ಪದ್ಯ ೧೫: ಭಾನುಮತಿಯನ್ನು ಯಾರು ಹಿಂಬಾಲಿಸಿದರು?

ಧರಣಿಪತಿ ಹೊರವಂಟನಂತಃ
ಪುರವ ಬಿಸುಟರು ಭಾನುಮತಿ ಸಹಿ
ತರಸಿಯರು ಹೊರವಂಟರೇಕಾಂಬರದ ಬಿಡುಮುಡಿಯ
ಕರದಬಸುರಿನ ಹೊಯ್ಲ ಕಜ್ಜಳ
ಪರಿಲುಳಿತ ನಯನಾಂಬುಗಳ ಕಾ
ತರಿಪ ಕಮಲಾಕ್ಷಿಯರು ನೆರೆದುದು ಲಕ್ಕ ಸಂಖ್ಯೆಯಲಿ (ಗದಾ ಪರ್ವ, ೧೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಭಾನುಮತಿಯೊಂದಿಗೆ ಅರಮನೆಯನ್ನು ಬಿಟ್ಟು ಹೊರಟನು. ರಾಣಿವಾಸದವರೆಲ್ಲರೂ ಏಕವಸ್ತ್ರವನ್ನು ಧರಿಸಿ ಮುಡಿಯನ್ನು ಬಿಚ್ಚಿಕೊಂಡು ಹೊರಟರು. ಕಣ್ಣೀರು ಧಾರಾಕಾರವಾಗಿ ಸುರಿಯುತ್ತಿರಲು, ಕೈಯಿಂದ ಹೊಟ್ಟೆಯನ್ನು ಹೊಡೆದುಕೊಳ್ಳುತ್ತಾ ಲಕ್ಷ ಸಂಖ್ಯೆಯ ಸ್ತ್ರೀಯರು ಅವರನ್ನು ಹಿಂಬಾಲಿಸಿದರು.

ಅರ್ಥ:
ಧರಣಿಪತಿ: ರಾಜ; ಹೊರವಂಟ: ನಡೆ, ತೆರಳು; ಅಂತಃಪುರ: ರಾಣಿವಾಸದ ಅರಮನೆ; ಬಿಸುಟು: ಹೊರಹಾಕು; ಸಹಿತ: ಜೊತೆ; ಅರಸಿ: ರಾಣಿ; ಏಕ: ಒಂದೇ; ಅಂಬರ:ಬಟ್ಟೆ; ಬಿಡು: ತೆರೆದ; ಮುಡಿ: ಶಿರ, ಕೂದಲು; ಕರ: ಹಸ್ತ; ಬಸುರು: ಹೊಟ್ಟೆ; ಹೊಯ್ಲು: ಹೊಡೆತ; ಕಜ್ಜಳ: ಕಾಡಿಗೆ; ಲುಳಿ: ಸೊಗಸು, ಕಾಂತಿ; ನಯನ: ಕಣ್ಣು; ಅಂಬು: ನೀರು; ನಯನಾಂಬು: ಕಣ್ಣೀರು; ಕಾತರ: ಕಳವಳ, ಉತ್ಸುಕತೆ; ಕಮಲಾಕ್ಷಿ: ಕಮಲದಂತ ಕಣ್ಣುಳ್ಳ (ಹೆಣ್ಣು); ನೆರೆ: ಗುಂಪು; ಲಕ್ಕ: ಲಕ್ಷ; ಸಂಖ್ಯೆ: ಎಣಿಕೆ;

ಪದವಿಂಗಡಣೆ:
ಧರಣಿಪತಿ+ ಹೊರವಂಟನ್+ಅಂತಃ
ಪುರವ +ಬಿಸುಟರು +ಭಾನುಮತಿ +ಸಹಿತ್
ಅರಸಿಯರು +ಹೊರವಂಟರ್+ಏಕ+ಅಂಬರದ +ಬಿಡು+ಮುಡಿಯ
ಕರದ+ಬಸುರಿನ +ಹೊಯ್ಲ+ ಕಜ್ಜಳ
ಪರಿಲುಳಿತ +ನಯನಾಂಬುಗಳ +ಕಾ
ತರಿಪ+ ಕಮಲಾಕ್ಷಿಯರು +ನೆರೆದುದು +ಲಕ್ಕ +ಸಂಖ್ಯೆಯಲಿ

ಅಚ್ಚರಿ:
(೧) ನೋವನ್ನು ಚಿತ್ರಿಸುವ ಪರಿ – ಕರದಬಸುರಿನ ಹೊಯ್ಲ ಕಜ್ಜಳ ಪರಿಲುಳಿತ ನಯನಾಂಬುಗಳ ಕಾ
ತರಿಪ ಕಮಲಾಕ್ಷಿಯರು

ಪದ್ಯ ೫೭: ದ್ರೌಪದಿಯು ಹೇಗೆ ಚಿಂತಿಸಿದಳು?

ಆವ ಗರಳವ ಕುಡಿವೆನೋ ಮೇ
ಣಾವ ಬೆಟ್ಟವನಡರಿ ಬೀಳ್ವೆನೊ
ಆವ ಮಡುವನು ಹೊಗುವೆನೋ ಹಾಸರೆಯ ಗುಂಪಿನಲಿ
ಆವ ಕುಂತವ ಹಾಯ್ವೆನೋ ಮೇ
ಣಾವ ಪಾವಕನೊಳಗೆ ಬೀಳ್ವೆನೊ
ಸಾವು ಸಮನಿಸದೆನಗೆನುತ ಮರುಗಿದಳು ಕಮಲಾಕ್ಷಿ (ವಿರಾಟ ಪರ್ವ, ೩ ಸಂಧಿ, ೫೭ ಪದ್ಯ)

ತಾತ್ಪರ್ಯ:
ನನಗೆ ತಾನಾಗಿ ಸಾವು ಬರುತ್ತಿಲ್ಲ, ಬದುಕು ಬೇಡವಾಗಿದೆ, ಅತೀವ ದುಃಖಿತಳಾದ ದ್ರೌಪದಿ ಚಿಂತಿಸುತ್ತಾ ನಾನು ಯಾವ ವಿಷವನ್ನು ಕುಡಿಯಲಿ, ಯಾವ ಬೆಟ್ಟವನ್ನು ಹತ್ತಿ ಮೇಲಿಂದ ಬೀಳಲಿ, ಯಾವ ಕಲ್ಲುಗುಂಡಿರುವ ಮಡುವಿನಲ್ಲಿ ಬೀಳಲಿ, ಯಾವ ಆಯುಧಕ್ಕೆ ನನ್ನನ್ನು ಒಡ್ಡಿ ಪ್ರಾಣವನ್ನು ಬಿಡಲಿ, ಯಾವ ಬೆಂಕಿಗೆ ಹಾಯಲಿ ಎಂದು ದ್ರೌಪದಿಯು ದುಃಖಿತಳಾಗಿ ಚಿಂತಿಸಿದಳು.

ಅರ್ಥ:
ಗರಳ: ವಿಷ; ಕುಡಿ: ಪಾನಮಾಡು; ಮೇಣ್: ಅಥವ; ಬೆಟ್ಟ: ಗಿರಿ; ಅಡರು: ಹತ್ತು; ಬೀಳು: ಕುಸಿ; ಮಡು: ಸುಳಿ; ಹೊಗು: ಸೇರು; ಹಾಸರೆ: ಪ್ರಯಾಣ; ಗುಂಪು: ಸಮೂಹ; ಕುಂತ:ಈಟಿ, ಭರ್ಜಿ; ಹಾಯ್ದು: ಹೊಡೆ, ಹಾರು; ಪಾವಕ: ಬೆಂಕಿ; ಸಾವು: ಮರಣ; ಸಮನಿಸು: ಘಟಿಸು, ದೊರಕು; ಮರುಗು: ದುಃಖಿಸು; ಕಮಲಾಕ್ಷಿ: ಕಮಲದಂತಹ ಕಣ್ಣುಳ್ಳವಳು;

ಪದವಿಂಗಡಣೆ:
ಆವ+ ಗರಳವ+ ಕುಡಿವೆನೋ +ಮೇಣ್
ಆವ +ಬೆಟ್ಟವನ್+ಅಡರಿ +ಬೀಳ್ವೆನೊ
ಆವ +ಮಡುವನು +ಹೊಗುವೆನೋ +ಹಾಸರೆಯ +ಗುಂಪಿನಲಿ
ಆವ +ಕುಂತವ +ಹಾಯ್ವೆನೋ +ಮೇಣ್
ಆವ +ಪಾವಕನೊಳಗೆ+ ಬೀಳ್ವೆನೊ
ಸಾವು +ಸಮನಿಸದ್+ಎನಗೆನುತ +ಮರುಗಿದಳು+ ಕಮಲಾಕ್ಷಿ

ಅಚ್ಚರಿ:
(೧) ಆತ್ಮಹತ್ಯೆಗೆ ಯೋಚಿಸುತ್ತಿರುವ ಪರಿ – ಗರಳ, ಬೆಟ್ಟ, ಪಾವಕ, ಮಡು, ಕುಂತ

ಪದ್ಯ ೩೫: ಕೀಚಕನು ದ್ರೌಪದಿಗೆ ಏನು ಬೇಡಿದನು?

ನೀರೆ ನೂಕದಿರೆನ್ನ ಮನ ಮು
ಮ್ಮಾರುವೋದುದು ನೀನು ಚಿತ್ತವ
ಸೂರೆಗೊಂಡೀ ಮದನನಂಬಿಂಗೊಡಲ ಹೂಣಿಸುವೆ
ಜಾರದಿರು ಯೆನ್ನೆದೆಗೆ ತಾಪವ
ಬೀರದಿರು ಕಾರುಣ್ಯವನು ಕೈ
ದೋರೆನಗೆ ಕಮಲಾಕ್ಷಿ ಮರಣವ ಮಾಣಿಸೆನಗೆಂದ (ವಿರಾಟ ಪರ್ವ, ೨ ಸಂಧಿ, ೩೫ ಪದ್ಯ)

ತಾತ್ಪರ್ಯ:
ಎಲೈ ಕಮಲಾಕ್ಷಿ, ನನ್ನನ್ನು ನೂಕಬೇಡ, ನನ್ನ ಮನಸ್ಸು ನಿನ್ನ ಕಡೆಗೆ ಮೂರು ಮಾರು ಮುಂದುವರೆದಿದೆ, ನೀನು ನನ್ನ ಮನಸ್ಸನ್ನು ಸೂರೆಗೊಂಡು ಕಾಮನ ಬಾಣಗಳಿಗೆ ನನ್ನನ್ನು ದೂಡುತ್ತಿರುವೆ, ಜಾರಿ ಹೋಗಬೇಡ, ನನ್ನೆದೆಗೆ ತಾಪವನ್ನು ಬೀರಬೇಡ, ನನಗೆ ಕರುಣೆ ತೋರಿ ಸಾವನ್ನು ತಪ್ಪಿಸು ಎಂದು ಕೀಚಕನು ಹೇಳಿದನು.

ಅರ್ಥ:
ನೀರೆ: ಸ್ತ್ರೀ, ಚೆಲುವೆ; ನೂಕು: ತಳ್ಳು; ಮನ: ಮನಸ್ಸು; ಮುಮ್ಮಾರುವೋದು: ಮೂರು ಮಾರು ದೂರಹೋಗು; ಚಿತ್ತ: ಮನಸ್ಸು; ಸೂರೆ: ಕೊಳ್ಳೆ, ಲೂಟಿ; ಮದನ: ಮನ್ಮಥ; ಅಂಬು: ಬಾಣ; ಒಡಲು: ದೇಹ; ಹೂಣಿಗ: ಸಾಹಸಿಗ; ಜಾರು: ಕೆಳಗೆ ಬೀಳು; ಎದೆ: ಹೃದಯ; ತಾಪ: ಬಿಸಿ, ಸೆಕೆ; ಬೀರು: ತೂರು; ಕಾರುಣ್ಯ: ದಯೆ; ಕಮಲಾಕ್ಷಿ: ಕಮಲದಂತ ಕಣ್ಣುಳ್ಳವಳು; ಮರಣ: ಸಾವು; ಮಾಣಿಸು: ತಪ್ಪಿಸು, ನಿಲ್ಲಿಸು;

ಪದವಿಂಗಡಣೆ:
ನೀರೆ+ ನೂಕದಿರ್+ಎನ್ನ +ಮನ +ಮು
ಮ್ಮಾರುವೋದುದು+ ನೀನು +ಚಿತ್ತವ
ಸೂರೆಗೊಂಡ್+ಈ+ ಮದನನ್+ಅಂಬಿಂಗ್+ಒಡಲ +ಹೂಣಿಸುವೆ
ಜಾರದಿರು+ ಎನ್ನೆದೆಗೆ +ತಾಪವ
ಬೀರದಿರು +ಕಾರುಣ್ಯವನು +ಕೈ
ದೋರ್+ಎನಗೆ +ಕಮಲಾಕ್ಷಿ+ ಮರಣವ +ಮಾಣಿಸೆನಗೆಂದ

ಅಚ್ಚರಿ:
(೧) ಕೀಚಕನು ಬೇಡುವ ಪರಿ – ಜಾರದಿರು ಯೆನ್ನೆದೆಗೆ ತಾಪವ ಬೀರದಿರು ಕಾರುಣ್ಯವನು ಕೈದೋರೆನಗೆ
(೨) ದ್ರೌಪದಿಯನ್ನು ಕರೆದ ಪರಿ – ನೀರೆ, ಕಮಲಾಕ್ಷಿ

ಪದ್ಯ ೨೪: ಕೃಷ್ಣನು ಪಾಂಡವರ ಬಳಿ ಹೇಗೆ ಬಂದನು?

ಎನುತ ಸಿಂಹಾಸನವನಿಳಿದಾ
ದನುಜರಿಪು ಕಮಲಾಕ್ಷಿ ನೀ ನಿ
ಲ್ಲೆನುತ ಮನವೇಗದಲಿ ಬಂದನು ಧರ್ಮಜನ ಹೊರೆಗೆ
ನೆನೆಯೆ ಲಕ್ಷ್ಮೀಕಾಂತ ಬಂದನು
ಘನದುರಿತ ದಾವಾಗ್ನಿ ಬಂದನು
ಯೆನುತ ಮೈಯಿಕ್ಕಿದನು ಮುನಿಜನ ಸಹಿತ ಯಮಸೂನು (ಅರಣ್ಯ ಪರ್ವ, ೪ ಸಂಧಿ, ೨೪ ಪದ್ಯ)

ತಾತ್ಪರ್ಯ:
ಕೃಷ್ಣನು ಸತ್ಯಭಾಮೆಗೆ ಪಾಂಡವರ ಪರಿಸ್ಥಿತಿಯನ್ನು ವಿವರಿಸುತ್ತಾ, ಸಿಂಹಾಸನದಿಂದಿಳಿದು ಸತ್ಯಭಾಮೆಗೆ ಅಲ್ಲೇ ಇರಲು ಹೇಳಿ ಮನೋವೇಗದಲ್ಲಿ ಪಾಂಡವರಿದ್ದೆಡೆಗೆ ಬಂದನು. ಪಾಪಾರಣ್ಯಕ್ಕೆ ದಾವಾಗ್ನಿಯಂತಿರುವ ಲಕ್ಷ್ಮೀಕಾಂತನು ಬಂದನೆಂದು ಸಂತೋಷದಿಂದ ಹೊಗಳುತ್ತಾ ಧರ್ಮಜನು ಋಷಿ ಸಮೂಹದೊಂದಿಗೆ ಶ್ರೀಕೃಷ್ಣನಿಗೆ ನಮಸ್ಕರಿಸಿದನು.

ಅರ್ಥ:
ಸಿಂಹಾಸನ: ರಾಜನು ಕುಳಿತುಕೊಳ್ಳುವ ಪೀಠ; ಇಳಿದು: ಕೆಳಗೆ ಬಂದು; ದನುಜರಿಪು: ರಾಕ್ಷಸರ ವೈರಿ; ಕಮಲಾಕ್ಷಿ: ಕಮಲದಂತೆ ಕಣ್ಣುಳ್ಳವಳು (ಸತ್ಯಭಾಮೆ); ನಿಲ್ಲು: ತಡೆ, ಇರು; ಮನ: ಮನಸ್ಸು; ವೇಗ: ಶೀಘ್ರ; ಬಂದು: ಆಗಮಿಸು; ಹೊರೆ: ರಕ್ಷಣೆ, ಆಶ್ರಯ; ನೆನೆ: ಜ್ಞಾಪಿಸಿಕೊ; ಬಂದನು: ಆಗಮಿಸು; ಘನ:ಗಟ್ಟಿಯಾದುದು; ದುರಿತ: ಪಾಪ, ಪಾತಕ; ದಾವಾಗ್ನಿ: ಕಾಳ್ಗಿಚ್ಚು; ಮೈಯಿಕ್ಕು: ನಮಸ್ಕರಿಸು; ಮುನಿ: ಋಷಿ; ಸಹಿತ: ಜೊತೆ; ಸೂನು: ಮಗ;

ಪದವಿಂಗಡಣೆ:
ಎನುತ +ಸಿಂಹಾಸನವನ್+ಇಳಿದ್
ಆ+ ದನುಜರಿಪು +ಕಮಲಾಕ್ಷಿ+ ನೀ +ನಿ
ಲ್ಲೆನುತ +ಮನವೇಗದಲಿ +ಬಂದನು +ಧರ್ಮಜನ +ಹೊರೆಗೆ
ನೆನೆಯೆ +ಲಕ್ಷ್ಮೀಕಾಂತ +ಬಂದನು
ಘನದುರಿತ +ದಾವಾಗ್ನಿ +ಬಂದನು
ಯೆನುತ+ ಮೈಯಿಕ್ಕಿದನು+ ಮುನಿಜನ +ಸಹಿತ +ಯಮಸೂನು

ಅಚ್ಚರಿ:
(೧) ಕೃಷ್ಣನ ಆಗಮನವನ್ನು ವರ್ಣಿಸುವ ಪರಿ – ನೆನೆಯೆ ಲಕ್ಷ್ಮೀಕಾಂತ ಬಂದನು,
ಘನದುರಿತ ದಾವಾಗ್ನಿ ಬಂದನು
(೨) ಕೃಷ್ಣನನ್ನು ದನುಜರಿಪು, ಲಕ್ಷ್ಮೀಕಾಂತ ಎಂದು ಕರೆದಿರುವುದು