ಪದ್ಯ ೬: ಧೃತರಾಷ್ಟ್ರ ದುಃಖದಿಂದ ವ್ಯಾಸರಲ್ಲಿ ಏನು ಹೇಳಿದ?

ಅಹುದು ನಿಮ್ಮ ಯುಧಿಷ್ಠಿರನು ಗುಣಿ
ಯಹನು ಭೀಮಾರ್ಜುನರು ಬಲ್ಲಿದ
ರಹರು ಕೃಷ್ಣನ ಕೂರ್ಮೆಯಲ್ಲಿ ಕಪರ್ದಿಯೊಲವಿನಲಿ
ಕುಹಕಿಯೆನ್ನವನ್ನವನೊಳಗೆ ನಿ
ಸ್ಪೃಹರು ವಿದುರಪ್ರಮುಖ ಸುಜನರು
ವಿಹಿತವೆನಗಿನ್ನಾವುದದ ನೀವ್ ಬೆಸಸಿ ಸಾಕೆಂದ (ಗದಾ ಪರ್ವ, ೧೧ ಸಂಧಿ, ೬ ಪದ್ಯ)

ತಾತ್ಪರ್ಯ:
ಆಗ ಧೃತರಾಷ್ಟ್ರ, ಹೌದು ನಿಮ್ಮ ಯುಧಿಷ್ಠಿರನು ಗುಣಶಾಲಿ, ಭೀಮಾರ್ಜುನರು ಮಹಾ ಪರಾಕ್ರಮಿಗಳು. ಕೃಷ್ಣನ ಸ್ನೇಹ, ಶಿವನ ಪ್ರೀತಿ ಅವರ ಕಡೆಗೇ ಇದೆ. ನನ್ನ ಮಗನು ಕುಹಕಿ, ದುಷ್ಟ; ಅವನ ವಿಷಯದಲ್ಲಿ ವಿದುರನೇ ಮೊದಲಾದ ಸಜ್ಜನರು ನಿಸ್ಫೃಹರು. ಇದು ನಿಜ. ನಾನೀಗ ಮಾಡಬೇಕಾದುದೇನು? ನೀವು ಅಪ್ಪಣೆ ನೀಡಿ ಸಾಕು ಎಂದು ಹೇಳಿದನು.

ಅರ್ಥ:
ಗುಣಿ: ಗುಣಉಳ್ಳವ; ಬಲ್ಲಿದ: ಬಲಿಷ್ಠ; ಒಲವು: ಪ್ರೀತಿ; ಕುಹಕಿ: ದುಷ್ಟ; ನಿಸ್ಪೃಹ: ಆಸೆ ಇಲ್ಲದವ; ಪ್ರಮುಖ: ಮುಖ್ಯರಾದವರು; ಸುಜನ: ಒಳ್ಳೆಯವ; ವಿಹಿತ: ಯೋಗ್ಯ; ಬೆಸಸು: ಹೇಳು, ಆಜ್ಞಾಪಿಸು; ಸಾಕು: ನಿಲ್ಲು; ಕಪರ್ದಿ: ಶಿವ;

ಪದವಿಂಗಡಣೆ:
ಅಹುದು +ನಿಮ್ಮ +ಯುಧಿಷ್ಠಿರನು +ಗುಣಿ
ಯಹನು +ಭೀಮಾರ್ಜುನರು +ಬಲ್ಲಿದ
ರಹರು +ಕೃಷ್ಣನ+ ಕೂರ್ಮೆಯಲ್ಲಿ+ ಕಪರ್ದಿ+ಒಲವಿನಲಿ
ಕುಹಕಿ+ಎನ್ನವನ್ನ್+ಅವನೊಳಗೆ +ನಿ
ಸ್ಪೃಹರು +ವಿದುರ+ಪ್ರಮುಖ +ಸುಜನರು
ವಿಹಿತವೆನಗ್+ಇನ್ನಾವುದ್+ಅದ +ನೀವ್ +ಬೆಸಸಿ+ ಸಾಕೆಂದ

ಅಚ್ಚರಿ:
(೧) ದುರ್ಯೋಧನ ಬಗ್ಗೆ ಹೇಳಿದುದು – ಕುಹಕಿ
(೨) ಪಾಂಡವರ ಬಗ್ಗೆ ತಿಳಿಸಿದ ಪರಿ – ಯುಧಿಷ್ಠಿರನು ಗುಣಿಯಹನು, ಭೀಮಾರ್ಜುನರು ಬಲ್ಲಿದರಹರು

ಪದ್ಯ ೨೭: ನಿವಾತಕವಚನೇಕೆ ಕೋಪಗೊಂಡ?

ಕೇಳಿದನು ಕಡುಗೋಪದಲಿ ಸಿಡಿ
ಲೇಳಿಗೆಯಲೆದ್ದನು ಸುರೇಂದ್ರಗೆ
ಮೇಲುಗಾಳಗವೇ ಸುಪರ್ವರು ನಮ್ಮ ಸದೆವರಲೇ
ಕಾಲಗತಿಯೋ ಮೇಣ್ಕಪರ್ದಿಯ
ಕೀಲಕವೊ ರವಿಯೊಡನೆ ತಮ ಕೈ
ಮೇಳುವಿಸಿತೇ ಶಿವ ಶಿವಾಯೆಂದಸುರ ಹಲುಮೊರೆದ (ಅರಣ್ಯ ಪರ್ವ, ೧೩ ಸಂಧಿ, ೨೭ ಪದ್ಯ)

ತಾತ್ಪರ್ಯ:
ದೈತ್ಯರಾಜನಾದ ನಿವಾತಕವಚನು ಯೋಧರ ಮಾತನ್ನು ಕೇಳಿ, ಮಹಾ ಕೋಪಿಷ್ಟನಾದನು, ಸಿಡಿಲಿನಂತೆ ಗರ್ಜಿಸಿ ಎದ್ದು ನಿಂತು, ಏನು ಕಾಳಗದಲ್ಲಿ ಇಂದ್ರನು ಮೇಲುಗೈ ಸಾಧಿಸಿದನೇ? ದೇವತೆಗಳು ನಮ್ಮನ್ನ ಸದೆಬಡಿದರೆ? ಇದು ಕಾಲಗತಿಯೋ, ಶಿವನ ಗುಟ್ಟೋ, ತಿಳಿಯದಾಗಿದೆ, ಸೂರ್ಯನೊಡನೆ ಕತ್ತಲು ಯುದ್ಧಕ್ಕೆ ಬಂದಹಾಗಿದೆ ಎಂದು ಹಲ್ಲುಕಡಿಯುತ್ತಾ ತನ್ನ ಕೋಪವನ್ನು ತೋರ್ಪಡಿಸಿದನು.

ಅರ್ಥ:
ಕೇಳು: ಆಲಿಸು; ಕಡುಗೋಪ: ತುಂಬ ಕೋಪ, ಆವೇಶ; ಸಿಡಿಲು: ಅಶನಿ, ಗರ್ಜುಸು; ಏಳಿಗೆ: ಅಧಿಕ; ಎದ್ದು: ಮೇಲೇಳು; ಸುರೇಂದ್ರ: ಇಂದ್ರ; ಮೇಲು: ಅಧಿಕ, ಹೆಚ್ಚಳ; ಕಾಳಗ: ಯುದ್ಧ; ಸುಪರ್ವ: ದೇವತೆ; ಸದೆ: ಮೆಟ್ಟು, ತುಳಿ; ಕಾಲಗತಿ: ಸಮಯದ ವೇಗ, ವಿಧಿಯ ನಿಯಮ; ಮೇಣ್: ಅಥವ; ಕಪರ್ದಿ: ಶಿವ; ಕೀಲಕ: ಗುಟ್ಟು; ರವಿ: ಸೂರ್ಯ; ತಮ: ಅಂಧಕಾರ; ಕೈಮೇಳವಿಸು: ಹೋರಾಡು; ಅಸುರ: ದಾನವ; ಹಲುಮೊರೆ: ಹಲ್ಲನ್ನು ಕಡಿ;

ಪದವಿಂಗಡಣೆ:
ಕೇಳಿದನು +ಕಡು+ಕೋಪದಲಿ+ ಸಿಡಿ
ಲೇಳಿಗೆಯಲ್+ಎದ್ದನು +ಸುರೇಂದ್ರಗೆ
ಮೇಲು+ಕಾಳಗವೇ +ಸುಪರ್ವರು +ನಮ್ಮ +ಸದೆವರಲೇ
ಕಾಲಗತಿಯೋ +ಮೇಣ್+ಕಪರ್ದಿಯ
ಕೀಲಕವೊ +ರವಿಯೊಡನೆ+ ತಮ +ಕೈ
ಮೇಳುವಿಸಿತೇ +ಶಿವ+ ಶಿವಾಯೆಂದ್+ಅಸುರ +ಹಲುಮೊರೆದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸಿಡಿಲೇಳಿಗೆಯಲೆದ್ದನು, ರವಿಯೊಡನೆ ತಮ ಕೈ ಮೇಳುವಿಸಿತೇ
(೨) ಸ್ಥಿತಿಗೆ ಏನು ಕಾರಣ ಎಂದು ಹೇಳುವ ಪರಿ – ಕಾಲಗತಿಯೋ ಮೇಣ್ಕಪರ್ದಿಯ
ಕೀಲಕವೊ

ಪದ್ಯ ೧: ಯಾವ ವೃತ್ತಾಂತವನ್ನು ಧರ್ಮಜನು ಕೇಳಲು ಬಯಸಿದನು?

ಕೇಳು ಜನಮೇಜಯ ಧರಿತ್ರೀ
ಪಾಲ ಧರ್ಮಜನರ್ಜುನನನುಪ
ಲಾಲಿಸಿದನುರೆ ಮುಳುಗಿದನು ಪುಳಕಾಶ್ರುಪೂರದಲಿ
ಹೇಳು ಪಾರ್ಥ ಕಪರ್ದಿಯಸ್ತ್ರ
ವ್ಯಾಳಸಂಗ್ರಹಣ ಪ್ರಪಂಚವ
ನಾಲಿಸುವೆನೆನೆ ನೃಪತಿಗಭಿವರ್ಣಿಸಿದನಾ ಕಥೆಯ (ಅರಣ್ಯ ಪರ್ವ, ೧೩ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಅರ್ಜುನನ ಮಾತುಗಳನ್ನು ಕೇಳಿ ರೋಮಾಂಚನ ಗೊಂಡ ಯುಧಿಷ್ಠಿರನು ಆನಂದಾಶ್ರುಗಳನ್ನು ಸುರಿಸುತ್ತಾ, ಅರ್ಜುನ, ಶಿವನ ಪಾಶುಪತಾಸ್ತ್ರದ ಲಾಭವು ಹೇಗಾಯಿತೆಂಬುದನ್ನು ಹೇಳು, ಕೇಳಲು ಉತ್ಸುಕನಾಗಿದ್ದೇನೆ ಎಂದು ಧರ್ಮಜನು ಕೇಳಲು, ಅರ್ಜುನನು ಆ ಕಥೆಯೆಲ್ಲವನ್ನೂ ವಿಸ್ತಾರವಾಗಿ ಹೇಳಿದನು.

ಅರ್ಥ:
ಕೇಳು: ಆಲಿಸು; ಧರಿತ್ರೀ: ಭೂಮಿ; ಧರಿತ್ರೀಪಾಲ: ಒಡೆಯ, ರಾಜ; ಅನುಪಮ: ಉತ್ಕೃಷ್ಟವಾದುದು; ಲಾಲಿಸು: ಅಕ್ಕರೆಯನ್ನು ತೋರಿಸು, ಮುದ್ದಾಡು; ಉರೆ: ಹೆಚ್ಚು, ಅಧಿಕ; ಮುಳುಗು: ಮುಚ್ಚಿಹೋಗು; ಪುಳಕ: ರೋಮಾಂಚನ; ಅಶ್ರು: ಕಣ್ಣೀರು; ಪೂರ: ಪೂರ್ಣ; ಹೇಳು: ತಿಳಿಸು; ಕಪರ್ದಿ: ಜಟಾಜೂಟವುಳ್ಳವ-ಶಿವ; ಅಸ್ತ್ರ: ಶಸ್ತ್ರ, ಆಯುಧ; ವ್ಯಾಳ: ಸರ್ಪ; ಸಂಗ್ರಹ: ಹಿಡಿತ, ವಶ; ಪ್ರಪಂಚ: ಜಗತ್ತು; ಆಲಿಸು: ಕೇಳು; ನೃಪತಿ: ರಾಜ; ಅಭಿವರ್ಣಿಸು: ಹೆಚ್ಚಾಗಿ ವರ್ಣನೆ ಮಾಡು; ಕಥೆ: ವೃತ್ತಾಂತ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಧರ್ಮಜನ್+ಅರ್ಜುನನ್+ಅನುಪ
ಲಾಲಿಸಿದನ್+ಉರೆ+ ಮುಳುಗಿದನು+ ಪುಳಕ+ಅಶ್ರು+ಪೂರದಲಿ
ಹೇಳು +ಪಾರ್ಥ +ಕಪರ್ದಿಯಸ್ತ್ರ
ವ್ಯಾಳ+ಸಂಗ್ರಹಣ +ಪ್ರಪಂಚವನ್
ಆಲಿಸುವೆನ್+ಎನೆ +ನೃಪತಿಗ್+ಅಭಿವರ್ಣಿಸಿದನಾ+ ಕಥೆಯ

ಅಚ್ಚರಿ:
(೧) ರೋಮಾಂಚನವನ್ನು ವಿವರಿಸುವ ಪರಿ – ಮುಳುಗಿದನು ಪುಳಕಾಶ್ರುಪೂರದಲಿ
(೨) ಕೇಳು, ಹೇಳು – ಪ್ರಾಸ ಪದಗಳು

ಪದ್ಯ ೩೮: ದೇವತೆಗಳು ವೃಷಸೇನನ ಸಾವಿಗೆ ಏನು ಹೇಳಿದರು?

ನೂಕಿತೀ ಬಲದಳದ ಪದಹತಿ
ಗೇಕೆ ಬಿರಿಯದು ಧರಣಿ ದಿಕ್ಕರಿ
ಯೋಕರಿಸದೇ ಮದವನಾದರೆ ಪುಣ್ಯನಬುಜಭವ
ಈ ಕಡುಹಿನಾತಗಳನಾನುವ
ಡೀ ಕಪರ್ದಿಯೆ ಸಾಕು ಕೆಲನವ
ರಾಕೆವಾಳರೆ ಎನುತಲಿರ್ದುದು ಮೇಲೆ ಸುರಕಟಕ (ಕರ್ಣ ಪರ್ವ, ೨೦ ಸಂಧಿ, ೩೮ ಪದ್ಯ)

ತಾತ್ಪರ್ಯ:
ವೃಷಸೇನನ ಆಪ್ತಬಲದ ತುಳಿತಕ್ಕೆ ಭೂಮಿ ಬ್ರಿಯುವುದಿಲ್ಲವೇ? ದಿಗ್ಗಜಗಳು ಮದಧಾರೆಯನ್ನು ಸುರಿಸದೆ ಸುಮ್ಮನಿರಲು ಸಾಧ್ಯವೇ? ಏನು ಬ್ರಹ್ಮನ ಪುಣ್ಯದಿಂದ ಲೋಕ ಉಳಿದುಕೊಂಡಿದೆ. ಈ ವೀರರನ್ನು ಇದಿರಿಸಲು ಶಿವನ ಹೊರತು ಇನ್ನಾವ ವೀರರಿಗೆ ಸಾಧ್ಯ? ಎಂದು ದೇವತೆಗಳು ಉದ್ಗರಿಸಿದರು.

ಅರ್ಥ:
ನೂಕು: ತಳ್ಳು; ಬಲ: ಸೈನ್ಯ; ದಳ: ಗುಂಪು; ಪದ: ಪಾದ; ಹತಿ: ಸಾವು; ಬಿರಿ: ಬಿರುಕು, ಸೀಳು; ಧರಣಿ: ಭೂಮಿ; ದಿಕ್ಕರಿ: ದಿಗ್ಗಜ; ಓಕರಿಸು: ವಾಂತಿಮಾಡು, ಅಸಹ್ಯಪಡು; ಮದ: ಅಹಂಕಾರ; ಪುಣ್ಯ:ಒಳ್ಳೆಯ, ಧಾರ್ಮಿಕವಾದ; ಅಬುಜಭವ: ಕಮಲದಿಂದ ಹುಟ್ಟಿದ (ಬ್ರಹ್ಮ); ಕಡುಹು: ಸಾಹಸ, ಹುರುಪು; ಆತಗಳು: ಅವರು; ಆನುವ:ಎದುರಿಸು; ಕಪರ್ದಿ:ಜಟಾಜೂಟವುಳ್ಳವ-ಶಿವ; ಸಾಕು: ನಿಲ್ಲಿಸು; ಕೆಲರು: ಕೆಲವರು; ಆಕೆವಾಳ:ವೀರ, ಪರಾಕ್ರಮಿ; ಎನುತ: ಹೇಳುತ್ತಾ; ಸುರಕಟಕ: ದೇವತೆಗಳ ಗುಂಪು;

ಪದವಿಂಗಡಣೆ:
ನೂಕಿತ್+ಈ+ ಬಲದಳದ +ಪದಹತಿಗ್
ಏಕೆ+ ಬಿರಿಯದು +ಧರಣಿ +ದಿಕ್ಕರಿ
ಓಕರಿಸದೇ +ಮದವನ್+ಆದರೆ+ ಪುಣ್ಯನ್+ಅಬುಜಭವ
ಈ +ಕಡುಹಿನ್+ಆತಗಳನ್+ಆನುವಡ್
ಈ+ ಕಪರ್ದಿಯೆ +ಸಾಕು +ಕೆಲನವರ್
ಆಕೆವಾಳರೆ +ಎನುತಲಿರ್ದುದು +ಮೇಲೆ +ಸುರಕಟಕ

ಅಚ್ಚರಿ:
(೧) ವೃಷಸೇನನನ್ನು ಎದುರಿಸಲು ಶಿವನೇ ಸರಿ ಎಂದು ಹೇಳುವಾಗ ಅವನ ಪರಾಕ್ರಮದ ಪರಿಚಯ ಮಾಡಿದ ಬಗೆ -ಈ ಕಡುಹಿನಾತಗಳನಾನುವಡೀ ಕಪರ್ದಿಯೆ ಸಾಕು ಕೆಲನವ
ರಾಕೆವಾಳರೆ
(೨) ವೃಷಸೇನನ ಸಾವಿನ ರೋಷಾಗ್ನಿ ಹೇಗಿತ್ತು ಎಂದು ಹೇಳುವ ಪರಿ – ನೂಕಿತೀ ಬಲದಳದ ಪದಹತಿಗೇಕೆ ಬಿರಿಯದು ಧರಣಿ ದಿಕ್ಕರಿಯೋಕರಿಸದೇ ಮದವನ್

ಪದ್ಯ ೨: ಕೌರವ ಸೈನ್ಯ ಏನೆಂದು ಗರ್ಜಿಸಿತು?

ಭೀಮನೋ ನಿಮಿಷಾರ್ಧದಲಿ ನಿ
ರ್ನಾಮನೋ ತಡವೇಕೆ ರಿಪುವೇ
ಕಾಮನೋ ಕರ್ಣನೆ ಕಪರ್ದಿ ವಿಚಾರವೇಕೆನುತ
ತಾಮಸದ ಭುಲ್ಲವಣೆಯಲಿ ಕುರು
ಭೂಮಿಪನ ಬಲವೊದರಿ ವೈರಿ
ಸ್ತೋಮ ಕಂಡುದು ಪವನತನಯನ ರಣದ ಭಾರಣೆಯ (ಕರ್ಣ ಪರ್ವ, ೧೧ ಸಂಧಿ, ೨ ಪದ್ಯ)

ತಾತ್ಪರ್ಯ:
ಭೀಮನು ಇನ್ನರ್ಧನಿಮಿಷದಲ್ಲಿ ಇಲ್ಲವಾಗುತ್ತಾನೆ, ಶತ್ರುವೇ ಮನ್ಮಥ, ಕರ್ಣನೇ ಶಿವ, ಹೀಗಿರುವಾಗ ಇನ್ನು ಹೆಚ್ಚಿನ ವಿಚಾರವೇಕೆ, ತಡಮಾಡದೆ ಮುನ್ನುಗ್ಗಿರಿ ಎಂದು ಕೌರವ ಸೇನೆಯು ಅಂಧಕಾರದ ಕೋಪದಿಂದ ಗರ್ಜಿಸಿತು. ಭೀಮನು ಯುದ್ಧದಲ್ಲಿ ಅತಿಶಯ ಬಲದೊಡನೆ ಕಾದಾಡುತ್ತಿದ್ದನು.

ಅರ್ಥ:
ನಿಮಿಷ: ಕಾಲದ ಪ್ರಮಾಣ; ಅರ್ಧ: ವಸ್ತುವಿನ ಎರಡು ಸಮಪಾಲುಗಳಲ್ಲಿ ಒಂದು; ನಿರ್ನ್ನಾಮ: ಧ್ವಂಸ; ತಡ: ಕಾಯುವಿಕೆ; ರಿಪು: ವೈರಿ; ಕಾಮ: ಆಸೆ; ಕಪರ್ದಿ: ಜಟಾಜೂಟವುಳ್ಳವ-ಶಿವ; ವಿಚಾರ: ಪರ್ಯಾಲೋಚನೆ, ವಿಮರ್ಶೆ; ತಾಮಸ:ಕತ್ತಲೆ, ಅಂಧಕಾರ; ಭುಲ್ಲವಣೆ: ಹರ್ಷ, ಪೆರ್ಚುಗೆ; ಭೂಮಿಪ: ರಾಜ; ಬಲ: ಸೈನ್ಯ; ಒದರು: ಕೊಡಹು, ಜಾಡಿಸು; ವೈರಿ: ರಿಪು; ಸ್ತೋಮ: ಗುಂಪು; ಕಂಡು: ನೋಡು; ಪವನತನಯ: ವಾಯುಪುತ್ರ (ಭೀಮ); ರಣ: ಯುದ್ಧ; ಭಾರಣೆ: ಮಹಿಮೆ, ಗೌರವ;

ಪದವಿಂಗಡಣೆ:
ಭೀಮನೋ +ನಿಮಿಷಾರ್ಧದಲಿ +ನಿ
ರ್ನಾಮನೋ +ತಡವೇಕೆ +ರಿಪುವೇ
ಕಾಮನೋ +ಕರ್ಣನೆ+ ಕಪರ್ದಿ +ವಿಚಾರವೇಕೆನುತ
ತಾಮಸದ +ಭುಲ್ಲವಣೆಯಲಿ +ಕುರು
ಭೂಮಿಪನ +ಬಲವೊದರಿ+ ವೈರಿ
ಸ್ತೋಮ +ಕಂಡುದು +ಪವನತನಯನ +ರಣದ +ಭಾರಣೆಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ರಿಪುವೇ ಕಾಮನೋ ಕರ್ಣನೆ ಕಪರ್ದಿ ವಿಚಾರವೇಕೆನುತ
(೨) ಕೌರವರ ಸೈನ್ಯದ ಹುರುಪು – ತಾಮಸದ ಭುಲ್ಲವಣೆಯಲಿ ಕುರುಭೂಮಿಪನ
(೩) ರಿಪು, ವೈರಿ; ಭೀಮ, ಪವನತನಯ – ಸಮನಾರ್ಥಕ ಪದ

ಪದ್ಯ ೧೫: ಶಿವನಿಗೆ ಯಾರು ಜಯಘೋಷಗಳನ್ನು ಹಾಡುತ್ತಿದ್ದರು?

ಮುರಿಯೆ ಬಲವಂಕದಲುಘೇ ಎಂ
ದೆರಗಿದವು ಶ್ರುತಿಕೋಟಿ ವಾಮದ
ಕೊರಳ ಕೊಂಕಿನಲುಪನಿಷತ್ತುಗಳೆರಗಿದವು ಕೋಟಿ
ತಿರುಗೆ ಬೆನ್ನಲಿ ನೆರೆದ ಸಚರಾ
ಚರವುಘೇ ಎಂದುದು ಕಪರ್ದಿಯ
ಸರಿಸದಲಿ ಸಿಡಿಲಂತೆ ಮೊಳಗಿತು ವೀರ ಗಣನಿಕರ (ಕರ್ಣ ಪರ್ವ, ೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಶಿವನು ಬಲಕ್ಕೆ ನೋಡಲು ಅಸಂಖ್ಯಾತ ಶ್ರುತಿಗಳು ಉಘೇ ಎಂದು ನಮಸ್ಕರಿಸಿದವು. ಎಡಕ್ಕೆ ತಿರುಗಲು ಹಲವಾರು ಉಪನಿಷತ್ತುಗಳು ವಂದಿಸಿದವು. ಹಿಂದಕ್ಕೆ ತಿರುಗಿ ನೋಡಲು ಅಲ್ಲಿ ಸೇರಿದ್ದ ಎಲ್ಲಾ ಚರಾಚರರುಗಳು ಜಯಘೋಷವನ್ನು ಹಾಡುತ್ತಿದ್ದರು. ಶಿವನ ಗರ್ಜನೆಯೊಡನೆ
ವೀರರಾದ ಶಿವಗಣಗಳು ಸಿಡಿಲಿನಂತೆ ಗರ್ಜಿಸಿದವು.

ಅರ್ಥ:
ಮುರಿ: ತಿರುಗು; ಬಲ: ದಕ್ಷಿಣ ಪಾರ್ಶ್ವ; ವಂಕ: ಬದಿ; ಉಘೇ: ಜಯಘೋಷ; ಎರಗು:ನಮಸ್ಕಾರ ಮಾಡು; ಶ್ರುತಿ: ವೇದ; ಕೋಟಿ: ಲೆಕ್ಕವಿಲ್ಲದಷ್ಟು; ವಾಮ: ಎಡಭಾಗ; ಕೊರಳು: ಕಂಥ; ಕೊಂಕಿನ: ತಿರುಗು; ಉಪನಿಷತ್ತು: ವೇದದ ಕೊನೆಯ ಭಾಗ; ಎರಗು: ನಮಸ್ಕರಿಸು; ಕೋಟಿ: ಅಸಂಖ್ಯಾತ; ತಿರುಗು: ಸುತ್ತು, ದಿಕ್ಕನ್ನು ಬದಲಾಯಿಸು; ಬೆನ್ನು: ಹಿಂಬದಿ; ನೆರೆ: ಗುಂಪು; ಸಚರಾಚರ: ಚಲಿಸುವ ಮತ್ತು ಚಲಿಸದ; ಉಘೇ: ಜಯಘೋಷ; ಕಪರ್ದಿ:ಜಟಾಜೂಟವುಳ್ಳವ-ಶಿವ; ಸರಿಸು: ಪಕ್ಕಕ್ಕೆ ಇಡು; ಸರಿಸ: ಸಮೀಪ; ಸಿಡಿಲು: ಚಿಮ್ಮು, ಸಿಡಿ; ಮೊಳಗು: ಹೊರಹೊಮ್ಮು; ವೀರ: ಪರಾಕ್ರಮ; ಗಣ: ಶಿವನ ಪ್ರಮಥರ ಸಮೂಹ; ನಿಕರ: ಗುಂಪು;

ಪದವಿಂಗಡಣೆ:
ಮುರಿಯೆ+ ಬಲವಂಕದಲ್+ಉಘೇ +ಎಂದ್
ಎರಗಿದವು +ಶ್ರುತಿಕೋಟಿ +ವಾಮದ
ಕೊರಳ+ ಕೊಂಕಿನಲ್+ಉಪನಿಷತ್ತುಗಳ್+ಎರಗಿದವು +ಕೋಟಿ
ತಿರುಗೆ +ಬೆನ್ನಲಿ +ನೆರೆದ +ಸಚರಾ
ಚರವುಘೇ +ಎಂದುದು +ಕಪರ್ದಿಯ
ಸರಿಸದಲಿ +ಸಿಡಿಲಂತೆ +ಮೊಳಗಿತು +ವೀರ +ಗಣನಿಕರ

ಅಚ್ಚರಿ:
(೧) ಶಿವನನ್ನು ಕಪರ್ದಿ ಎಂದು ಕರೆದಿರುವುದು
(೨) ಉಘೇ, ಕೋಟಿ – ೨ ಬಾರಿ ಪ್ರಯೋಗ

ಪದ್ಯ ೧೯: ಅಶ್ವತ್ಥಾಮನ ಕೈಚಳಕ ಹೇಗಿತ್ತು?

ಗುರುತನೂಜ ಕಣಾ ವಿರೋಧಿ
ಸ್ಮರಕಪರ್ದಿ ಕಣಾ ವೃಕೋದರ
ಕರಿ ಮೃಗೇಂದ್ರ ಕಣಾ ಕಣಾಳಿಯ ಕಾಯ್ದುಕೊಳ್ಳೆನುತ
ಸರಳನೆಚ್ಚನು ಸರಳನಾ ಬಳಿ
ಸರಳು ಮುಂಚಿದುದಾ ಸರಳ ಬಳಿ
ಸರಳು ಮುಂಚಿದುದಾವ ಕೈಚಳಕವೊ ಶಿವಾ ಎಂದ (ಕರ್ಣ ಪರ್ವ, ೩ ಸಂಧಿ, ೧೯ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಭೀಮನೆದುರು ನಿಂದು, ಎಲೆ ಭೀಮ ನಾನು ಯಾರು ಗೊತ್ತೇ? ದ್ರೋಣ ಪುತ್ರ ಕಣೋ, ವೈರಿಯಾದ ಮನ್ಮಥನಿಗೆ ಶಿವನಿದ್ದಂತೆ ಕಣೊ, ಭೀಮನೆಂಬ ಆನೆಗೆ ಸಿಂಹ ನಿದ್ದಂತೆ ಕಣೊ, ರಣರಂಗದಲ್ಲಿ ಬಾಣಗಳ ಆವಳಿಯಿಂದ ನಿನ್ನನ್ನು ಕಾಪಾಡಿಕೊ ಎಂದು ಬಾಣಗಳ ಪ್ರಯೋಗ ಪ್ರಾರಂಭಿಸಿದನು, ಒಂದರ ಹಿಂದೆ ಬಾಣಗಳು ಬಂದವು, ಹಿಂದೆ ಬಿಟ್ಟ ಬಾಣಗಳು ಮೊದಲು ಬಿಟ್ಟ ಬಾಣಗಳ ಮುಂದೆ ಹೋದವು, ಆ ಮೇಲೆ ಬಿಟ್ಟ ಬಾಣಗಳು ಮೊದಲೆರಡು ಬಾರಿ ಬಿಟ್ಟ ಬಾಣಗಳ ಮುಂದೆ ಹೋದವು, ಅದೆಂತಹ ಕೈಚಳಕ ಅಶ್ವತ್ಥಾಮನದು ಎಂದು ವೈಶಂಪಾಯನರು ಜನಮೇಜಯರಾಜನಿಗೆ ಕಥೆಯನ್ನು ಹೇಳುತ್ತಾ ಅಚ್ಚರಿಪಟ್ಟರು.

ಅರ್ಥ:
ಗುರು: ಆಚಾರ್ಯ; ತನುಜ: ಮಗ; ಗುರುತನೂಜ: ಗುರುಮಗ (ಅಶ್ವತ್ಥಾಮ); ವಿರೋಧಿ: ವೈರಿ; ಸ್ಮರ: ಮನ್ಮಥ; ಕಪರ್ದಿ: ಜಟಾಜೂಟವುಳ್ಳವ-ಶಿವ; ವೃಕೋದರ: ತೋಳಿನ ಹೊಟ್ಟೆಯಿರುವವ (ಭೀಮ); ಕರಿ: ಆನೆ; ಮೃಗೇಂದ್ರ: ಮೃಗಗಳ ರಾಜ (ಸಿಂಹ); ಕಣ: ರಣರಂಗ; ಕಣಾಳಿ: ಬಾಣಗಳ ಸಮೂಹ; ಕಾಯ್ದುಕೊ: ರಕ್ಷಿಸಿಕೊ; ಸರಳ: ಬಾಣ; ಎಚ್ಚು: ಬಾಣಪ್ರಯೋಗಮಾಡು; ಬಳಿ: ನಂತರ; ಮುಂಚಿದು: ಮೊದಲನೆಯದು; ಕೈಚಳಕ: ಹಸ್ತಕೌಶಲ, ನೈಪುಣ್ಯ;

ಪದವಿಂಗಡಣೆ:
ಗುರು+ತನೂಜ+ ಕಣಾ+ ವಿರೋಧಿ
ಸ್ಮರ+ಕಪರ್ದಿ +ಕಣಾ +ವೃಕೋದರ
ಕರಿ+ ಮೃಗೇಂದ್ರ +ಕಣಾ +ಕಣಾಳಿಯ +ಕಾಯ್ದುಕೊಳ್ಳೆನುತ
ಸರಳನ್+ಎಚ್ಚನು +ಸರಳನ್+ಆ+ ಬಳಿ
ಸರಳು +ಮುಂಚಿದುದ್+ಆ+ ಸರಳ+ ಬಳಿ
ಸರಳು +ಮುಂಚಿದುದ್+ಆವ +ಕೈಚಳಕವೊ +ಶಿವಾ+ ಎಂದ

ಅಚ್ಚರಿ:
(೧) ಬಾಣಗಳು ಹೇಗೆ ಹೋದವು ಎಂದು ವಿವರಿಸಿರುವ ಬಗೆ- ಸರಳನೆಚ್ಚನು ಸರಳನಾ ಬಳಿ
ಸರಳು ಮುಂಚಿದುದಾ ಸರಳ ಬಳಿ ಸರಳು ಮುಂಚಿದುದಾವ ಕೈಚಳಕವೊ ಶಿವಾ ಎಂದ
(೨) ಕಣಾ ೩ ಬಾರಿ ಪದದ ಪ್ರಯೋಗ; ಕಣಾ, ಕಣಾಳಿ
(೩) ಸರಳ – ೫ ಬಾರಿ ಪ್ರಯೋಗ
(೪) ಕ ಕಾರದ ತ್ರಿವಳಿ ಪದ – ಕಣಾ ಕಣಾಳಿಯ ಕಾಯ್ದುಕೊಳ್ಳೆನುತ
(೫) ಬಳಿ – ೪, ೫ ಸಾಲಿನ ಕೊನೆ ಪದ
(೬) ಅಶ್ವತ್ಥಾಮನ ಪರಿಚಯ – ವಿರೋಧಿ ಸ್ಮರಕಪರ್ದಿ ಕಣಾ ವೃಕೋದರ ಕರಿ ಮೃಗೇಂದ್ರ ಕಣಾ