ಪದ್ಯ ೫೯: ಸೇನಾನಾಯಕರ ಹಾವಭಾವ ಹೇಗಿತ್ತು?

ಕದಡಿತೀ ಬಲಜಲಧಿ ಸುಭಟರು
ಹೊದರುಗಟ್ಟಿತು ಹೊಳೆವಡಾಯುಧ
ಹೊದಕೆಗಳ ಸತ್ತಿಗೆಯ ಸೂಸುವ ಚಮರ ಸೀಗುರಿಯ
ತುದಿವೆರಳ ಕಿರುದನಿಯ ಕೆಂಪಿನ
ಕದಡುಗಂಗಲ ಕುಣಿವಮೀಸೆಯ
ಕದನಗಲಿಗಳು ಕವಿದರೀ ಕರ್ಣಾದಿ ನಾಯಕರು (ದ್ರೋಣ ಪರ್ವ, ೧೦ ಸಂಧಿ, ೫೯ ಪದ್ಯ)

ತಾತ್ಪರ್ಯ:
ಕೌರವ ಸೈನ್ಯದಲ್ಲಿ ಕೋಲಾಹಲವಾಯಿತು. ವೀರರೆಲ್ಲರೂ ಒಗ್ಗೂಡಿದರು. ಕತ್ತಿ, ಛತ್ರ, ಚಾಮರಗಳು ಒಂದಾದವು. ತುದಿಬೆರಳ ಆಯುಧದ ಸದ್ದು, ಕೆಂಪೇರಿದ ಕಣ್ಣುಗಳು, ಕುಣಿವ ಮೀಸೆಗಳು ಕರ್ಣಾದಿ ಸೇನಾನಾಯಕರು ಅರ್ಜುನನತ್ತ ಹೋರಾಡಲು ಹೊರಟರು.

ಅರ್ಥ:
ಕದಡು: ಕಲಕು; ಬಲ: ಶಕ್ತಿ, ಸೈನ್ಯ; ಜಲಧಿ: ಸಾಗರ; ಸುಭಟ: ಸೈನಿಕರು; ಹೊದರು: ಗುಂಪು, ಸಮೂಹ; ಕಟ್ಟು: ಬಂಧಿಸು; ಹೊಳೆ: ಕಾಂತಿ, ಹೊಳಪು; ಆಯುಧ: ಶಸ್ತ್ರ; ಹೊದಕು: ಮುಸುಕು; ಸತ್ತಿಗೆ: ಕೊಡೆ, ಛತ್ರಿ; ಸೂಸು: ಹರಡು; ಚಮರ: ಚಾಮರ; ಸೀಗುರಿ: ಚಾಮರ; ತುದಿ: ಅಗ್ರ, ಮೇಲ್ಭಾಗ; ವೆರಳು: ಬೆರಳು ಕಿರುದನಿ: ಚಿಕ್ಕದಾದ ಶಬ್ದ; ಕೆಂಪು: ರಕ್ತವರ್ಣ; ಕಂಗಳು: ಕಣ್ಣು, ನಯನ; ಕದಡು: ಕಲಕು; ಕುಣಿ: ನರ್ತಿಸು; ಕದನ: ಯುದ್ಧ; ಕಲಿ: ಶೂರ; ಕವಿ: ಆವರಿಸು; ನಾಯಕ: ಒಡೆಯ;

ಪದವಿಂಗಡಣೆ:
ಕದಡಿತೀ +ಬಲಜಲಧಿ+ ಸುಭಟರು
ಹೊದರುಗಟ್ಟಿತು +ಹೊಳೆವಡ್+ಆಯುಧ
ಹೊದಕೆಗಳ +ಸತ್ತಿಗೆಯ +ಸೂಸುವ +ಚಮರ +ಸೀಗುರಿಯ
ತುದಿವೆರಳ +ಕಿರುದನಿಯ +ಕೆಂಪಿನ
ಕದಡುಗಂಗಳ+ ಕುಣಿವ+ಮೀಸೆಯ
ಕದನ+ಕಲಿಗಳು +ಕವಿದರೀ+ ಕರ್ಣಾದಿ +ನಾಯಕರು

ಅಚ್ಚರಿ:
(೧) ಕ ಕಾರದ ಸಾಲು ಪದ – ಕಿರುದನಿಯ ಕೆಂಪಿನ ಕದಡುಗಂಗಲ ಕುಣಿವಮೀಸೆಯ ಕದನಗಲಿಗಳು ಕವಿದರೀ ಕರ್ಣಾದಿ
(೨) ಸೈನ್ಯದ ವಿಸ್ತಾರವನ್ನು ವರ್ಣಿಸುವ ಪರಿ – ಬಲಜಲಧಿ

ಪದ್ಯ ೨೪: ಸೈಂಧವನು ಎಲ್ಲಿ ನಿಂತನು?

ಪದುಮ ಸೂಚೀವ್ಯೂಹ ಮಧ್ಯದೊ
ಳಿದಟರನು ನಿಲಿಸಿದನು ಸಮರಾ
ಗ್ರದಲಿ ಅವನಳಲಿಗರನಾಪ್ತರನವನ ಬಾಂಧವರ
ಕದನಗಲಿಸೈಂಧವನನಾ ಮ
ಧ್ಯದಲಿ ನಿಲಿಸಿದನಮಮ ಸಮರಕೆ
ಮದನ ಮಥನನು ಮೊಗಸಲಸದಳವೆನಿಸಿ ರಂಜಿಸಿತು (ದ್ರೋಣ ಪರ್ವ, ೯ ಸಂಧಿ, ೨೪ ಪದ್ಯ)

ತಾತ್ಪರ್ಯ:
ಪದ್ಮವ್ಯೂಹ ಸೂಚೀವ್ಯೂಹಗಳ ನದುವೆ ಯುದ್ಧದಲ್ಲಿ ವೀರರಾದ ಸೈಂಧವನ ಬಂಧು ಬಾಂಧವರನ್ನು ನಿಲ್ಲಿಸಿ, ಅವರ ನದುವೆ ಸೈಂಧವನನ್ನು ನಿಲಿಸಿದನು. ಶಿವನು ಮುಖವೆತ್ತಿ ನೋಡಲೂ ಅಸಾಧ್ಯವೆನ್ನಿಸುವ ರೀತಿಯಲ್ಲಿ ಸೈನ್ಯವು ಯುದ್ಧ ಸನ್ನದ್ಧವಾಯಿತು.

ಅರ್ಥ:
ಪದುಮ: ಕಮಲ, ಪದ್ಮ; ಸೂಚಿ: ಸೂಜಿ; ವ್ಯೂಹ: ಗುಂಪು; ಮಧ್ಯ: ನಡುವೆ; ನಿಲಿಸು: ಸ್ಥಾಪಿಸು; ಸಮರ: ಯುದ್ಧ; ಅಗ್ರ: ಮುಂಭಾಗ; ಆಪ್ತ: ಹತ್ತಿರದವರು; ಬಾಂಧವ: ಬಂಧು ಬಳಗ; ಕದನ: ಯುದ್ಧ; ಮಧ್ಯ: ನಡುವೆ; ಅಮಮ: ಅಬ್ಬಾ; ಸಮರ: ಯುದ್ಧ; ಮದನ: ಮನ್ಮಥ; ಮಥನ: ನಾಶ; ಮೊಗ: ಮುಖ, ಮೋರೆ; ಅಸದಳ: ಅಸಾಧ್ಯ; ರಂಜಿಸು: ಹೊಳೆ, ಪ್ರಕಾಶಿಸು; ಕಲಿ: ಶೂರ; ಅಳಲಿಗೆ: ವ್ಯಥೆಗೊಂಡವ;

ಪದವಿಂಗಡಣೆ:
ಪದುಮ+ ಸೂಚೀವ್ಯೂಹ +ಮಧ್ಯದೊಳ್
ಇದಟರನು +ನಿಲಿಸಿದನು +ಸಮರಾ
ಗ್ರದಲಿ +ಅವನ್+ಅಳಲಿಗರನ್+ಆಪ್ತರನ್+ಅವನ +ಬಾಂಧವರ
ಕದನ+ಕಲಿ+ಸೈಂಧವನನ್+ಆ+ ಮ
ಧ್ಯದಲಿ +ನಿಲಿಸಿದನ್+ಅಮಮ +ಸಮರಕೆ
ಮದನ +ಮಥನನು +ಮೊಗಸಲ್+ಅಸದಳವ್+ಎನಿಸಿ +ರಂಜಿಸಿತು

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮದನ ಮಥನನು ಮೊಗಸಲಸದಳವೆನಿಸಿ
(೨) ಶಿವನನ್ನು ಮದನ ಮಥನ ಎಂದು ಕರೆದಿರುವುದು

ಪದ್ಯ ೫೨: ಕರ್ಣನೇಕೆ ಕೋಪಗೊಂಡನು?

ಗದೆಯ ಹೊಯ್ಲಲಿ ನೊಂದು ಕೋಪದೊ
ಳದಿರೆನುತ ಸೈಗೆಡೆದ ರೋಮದ
ಹೊದರುಗಳ ಬಿಡುಗಣ್ಣ ಕೆಂಪಿನ ಕುಣಿವ ಮೀಸೆಗಳ
ಕುದಿದ ಹೃದಯದ ಕಾದ ದೇಹದ
ಕದನಗಲಿ ರವಿಸೂನು ಮೇಲಿ
ಕ್ಕಿದನು ಫಡ ಹೋಗದಿರು ಹೋಗದಿರೆನುತ ತೆಗೆದೆಚ್ಚ (ದ್ರೋಣ ಪರ್ವ, ೬ ಸಂಧಿ, ೫೨ ಪದ್ಯ)

ತಾತ್ಪರ್ಯ:
ಗದೆಯ ಬಡಿತದಿಂದ ನೊಂದು ಕರ್ಣನು ಬಹಳ ಕೋಪಗೊಂಡನು. ಅವನ ರೋಮಗಳು ಜೋಲು ಬಿದ್ದವು. ನಟ್ಟ ನೋಟದಿಂದ ನೋಡುವ ತನ್ನ ಕಣ್ಣುಗಳು ಕೆಂಪಾಗಿ ಕೋಪವನ್ನು ಕಾರಿದವು. ಅವನ ಮೀಸೆಗಳು ಕುಣಿದವು. ಹೃದಯವು ಕುದಿಯಿತು. ದೇಹ ಕಾವೇರಿತು. ಆಗ ಕರ್ಣನು ಹೋಗಬೇಡ ಹೋಗಬೇಡ ಎಂದು ಕೂಗಿ ಬಾಣಗಳಿಂದ ಅಭಿಮನ್ಯುವನ್ನು ಹೊಡೆದನು.

ಅರ್ಥ:
ಗದೆ: ಮುದ್ಗರ; ಹೊಯ್ಲು: ಏಟು, ಹೊಡೆತ; ನೊಂದು: ನೋವು; ಕೋಪ: ಖತಿ; ಅದಿರು: ನಡುಕ, ಕಂಪನ; ಸೈಗೆಡೆ: ನೇರವಾಗಿ ಕೆಳಕ್ಕೆ ಬೀಳು; ರೋಮ: ಕೂದಲು; ಹೊದರು: ಗುಂಪು, ಸಮೂಹ; ಬಿಡುಗಣ್ಣ: ಬಿಟ್ಟಕಣ್ಣು; ಕೆಂಪು: ರಕ್ತವರ್ಣ; ಕುಣಿ: ನರ್ತಿಸು; ಕುದಿ: ಮರಳು; ಹೃದಯ: ಎದೆ; ಕಾದ: ಬಿಸಿಯಾದ; ದೇಹ: ತನು; ಕದನ: ಯುದ್ಧ; ಕಲಿ: ಶೂರ; ರವಿ: ಸೂರ್ಯ; ಸೂನು: ಮಗ; ಫಡ: ತಿರಸ್ಕಾರದ ಮಾತು; ಹೋಗು: ತೆರಳು; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಗದೆಯ +ಹೊಯ್ಲಲಿ +ನೊಂದು +ಕೋಪದೊಳ್
ಅದಿರೆನುತ +ಸೈಗೆಡೆದ +ರೋಮದ
ಹೊದರುಗಳ +ಬಿಡುಗಣ್ಣ +ಕೆಂಪಿನ +ಕುಣಿವ +ಮೀಸೆಗಳ
ಕುದಿದ +ಹೃದಯದ +ಕಾದ+ ದೇಹದ
ಕದನ+ಕಲಿ +ರವಿಸೂನು +ಮೇಲಿ
ಕ್ಕಿದನು +ಫಡ +ಹೋಗದಿರು +ಹೋಗದಿರ್+ಎನುತ+ ತೆಗೆದ್+ಎಚ್ಚ

ಅಚ್ಚರಿ:
(೧) ಕೋಪವನ್ನು ವರ್ಣಿಸುವ ಪರಿ – ಬಿಡುಗಣ್ಣ ಕೆಂಪಿನ ಕುಣಿವ ಮೀಸೆಗಳ ಕುದಿದ ಹೃದಯದ ಕಾದ ದೇಹದ