ಪದ್ಯ ೮೧: ಕೀಚಕನು ತನ್ನ ಮನೆಯಿಂದ ಹೇಗೆ ಹೊರಟನು?

ಉರಿವ ಮಾರಿಯ ಬೇಟದಾತನು
ತುರುಗಿದನು ಮಲ್ಲಿಗೆಯ ಮೊಗ್ಗೆಯ
ನಿರಿಕಿ ತಾ ಪೂಸಿದನು ಸಾದು ಜವಾಜಿ ಕತ್ತುರಿಯ
ಮೆರೆವ ಗಂಡುಡಿಗೆಯನು ರಚಿಸಿದ
ಸೆರಗಿನೊಯ್ಯಾರದಲಿ ಸುರಗಿಯ
ತಿರುಗುತಿರುಳೊಬ್ಬನೆ ನಿಜಾಲಯದಿಂದ ಹೊರವಂಟ (ವಿರಾಟ ಪರ್ವ, ೩ ಸಂಧಿ, ೮೧ ಪದ್ಯ)

ತಾತ್ಪರ್ಯ:
ಪ್ರಣಯದ ಜ್ವಾಲೆಯನ್ನು ಹೊತ್ತಿದ್ದ ಕೀಚಕನು ಮಲ್ಲಿಗೆಯ ಮೊಗ್ಗೆಗಳನ್ನು ಇಟ್ಟುಕೋಮ್ಡು, ಸಾದು, ಜವಾಜಿ, ಕಸ್ತೂರಿ, ಮೊದಲಾದ ಸುಗಂಧ ದ್ರವ್ಯಗಳನ್ನು ಲೇಪಿಸಿಕೊಂಡನು. ಅಂದವಾದ ಗಂಡುಡುಗೆಯನ್ನು ಧರಿಸಿ ಉತ್ತರೀಯದ ಸೆರಗನ್ನು ಬೀಸುತ್ತಾ, ಕತ್ತಿಯನ್ನು ಹಿಡಿದು ತನ್ನ ಮನೆಯಿಂದ ರಾತ್ರಿಯಲ್ಲಿ ಹೊರಟನು.

ಅರ್ಥ:
ಉರಿ: ಜ್ವಾಲೆ, ಸುಡು; ಮಾರಿ: ಕ್ಷುದ್ರದೇವತೆ; ಬೇಟ: ಪ್ರಣಯ; ಆಸೆ; ತುರುಗು: ಹೆಚ್ಚಾಗು; ಮೊಗ್ಗೆ: ಪೂರ್ತಿಯಾಗಿ ಅರಳದೆ ಇರುವ ಹೂವು; ಇರುಕು: ಅದುಮಿ ಭದ್ರವಾಗಿ ಹಿಸುಕಿ ಹಿಡಿ; ಪೂಸು: ಹೊರಹೊಮ್ಮು; ಸಾದು: ಕುಂಕುಮ ಗಂಧ; ಕತ್ತುರಿ: ಕಸ್ತೂರಿ; ಮೆರೆ: ಹೊಳೆ; ಉಡಿಗೆ: ಬಟ್ಟೆ, ವಸ್ತ್ರ; ರಚಿಸು: ನಿರ್ಮಿಸು; ಸೆರಗು: ಉತ್ತರೀಯ; ಒಯ್ಯಾರ: ಅಂದ; ಸುರಗಿ: ಸಣ್ಣ ಕತ್ತಿ, ಚೂರಿ; ತಿರುಗು: ಅಲ್ಲಾಡಿಸು; ಆಲಯ: ಮನೆ; ಹೊರವಂಟ: ತೆರಳು;

ಪದವಿಂಗಡಣೆ:
ಉರಿವ +ಮಾರಿಯ +ಬೇಟದ್+ಆತನು
ತುರುಗಿದನು +ಮಲ್ಲಿಗೆಯ+ ಮೊಗ್ಗೆಯನ್
ಇರಿಕಿ+ ತಾ +ಪೂಸಿದನು +ಸಾದು +ಜವಾಜಿ +ಕತ್ತುರಿಯ
ಮೆರೆವ+ ಗಂಡ್+ಉಡಿಗೆಯನು +ರಚಿಸಿದ
ಸೆರಗಿನ್+ಒಯ್ಯಾರದಲಿ +ಸುರಗಿಯ
ತಿರುಗುತ್+ಇರುಳ್+ಒಬ್ಬನೆ +ನಿಜಾಲಯದಿಂದ+ ಹೊರವಂಟ

ಅಚ್ಚರಿ:
(೧) ಸುಗಂಧ ದ್ರವ್ಯಗಳ ಪರಿಚಯ – ಸಾದು, ಜವಾಜಿ, ಕತ್ತುರಿ

ಪದ್ಯ ೧೫: ಜಯದ್ರಥನು ಎಲ್ಲಿಗೆ ಬಂದನು?

ಹೆಗಲ ಹಿರಿಯುಬ್ಬಣ ಕಠಾರಿಯ
ಬಿಗಿದುಡಿಗೆ ರತ್ನಾಭರಣ ಝಗ
ಝಗಿಸೆ ಝಣ ಝಣರವದ ರಭಸದ ಖಡಿಯ ಮಿಗೆ ಮೆರೆಯೆ
ಒಗುವ ಸಾದು ಜವಾದಿ ಕತ್ತುರಿ
ಯಗರು ಪರಿಮಳದಂಗಸಾರದ
ವಿಗಡ ಹೊಕ್ಕನು ಬನವನಾ ಪಾಂಚಾಲಿಯಾಶ್ರಮವ (ಅರಣ್ಯ ಪರ್ವ, ೨೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ಬಿಗಿಯುಡಿಗೆ ತೊಟ್ಟು, ರತ್ನಾಭರಣಗಳು ಝಗ ಝಗಿಸುತ್ತಿರಲು, ಆಭರಣಗಳ ಸದ್ದಿನ ಅಬ್ಬರ ಕೇಳುತ್ತಿರಲು, ಲೇಪಿಸಿಕೊಂಡ ಸಾದು ಜವಾಜಿ, ಅಗರು, ಕಸ್ತೂರಿಗಳ ಪರಿಮಳ ಸುತ್ತಲೂ ಹಬ್ಬುತ್ತಿರಲು, ಹೆಗಲ ಮೇಲೆ ಉಬ್ಬಣವನ್ನು ಹೊತ್ತು ಜಯದ್ರಥನು ದ್ರೌಪದಿಯ ಪರ್ಣಕುಟೀರವಿದ್ದ ಪ್ರದೇಶಕ್ಕೆ ಬಂದನು.

ಅರ್ಥ:
ಹೆಗಲು: ಭುಜ; ಹಿರಿ: ದೊಡ್ಡ; ಉಬ್ಬಣ: ಚೂಪಾದ ಆಯುಧ; ಕಠಾರಿ: ಚೂರಿ, ಕತ್ತಿ; ಬಿಗಿ: ಗಟ್ಟಿ; ಉಡಿಗೆ: ಬಟ್ಟೆ, ವಸ್ತ್ರ; ರತ್ನ: ಬೆಲೆಬಾಳುವ ಮಣಿ; ಆಭರಣ: ಒಡವೆ; ಝಗ: ಹೊಳೆ; ಝಣ: ಶಬ್ದವನ್ನು ವಿವರಿಸುವ ಪದ; ರವ: ಶಬ್ದ; ಖಡಿ: ಚೂರು, ತುಂಡು; ಮಿಗೆ: ಮತ್ತು; ಮೆರೆ: ಹೊಳೆ, ಪ್ರಕಾಶಿಸು; ಒಗು: ಚೆಲ್ಲು, ಸುರಿ; ಸಾದು: ಸಿಂಧೂರ; ಜವಾಜಿ: ಸುವಾಸನಾ ದ್ರವ್ಯ; ಕತ್ತುರಿ: ಕಸ್ತೂರಿ; ಅಗರು: ಒಂದು ಜಾತಿಯ ಸುಗಂಧದ ಮರ; ಪರಿಮಳ: ಸುಗಂಧ; ಅಂಗ: ದೇಹದ ಭಾಗ; ಸಾರು: ಹರಡು; ವಿಗಡ: ಶೌರ್ಯ, ಪರಾಕ್ರಮ; ಹೊಕ್ಕು: ಸೇರು; ಬನ: ಕಾಡು; ಪಾಂಚಾಲಿ: ದ್ರೌಪದಿ; ಆಶ್ರಮ: ಕುಟೀರ;

ಪದವಿಂಗಡಣೆ:
ಹೆಗಲ +ಹಿರಿಯುಬ್ಬಣ+ ಕಠಾರಿಯ
ಬಿಗಿದುಡಿಗೆ +ರತ್ನಾಭರಣ+ ಝಗ
ಝಗಿಸೆ +ಝಣ+ ಝಣ+ರವದ +ರಭಸದ +ಖಡಿಯ +ಮಿಗೆ +ಮೆರೆಯೆ
ಒಗುವ +ಸಾದು +ಜವಾದಿ +ಕತ್ತುರಿ
ಯಗರು+ ಪರಿಮಳದ್+ಅಂಗಸಾರದ
ವಿಗಡ +ಹೊಕ್ಕನು +ಬನವನ್+ಆ+ ಪಾಂಚಾಲಿ+ಆಶ್ರಮವ

ಅಚ್ಚರಿ:
(೧) ಜೋಡಿ ಪದಗಳು – ಝಗ ಝಗಿಸೆ ಝಣ ಝಣರವದ

ಪದ್ಯ ೮೯: ಅಪ್ಸರೆಯರು ಹೇಗೆ ಕಂಡರು?

ಉಗಿದರೋ ಕತ್ತುರಿಯ ತವಲಾ
ಯಿಗಳ ಮುಚ್ಚಳವೆನೆ ಕವಾಟವ
ತೆಗೆಯೆ ಕವಿದರು ದಿವ್ಯಪರಿಮಳ ಸಾರ ಪೂರವಿಸೆ
ಹೊಗರಲಗು ಹೊಳಹುಗಳ ಕಡೆಗ
ಣ್ಣುಗಳ ಬಲುಗರುವಾಯಿ ಮುಸುಕಿನ
ಬಿಗುಹುಗಳ ಬಿರುದಂಕಕಾಂತಿಯರಿಂದ್ರನೋಲಗದ (ಅರಣ್ಯ ಪರ್ವ, ೮ ಸಂಧಿ, ೮೯ ಪದ್ಯ)

ತಾತ್ಪರ್ಯ:
ಕಸ್ತೂರಿಯ ಭರಣಿಯ ಮುಚ್ಚಳವನ್ನು ತೆಗೆದರೆಮ್ಬಮ್ತೆ ಬಾಗಿಲನ್ನು ತೆಗೆಯಲು, ದಿವ್ಯ ದೇಹ ಗಂಧವು ಹಬ್ಬಲು ಅಪ್ಸರೆಯರು ಬಂದರು. ಅವರ ಕಡೆಗಣ್ನುಗಳ ಹೊಳಪು, ಚೂಪಾದ ಅಲಗುಗಳಂತಿದ್ದವು, ಮುಖಕ್ಕೆ ಮುಸುಕು ಹಾಕಿದ್ದರು, ಮನ್ಮಥ ಸಮರದಲ್ಲಿ ಮೇಲುಗೈಯೆಂಬ ಬಿರುದಿನ ಅನಂಗನ ಆಳುಗಳಂತೆ ತೋರಿದರು.

ಅರ್ಥ:
ಉಗಿ: ಹೊರಹಾಕು; ಕತ್ತುರಿ: ಕಸ್ತೂರಿ; ತವಲಾಯಿ: ಕರ್ಪೂರದ ಹಳಕು, ಬಿಲ್ಲೆ; ಮುಚ್ಚಳ: ಪೆಟ್ಟಿಗೆ, ಕರಡಿಗೆ ಪಾತ್ರೆ; ಕವಾಟ: ಬಾಗಿಲು; ತೆಗೆ: ಈಚೆಗೆ ತರು; ಕವಿ: ಆವರಿಸು; ದಿವ್ಯ: ಶ್ರೇಷ್ಠ; ಪರಿಮಳ: ಸುಗಂಧ; ಸಾರ: ರಸ; ಪೂರ: ಪೂರ್ತಿಯಾಗಿ; ಹೊಗರು: ಕಾಂತಿ, ಪ್ರಕಾಶ; ಅಲಗು: ಹರಿತವಾದ ಅಂಚು; ಹೊಳಹು: ಕಾಂತಿ; ಕಡೆ: ಕೊನೆ; ಕಣ್ಣು: ನಯನ; ಬಲು: ದೊಡ್ಡ; ಗರುವಾಯಿ: ಠೀವಿ; ಮುಸುಕು: ಹೊದಿಕೆ; ಯೋನಿ; ಬಿಗುಹು: ಬಿಗಿ; ಬಿರುದು: ಪ್ರಸಿದ್ಧಿ; ಕಾಂತಿ: ಪ್ರಕಾಶ; ಇಂದ್ರ: ಸುರಪತಿ; ಓಲಗ; ದರ್ಬಾರು;

ಪದವಿಂಗಡಣೆ:
ಉಗಿದರೋ+ ಕತ್ತುರಿಯ +ತವಲಾ
ಯಿಗಳ +ಮುಚ್ಚಳವ್+ಎನೆ +ಕವಾಟವ
ತೆಗೆಯೆ +ಕವಿದರು+ ದಿವ್ಯ+ಪರಿಮಳ +ಸಾರ +ಪೂರವಿಸೆ
ಹೊಗರ್+ಅಲಗು +ಹೊಳಹುಗಳ +ಕಡೆಗ
ಣ್ಣುಗಳ +ಬಲುಗರುವಾಯಿ +ಮುಸುಕಿನ
ಬಿಗುಹುಗಳ+ ಬಿರುದಂಕ+ಕಾಂತಿಯರ್+ಇಂದ್ರನ್+ಓಲಗದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಉಗಿದರೋ ಕತ್ತುರಿಯ ತವಲಾಯಿಗಳ ಮುಚ್ಚಳವೆನೆ ಕವಾಟವ
ತೆಗೆಯೆ ಕವಿದರು ದಿವ್ಯಪರಿಮಳ ಸಾರ ಪೂರವಿಸೆ

ಪದ್ಯ ೪೩: ದ್ರೌಪದಿಯ ಸಖಿಯರು ಯಾವ ಸಾಧನಗಳನ್ನು ತಂದರು?

ಹಾವುಗೆಯ ಸೀಗುರಿಯ ವರ ಚಮ
ರಾವಳಿಯ ಕರ್ಪೂರಗಂದದ
ಹೂವುಗಳ ಕತ್ತುರಿಯ ಸಾದುಜವಾಜಿ ಕುಂಕುಮದ
ತೀವಿದನುಪಮ ಭಾಜನವ್ಯಜ
ನಾವಳಿಯ ಕನ್ನಡಿಯ ವಿವಿಧಸ
ಖೀ ವಿಳಾಸಿನಿಯರ ಕದಂಬಕವೈದಿತೊಗ್ಗಿನಲಿ (ಆದಿ ಪರ್ವ, ೧೩ ಸಂಧಿ, ೪೩ ಪದ್ಯ)

ತಾತ್ಪರ್ಯ:
ಪಾದುಕೆ, ಚಾಮರ, ಶ್ರೇಷ್ಠವಾದ ಚಾಮರದ ಸಾಲುಗಳು, ಕರ್ಪೂರ, ಗಂಧ, ಬಗೆಬಗೆಯ ಹೂವುಗಳು, ಕಸ್ತೂರಿ, ಸಾದು, ಜವಾಜಿ, ಕುಂಕುಮ ಬೀಸಣಿಗೆಯ ಸಾಲು, ಕನ್ನಡಿ ಮುಂತಾದ ಬಹಳ ಅನುಪಮದ ಸಾಧನಗಳಿಗೆ ಪಾತ್ರವಾದ ಸಖಿಯರು ದ್ರೌಪದಿಯೊಡನೆ ಬಂದರು.

ಅರ್ಥ:
ಹಾವುಗೆ:ಪಾದುಕೆ, ಮೆಟ್ಟು; ಸೀಗುರಿ: ಚಾಮರ; ವರ: ಶ್ರೇಷ್ಠ; ಚಮರ: ಚಾಮರ; ಆವಳಿ: ಸಾಲು; ಕರ್ಪೂರ: ಸುಗಂಧ ದ್ರವ್ಯ; ಗಂದ: ಸುಗಂಧ ದ್ರವ್ಯ; ಹೂವು: ಪುಷ್ಪ; ಕತ್ತುರಿ: ಕಸ್ತೂರಿ; ಸಾದು: ಪರಿಮಳ ದ್ರವ್ಯ; ಜವಾಜಿ: ಸುವಾಸನ ದ್ರವ್ಯ; ಕುಂಕುಮ: ಮಂಗಳ ದ್ರವ್ಯ; ತೀವು: ತುಂಬು, ಭರ್ತಿ; ಅನುಪಮ: ಹೋಲಿಕೆಗೆ ಮೀರಿದ, ಉತ್ಕೃಷ್ಟವಾದ; ಭಾಜನ: ಪಾತ್ರನಾದ; ಅರ್ಹ; ವ್ಯಜನ: ಬೀಸಣಿಗೆ; ಆವಳಿ: ಸಾಲು; ಕನ್ನಡಿ:ದರ್ಪಣ; ವಿವಿಧ: ಹಲವಾರು; ಸಖೀ: ದಾಸಿ; ವಿಳಾಸಿನಿ: ಹೆಂಗಸು, ಸ್ತ್ರೀ, ದಾಸಿ; ಕದಂಬಕ: ಗುಂಪು, ಸಮೂಹ; ಒಗ್ಗು: ಗುಂಪಾಗು;

ಪದವಿಂಗಡಣೆ:
ಹಾವುಗೆಯ +ಸೀಗುರಿಯ +ವರ +ಚಮ
ರಾವಳಿಯ +ಕರ್ಪೂರ+ಗಂದದ
ಹೂವುಗಳ+ ಕತ್ತುರಿಯ +ಸಾದು+ಜವಾಜಿ +ಕುಂಕುಮದ
ತೀವಿದ್+ಅನುಪಮ +ಭಾಜನ+ವ್ಯಜ
ನಾವಳಿಯ+ ಕನ್ನಡಿಯ +ವಿವಿಧ+ಸ
ಖೀ +ವಿಳಾಸಿನಿಯರ+ ಕದಂಬಕ+ವೈದಿತ್+ಒಗ್ಗಿನಲಿ

ಅಚ್ಚರಿ:
(೧) ಹಾವು, ಹೂವು – ೧, ೩ ಸಾಲಿನ ಮೊದಲ ಪದ
(೨) ಸೀಗುರಿ, ಚಮರ; ಸಖಿ, ವಿಳಾಸಿನಿ – ಸಮಾನಾರ್ಥಕ ಪದ
(೩) “ಕ” ಕಾರದ ಪದಗಳು – ಕರ್ಪೂರ, ಕತ್ತುರಿ, ಕುಂಕುಮ, ಕನ್ನಡಿ, ಕದಂಬಕ

ಪದ್ಯ ೪೦: ಯಾವ ಸಂಗಮದಲ್ಲಿ ಎಲ್ಲಾ ರಾಜರು ಮುಳುಗಿದ್ದರು?

ತರುಣಿಯರ ನವನೀಲ ಮಣಿಗಳ
ಕುರುಳ ಕಬರಿಯ ಭರದ ವರ ಕ
ತ್ತುರಿಯ ತಿಲಕದ ಕಾಳಿಕೆಯ ಘನಕಾಂತಿಲಹರಿಗಳ
ಕೊರಳ ಹಾರದ ಕರ್ಣಪೂರದ
ಸರದ ಮೌಕ್ತಿಕ ರುಚಿಯ ಯಮುನಾ
ಸುರನದಿಯ ಸಂಗಮದಿ ಮುಳುಗಿತು ಸಕಲನೃಪನಿಕರ (ಆದಿ ಪರ್ವ, ೧೩ ಸಂಧಿ, ೪೦ ಪದ್ಯ)

ತಾತ್ಪರ್ಯ:
ಕಪ್ಪು ಬಿಳುಪುಗಳ ವರ್ಣನೆ ಗಂಗ (ಶ್ವೇತ ವರ್ಣ), ಯಮುನ (ಕಪ್ಪು ವರ್ಣ) ನದಿಗಳ ಸಂಗಮಕ್ಕೆ ಹೋಲಿಸಿ ರಾಜರು ತಮ್ಮ ಮನಸ್ಸಿನಲ್ಲಿ ಹೇಗೆ ಮುಳುಗಿದ್ದರೆಂದು ವರ್ಣಿಸಿದೆ. ಆ ಕನ್ಯೆಯರು ಧರಿಸಿದ್ದ ನೀಲ ಮಣಿಗಳು, ಅವರ ಕಪ್ಪು ಮುಂಗುರುಳು, ಕಸ್ತೂರಿ ತಿಲಕಗಳು ಗಾಢವಾದ ಕಪ್ಪು ಒಂದೆಡೆ ಇದ್ದರೆ, ಅವರು ಧರಿಸಿದ್ದ ಕೊರಳಿನ ಹಾರ, ಮುತ್ತಿನ ಹಾರ, ಕರ್ಣಾಭರಣ ಶ್ವೇತ ಕಾಂತಿಯು ಮತ್ತೊಂದೆಡೆ, ಈ ಎರಡರ ಸಮಾಗಮದಲ್ಲಿ ಹೇಗೆ ಯಮುನ ಮತ್ತು ಗಂಗಾ ನದಿಗಳು ಸಂಗಮವಾಗುವುದೊ ಹಾಗೆ ರಾಜರು ಈ ಎರಡು ಕಾಂತಿಯಲ್ಲಿ ಮುಳುಗಿಹೋಗಿದ್ದರು.

ಅರ್ಥ:
ತರುಣಿ: ಪ್ರಾಯದ ಹುಡುಗಿ, ಹೆಂಗಸು; ನವ: ಹೊಸ; ನೀಲ: ನೀಲಿ ಬಣ್ಣದ್ದು; ಮಣಿ: ಆಭರಣ; ಕುರುಳ: ಮುಂಗುರುಳು; ಕಬರಿ: ಹೆರಳು, ಜಡೆ; ಭರದ: ಜೋರು, ಭಾರ; ವರ: ಶ್ರೇಷ್ಠ; ಕತ್ತುರಿ: ಕಸ್ತೂರಿ; ತಿಲಕ: ಬೊಟ್ಟು, ಶ್ರೇಷ್ಠ; ಕಾಳಿಕೆ: ಕೊಳಕು; ಘನ: ಗಟ್ಟಿಯಾದ; ಕಾಂತಿ: ಹೊಳಪು; ಲಹರಿ: ಅಲೆ; ಕೊರಳ: ಕುತ್ತಿಗೆ; ಹಾರ: ಮಾಲೆ; ಕರ್ಣ: ಕಿವಿ; ಕರ್ಣಪೂರ: ಕಿವಿಯ ಆಭರಣ, ಕನ್ನವುರ; ಸರ: ಹಾರ; ಮೌಕ್ತಿಕ: ಮುತ್ತು; ರುಚಿ:ಕಾಂತಿ, ಕಿರಣ, ಸ್ವಾದ; ಸುರನದಿ: ಗಂಗೆ; ಸಂಗಮ: ಒಟ್ಟಾಗು; ಮುಳುಗು: ಒಳಹೋಗು; ಸಕಲ:ಸರ್ವ; ನೃಪ: ರಾಜ; ನಿಕರ: ಗುಂಪು;

ಪದವಿಂಗಡಣೆ:
ತರುಣಿಯರ +ನವನೀಲ +ಮಣಿಗಳ
ಕುರುಳ +ಕಬರಿಯ +ಭರದ+ ವರ +ಕ
ತ್ತುರಿಯ +ತಿಲಕದ +ಕಾಳಿಕೆಯ +ಘನ+ಕಾಂತಿ+ಲಹರಿಗಳ
ಕೊರಳ +ಹಾರದ +ಕರ್ಣ+ಪೂರದ
ಸರದ+ ಮೌಕ್ತಿಕ+ ರುಚಿಯ +ಯಮುನಾ
ಸುರನದಿಯ +ಸಂಗಮದಿ +ಮುಳುಗಿತು +ಸಕಲನೃಪ+ನಿಕರ

ಅಚ್ದರಿ:
(೧) “ಕ” ವರ್ಣದ ಪದಗಳು – ಕಬರಿ, ಕುರುಳು, ಕೊರಳ, ಕರ್ಣ, ಕಾಳಿಕೆ, ಕಾಂತಿ, ಕತ್ತುರಿ
(೨) ಕುರುಳು, ಕೊರಳ – ಪದಗಳ ಬಳಕೆ
(೩) ಮೌಕ್ತಿಕ, ಮಣಿ – ಸಾಮ್ಯಾರ್ಥ ಕೊಡುವ ಪದ