ಪದ್ಯ ೩೩: ಕೃಷ್ಣನು ಧರ್ಮಜನನ್ನು ಹೇಗೆ ಹುರುದುಂಬಿಸಿದನು?

ತಾಯಿ ಹೆರಳೇ ಮಗನ ನಿನ್ನನು
ನಾಯಕನೆ ಲೋಕೈಕವೀರರ
ತಾಯಲಾ ನಿಮ್ಮವ್ವೆಯಾ ಮೊಲೆವಾಲ ಬಲುಹಿನಲಿ
ರಾಯ ನೀ ಕ್ಷತ್ರಿಯನು ಸೇಸೆಯ
ತಾಯೆನುತ ತೂಪಿರಿದು ಕಮಲದ
ಳಾಯತಾಂಬಕನಪ್ಪಿಕೊಂಡನು ಧರ್ಮನಂದನನ (ಶಲ್ಯ ಪರ್ವ, ೧ ಸಂಧಿ, ೩೩ ಪದ್ಯ)

ತಾತ್ಪರ್ಯ:
ಎಲೈ ಧರ್ಮಜನೇ, ಕುಂತೀದೇವಿಯು ನಿನ್ನನ್ನ ಹಡೆಯಲಿಲ್ಲವೇ? ನೀನು ಯಾರಿಗೆ ಕಡಿಮೆ? ನಿಮ್ಮ ತಾಯಿಯ ಮೊಲೆಯ ಹಾಲು ಕುಡಿಯಲಿಲ್ಲವೇ? ನಿಮ್ಮ ತಾಯಿ ಲೋಕೈಕ ವೀರರ ತಾಯಿ. ನೀನು ಕ್ಷತ್ರಿಯೋತ್ತಮನು ಎಂದು ಧರ್ಮಜನಿಗೆ ಸೇಸೆಯನ್ನಿಟ್ಟು ದೃಷ್ಟಿಪರಿಹಾರಕ್ಕಾಗಿ ತೂಪಿರಿದು, ಧರ್ಮಜನನ್ನು ಅಪ್ಪಿಕೊಂಡನು.

ಅರ್ಥ:
ತಾಯಿ: ಮಾತೆ; ಹೆರು: ಹುಟ್ಟಿಸು; ಮಗ: ಸುತ; ನಾಯಕ: ಒಡೆಯ; ಲೋಕ: ಜಗತ್ತು; ವೀರ: ಪರಾಕ್ರಮಿ; ಅವ್ವೆ: ಮಾತೆ; ಮೊಲೆ: ಸ್ತನ; ಬಲುಹು: ಶಕ್ತಿ; ರಾಯ: ರಾಜ; ಸೇಸೆ: ಮಂಗಳಾಕ್ಷತೆ; ತಾ: ತರು, ತೆಗೆದುಕೊಂಡು ಬಾ; ತೂಪಿರಿ: ಮಕ್ಕಳಿಗೆ ದೃಷ್ಟಿ ದೋಷ ಪರಿ ಹಾರಕ್ಕಾಗಿ ಹಾಗೂ ರಕ್ಷೆಗಾಗಿ ನೆತ್ತಿಯ ಮೇಲೆ ಊದು; ಕಮಲ: ತಾವರೆ; ಕಮಲದಳಾಯತಾಂಬಕ: ಕಮಲದಂತ ಕಣ್ಣುಳ್ಳ; ಅಂಬಕ: ಕಣ್ಣು; ಆಯತ: ಅಗಲವಾದ; ಅಪ್ಪು: ಆಲಂಗಿಸು;

ಪದವಿಂಗಡಣೆ:
ತಾಯಿ ಹೆರಳೇ ಮಗನ ನಿನ್ನನು
ನಾಯಕನೆ ಲೋಕೈಕವೀರರ
ತಾಯಲಾ ನಿಮ್ಮವ್ವೆಯಾ ಮೊಲೆವಾಲ ಬಲುಹಿನಲಿ
ರಾಯ ನೀ ಕ್ಷತ್ರಿಯನು ಸೇಸೆಯ
ತಾಯೆನುತ ತೂಪಿರಿದು ಕಮಲದ
ಳಾಯತಾಂಬಕನಪ್ಪಿಕೊಂಡನು ಧರ್ಮನಂದನನ

ಅಚ್ಚರಿ:
(೧) ತಾಯಿ, ತಾಯಲಾ, ತಾಯೆನುತ – ಪದಗಳ ಬಳಕೆ
(೨) ಕೃಷ್ಣನನ್ನು ಕಮಲದಳಾಯತಾಂಬಕ ಎಂದು ಕರೆದಿರುವುದು

ಪದ್ಯ ೩೦: ಅರ್ಜುನನ ಯಾವ ನುಡಿಯಿಂದ ಹಣ್ಣು ಮೇಲೇರಿತು?

ವಾಯುಸುತನ ಸುಭಾಷಿತದ ತರು
ವಾಯಲರ್ಜುನನೆದ್ದು ವಿಪ್ರನಿ
ಕಾಯಕಾಮಂತ್ರಣವು ನವತೃಣ ಗೋಧನಾವಳಿಗೆ
ಸ್ತ್ರೀಯರಿಗೆ ನಿಜಪತಿಯ ಬರವಿನ
ಪ್ರೀಯದೊರೆಕೊಂಬಂತೆ ಕಮಲದ
ಳಾಯತಾಂಬಕ ಸತತ ಕದನೋತ್ಸಾಹ ತನಗೆಂದ (ಅರಣ್ಯ ಪರ್ವ, ೪ ಸಂಧಿ, ೩೦ ಪದ್ಯ)

ತಾತ್ಪರ್ಯ:
ಭೀಮನ ಹಿತ ನುಡಿಯ ನಂತರ ಅರ್ಜುನನು ಎದ್ದು ನಿಂತು, ಭೋಜನದ ಆಮಂತ್ರಣವನ್ನು ಬ್ರಾಹ್ಮಣರೂ, ಹೊಸಹುಲ್ಲನ್ನು ಗೋವುಗಳು, ಪತಿಯ ಆಗಮನವನ್ನು ಹೆಂಡತಿಯು ಹೇಗೆ ಉತ್ಸಾಹದಿಂದ ಕಾಯುವರೋ ಅದೇ ರೀತಿ ಹೇ ಕೃಷ್ಣ ನಾನು ಯುದ್ಧದಲ್ಲಿ ಅಷ್ಟು ಉತ್ಸುಕನಾಗಿರುತ್ತೇನೆ ಎಂದನು.

ಅರ್ಥ:
ವಾಯು: ಸಮೀರ, ಗಾಳಿ; ಸುತ: ಮಗ; ಸುಭಾಷಿತ: ಹಿತನುಡಿ; ತರುವಾಯ: ನಂತರ; ಎದ್ದು: ಮೇಲೇಳು; ವಿಪ್ರ: ಬ್ರಾಹ್ಮಣ; ನಿಕಾಯ: ಗುಂಪು; ಆಮಂತ್ರಣ: ಆಹ್ವಾನ, ಕರೆ; ನವ: ಹೊಸ; ತೃಣ: ಹುಲ್ಲು; ಗೋಧನ: ಗೋವು; ಆವಳಿ: ಗುಂಪು; ಸ್ತ್ರೀ: ಹೆಂಗಸು; ಪತಿ: ಗಂಡ; ಬರವು: ಆಗಮನ; ಪ್ರೀಯ: ಪ್ರೀತಿಯಿಂದ; ಒರೆ: ಬಳಿ, ನಿರೂಪಿಸು; ಸತತ: ಯಾವಾಗಲೂ; ಕದನ: ಯುದ್ಧ; ಉತ್ಸಾಹ: ಹುರುಪು, ಆಸಕ್ತಿ; ಕಮಲದಳಾಯತ: ಕಮಲದ ಎಲೆಯಂತೆ ವಿಶಾಲವಾದ; ದಳ: ಎಲೆ; ಆಯತ: ವಿಶಾಲ; ಅಂಬಕ: ಕಣ್ಣು;

ಪದವಿಂಗಡಣೆ:
ವಾಯುಸುತನ +ಸುಭಾಷಿತದ+ ತರು
ವಾಯಲ್+ಅರ್ಜುನನ್+ಎದ್ದು +ವಿಪ್ರ+ನಿ
ಕಾಯಕ್+ಆಮಂತ್ರಣವು+ ನವತೃಣ+ ಗೋಧನಾವಳಿಗೆ
ಸ್ತ್ರೀಯರಿಗೆ +ನಿಜಪತಿಯ+ ಬರವಿನ
ಪ್ರೀಯದೊರೆ+ಕೊಂಬಂತೆ +ಕಮಲದ
ಳ+ಆಯತ+ಅಂಬಕ+ ಸತತ +ಕದನ+ಉತ್ಸಾಹ +ತನಗೆಂದ

ಅಚ್ಚರಿ:
(೧) ಶ್ರೀಕೃಷ್ಣನನ್ನು ಕಮಲದಳಾಯತಾಂಬಕ ಎಂದು ಕರೆದಿರುವುದು
(೨) ಅರ್ಜುನನ ಹಿತನುಡಿ: ವಿಪ್ರ ನಿಕಾಯಕಾಮಂತ್ರಣವು ನವತೃಣ ಗೋಧನಾವಳಿಗೆ
ಸ್ತ್ರೀಯರಿಗೆ ನಿಜಪತಿಯ ಬರವಿನ ಪ್ರೀಯದೊರೆಕೊಂಬಂತೆ