ಪದ್ಯ ೯೯: ಊರ್ವಶಿಯು ಚಿತ್ರಸೇನನನ್ನು ಹೇಗೆ ಸತ್ಕರಿಸಿದಳು?

ತಾಯೆ ಚಿತ್ತೈಸರಮನೆಯ ಸೂ
ಳಾಯಿತನು ಬಂದೈದನೆನೆ ಕಮ
ಲಾಯತಾಂಬಕಿ ಚಿತ್ರಸೇನನ ಕರೆಸಿದಳು ನಗುತ
ತಾಯೆನುತ ವಸ್ತ್ರಾಭರಣದ ಪ
ಸಾಯವಿತ್ತಳು ಪರಿಮಳದ ತವ
ಲಾಯಿಗಳ ನೂಕಿದಳು ವರ ಕತ್ತುರಿಯ ಕರ್ಪುರದ (ಅರಣ್ಯ ಪರ್ವ, ೮ ಸಂಧಿ, ೯೯ ಪದ್ಯ)

ತಾತ್ಪರ್ಯ:
ಊರ್ವಶಿಯ ಮನೆಯ ದಾಸಿಯರು ಚಿತ್ರಸೇನನನ್ನು ಕಂಡು ಊರ್ವಶಿಯ ಬಳಿ ತೆರಳಿ, ತಾಯಿ, ಇಂದ್ರನ ಅರಮನೆಯ ಸೇವಕನು ಬಂದಿದ್ದಾನೆ ಎಂದು ಹೇಳಲು, ಊರ್ವಶಿಯು ನಗುತ್ತಾ ಚಿತ್ರಸೇನನನ್ನು ಬರೆಮಾಡಿಕೊಂಡು ತನ್ನ ದಾಸಿಯರಿಗೆ ಉಡುಗೊರೆಗಳನ್ನು ತರಲು ಹೇಳಿ, ಚಿತ್ರಸೇನನಿಗೆ ಉಚಿತವಾಗಿ ಸತ್ಕರಿಸಿ, ವಸ್ತ್ರ, ಆಭರಣ, ಕರ್ಪೂರ, ಕಸ್ತೂರಿಗಳ ಭರಣಿಗಳನ್ನು ನೀಡಿದಳು.

ಅರ್ಥ:
ತಾಯೆ: ಮಾತೆ; ಚಿತ್ತೈಸು: ಗಮನವಿಟ್ಟು ಕೇಳು; ಅರಮನೆ: ರಾಜರ ಆಲಯ; ಸೂಳಾಯತ: ಸೇವಕ; ಬಂದು: ಆಗಮಿಸು; ಕಮಲ: ತಾವರೆ; ಆಯತ: ವಿಶಾಲ; ಅಂಬಕ: ಕಣ್ಣು; ಕರೆಸು: ಬರೆಮಾಡು; ನಗು: ಸಂತಸ; ತಾ: ತೆಗೆದುಕೊಂಡು ಬಾ; ವಸ್ತ್ರ: ಬಟ್ಟೆ; ಆಭರಣ: ಒಡವೆ; ಪಸಾಯ: ಉಡುಗೊರೆ; ಪರಿಮಳ: ಸುಗಂಧ; ತವಲಾಯಿ: ಕರ್ಪೂರದ ಬಿಲ್ಲೆ; ನೂಕು: ತಳ್ಳು; ವರ: ಶ್ರೇಷ್ಠ; ಕತ್ತುರಿ: ಕಸ್ತೂರಿ; ಕರ್ಪುರ: ಸುಗಂಧದ ದ್ರವ್ಯ;

ಪದವಿಂಗಡಣೆ:
ತಾಯೆ +ಚಿತ್ತೈಸ್+ಅರಮನೆಯ +ಸೂ
ಳಾಯಿತನು +ಬಂದೈದನ್+ಎನೆ+ ಕಮ
ಲಾಯತ+ಅಂಬಕಿ+ ಚಿತ್ರಸೇನನ +ಕರೆಸಿದಳು +ನಗುತ
ತಾ+ಎನುತ +ವಸ್ತ್ರ+ಆಭರಣದ+ ಪ
ಸಾಯವಿತ್ತಳು+ ಪರಿಮಳದ +ತವ
ಲಾಯಿಗಳ +ನೂಕಿದಳು +ವರ +ಕತ್ತುರಿಯ +ಕರ್ಪುರದ

ಅಚ್ಚರಿ:
(೧)ತಾಯೆ – ಪದವನ್ನು ಬಳಸಿದ ಬಗೆ – ೧, ೪ ಸಾಲು
(೨) ಊರ್ವಶಿಯನ್ನು ಕರೆದ ಪರಿ – ಕಮಲಾಯತಾಂಬಕಿ – ಕಮಲದಂತ ಅಗಲವಾದ ಕಣ್ಣುಳ್ಳವಳು