ಪದ್ಯ ೪೬: ಘಟೋತ್ಕಚನು ಯುದ್ಧಕ್ಕೆ ಹೇಗೆ ಬಂದನು?

ಜಡಿದು ಝೊಂಪಿಸಿ ವೀಳೆಯವ ಕೊಂ
ಡೆಡದ ಕಯ್ಯಿಂದೆರಗಿ ಮದಮುಖ
ನೆಡಬಲನ ನೋಡಿದರೆ ರಕ್ಕಸಕೋಟಿ ಜೀಯೆನುತ
ಸಿಡಿಲ ಸೆರೆ ಬಿಟ್ಟಂತೆ ಭುಜವನು
ಹೊಡೆದು ಮುಂಚಿತು ದೈತ್ಯಬಲವುಲಿ
ದದಿಯಿಡಲು ಮೇಲುಸುರು ಮಸಗಿತು ಫಣಿಪ ಕಮಠರಿಗೆ (ದ್ರೋಣ ಪರ್ವ, ೧೫ ಸಂಧಿ, ೪೬ ಪದ್ಯ)

ತಾತ್ಪರ್ಯ:
ಎಡಗೈಯಿಂದ ವೀಳೆಯವನ್ನು ತೆಗೆದುಕೊಂಡು, ಧರ್ಮಜನಿಗೆ ನಮಸ್ಕರಿಸಿ, ಎಡಬಲಕ್ಕೆ ತಿರುಗಿ ನೋಡಿದನು. ಅಸಂಖ್ಯಾತ ರಾಕ್ಷಸರು ಜೀಯಾ ಎಂದು ಸಿಡಿಲಿನ ಸೆರೆ ಬಿಟ್ಟಂತೆ ತೋಳನ್ನು ತಟ್ಟಿ, ಅಬ್ಬರಿಸಿ ಯುದ್ಧಕ್ಕೆ ನಡೆಯಲು ಆದಿಶೇಷ ಕೂರ್ಮರಿಗೆ ಮೇಲುಸಿರಾಯಿತು.

ಅರ್ಥ:
ಜಡಿ: ಬೆದರಿಕೆ, ಹೆದರಿಕೆ; ಝೊಂಪಿಸು:ಭಯಗೊಳ್ಳು, ಬೆಚ್ಚಿಬೀಳು; ವೀಳೆ: ತಾಂಬೂಲ; ಕೊಂಡು: ಪಡೆದು; ಕೈ: ಹಸ್ತ; ಎರಗು: ಬೀಳು; ಮದ: ಅಹಂಕಾರ; ಮುಖ: ಆನನ; ನೋಡು: ವೀಕ್ಷಿಸು; ರಕ್ಕಸ: ರಕ್ತ; ಕೋಟಿ: ಅಸಂಖ್ಯಾತ; ಜೀಯ: ಒಡೆಯ; ಸಿಡಿಲು: ಅಶನಿ; ಸೆರೆ: ಬಂಧನ; ಭುಜ: ಬಾಹು; ಹೊಡೆ: ಏಟು, ಹೊಡೆತ; ಮುಂಚೆ: ಮುಂದೆ; ದೈತ್ಯ: ದಾನವ; ಉಲಿ: ಶಬ್ದ; ಅಡಿಯಿಡು: ಹೆಜ್ಜೆಹಾಕು, ಮುಂದುವರಿ; ಉಸುರು: ಮಾತನಾಡು; ಪ್ರಾಣ; ಮಸಗು: ಹರಡು; ಕೆರಳು; ಫಣಿಪ: ಆದಿಶೇಷ; ಕಮಠ: ಕೂರ್ಮ;

ಪದವಿಂಗಡಣೆ:
ಜಡಿದು +ಝೊಂಪಿಸಿ +ವೀಳೆಯವ +ಕೊಂಡ್
ಎಡದ +ಕಯ್ಯಿಂದ್+ಎರಗಿ +ಮದ+ಮುಖನ್
ಎಡಬಲನ +ನೋಡಿದರೆ +ರಕ್ಕಸಕೋಟಿ +ಜೀಯೆನುತ
ಸಿಡಿಲ +ಸೆರೆ +ಬಿಟ್ಟಂತೆ +ಭುಜವನು
ಹೊಡೆದು +ಮುಂಚಿತು +ದೈತ್ಯ+ಬಲವ್+ಉಲಿದ್
ಅಡಿಯಿಡಲು +ಮೇಲುಸುರು +ಮಸಗಿತು +ಫಣಿಪ +ಕಮಠರಿಗೆ

ಅಚ್ಚರಿ:
(೧) ರೂಪಕದ ಪ್ರಯೋಗ – ಸಿಡಿಲ ಸೆರೆ ಬಿಟ್ಟಂತೆ ಭುಜವನು ಹೊಡೆದು ಮುಂಚಿತು ದೈತ್ಯಬಲ

ಪದ್ಯ ೩೧: ದ್ರೋಣನು ಹೇಗೆ ನುಗ್ಗಿದನು?

ರಥವ ಬಿಟ್ಟನು ಸೂಠಿಯಲಿ ನಿ
ರ್ಮಥಿತ ರಿಪುಗಳನಟ್ಟಿಸಿದನು ಭುಜ
ಶಿಥಿಲ ಸಾಹಸರೇನ ನಿಲುವರು ದ್ರೋಣನುರವಣೆಗೆ
ಪೃಥಿವಿ ನೆಗ್ಗಿತು ಹೊತ್ತ ಕಮಠನ
ವ್ಯಥೆಯನಾರುಸುರುವರು ಸುಮಹಾ
ರಥರ ಹೊದರಲಿ ಹೊಕ್ಕನುರಿ ಬಲು ಮಳೆಯ ಹೊಕ್ಕಂತೆ (ದ್ರೋಣ ಪರ್ವ, ೨ ಸಂಧಿ, ೩೧ ಪದ್ಯ)

ತಾತ್ಪರ್ಯ:
ದ್ರೋಣನು ರಥವನ್ನು ಅತಿ ವೇಗದಿಂದ ಬಿಟ್ಟು ಅಜೇಯರೆನ್ನಿಸಿಕೊಂಡಿದ್ದ ಮಹಾರಥರನ್ನು ಅಟ್ಟಿಸಿಕೊಂಡು ಹೋದನು. ಭುಜಸಾಹಸವಿಲ್ಲದ ಭಟರು ದ್ರೋಣನ ರಭಸಕ್ಕೆ ನಿಲ್ಲಲು ಸಾಧ್ಯವೇ? ಭೂಮಿ ತಗ್ಗಿತು, ಭೂಮಿಯನ್ನು ಹೊತ್ತಿದ ಆಮೆಯ ನೋವನ್ನು ಯಾರು ಕೇಳಬೇಕು! ಮಹಾರಥರ ನಡುವೆ ದ್ರೋಣನು ಮಳೆಯ ನಡುವೆ ಉರಿಹೊಕ್ಕಹಾಗೆ ನುಗ್ಗಿದನು.

ಅರ್ಥ:
ರಥ: ಬಂಡಿ; ಬಿಟ್ಟು: ಬಿಡು; ಸೂಠಿ: ವೇಗ; ಮಥಿತ: ಕಡೆಯಲ್ಪಟ್ಟ; ರಿಪು: ವೈರಿ; ಅಟ್ಟು: ಬೆನ್ನಟ್ಟುವಿಕೆ; ಭುಜ: ಬಾಹು; ಶಿಥಿಲ: ನಿಶ್ಶಕ್ತವಾದುದು; ಸಾಹಸ: ಪರಾಕ್ರಮ; ನಿಲುವು: ಸ್ಥಿತಿ, ಅವಸ್ಥೆ; ಉರವಣೆ: ಆತುರ, ಅವಸರ; ಪೃಥಿವಿ: ಭೂಮಿ; ನೆಗ್ಗು: ಕುಗ್ಗು, ಕುಸಿ; ಹೊತ್ತು: ಹೊರು, ಧರಿಸು; ಕಮಠ: ಕೂರ್ಮ; ವ್ಯಥೆ: ನೋವು; ಉಸುರು: ಹೇಳು; ಮಹಾರಥ: ಪರಾಕ್ರಮಿ, ಶೂರ; ಹೊದರು: ಗುಂಪು; ಹೊಕ್ಕು: ಸೇರು; ಬಲು: ಹೆಚು; ಮಳೆ: ವರ್ಷ;

ಪದವಿಂಗಡಣೆ:
ರಥವ+ ಬಿಟ್ಟನು +ಸೂಠಿಯಲಿ+ ನಿ
ರ್ಮಥಿತ +ರಿಪುಗಳನ್+ಅಟ್ಟಿಸಿದನು +ಭುಜ
ಶಿಥಿಲ+ ಸಾಹಸರೇನ +ನಿಲುವರು+ ದ್ರೋಣನ್+ಉರವಣೆಗೆ
ಪೃಥಿವಿ +ನೆಗ್ಗಿತು +ಹೊತ್ತ +ಕಮಠನ
ವ್ಯಥೆಯನಾರ್+ಉಸುರುವರು +ಸುಮಹಾ
ರಥರ+ ಹೊದರಲಿ+ ಹೊಕ್ಕನ್+ಉರಿ +ಬಲು +ಮಳೆಯ +ಹೊಕ್ಕಂತೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸುಮಹಾರಥರ ಹೊದರಲಿ ಹೊಕ್ಕನುರಿ ಬಲು ಮಳೆಯ ಹೊಕ್ಕಂತೆ
(೨) ಭೂಮಿಯ ಸ್ಥಿತಿ – ಪೃಥಿವಿ ನೆಗ್ಗಿತು ಹೊತ್ತ ಕಮಠನ ವ್ಯಥೆಯನಾರುಸುರುವರು

ಪದ್ಯ ೩೦: ಬ್ರಹ್ಮನೇಕೆ ನಡುಗಿದನು?

ನಳಿನಪತ್ರೋದಕದವೊಲು ಮಾ
ರೊಲೆದುದಬುಜಭವಾಂಡವಂಬುಧಿ
ಯಿಳಿದು ಗುಲ್ಫದ್ವಯಸವಾದುದು ಕಮಠನೆದೆಯೊಡೆಯೆ
ನೆಲನನಿದೆ ಹಿಂದಿಕ್ಕಿಕೊಂಬ
ಗ್ಗಳೆಯರಾರೋ ಶಿವಶಿವಾ ಜಗ
ದಳಿವು ಜೋಡಿಸಿತೆನುತ ನಡುಗಿದನಬುಜಭವನಂದು (ಭೀಷ್ಮ ಪರ್ವ, ೬ ಸಂಧಿ, ೩೦ ಪದ್ಯ)

ತಾತ್ಪರ್ಯ:
ಕಮಲದೆಲೆಯ ಮೇಲಿನ ನೀರಿನಂತೆ ಬ್ರಹ್ಮಾಂಡವು ಅತ್ತಿತ್ತ ಕಂಪಿಸಿತು. ಹಿಮ್ಮಡಿಯ ಗಂಟಿನಷ್ಟೆತ್ತರಕ್ಕೆ ಸಮುದ್ರವು ಕೆಳಗಿಳಿಯಿತು. ಚತುರ್ಮುಖ ಬ್ರಹ್ಮನು ನಾನು ಸೃಷ್ಟಿಸಿದ ಈ ಲೋಕವನ್ನು ಹಿಂದಿಟ್ಟುಕೊಂಡು ರಕ್ಷಿಸಬಲ್ಲ ವೀರರಾರಿದ್ದಾರೆ ಶಿವಶಿವಾ ಈ ಲೋಕಕ್ಕೆ ಕೊನೆಗಾಲ ಬಮ್ತು ಎಂದು ಭಯದಿಂದ ನಡುಗಿದನು.

ಅರ್ಥ:
ನಳಿನಪತ್ರ: ಕಮಲದೆಲೆ; ಉದಕ: ನೀರು; ಮಾರು: ಅಡ್ಡಿಮಾಡು; ಅಬುಜಭವಾಂಡ: ಬ್ರಹ್ಮಾಂಡ, ಜಗತ್ತು; ಅಂಬುಧಿ: ಸಾಗರ; ಗುಲ್ಫದ್ವಯ: ಎರಡು ಮಂಡಿಗಳು, ಮೀನಖಂಡ; ಕಮಠ: ಕೂರ್ಮ; ಎದೆ: ಹೃದಯ; ಒಡೆ: ಸೀಳು; ನೆಲ: ಭೂಮಿ; ಹಿಂದಿಕ್ಕು: ಹಿಂದೆ ತಳ್ಳು; ಅಗ್ಗಳೆ: ಶ್ರೇಷ್ಠ; ಜಗ: ಪ್ರಪಂಚ; ಅಳಿವು: ನಾಶ; ಜೋಡಿಸು: ಕೂಡಿಸು; ನಡುಗು: ಅದುರು, ಕಂಪಿಸು; ಅಬುಜಭವ: ಬ್ರಹ್ಮ; ಅಬುಜ: ಕಮಲ; ಭವ: ಹುಟ್ಟು;

ಪದವಿಂಗಡಣೆ:
ನಳಿನಪತ್ರ+ಉದಕದವೊಲು +ಮಾ
ರೊಲೆದುದ್+ಅಬುಜಭವಾಂಡವ್+ಅಂಬುಧಿ
ಇಳಿದು+ ಗುಲ್ಫದ್ವಯಸವ್+ಆದುದು +ಕಮಠನ್+ಎದೆಯೊಡೆಯೆ
ನೆಲನನಿದೆ+ ಹಿಂದಿಕ್ಕಿಕೊಂಬ್
ಅಗ್ಗಳೆಯರ್+ಆರೋ +ಶಿವಶಿವಾ+ ಜಗ
ದಳಿವು +ಜೋಡಿಸಿತೆನುತ +ನಡುಗಿದನ್+ಅಬುಜಭವನ್+ಅಂದು

ಅಚ್ಚರಿ:
(೧) ಉಪಮಾನದ ಪ್ರಯೋಗ – ನಳಿನಪತ್ರೋದಕದವೊಲು ಮಾರೊಲೆದುದಬುಜಭವಾಂಡವಂಬುಧಿ
ಯಿಳಿದು ಗುಲ್ಫದ್ವಯಸವಾದುದು
(೨) ಅಬುಜಭವಾಂಡ, ಅಬುಜಭವ – ಪದಗಳ ಬಳಕೆ

ಪದ್ಯ ೬೩: ಗುಜ್ಜರ ದೇಶದ ರಾವುತರು ಹೇಗೆ ಹೋರಾಡಿದರು?

ಜರೆದು ಸರಿಸದಲೇರಿದರೆ ಸಿಡಿ
ಲುರುಬಿದಂತಾಯಿತ್ತು ಘಾಯವ
ನರುಹಿದರೆ ದೂಹತ್ತಿ ರಾವ್ತರ ಮಸ್ತಕದೊಳಿಳಿದು
ಕೊರೆದುದಿಳೆಯನು ಹಯವ ನೂಕಿದ
ಡೊರಲಿದನು ತಳ ಕಮಠನೆನೆ ತ
ತ್ತರಿದರಿದು ಹೊಯ್ದಾಡಿದರು ಗುಜ್ಜರದ ರಾವುತರು (ಭೀಷ್ಮ ಪರ್ವ, ೪ ಸಂಧಿ, ೬೩ ಪದ್ಯ)

ತಾತ್ಪರ್ಯ:
ಗುಜ್ಜರ ದೇಶದ ರಾವುತರು ಎದುರಾಳಿಗಳನ್ನು ಜರೆದು ಹೊಡೆದ ಸದ್ದು ಸಿಡಿಲು ಬಡಿತದಂತೆ ಕೇಳಿತು. ದೂಹತ್ತಿಗಳ ಹೊಡೆತ ರಾವುತರ ತಲೆಗಳನ್ನು ಕಡಿದು ನೆಲಕ್ಕೆ ಅಪ್ಪಳಿಸಿತು. ಕುದುರೆಗಳನ್ನು ಅಟ್ಟಿದರೆ ಹೊಡೆತದಿಂದ ಕೂರ್ಮನು ಒರಲಿದನು. ಶತ್ರುಗಳನ್ನು ತರಿತರಿದು ಅವರು ಹೋರಾಡಿದರು.

ಅರ್ಥ:
ಜರೆ: ಬಯ್ಯುವುದು; ಸರಿಸ: ವೇಗ, ರಭಸ; ಏರು: ಮೇಲೇಳು; ಸಿಡಿಲು: ಅಶನಿ; ಉರುಬು: ಅತಿಶಯವಾದ ವೇಗ; ಘಾಯ: ಪೆಟ್ಟು; ಅರುಹು:ತಿಳಿಸು, ಹೇಳು; ದೂಹತ್ತಿ: ಎರಡು ಕಡೆಯೂ ಚೂಪಾದ ಕತ್ತಿ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಮಸ್ತಕ: ಶಿರ; ಇಳಿ: ಕೆಳಗೆ ಬಾಗು; ಕೊರೆ: ಕತ್ತರಿಸು; ಇಳೆ: ಭೂಮಿ; ಹಯ: ಕುದುರೆ; ನೂಕು: ತಳ್ಳು; ಒರಲು: ಅರಚು, ಕೂಗಿಕೊಳ್ಳು; ತಳ: ಸಮತಟ್ಟಾದ ಪ್ರದೇಶ; ಕಮಠ:ಕೂರ್ಮ; ತತ್ತರಿ: ಒಂದೇಸವನೆ ಹೊಡೆ; ಹೊಯ್ದಾಡು: ಹೋರಾಡು; ಗುಜ್ಜರ: ಒಂದು ಪ್ರಾಂತ್ಯದ ಹೆಸರು; ರಾವುತ: ಅಶ್ವಾರೋಹಿ;

ಪದವಿಂಗಡಣೆ:
ಜರೆದು +ಸರಿಸದಲ್+ಏರಿದರೆ+ ಸಿಡಿಲ್
ಉರುಬಿದಂತಾಯಿತ್ತು +ಘಾಯವನ್
ಅರುಹಿದರೆ+ ದೂಹತ್ತಿ+ ರಾವ್ತರ+ ಮಸ್ತಕದೊಳ್+ಇಳಿದು
ಕೊರೆದುದ್+ಇಳೆಯನು +ಹಯವ +ನೂಕಿದಡ್
ಒರಲಿದನು +ತಳ+ ಕಮಠನ್+ಎನೆ +ತ
ತ್ತರಿದರಿದು +ಹೊಯ್ದಾಡಿದರು +ಗುಜ್ಜರದ+ ರಾವುತರು

ಅಚ್ಚರಿ:
(೧) ಕುದುರೆಗಳು ಓಡುವ ವೇಗವನ್ನು ಹೇಳುವ ಪರಿ – ಕೊರೆದುದಿಳೆಯನು ಹಯವ ನೂಕಿದ
ಡೊರಲಿದನು ತಳ ಕಮಠನೆನೆ

ಪದ್ಯ ೩: ಆದಿಶೇಷನ ಕೊರಳೇಕೆ ಕುಸಿಯಿತು?

ಎಲೆಲೆ ಕವಿಕವಿ ಬೆರಸುಬೆರಸಿ
ಟ್ಟಳಿಸು ತಿವಿತಿವಿ ಭಲರೆ ಭಲರತಿ
ಬಲರೆ ಹಿಂಚದಿರಿನ್ನು ಹೊಯ್ ಹೊಯ್ ಚೂಣಿಗರ ನೆನುತ
ಬಲಜಲಧಿ ಮುಕ್ಕುಳಿಸಿ ಮಿಗೆ ಹೆ
ಕ್ಕಳಿಸಿ ಕವಿದುದು ಗಿರಿಯ ಬೆಸುಗೆಯು
ಕಳಚಿತಹಿಪನ ಕೊರಳು ಕುಸಿದವು ಕಮಠನೆದೆ ಬಿರಿದ (ಭೀಷ್ಮ ಪರ್ವ, ೪ ಸಂಧಿ, ೩ ಪದ್ಯ)

ತಾತ್ಪರ್ಯ:
ಎಲೆ ಮೇಲೆ ಬೀಳು, ಮುನ್ನುಗ್ಗು, ಆಕ್ರಮಿಸು, ಚುಚ್ಚು, ಭಲೆ ಭಲೆ ಮಹಾಪರಾಕ್ರಮಿಗಳೇ ಹಿಂಜರಿಯಬೇಡಿ, ಎದುರು ಸಿಅನ್ಯದವರನ್ನು ಹೊಯ್ಯಿರಿ, ಎಂದು ಕೂಗುತ್ತಾ ಸೈನ್ಯಗಳು ಮೇಲೆ ಬಿದ್ದವು. ಆ ಸದ್ದಿಗೆ ಬೆಟ್ಟಗಳ ಬೆಸುಗೆ ಬಿಟ್ಟಿತು ಆಧಿಶೇಷನ ಕೊರಳು ಕುಸಿಯಿತು, ಕೂರ್ಮನ ಎದೆ ಬಿರಿಯಿತು.

ಅರ್ಥ:
ಕವಿ: ಆವರಿಸು; ಬೆರಸು: ಕೂಡಿಸು; ಇಟ್ಟಳಿಸು: ಒತ್ತಾಗು; ತಿವಿ: ಚುಚ್ಚು; ಭಲೆ: ಪ್ರಶಂಸೆಯ ನುಡಿ; ಅತಿಬಲರು: ಪರಾಕ್ರಮಿಗಳು; ಹಿಂಚದಿರು: ಹಿಂದೆ ಸರಿಯದಿರಿ; ಹೊಯ್: ಹೊಡೆ; ಚೂಣಿ: ಯುದ್ಧದಲ್ಲಿ ಮುಂದೆ ಇರುವ ಸೈನ್ಯ; ಬಲ: ಸೈನ್ಯ; ಜಲಧಿ: ಸಾಗರ; ಮುಕ್ಕುಳಿಸು: ಹೊರಹಾಕು; ಮಿಗೆ: ಅಧಿಕ; ಹೆಕ್ಕಳ: ಹೆಚ್ಚಳ, ಅತಿಶಯ; ಗಿರಿ: ಬೆಟ್ಟ; ಬೆಸುಗೆ: ಜೊತೆ, ಒಂದಾಗು; ಕಳಚು: ತೊರೆ; ಅಹಿಪ: ಸರ್ಪರಾಜ; ಕೊರಳು: ಗಂಟಲು, ಕುತ್ತಿಗೆ; ಕುಸಿ: ಕೆಳಕ್ಕೆ ಬೀಳು; ಕಮಠ: ಕೂರ್ಮ; ಎದೆ: ವಕ್ಷ; ಬಿರಿ: ಸೀಳು;

ಪದವಿಂಗಡನೆ:
ಎಲೆಲೆ +ಕವಿಕವಿ +ಬೆರಸು+ಬೆರಸ್
ಇಟ್ಟಳಿಸು+ ತಿವಿತಿವಿ +ಭಲರೆ +ಭಲರ್+ಅತಿ
ಬಲರೆ +ಹಿಂಚದಿರ್+ಇನ್ನು +ಹೊಯ್+ ಹೊಯ್ +ಚೂಣಿಗರನ್ +ಎನುತ
ಬಲ+ಜಲಧಿ+ ಮುಕ್ಕುಳಿಸಿ +ಮಿಗೆ +ಹೆ
ಕ್ಕಳಿಸಿ +ಕವಿದುದು +ಗಿರಿಯ +ಬೆಸುಗೆಯು
ಕಳಚಿತ್+ಅಹಿಪನ +ಕೊರಳು +ಕುಸಿದವು+ ಕಮಠನ್+ಎದೆ+ ಬಿರಿದ

ಅಚ್ಚರಿ:
(೧) ಜೋಡಿ ಪದಗಳು – ಎಲೆಲೆ ಕವಿಕವಿ ಬೆರಸುಬೆರಸಿಟ್ಟಳಿಸು ತಿವಿತಿವಿ ಭಲರೆ ಭಲರತಿ
ಬಲರೆ ಹಿಂಚದಿರಿನ್ನು ಹೊಯ್ ಹೊಯ್ ಚೂಣಿಗರ ನೆನುತ – ಕವಿಕವಿ, ತಿವಿತಿವಿ, ಭಲರೆ ಭಲರೆ, ಹೊಯ್ ಹೊಯ್
(೨) ಸೈನ್ಯದ ಪರಾಕ್ರಮದ ವರ್ಣನೆ – ಬಲಜಲಧಿ ಮುಕ್ಕುಳಿಸಿ ಮಿಗೆ ಹೆಕ್ಕಳಿಸಿ ಕವಿದುದು ಗಿರಿಯ ಬೆಸುಗೆಯು
ಕಳಚಿತಹಿಪನ ಕೊರಳು ಕುಸಿದವು ಕಮಠನೆದೆ ಬಿರಿದ
(೩) ಕ ಕಾರದ ಸಾಲು ಪದ – ಕಳಚಿತಹಿಪನ ಕೊರಳು ಕುಸಿದವು ಕಮಠನೆದೆ

ಪದ್ಯ ೨೯: ದೇವತೆಗಳ ವಿಮಾನಗಳೇಕೆ ದಿಕ್ಕು ದಿಕ್ಕಿಗೆ ಓಡಿದವು?

ಎಲವೊ ಕೌರವ ಸಹಿತ ಕಮಠನ
ಕೆಳಗೆ ಧ್ರುವನಿಂ ಮೇಲೆ ಹೊಕ್ಕರೆ
ಕೊಲುವೆನಲ್ಲದೆ ಬಿಡುವೆನೇ ಫಡ ನಿಲ್ಲುನಿಲ್ಲೆನುತ
ತುಳುಕಿದನು ಕೆಂಗೋಲನಿನ ಮಂ
ಡಲಕೆ ದಿಗ್ಭ್ರಮೆಯಾಯ್ತು ನಭದಲಿ
ಸುಳಿವ ಸುರರ ವಿಮಾನತತಿ ಚೆಲ್ಲಿದವು ದೆಸೆದೆಸೆಗೆ (ಅರಣ್ಯ ಪರ್ವ, ೨೧ ಸಂಧಿ, ೨೯ ಪದ್ಯ)

ತಾತ್ಪರ್ಯ:
ಎಲವೋ ಚಿತ್ರಸೇನ, ಕೌರವನ ಸಮೇತ ಆಮೆಯ ಕೆಳಗೆ ಹೊಕ್ಕರೂ, ಧ್ರುವಮಂಡಲದ ಮೇಲೆ ಹೋದರೂ ನಾನು ಬಿಡುವುದಿಲ್ಲ. ನಿಲ್ಲು ನಿಲ್ಲು ಎನ್ನುತ್ತಾ ಅರ್ಜುನನು ಕೆಂಪಾದ ಬಾಣಗಳನ್ನು ಬಿಡಲು, ಸೂರ್ಯಮಂಡಲಕ್ಕೆ ದಿಗ್ಭ್ರಮೆಯಾಯಿತು. ದೇವತೆಗಳ ವಿಮಾನಗಳು ದಿಕ್ಕು ದಿಕ್ಕಿಗೆ ಓಡಿದವು.

ಅರ್ಥ:
ಸಹಿತ: ಜೊತೆ; ಕಮಠ: ಆಮೆ, ಕೂರ್ಮ; ಕೆಳಗೆ: ಅಡಿ; ಧುರ್ವ: ನಕ್ಷತ್ರದ ಹೆಸರು; ಮೇಲೆ: ಎತ್ತರ; ಹೊಕ್ಕು: ಸೇರು; ಕೊಲು: ಸಾಯಿಸು; ಫಡ: ತಿರಸ್ಕಾರದ ಮಾತು; ನಿಲ್ಲು: ತಡೆ; ತುಳುಕು: ಉಕ್ಕುವಿಕೆ; ಕೆಂಗೋಲು: ಕೆಂಪಾದ ಬಾಣ; ಇನ: ಸೂರ್ಯ; ಮಂಡಲ: ನಾಡಿನ ಒಂದು ಭಾಗ; ದಿಗ್ಭ್ರಮೆ: ಗಾಬರಿ, ಕಳವಳ; ನಭ: ಆಗಸ; ಸುಳಿ: ಆವರಿಸು, ಮುತ್ತು; ಸುರ: ದೇವತೆ; ವಿಮಾನ: ಆಗಸದಲ್ಲಿ ಹಾರುವ ವಾಹನ; ತತಿ: ಗುಂಪು; ಚೆಲ್ಲು: ಹರಡು; ದೆಸೆ: ದಿಕ್ಕು;

ಪದವಿಂಗಡಣೆ:
ಎಲವೊ +ಕೌರವ+ ಸಹಿತ +ಕಮಠನ
ಕೆಳಗೆ +ಧ್ರುವನಿಂ +ಮೇಲೆ +ಹೊಕ್ಕರೆ
ಕೊಲುವೆನಲ್ಲದೆ +ಬಿಡುವೆನೇ+ ಫಡ+ ನಿಲ್ಲು+ನಿಲ್ಲೆನುತ
ತುಳುಕಿದನು +ಕೆಂಗೋಲನ್+ಇನ +ಮಂ
ಡಲಕೆ+ ದಿಗ್ಭ್ರಮೆಯಾಯ್ತು +ನಭದಲಿ
ಸುಳಿವ +ಸುರರ+ ವಿಮಾನ+ತತಿ +ಚೆಲ್ಲಿದವು +ದೆಸೆದೆಸೆಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ತುಳುಕಿದನು ಕೆಂಗೋಲನಿನ ಮಂಡಲಕೆ ದಿಗ್ಭ್ರಮೆಯಾಯ್ತು
(೨) ಮೇಲೆ ಕೆಳಗೆಯನ್ನು ಸೂಚಿಸಲು – ಕಮಠ, ಧ್ರುವ ಪದದ ಬಳಕೆ

ಪದ್ಯ ೨೮: ಭೂಮಿಯನ್ನು ಯಾರು ಹೇಗೆ ಹೊತ್ತಿದ್ದಾರೆ?

ಧಾರಿಣಿಯನಹಿತಾಳ್ದನಾತನ
ವೀರ ಕಮಠನು ಹೊತ್ತನಿಬ್ಬರ
ಭಾರವನು ನಿಜಶಕ್ತಿ ಧರಿಸಿದಳೊಂದು ಲೀಲೆಯಲಿ
ತೋರಗಿರಿಗಳುವೆರೆಸಿದಿಳೆ ತಾ
ನೀರೊಳದ್ದುವುದೆಂದು ಸಲೆ ಮದ
ವಾರಣಂಗಳು ಧರಿಸಿಕೊಂಡಿಹುವೆಂಟು ದಿಕ್ಕಿನಲಿ (ಅರಣ್ಯ ಪರ್ವ, ೮ ಸಂಧಿ, ೨೮ ಪದ್ಯ)

ತಾತ್ಪರ್ಯ:
ಭೂಮಿಯನ್ನು ಆದಿಶೇಷನು ಹೊತ್ತಿದ್ದಾನೆ, ಅವನನ್ನು ಕೂರ್ಮನು ಹೊತ್ತಿದ್ದಾನೆ, ಇವರಿಬ್ಬರನ್ನೂ ಶ್ರೀದೇವಿಯು ತನ್ನ ಲೀಲೆಯಿಂದ ಧರಿಸಿದ್ದಾಳೆ. ಭೂಮಿಯು ನೀರಿನಲ್ಲಿ ಮುಳುಗೀತೆಂದು ಎಂಟು ದಿಕ್ಕಿನಲ್ಲಿ ಎಂಟು ಆನೆಗಳು ಹೊತ್ತಿವೆ.

ಅರ್ಥ:
ಧಾರಿಣಿ: ಭೂಮಿ; ಅಹಿ: ಹಾವು; ಆಳು: ಅಧಿಕಾರ ನಡೆಸು; ವೀರ: ಶೂರ, ಪರಾಕ್ರಮಿ; ಕಮಠ: ಕೂರ್ಮ; ಹೊತ್ತು: ಹೊರು; ಭಾರ: ಹೊರೆ; ನಿಜ: ದಿಟ; ಶಕ್ತಿ: ಸಾಮರ್ಥ್ಯ, ಬಲಾಢ್ಯ; ಧರಿಸು: ಹೊರು; ಲೀಲೆ: ಆನಂದ,ಕ್ರೀಡೆ; ತೋರು: ಗೋಚರಿಸು; ಗಿರಿ: ಬೆಟ್ಟ; ನೀರು: ಜಲ; ಅದ್ದು: ಮುಳುಗು, ತೋಯು; ಸಲೆ: ವಿಸ್ತೀರ್ಣ; ಮದ: ಅಮಲು, ಸೊಕ್ಕು; ವಾರಣಂಗಳು: ಆನೆ; ಧರಿಸು: ಹೊರು; ದಿಕ್ಕು: ದಿಶೆ;

ಪದವಿಂಗಡಣೆ:
ಧಾರಿಣಿಯನ್+ ಅಹಿತಾಳ್ದನ್+ಆತನ
ವೀರ+ ಕಮಠನು +ಹೊತ್ತನಿಬ್ಬರ
ಭಾರವನು +ನಿಜ+ಶಕ್ತಿ+ ಧರಿಸಿದಳೊಂದು +ಲೀಲೆಯಲಿ
ತೋರ+ಗಿರಿಗಳುವ್+ಎರೆಸಿದ್+ಇಳೆ+ ತಾ
ನೀರೊಳ್+ಅದ್ದುವುದೆಂದು +ಸಲೆ +ಮದ
ವಾರಣಂಗಳು+ ಧರಿಸಿಕೊಂಡಿಹುವ್+ಎಂಟು +ದಿಕ್ಕಿನಲಿ

ಅಚ್ಚರಿ:
(೧) ಧಾರಿಣಿ, ಇಳೆ – ಸಮನಾರ್ಥಕ ಪದ