ಪದ್ಯ ೧೭: ಭೀಮನು ಏನೆಂದು ಗರ್ಜಿಸಿದನು?

ಗದೆಯ ಮೊನೆಯಲಿ ನೂಕಿದನು ರೋ
ಮದಲಿ ಚಲಿಸದು ಬಾಲ ನೋಡಿದ
ನಿದು ವಿಚಿತ್ರವಲಾಯೆನುತ ನುಡಿಸಿದನು ಕಪಿವರನ
ಒದೆದಡದ್ರಿಗಳಳಿವವೆನ್ನಂ
ಗದಲಿ ನಾ ಬಲ್ಲಿದನು ಬಾಲದ
ಕದವ ತೆಗೆ ಬಟ್ಟೆಯಲೆನುತ ಗರ್ಜಿಸಿದನಾ ಭೀಮ (ಅರಣ್ಯ ಪರ್ವ, ೧೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ಭೀಮನು ಹನುಮನ ಬಾಲವನ್ನು ಗದೆಯ ತುದಿಯಿಂದ ನೂಕಿದನು, ಅವನ ಆಶ್ಚರ್ಯಕ್ಕೆ ಬಾಲದ ಕೂದಲೂ ಸಹ ಅಲ್ಲಾಡಲಿಲ್ಲ, ಈ ವಿಚಿತ್ರವನ್ನು ಕಂಡು ಬೆರಗಾಗಿ, ನಾನು ಕಾಲಿನಿಂದ ಒದೆದರೆ ಬೆಟ್ಟಗಳು ನಾಶವಾಗುತ್ತವೆ, ನಾನು ಮಹಾ ಬಲಶಾಲಿ, ನಿನ್ನ ಬಾಲವನ್ನು ದಾರಿಯಿಂದ ಎಳೆದುಕೋ ಎಂದು ಹನುಮನಿಗೆ ಹೇಳಿದನು.

ಅರ್ಥ:
ಗದೆ: ಮುದ್ಗರ; ಮೊನೆ: ತುದಿ; ನೂಕು: ತಳ್ಳು; ರೋಮ: ಕೂದಲು; ಚಲಿಸು: ಅಲ್ಲಾಡು; ಬಾಲ: ಪುಚ್ಛ; ನೋಡು: ವೀಕ್ಷಿಸು; ವಿಚಿತ್ರ: ಆಶ್ಚರ್ಯ; ನುಡಿಸು: ಮಾತನಾಡಿಸು; ಕಪಿ: ಹನುಮ; ಒದೆ: ಕಾಲಿನಿಂದ ಹೊಡೆ, ನೂಕು; ಅದ್ರಿ: ಬೆಟ್ಟ; ಅಳಿ: ನಾಶ; ಅಂಗ: ದೇಹದ ಭಾಗ; ಬಲ್ಲಿದ: ಬಲಿಷ್ಠ; ಕದ: ಬಾಗಿಲು; ತೆಗೆ: ಈಚೆಗೆ ತರು, ಹೊರತರು; ಬಟ್ಟೆ: ಹಾದಿ, ಮಾರ್ಗ; ಗರ್ಜಿಸು: ಜೋರಾಗಿ ಕೂಗು;

ಪದವಿಂಗಡಣೆ:
ಗದೆಯ +ಮೊನೆಯಲಿ +ನೂಕಿದನು +ರೋ
ಮದಲಿ +ಚಲಿಸದು +ಬಾಲ +ನೋಡಿದನ್
ಇದು +ವಿಚಿತ್ರವಲಾ+ಎನುತ +ನುಡಿಸಿದನು +ಕಪಿವರನ
ಒದೆದಡ್+ಅದ್ರಿಗಳ್+ಅಳಿವವ್+ಎನ್ನಂ
ಗದಲಿ+ ನಾ +ಬಲ್ಲಿದನು+ ಬಾಲದ
ಕದವ +ತೆಗೆ +ಬಟ್ಟೆಯಲೆನುತ +ಗರ್ಜಿಸಿದನಾ +ಭೀಮ

ಅಚ್ಚರಿ:
(೧) ಬಾಲವನ್ನು ತೆಗೆ ಎಂದು ಹೇಳುವ ಪರಿ – ಬಾಲದ ಕದವ ತೆಗೆ ಬಟ್ಟೆಯಲೆನುತ ಗರ್ಜಿಸಿದನಾ ಭೀಮ

ಪದ್ಯ ೧೮: ಹನುಮಂತನು ಯಾವ ಕೋಲಾಹಲವನ್ನು ಮಾಡಿದನು?

ಅರಸ ಕೇಳೇನೆಂಬೆನೈ ಕಪಿ
ವರನ ಕೋಳಾಹಳದ ಕದನವ
ಕರೆದು ನಖದಲಿ ಹೊಯ್ದು ಕರದಲಿ ಕಾದುವಂದದಲಿ
ಮುರಿದು ಬಾಲದಲಡಿಗಡಿಗೆ ಬೊ
ಬ್ಬಿರಿದು ಹೆಣಗಿದನಿನಸುತನ ಭಾ
ಸುರದ ಹೇಮಧ್ವಜದ ಹಲಗೆಯ ಹಸ್ತಿ ಕಕ್ಷದಲಿ (ಕರ್ಣ ಪರ್ವ, ೨೨ ಸಂಧಿ, ೧೮ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ, ಹನುಮಂತನು ಮಾಡಿದ ಕೋಲಾಹಲವನ್ನು ಏನೆಂದು ಹೇಳಲಿ, ಪಾದದ ಪಂಜಗಳಿಂದ ಕದನವನ್ನು ಆಹ್ವಾನಿಸಿ, ಕೈಗಳಿಂದ ಕಾದಾಡುವಂತೆ ಹೊಯ್ದು, ಬಾಲವನ್ನು ಕರ್ಣನ ಹೇಮಧ್ವಜದ ಹಲಗೆಯ ಪಕ್ಕದಲ್ಲಿ ಹೊಯ್ದು ಅಬ್ಬರಿಸಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಕಪಿವರ: ಕಪಿಗಳಲ್ಲಿ ಶ್ರೇಷ್ಠನಾದವ (ಹನುಮ); ಕೋಳಾಹಲ: ಗೊಂದಲ; ಕದನ: ಯುದ್ಧ; ಕರೆ: ಬರೆಮಾಡು; ನಖ: ಹುಗುರು; ಹೊಯ್ದು: ಹೊಡೆದು; ಕರ: ಹಸ್ತ; ಕಾದು: ಹೋರಾಡು; ಮುರಿ: ಸೀಳು; ಬಾಲ: ಲಾಂಗೂಲ, ಪುಚ್ಛ; ಅಡಿಗಡಿ: ಮತ್ತೆ ಮತ್ತೆ; ಬೊಬ್ಬಿರಿದು: ಗರ್ಜಿಸು; ಹೆಣಗು: ಹೋರಾಡು, ಕಾಳಗ ಮಾಡು; ಇನಸುತ: ಸೂರ್ಯನ ಮಗ (ಕರ್ಣ); ಭಾಸುರ: ಹೊಳೆಯುವ, ಪ್ರಕಾಶಿಸುವ, ಶೂರ; ಹೇಮ: ಬಿಳಿಯ; ಧ್ವಜ: ಪತಾಕೆ; ಹಲಗೆ: ಪಲಗೆ, ಮರ, ಲೋಹಗಳ ಅಗಲವಾದ ಹಾಗೂ ತೆಳುವಾದ ಸೀಳು; ಹಸ್ತಿ: ಆನೆ, ದೊಡ್ಡದು; ಕಕ್ಷ: ಅಂಗಳ, ಪಕ್ಷ;

ಪದವಿಂಗಡಣೆ:
ಅರಸ +ಕೇಳ್+ಏನೆಂಬೆನೈ+ ಕಪಿ
ವರನ+ ಕೋಳಾಹಳದ+ ಕದನವ
ಕರೆದು +ನಖದಲಿ +ಹೊಯ್ದು +ಕರದಲಿ+ ಕಾದುವಂದದಲಿ
ಮುರಿದು +ಬಾಲದಲ್+ಅಡಿಗಡಿಗೆ +ಬೊ
ಬ್ಬಿರಿದು +ಹೆಣಗಿದನ್+ಇನಸುತನ +ಭಾ
ಸುರದ+ ಹೇಮಧ್ವಜದ+ ಹಲಗೆಯ +ಹಸ್ತಿ +ಕಕ್ಷದಲಿ

ಅಚ್ಚರಿ:
(೧) ಕ ಕಾರದ ಸಾಲು ಪದಗಳು – ಕೇಳೇನೆಂಬೆನೈ ಕಪಿವರನ ಕೋಳಾಹಳದ ಕದನವ ಕರೆದು
(೨) ಹ ಕಾರದ ತ್ರಿವಳಿ ಪದ – ಹೇಮಧ್ವಜದ ಹಲಗೆಯ ಹಸ್ತಿ