ಪದ್ಯ ೨೬: ಪುರದ ಸ್ತ್ರೀಯರು ಎತ್ತಕಡೆ ನಡೆದರು?

ತಿರುಗಿದರು ಬಳಿಕಿತ್ತಲೀ ಮೋ
ಹರದ ಕಾಂತಾಕೋಟಿ ಬಂದುದು
ಹರಳುಮುಳ್ಳುಗಳೊತ್ತು ಗಾಲಿನ ದೂರತರಪಥರ
ಉರಿಯ ಜಠರದ ಬಿಸಿಲ ಝಳದಲಿ
ಹುರಿದ ಕದಪುಗಳೆರಡು ಕಡೆಯಲಿ
ಸುರಿವ ನಯನಾಂಬುಗಳ ರಾಜನಿತಂಬೀನೀನಿಕರ (ಗದಾ ಪರ್ವ, ೧೧ ಸಂಧಿ, ೨೬ ಪದ್ಯ)

ತಾತ್ಪರ್ಯ:
ಅಶ್ವತ್ಥಾಮಾದಿಯರು ದ್ವಾರಕಿಯತ್ತಹೋದರು. ಇತ್ತ ಹಸ್ತಿನಾ ಪುರವನ್ನು ಬಿಟ್ಟು ಬಂದ ಸ್ತ್ರೀ ಸಮುದಾಯವು ಕಲ್ಲು ಮುಳ್ಳುಗಳೊತ್ತುತ್ತಿದ್ದ ದೂರದಾರಿಯನ್ನು ಬಿಸಿಲ ಝಳದಲ್ಲಿ ನಡೆಯುತ್ತಾ ಬರುತ್ತಿತ್ತು. ಅವರ ಹೊಟ್ಟೆಗಳಲ್ಲಿ ಉರಿ ಬಿದ್ದಿತ್ತು. ಎರಡು ಕೆನ್ನೆಗಳೂ ಹರಿದುಹೋದಂತೆ ಕಪ್ಪಾಗಿದ್ದವು. ಅವೈರಳ ಅಶ್ರುಧಾರೆಗಳನ್ನು ಸುರಿಸುತ್ತಾ ಅವರು ರಣರಂಗದತ್ತ ನಡೆದರು.

ಅರ್ಥ:
ತಿರುಗು: ಮರಳು; ಬಳಿಕ: ನಂತರ; ಮೋಹರ: ಯುದ್ಧ, ಸೈನ್ಯ; ಕಾಂತ: ಹೆಣ್ಣು; ಕೋಟಿ: ಅಸಂಖ್ಯಾತ; ಬಂದು: ಆಗಮಿಸು; ಹರಳು: ಕಲ್ಲಿನ ಚೂರು, ನೊರಜು; ಮುಳ್ಳು: ಮೊನಚಾದುದು; ಗಾಲಿ: ಚಕ್ರ; ದೂರ: ಅಂತರ; ಪಥ: ದಾರಿ; ಉರಿ: ಬೆಂಕಿ; ಜಠರ: ಹೊಟ್ಟೆ; ಬಿಸಿಲು: ಸೂರ್ಯನ ತಾಪ; ಝಳ: ತಾಪ; ಹುರಿ: ಕಾಯಿಸು; ಕದಪು: ಕೆನ್ನೆ; ಸುರಿ: ಹರಿಸು; ನಯನಾಂಬು: ಕಣ್ಣೀರು; ರಾಜನಿತಂಬಿನಿ: ರಾಣಿ; ನಿತಂಬಿನಿ: ಹೆಣ್ಣು; ನಿಕರ: ಗುಂಪು; ನಿತಂಬ: ಸೊಂಟದ ಕೆಳಗಿನ ಹಿಂಭಾಗ, ಕಟಿ ಪ್ರದೇಶ;

ಪದವಿಂಗಡಣೆ:
ತಿರುಗಿದರು +ಬಳಿಕ್+ಇತ್ತಲೀ+ ಮೋ
ಹರದ +ಕಾಂತಾಕೋಟಿ +ಬಂದುದು
ಹರಳು+ಮುಳ್ಳುಗಳ್+ಒತ್ತು+ ಗಾಲಿನ +ದೂರತರ+ಪಥರ
ಉರಿಯ +ಜಠರದ +ಬಿಸಿಲ +ಝಳದಲಿ
ಹುರಿದ +ಕದಪುಗಳೆರಡು+ ಕಡೆಯಲಿ
ಸುರಿವ +ನಯನಾಂಬುಗಳ +ರಾಜನಿತಂಬೀನೀ+ನಿಕರ

ಅಚ್ಚರಿ:
(೧) ರಾಣಿಯರು ಎಂದು ಹೇಳಲು – ರಾಜನಿತಂಬೀನೀ ಪದ ಬಳಕೆ
(೨) ರಾಣಿಯರ ದುಃಖದ ಸ್ಥಿತಿ – ಉರಿಯ ಜಠರದ ಬಿಸಿಲ ಝಳದಲಿ ಹುರಿದ ಕದಪುಗಳೆರಡು ಕಡೆಯಲಿ
ಸುರಿವ ನಯನಾಂಬುಗಳ ರಾಜನಿತಂಬೀನೀನಿಕರ

ಪದ್ಯ ೧೯: ಭೀಷ್ಮನ ಪಕ್ಕದಲ್ಲಿ ಯಾರು ನಿಂತರು?

ಕವಿದ ಮುಸುಕಿನ ಕಂದಿದಾನನ
ದವನಿಪತಿ ಯಮಸೂನು ಗಂಗಾ
ಭವನ ಮಗ್ಗುಲ ಸಾರಿದನು ಕೈಚಾಚಿ ಕದಪಿನಲಿ
ಪವನಸುತ ಸಹದೇವ ಸಾತ್ಯಕಿ
ದಿವಿಜಪತಿಸುತರಾದಿ ಯಾದವ
ರವಿರಳದ ಶೊಕಾಗ್ನಿ ತಪ್ತರು ಪಂತಿಗಟ್ಟಿದರು (ಭೀಷ್ಮ ಪರ್ವ, ೧೦ ಸಂಧಿ, ೧೯ ಪದ್ಯ)

ತಾತ್ಪರ್ಯ:
ಮಾಸಿದ ಮುಖಕ್ಕೆ ಮುಸುಕಿಟ್ಟು ಧರ್ಮಜನು ಭೀಷ್ಮನ ಒಂದು ಪಕ್ಕಕ್ಕೆ ಹೋಗಿ ಕೈಯನ್ನು ಕೆನ್ನೆಗೆ ತಂದು ನಿಂತುಕೊಂಡನು. ಭೀಮ, ಅರ್ಜುನ, ಸಹದೇವ, ಸಾತ್ಯಕಿ ಮೊದಲಾದವರು ಶೋಕಾಗ್ನಿಯಿಂದ ಬೆಂದು ಪಕ್ಕದಲ್ಲಿ ಸಾಲಾಗಿ ನಿಂತರು.

ಅರ್ಥ:
ಕವಿ: ಆವರಿಸು; ಮುಸುಕು: ಹೊದಿಕೆ; ಕಂದು: ಮಸಕಾಗು; ಆನನ: ಮುಖ; ಅವನಿಪತಿ: ರಾಜ; ಯಮ: ಜವರಾಯ; ಸೂನು: ಮಗ; ಭವ: ಹುಟ್ಟು; ಮಗ್ಗುಲ: ಪಕ್ಕ; ಸರು: ಹರಡು; ಕೈ: ಹಸ್ತ; ಚಾಚು: ಹರಡು; ಕದಪು: ಕೆನ್ನೆ; ಪವನಸುತ: ವಾಯುಪುತ್ರ (ಭೀಮ); ದಿವಿಜ: ದೇವತೆ; ದಿವಿಜಪತಿ: ಇಂದ್ರ; ಸುತ: ಮಗ; ಆದಿ: ಮೊದಲಾದ; ಅವಿರಳ: ಬಿಡುವಿಲ್ಲದೆ; ಶೋಕ: ದುಃಖ; ಅಗ್ನಿ: ಬೆಂಕಿ; ತಪ್ತ: ನೊಂದ, ಸಂಕಟ; ಪಂತಿ: ಸಾಲು; ಕಟ್ಟು: ರಚಿಸು;

ಪದವಿಂಗಡಣೆ:
ಕವಿದ +ಮುಸುಕಿನ +ಕಂದಿದ್+ಆನನದ್
ಅವನಿಪತಿ +ಯಮಸೂನು +ಗಂಗಾ
ಭವನ+ ಮಗ್ಗುಲ+ ಸಾರಿದನು+ ಕೈಚಾಚಿ +ಕದಪಿನಲಿ
ಪವನಸುತ +ಸಹದೇವ +ಸಾತ್ಯಕಿ
ದಿವಿಜಪತಿಸುತರ್+ಆದಿ+ ಯಾದವರ್
ಅವಿರಳದ +ಶೊಕಾಗ್ನಿ +ತಪ್ತರು +ಪಂತಿ+ಕಟ್ಟಿದರು

ಅಚ್ಚರಿ:
(೧) ಧರ್ಮಜನ ಸ್ಥಿತಿ – ಕವಿದ ಮುಸುಕಿನ ಕಂದಿದಾನನದವನಿಪತಿ ಯಮಸೂನು
(೨) ಧರ್ಮಜ, ಅರ್ಜುನ, ಭೀಮನನ್ನು ಕರೆದ ಪರಿ – ದಿವಿಜಪತಿಸುತ, ಪವನಸುತ, ಯಮಸೂನು;
(೩) ದುಃಖಿತರಾದರು ಎಂದು ಹೇಳುವ ಪರಿ – ಅವಿರಳದ ಶೊಕಾಗ್ನಿ ತಪ್ತರು ಪಂತಿಗಟ್ಟಿದರು

ಪದ್ಯ ೧೫: ಭೀಷ್ಮರ ಸಾವು ಕೇಳಿ ದುರ್ಯೋಧನನ ಸ್ಥಿತಿ ಹೇಗಾಯಿತು?

ಮಲಗಿದನು ಕಲಿ ಭೀಷ್ಮನೆನೆ ತ
ಲ್ಲಳಿಸಿದನು ಕುರುರಾಯನುದರದೊ
ಳಿಳಿದುದಾಯುಧವೆಂಬ ತೆರದಲಿ ತಳ್ಳುವಾರಿದನು
ಬಲಿದುಸುರ ಬಿಸುಸುಯಿಲ ಹಬ್ಬಿದ
ಕಳಕಳದ ಕಂಬನಿಯ ಕಿಬ್ಬೊನ
ಲಿಳಿವ ಕದಪಿನ ಹೊತ್ತ ದುಗುಡದ ಮುಖದೊಳೈತಂದ (ಭೀಷ್ಮ ಪರ್ವ, ೧೦ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೀಷ್ಮನು ಸರಳ ಮಂಚದ ಮೇಲೆ ಮಲಗಿದ ಸುದ್ದಿಯನ್ನು ಕೇಳಿ ಕೌರವನಿಗೆ ದೇಹದಲ್ಲಿ ಆಯುಧವು ಪೂರ್ಣವಾಗಿ ನಾಟಿದಂತಾಗಿ ತಲ್ಲಣಿಸಿ ಶಕ್ತಿಗುಂದಿದನು. ಅವನ ನಿಟ್ಟುಸಿರು ಹೆಚ್ಚಿ ಕಂಬನಿಯ ಕಿರುಹೊನಲು ಕೆನ್ನೆಯ ಮೇಲೆ ಹರಿದು ದುಃಖಿಸುತ್ತಾ ಭೀಷ್ಮನೆಡೆಗೆ ಬಂದನು.

ಅರ್ಥ:
ಮಲಗು: ಶಯನ; ಕಲಿ: ಶೂರ; ತಲ್ಲಣ: ಅಂಜಿಕೆ, ಭಯ; ರಾಯ: ರಾಜ; ಉದರ: ಹೊಟ್ಟೆ; ಇಳಿ: ಬಾಗು; ಆಯುಧ: ಶಸ್ತ್ರ; ತೆರ: ರೀತಿ; ತಳ್ಳುವಾರು: ಶಕ್ತಿಗುಂದು; ಬಲಿ: ಹೆಚ್ಚಾಗು; ಉಸುರು: ಪ್ರಾಣ; ಬಿಸುಸುಯಿ: ಏದುಸಿರು; ಹಬ್ಬು: ಹರಡು; ಕಳಕಳ: ಗೊಂದಲ; ಕಂಬನಿ: ಕಣ್ಣೀರು; ಕಿಬ್ಬೊನಲು: ಚಿಕ್ಕ ಹೊಳೆ; ಕದಪು: ಕೆನ್ನೆ; ಹೊತ್ತು: ಧರಿಸು; ದುಗುಡ: ದುಃಖ; ಮುಖ: ಆನನ; ಐತಂದ: ಬಂದು ಸೇರು;

ಪದವಿಂಗಡಣೆ:
ಮಲಗಿದನು +ಕಲಿ +ಭೀಷ್ಮನ್+ಎನೆ +ತ
ಲ್ಲಳಿಸಿದನು +ಕುರುರಾಯನ್+ಉದರದೊಳ್
ಇಳಿದುದ್+ಆಯುಧವೆಂಬ +ತೆರದಲಿ +ತಳ್ಳುವಾರಿದನು
ಬಲಿದ್+ಉಸುರ +ಬಿಸುಸುಯಿಲ +ಹಬ್ಬಿದ
ಕಳಕಳದ +ಕಂಬನಿಯ +ಕಿಬ್ಬೊನಲ್
ಇಳಿವ +ಕದಪಿನ +ಹೊತ್ತ +ದುಗುಡದ+ ಮುಖದೊಳ್+ಐತಂದ

ಅಚ್ಚರಿ:
(೧) ದುರ್ಯೋಧನನ ಸ್ಥಿತಿ – ಬಲಿದುಸುರ ಬಿಸುಸುಯಿಲ ಹಬ್ಬಿದ ಕಳಕಳದ ಕಂಬನಿಯ ಕಿಬ್ಬೊನ
ಲಿಳಿವ ಕದಪಿನ ಹೊತ್ತ ದುಗುಡದ ಮುಖದೊಳೈತಂದ
(೨) ಕ ಕಾರದ ಸಾಲು ಪದ – ಕಳಕಳದ ಕಂಬನಿಯ ಕಿಬ್ಬೊನಲಿಳಿವ ಕದಪಿನ

ಪದ್ಯ ೨: ಯುದ್ಧದ ವಾರ್ತೆಯನ್ನು ಕೇಳಿ ಧೃತರಾಷ್ಟ್ರನ ಮುಖಭಾವ ಹೇಗಿತ್ತು?

ಬೆದರಿತಾಯಾಸ್ಥಾನ ಧಿಗಿಲೆಂ
ದುದು ಧರಾಧೀಶ್ವರನ ತಂದೆಯ
ಹೃದಯದಲಿ ಹುರುಳೇನು ಬಳಿಕುಳಿದವರ ಮೋರೆಗಳ
ಕದಡಿತಂತಃಕರಣವರಸನ
ಕದಪು ಕೈಯಲಿ ಕೀಲಿಸಿತು ಹೇ
ಳಿದನು ಸಂಜಯ ಮತ್ತೆ ಮೇಲಣ ರಣದ ವಾರ್ತೆಯನು (ಕರ್ಣ ಪರ್ವ, ೧ ಸಂಧಿ, ೨ ಪದ್ಯ)

ತಾತ್ಪರ್ಯ:
ಸಂಜಯನು ದ್ರೋಣನ ಮರಣವಾರ್ತೆಯನ್ನು ತಿಳಿಸುತ್ತಲೇ ಆಸ್ಥಾನವು ಬೆದರಿತು ಧೃತರಾಷ್ಟ್ರನ ಹೃದಯವು ಭಯಪಡಲಾರಂಭಿಸಿತು, ಆಸ್ಥಾನದಲ್ಲಿದ್ದವರ ಮುಖಗಳು ಬಾಡಿದವು. ರಾಜನ ಅಂತಃಕರಣವು ಕದಡಿತು, ಕೈಯನ್ನು ತನ್ನ ಗಲ್ಲದ ಮೇಲಿಟ್ಟನು. ಸಂಜಯನು ಮುಂದಿನ ಯುದ್ಧದ ವಾರ್ತೆಯನ್ನು ಹೇಳತೊಡಗಿದನು.

ಅರ್ಥ:
ಬೆದರು: ಹೆದರು, ಭಯ; ಆಸ್ಥಾನ: ದರ್ಬಾರು; ಧಿಗಿಲು: ಭಯದ ಸಂಕೇತ; ಧರ: ಭೂಮಿ; ಧರಾಧೀಶ್ವರ: ರಾಜ; ತಂದೆ: ಪಿತ; ಹೃದಯ: ವಕ್ಷಸ್ಥಳ; ಹುರುಳು: ಸಾರ; ಬಳಿಕ: ನಂತರ; ಉಳಿದ: ಮಿಕ್ಕ; ಮೋರೆ: ಮುಖ; ಕದಡು: ಕಲಕು; ಅಂತಃಕರಣ: ಚಿತ್ತವೃತ್ತಿ, ಮನಸ್ಸು; ಅರಸ: ರಾಜ; ಕದಪು: ಕೆನ್ನೆ; ಕೈ: ಹಸ್ತ; ಕೀಲಿಸು: ಬಿಗಿದು ಕಟ್ಟು; ಹೇಳು: ತಿಳಿಸು; ಮೇಲಣ: ಮುಂದಿನ; ರಣ: ಯುದ್ಧ; ವಾರ್ತೆ: ಸಮಾಚಾರ;

ಪದವಿಂಗಡಣೆ:
ಬೆದರಿತ್+ಆಯ+ಆಸ್ಥಾನ +ಧಿಗಿಲೆಂ
ದುದು +ಧರಾಧೀಶ್ವರನ+ ತಂದೆಯ
ಹೃದಯದಲಿ +ಹುರುಳೇನು +ಬಳಿಕುಳಿದವರ+ ಮೋರೆಗಳ
ಕದಡಿತ್+ಅಂತಃಕರಣವ್+ಅರಸನ
ಕದಪು +ಕೈಯಲಿ +ಕೀಲಿಸಿತು +ಹೇ
ಳಿದನು +ಸಂಜಯ +ಮತ್ತೆ +ಮೇಲಣ +ರಣದ +ವಾರ್ತೆಯನು

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕದಪು ಕೈಯಲಿ ಕೀಲಿಸಿತು
(೨) ಧೃತರಾಷ್ಟ್ರನನ್ನು ಧರಾಧೀಶ್ವರನ ತಂದೆ ಎಂದು ಕರೆದಿರುವುದು
(೩) ಧರಾಧೀಶ್ವರ, ಅರಸ – ಸಮನಾರ್ಥಕ ಪದ