ಪದ್ಯ ೯: ಉತ್ತರನು ಹೇಗೆ ಭಯಭೀತನಾದನು?

ಸಾರಿ ಬರಬರಲವನ ತನುಮಿಗೆ
ಭಾರಿಸಿತು ಮೈಮುರಿದು ರೋಮನ್ವಿ
ಕಾರ ಘನ ಕಾಹೇರಿತವಯವ ನಡುಗಿ ಡೆಂಡಣಿಸಿ
ಭೂರಿಭಯ ತಾಪದಲಿ ತಾಳಿಗೆ
ನೀರುದೆಗೆದುದು ತುಟಿಯೊಣಗಿ ಸುಕು
ಮಾರ ಕಣ್ಣೆವೆ ಸೀಯೆ ಕರದಲಿ ಮುಚ್ಚಿದನು ಮುಖವ (ವಿರಾಟ ಪರ್ವ, ೭ ಸಂಧಿ, ೯ ಪದ್ಯ)

ತಾತ್ಪರ್ಯ:
ರಥವು ಮುಂದಕ್ಕೆ ಹೋಗುತ್ತಲೇ ಇತ್ತು, ಉತ್ತರನ ಮೈ ಜಡವಾಯಿತು, ಮೈ ಕುಗ್ಗಿತು, ಭಯದಿಂದ ಕೂದಲು ನೆಟ್ಟಗಾದವು, ಮೈ ಬಿಸಿಯಾಯಿತು, ಅವಯವಗಳು ನಡುಗಿದವು. ಭಯದ ಹೆಚ್ಚಳದಿಂದ ಅಂಗುಳು, ತುಟಿ ಒಣಗಿದವು. ಕಣ್ಣಿನ ರೆಪ್ಪೆ ಸೀದು ಹೋಯಿತು ಸುಕುಮಾರ ಉತ್ತರನು ಕೈಗಳಿಂದ ಮುಖವನ್ನು ಮುಚ್ಚಿಕೊಂಡನು.

ಅರ್ಥ:
ಸಾರಿ: ಬಾರಿ, ಸರತಿ; ಬರಲು: ಆಗಮಿಸಲು; ತನು: ದೇಹ; ಭಾರಿಸು: ಅಪ್ಪಳಿಸು; ಮೈ: ತನು, ದೇಹ; ರೋಮ: ಕೂದಲು; ವಿಕಾರ: ಬದಲಾವಣೆ; ಘನ: ಗಟ್ಟಿ, ಭಾರ; ಕಾಹೇರು: ಉದ್ವೇಗಗೊಳ್ಳು; ಅವಯವ: ದೇಹದ ಅಂಗ; ನಡುಗು: ಕಂಪಿಸು; ಡೆಂಡಣಿಸು: ಕಂಪಿಸು, ಕೊರಗು; ಭೂರಿ:ಹೆಚ್ಚು, ಅಧಿಕ; ಭಯ: ಹೆದರಿಕೆ; ತಾಪ: ಕಾವು; ತಾಳಿಗೆ: ಗಂಟಲು; ನೀರು: ಜಲ; ತುಟಿ: ಅಧರ; ಸುಕುಮಾರ: ಪುತ್ರ; ಎವೆ: ಕಣ್ಣಿನ ರೆಪ್ಪೆ; ಸೀಯು: ಕರಕಲಾಗು; ಕರ: ಹಸ್ತ; ಮುಚ್ಚು: ಮರೆಮಾಡು; ಮುಖ: ಆನನ;

ಪದವಿಂಗಡಣೆ:
ಸಾರಿ +ಬರಬರಲ್+ಅವನ +ತನುಮಿಗೆ
ಭಾರಿಸಿತು+ ಮೈಮುರಿದು+ ರೋಮ+ವಿ
ಕಾರ +ಘನ +ಕಾಹೇರಿತ್+ಅವಯವ +ನಡುಗಿ +ಡೆಂಡಣಿಸಿ
ಭೂರಿಭಯ +ತಾಪದಲಿ +ತಾಳಿಗೆ
ನೀರುದೆಗೆದುದು +ತುಟಿ+ಒಣಗಿ+ ಸುಕು
ಮಾರ +ಕಣ್ಣೆವೆ +ಸೀಯೆ +ಕರದಲಿ+ ಮುಚ್ಚಿದನು +ಮುಖವ

ಅಚ್ಚರಿ:
(೧) ಉತ್ತರನ ಭೀತಿಯನ್ನು ವರ್ಣಿಸುವ ಪರಿ – ಭೂರಿಭಯ ತಾಪದಲಿ ತಾಳಿಗೆನೀರುದೆಗೆದುದು ತುಟಿಯೊಣಗಿ ಸುಕುಮಾರ ಕಣ್ಣೆವೆ ಸೀಯೆ ಕರದಲಿ ಮುಚ್ಚಿದನು ಮುಖವ

ಪದ್ಯ ೬: ಸೈರಂಧ್ರಿಯು ಯಾರ ಮನೆಗೆ ಬಂದಳು?

ಸುರಪ ಶಿಖಿ ಯಮ ನಿರುತಿ ವರುಣಾ
ದ್ಯರಿಗೆ ವಂದಿಸಿ ಕಣ್ಣೆವೆಯ ಬಗಿ
ದರಘಳಿಗೆ ನಿಂದಬುಜಮಿತ್ರನ ಭಜಿಸಿ ಕಣ್ದೆರೆಯೆ
ಮುರಿವ ದೈತ್ಯನ ಕಾಹಕೊಟ್ಟನು
ತರಣಿ ತರುಣಿಗೆ ಮಂದಮಂದೋ
ತ್ತರದ ಗಮನದಲಬಲೆ ಬಂದಳು ಕೀಚಕನ ಮನೆಗೆ (ವಿರಾಟ ಪರ್ವ, ೩ ಸಂಧಿ, ೬ ಪದ್ಯ)

ತಾತ್ಪರ್ಯ:
ಕೀಚಕನ ಮನೆಗೆ ಹೋಗಲೇ ಬೇಕಾದ ಸ್ಥಿತಿ ಬಂದೊದಗಿದ ಸೈರಂಧ್ರಿಯು, ಇಂದ್ರ, ಅಗ್ನಿ, ಯಮ, ನಿರುತಿ, ವಾಯು ಮುಂತಾದ ದಿಕ್ಪಾಲಕರನ್ನು ಸ್ಮರಿಸಿದಳು, ಅರ್ಧಗಳಿಗೆ ನಿಂತು ಕಣ್ಮುಚ್ಚಿ ಸೂರ್ಯನನ್ನು ಪ್ರಾರ್ಥಿಸಿ ಕಣ್ದೆರೆದಳು. ಯಾರನ್ನು ಬೇಕಿದ್ದರೂ ಸೋಲಿಸಬಲ್ಲ ರಾಕ್ಷಸನೊಬ್ಬನನ್ನು ಸೂರ್ಯನು ದ್ರೌಪದಿಗೆ ಕಾವಲಾಗಿ ಕೊಟ್ಟನು ಎಂದು ತಿಳಿದು ಮೆಲ್ಲ ಮೆಲ್ಲನೆ ನಡೆಯುತ್ತಾ ಸೈರಂಧ್ರಿಯು ಕೀಚಕನ ಮನೆಗೆ ಬಂದಳು.

ಅರ್ಥ:
ಸುರಪ: ಇಂದ್ರ; ಶಿಖಿ: ಅಗ್ನಿ; ನಿರುತಿ: ನೈಋತ್ಯದಿಕ್ಕಿನ ಒಡೆಯ; ವರುಣ: ನೀರಿನ ಅಧಿದೇವತೆ, ಪಶ್ಚಿಮ ದಿಕ್ಕಿನ ಒಡೆಯ; ಆದಿ: ಮುಂತಾದ; ವಂದಿಸು: ನಮಸ್ಕರಿಸು; ಕಣ್ಣೆವೆ: ಕಣ್ಣಿನ ರೆಪ್ಪೆ; ಬಿಗಿ: ಬಂಧಿಸು; ಘಳಿಗೆ: ಸಮಯ; ಅಬುಜಮಿತ್ರ: ಕಮಲದ ಸಖ (ಸೂರ್ಯ); ಭಜಿಸು: ಪ್ರಾರ್ಥಿಸು; ಕಣ್ಣು: ನಯನ; ತೆರೆ: ಬಿಚ್ಚು; ಮುರಿ: ಸೀಳು; ದೈತ್ಯ: ರಾಕ್ಷಸ; ಕಾಹು: ರಕ್ಷಿಸು; ತರಣಿ: ಸೂರ್ಯ; ತರುಣಿ: ಹೆಣ್ಣು; ಮಂದ: ಮೆಲ್ಲನೆ; ಗಮನ: ಚಲನೆ; ಅಬಲೆ: ಹೆಣ್ಣು; ಬಂದಳು: ಆಗಮಿಸು; ಮನೆ: ಆಲಯ;

ಪದವಿಂಗಡಣೆ:
ಸುರಪ +ಶಿಖಿ+ ಯಮ +ನಿರುತಿ +ವರುಣಾ
ದ್ಯರಿಗೆ+ ವಂದಿಸಿ +ಕಣ್ಣೆವೆಯ +ಬಗಿದ್
ಅರಘಳಿಗೆ+ ನಿಂದ್+ಅಬುಜಮಿತ್ರನ+ ಭಜಿಸಿ +ಕಣ್ದೆರೆಯೆ
ಮುರಿವ+ ದೈತ್ಯನ +ಕಾಹಕೊಟ್ಟನು
ತರಣಿ+ ತರುಣಿಗೆ+ ಮಂದ+ಮಂದ
ಉತ್ತರದ +ಗಮನದಲ್+ಅಬಲೆ +ಬಂದಳು +ಕೀಚಕನ+ ಮನೆಗೆ

ಅಚ್ಚರಿ:
(೧) ಯಾರು ರಕ್ಷಣೆ ನೀಡಿದರು – ಮುರಿವ ದೈತ್ಯನ ಕಾಹಕೊಟ್ಟನು ತರಣಿ ತರುಣಿಗೆ
(೨) ಅಬುಜಮಿತ್ರ, ತರಣಿ – ಸಮನಾರ್ಥಕ ಪದ

ಪದ್ಯ ೧೬: ಶಕುನಿಯು ದುರ್ಯೋಧನನನ್ನು ಹೇಗೆ ಸಂತೈಸಿದನು?

ಎತ್ತಿದನು ಕಣ್ಣೆವೆಯ ಕಿರುವನಿ
ಮುತ್ತುಗಳ ಕೇವಣಿಯ ಶಕುನಿ ನೃ
ಪೋತ್ತಮನೆ ಬಾ ಕಂದ ಬಾಯೆಂದಪ್ಪಿ ಕೌರವನ
ಕಿತ್ತು ಬಿಸುಡುವೆನಹಿತರನು ನಿನ
ಗಿತ್ತೆನಿಂದ್ರಪ್ರಸ್ಥಪುರವನು
ಹೆತ್ತ ತಾಯ್ಗಾಂಧಾರಿ ಸಂತೋಷಿಸಲಿ ಬಳಿಕೆಂದ (ಸಭಾ ಪರ್ವ, ೧೩ ಸಂಧಿ, ೧೬ ಪದ್ಯ)

ತಾತ್ಪರ್ಯ:
ಶಕುನಿಯು ದುರ್ಯೋಧನನನ್ನು ಮೇಲಕೆತ್ತಿದನು. ಕೌರವನ ಕಣ್ಣುಗಳಲ್ಲಿ ಕಣ್ಣೀರಿನ ಹನಿಗಳು ಮುತ್ತಿನಂತೆ ಒಸರುತ್ತಿರುವುದನ್ನು ಕಂಡನು. ರಾಜಶ್ರೇಷ್ಠನೇ, ಮಗೂ ಬಾ ಕಂಡಾ ಬಾ ಎಂದವನನ್ನು ಅಪ್ಪಿಕೊಂಡು ಶತ್ರುಗಳನ್ನು ಕಿತ್ತುಬಿಸುಡುತ್ತೇನೆ, ಇದೋ ನಿನಗೆ ಇಂದ್ರಪ್ರಸ್ಥಪುರವನ್ನು ಕೊಟ್ಟುಬಿಟ್ಟೆ. ನಿನ್ನ ತಾಯಿ ಗಾಂಧಾರಿಯು ಇದರಿಂದ ಸಂತೋಷಿಸಲಿ ಎಂದುನು.

ಅರ್ಥ:
ಎತ್ತು: ಮೇಲಕ್ಕೆ ತರು; ಕಣ್ಣೆವೆ: ಕಣ್ಣಿನ ರೆಪ್ಪೆ; ಕಿರುವನಿ: ಚಿಕ್ಕ ಚಿಕ್ಕ ಹನಿ; ಮುತ್ತು: ಮೌಕ್ತಿಕ; ಕೇವಣಿ: ಕೀಲಿಸುವಿಕೆ; ನೃಪ: ರಾಜ; ಉತ್ತಮ: ಶ್ರೇಷ್ಠ; ಮನೆ: ಆಲಯ; ಬಾ: ಆಗಮಿಸು; ಕಂದ: ಮಗು; ಅಪ್ಪಿ: ತಬ್ಬಿಕೊ; ಕಿತ್ತು: ಹರಿದು, ಸೀಳು; ಬಿಸುಡು: ಬಿಸಾಡು; ಅಹಿತ: ವೈರಿ; ಪುರ: ಊರು; ಹೆತ್ತು: ಹುಟ್ಟು; ತಾಯಿ: ಮಾತೆ; ಸಂತೋಷ: ಸಂತಸ; ಬಳಿಕ: ಹತ್ತಿರ;

ಪದವಿಂಗಡಣೆ:
ಎತ್ತಿದನು+ ಕಣ್ಣೆವೆಯ +ಕಿರುವನಿ
ಮುತ್ತುಗಳ +ಕೇವಣಿಯ +ಶಕುನಿ +ನೃ
ಪೋತ್ತಮನೆ+ ಬಾ +ಕಂದ +ಬಾಯೆಂದಪ್ಪಿ+ ಕೌರವನ
ಕಿತ್ತು+ ಬಿಸುಡುವೆನ್+ಅಹಿತರನು +ನಿನಗ್
ಇತ್ತೆನ್+ಇಂದ್ರಪ್ರಸ್ಥ+ಪುರವನು
ಹೆತ್ತ+ ತಾಯ್+ಗಾಂಧಾರಿ +ಸಂತೋಷಿಸಲಿ +ಬಳಿಕೆಂದ

ಅಚ್ಚರಿ:
(೧) ದುರ್ಯೋಧನನ ಕಣ್ಣೀರಿನ ವರ್ಣನೆ – ಕಣ್ಣೆವೆಯ ಕಿರುವನಿ ಮುತ್ತುಗಳ ಕೇವಣಿಯ
(೨) ಶಕುನಿಯ ಪ್ರೀತಿಯ ತೋರಿಕೆ – ನೃಪೋತ್ತಮನೆ ಬಾ ಕಂದ ಬಾಯೆಂದಪ್ಪಿ ಕೌರವನ
(೩) ಶಕುನಿಯ ಸಂತೈಸುವ ಬಗೆ – ಕಿತ್ತು ಬಿಸುಡುವೆನಹಿತರನು ನಿನಗಿತ್ತೆನಿಂದ್ರಪ್ರಸ್ಥಪುರವನು