನು ಏನೆಂದು ಪ್ರಮಾಣ ಮಾಡಿದನು?

ಹರನ ದುರ್ಗದಲಿರಲಿ ಮೇಣಾ
ಹರಿಯ ಕಡಲೊಳಗಿರಲಿ ಬ್ರಹ್ಮನ
ಕರಕಮಂಡಲದೊಳಗೆ ಹುದುಗಲಿ ರವಿಯ ಮರೆಹೊಗಲಿ
ಉರಗ ಭುವನದೊಳಿರಲಿ ಮೇಣ್ ಸಾ
ಗರವ ಮುಳುಗಲಿ ನಾಳೆ ಪಡುವಣ
ತರಣಿ ತೊಲಗದ ಮುನ್ನ ಕೊಲುವೆನು ವೈರಿ ಸೈಂಧವನ (ದ್ರೋಣ ಪರ್ವ, ೮ ಸಂಧಿ, ೩೫ ಪದ್ಯ)

ತಾತ್ಪರ್ಯ:
ಸೈಂಧವನು ಶಿವನ ಕೋಟೆಯಲ್ಲಿರಲಿ, ವಿಷ್ಣುವಿನ ಕ್ಷೀರಸಾಗರದೊಳಗಿರಲಿ, ಬ್ರಹ್ಮನ ಕೈಯಲ್ಲಿರುವ ಕಮಂಡಲದೊಳಗಿರಲಿ, ಸೂರ್ಯನಿಗೆ ಶರಣಾಗಲಿ, ಪಾತಾಳದಲ್ಲಿರಲಿ, ಸಾಗರದಲ್ಲಿ ಮುಳುಗಿರಲಿ, ನಾಳೆ ಸೂರ್ಯನು ಮುಳುಗುವುದರೊಳಗೆ ನನ್ನ ವೈರಿ ಸೈಂಧವನನ್ನು ಸಾಯಿಸುತ್ತೇನೆ ಎಂದು ಅರ್ಜುನನು ಪ್ರಮಾಣ ಮಾಡಿದನು.

ಅರ್ಥ:
ಹರ: ಈಶ್ವರ; ದುರ್ಗ: ಕೋಟೆ; ಮೇಣ್: ಅಥವ; ಹರಿ: ವಿಷ್ಣು; ಕಡಲು: ಸಾಗರ್; ಬ್ರಹ್ಮ: ಅಜ; ಕರ: ಹಸ್ತ; ಕಮಂಡಲ: ಮುನಿಗಳು ಕೈಯಲ್ಲಿ ಹಿಡಿಯುವ ಪಾತ್ರೆ; ಹುದುಗು: ಅಡಗು, ಮರೆಯಾಗು; ರವಿ: ಸೂರ್ಯ; ಮರೆ: ಮೊರೆ, ಶರಣಾಗತಿ; ಉರಗ: ಹಾವು; ಭವನ: ಜಗತ್ತು; ಸಾಗರ: ಸಮುದ್ರ; ಮುಳೂಗು: ನೀರಿನಲ್ಲಿ ಮೀಯು, ಕಾಣದಾಗು; ಪಡುವಣ: ಪಶ್ಚಿಮ; ತರಣಿ: ಸೂರ್ಯ; ತೊಲಗು: ಹೊರಡು; ಮುನ್ನ: ಮೊದಲು; ಕೊಲು: ಸಾಯಿಸು; ವೈರಿ: ಶತ್ರು;

ಪದವಿಂಗಡಣೆ:
ಹರನ +ದುರ್ಗದಲಿರಲಿ +ಮೇಣ್+ ಆ
ಹರಿಯ +ಕಡಲೊಳಗಿರಲಿ +ಬ್ರಹ್ಮನ
ಕರಕಮಂಡಲದೊಳಗೆ +ಹುದುಗಲಿ +ರವಿಯ +ಮರೆಹೊಗಲಿ
ಉರಗ +ಭುವನದೊಳಿರಲಿ +ಮೇಣ್ +ಸಾ
ಗರವ +ಮುಳುಗಲಿ +ನಾಳೆ +ಪಡುವಣ
ತರಣಿ +ತೊಲಗದ +ಮುನ್ನ +ಕೊಲುವೆನು +ವೈರಿ +ಸೈಂಧವನ

ಅಚ್ಚರಿ:
(೧) ಸೂರ್ಯಾಸ್ತ ಎಂದು ಹೇಳುವ ಪರಿ – ಪಡುವಣ ತರಣಿ ತೊಲಗದ ಮುನ್ನ