ಪದ್ಯ ೨೦: ತ್ರಿಗರ್ತ ದೇಶದ ಪಡೆಯ ಸ್ಥಿತಿ ಏನಾಯಿತು?

ಕಡಿವಡೆದವೇಳ್ನೂರು ರಥ ಮುರಿ
ವಡೆದವೈನೂರಶ್ವಚಯ ಮುಂ
ಗೆಡೆದವಂದೈನೂರು ಗಜವಿಪ್ಪತ್ತು ಸಾವಿರದ
ಕಡುಗಲಿಗಳುದುರಿತು ತ್ರಿಗರ್ತರ
ಪಡೆ ಕುರುಕ್ಷೇತ್ರದಲಿ ಪಾರ್ಥನ
ಬಿಡದೆ ಬಳಲಿಸಿಯನಿಬರಳಿದುದು ಭೂಪ ಕೇಳೆಂದ (ಗದಾ ಪರ್ವ, ೨ ಸಂಧಿ, ೨೦ ಪದ್ಯ)

ತಾತ್ಪರ್ಯ:
ಎಲೈ ಜನಮೇಜಯ ರಾಜ ಕೇಳು, ಏಳು ನೂರು ರಥಗಳು ಐನೂರು ಕುದುರೆಗಳು, ಐನೂರು ಆನೆಗಳು, ಇಪ್ಪತ್ತು ಸಾವಿರ ಕಾಲಾಳುಗಳು ಸತ್ತು ಬಿದ್ದರು. ಕುರುಕ್ಷೇತ್ರದಲ್ಲಿ ಅರ್ಜುನನನ್ನು ಕಡುಬಳಲಿಸಿದ ತ್ರಿಗರ್ತ ದೇಶದ ಪಡೆಯೆಲ್ಲವೂ ನಾಶವಾಯಿತು.

ಅರ್ಥ:
ಕಡಿ: ಸೀಳು; ರಥ: ಬಂಡಿ; ಮುರಿ: ಸೀಳು; ಅಶ್ವಚಯ: ಕುದುರೆಗಳ ಗುಂಪು; ಮುಂಗೆಡೆ: ಮುಂದೆ ಬೀಳು; ಗಜ: ಆನೆ; ಸಾವಿರ: ಸಹಸ್ರ; ಕಡುಗಲಿ: ಮಹಾ ಪರಾಕ್ರಮಿ; ಉದುರು: ಬೀಳು; ತ್ರಿಗರ್ತ: ಒಂದು ದೇಶದ ಹೆಸರು; ಪಡೆ: ಸೈನ್ಯ; ಬಿಡು: ತೊರೆ; ಬಳಲಿಸು: ಆಯಾಸಗೊಳ್ಳು; ಅನಿಬರ್: ಅಷ್ಟು ಜನ; ಅಳಿ: ನಾಶ; ಕೇಳು: ಆಲಿಸು; ಅಡೆ: ಮುಚ್ಚಿಹೋಗಿರು;

ಪದವಿಂಗಡಣೆ:
ಕಡಿವಡೆದವ್+ಏಳ್ನೂರು +ರಥ +ಮುರಿವ್
ಅಡೆದವ್+ಐನೂರ್+ಅಶ್ವಚಯ +ಮುಂ
ಗೆಡೆದವಂದ್+ಐನೂರು +ಗಜವ್+ಇಪ್ಪತ್ತು +ಸಾವಿರದ
ಕಡುಗಲಿಗಳ್+ಉದುರಿತು +ತ್ರಿಗರ್ತರ
ಪಡೆ +ಕುರುಕ್ಷೇತ್ರದಲಿ +ಪಾರ್ಥನ
ಬಿಡದೆ +ಬಳಲಿಸಿ+ಅನಿಬರ್+ಅಳಿದುದು +ಭೂಪ +ಕೇಳೆಂದ

ಪದ್ಯ ೩: ಸುಭಟರು ಹೇಗೆ ಕಾದಿದರು?

ಅಂಗವಣೆ ಮನದಲ್ಲಿ ಪದದಲಿ
ಮುಂಗುಡಿಯ ದುವ್ವಾಳಿ ಕಯ್ಯಲಿ
ಸಿಂಗದಾಯತ ಸವೆಯದೆರಡೊಡ್ಡಿನಲಿ ಸುಭಟರಿಗೆ
ಕಂಗಳನು ಕಾರಿರುಳು ರಕ್ಕಸಿ
ನುಂಗಿದಳು ನಾನೇನನುಸುರುವೆ
ನಂಗವಿಸಿ ಕಡುಗಲಿಗಳಿರಿದಾಡಿದರು ತಮ್ಮೊಳಗೆ (ದ್ರೋಣ ಪರ್ವ, ೧೭ ಸಂಧಿ, ೩ ಪದ್ಯ)

ತಾತ್ಪರ್ಯ:
ಎರಡೂ ಕಡೆಯ ಸೈನಿಕರಿಗೆ ಮನಸ್ಸಿನಲ್ಲಿ ಉತ್ಸಾಹ, ಕಾಲುಗಳಿಗೆ ಮುನ್ನುಗ್ಗುವ ತವಕ, ಕೈಯಲ್ಲಿ ಸಿಂಹಬಲ ಕಡಿಮೆಯೇ ಆಗಲಿಲ್ಲ. ಆದರೆ ಕಣ್ಣುಗಳನ್ನು ಕಾರಿರುಳಿನ ರಾಕ್ಷಸಿ ನುಂಗಿದಳು. ಏನು ಹೇಳಲಿ ವೀರರು ತಮ್ಮೊಳಗೆ ಇರಿದಾಡಿದರು.

ಅರ್ಥ:
ಅಂಗವಣೆ: ರೀತಿ, ಬಯಕೆ; ಮನ: ಮನಸ್ಸು; ಪದ: ಚರಣ; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ದುವ್ವಾಳಿ: ತೀವ್ರಗತಿ, ವೇಗವಾದ ನಡೆ; ಕಯ್ಯಲಿ: ಹಸ್ತದಲ್ಲಿ; ಸಿಂಗ: ಸಿಂಹ; ಆಯತ: ಅಣಿಗೊಳಿಸು, ಸಿದ್ಧ, ಸಹಜ; ಸವೆ: ತೀರು; ಒಡ್ಡು: ಸೈನ್ಯ; ಸುಭಟ: ಸೈನಿಕ, ಪರಾಕ್ರಮಿ; ಕಂಗಳು: ಕಣ್ಣು; ಕಾರಿರುಳು: ದಟ್ಟವಾದ ಕತ್ತಲು; ರಕ್ಕಸಿ: ರಾಕ್ಷಸಿ; ನುಂಗು: ತಿನ್ನು; ಉಸುರುವೆ: ಹೇಳು; ಅಂಗವಿಸು: ಬಯಸು; ಕಡುಗಲಿ: ಮಹಾಶೂರ; ಇರಿ: ಚುಚ್ಚು;

ಪದವಿಂಗಡಣೆ:
ಅಂಗವಣೆ +ಮನದಲ್ಲಿ +ಪದದಲಿ
ಮುಂಗುಡಿಯ +ದುವ್ವಾಳಿ +ಕಯ್ಯಲಿ
ಸಿಂಗದಾಯತ +ಸವೆಯದ್+ಎರಡ್+ಒಡ್ಡಿನಲಿ +ಸುಭಟರಿಗೆ
ಕಂಗಳನು+ ಕಾರಿರುಳು +ರಕ್ಕಸಿ
ನುಂಗಿದಳು +ನಾನೇನನ್+ಉಸುರುವೆನ್
ಅಂಗವಿಸಿ+ ಕಡುಗಲಿಗಳ್+ಇರಿದಾಡಿದರು+ ತಮ್ಮೊಳಗೆ

ಅಚ್ಚರಿ:
(೧) ರೂಪಕದ ಪ್ರಯೋಗ – ಕಂಗಳನು ಕಾರಿರುಳು ರಕ್ಕಸಿ ನುಂಗಿದಳು

ಪದ್ಯ ೧೧: ಯುದ್ಧವು ಹೇಗೆ ಅಧ್ಬುತವಾಗಿತ್ತು?

ಅಡಸಿ ತುಂಬಿತು ಗಗನ ತಲೆಗಳ
ಗಡಣದಲಿ ದೆಸೆಯೆಲ್ಲ ಬಾಣದ
ಕಡಿಯಮಯವಾಯಿತ್ತು ಹೆಣಮಯವಾಯ್ತು ರಣಭೂಮಿ
ಕಡುಗಲಿಯ ಕೈ ಚಳಕದಂಬಿಂ
ಗೊಡಲ ತೆತ್ತುದು ವೈರಿಬಲ ಬಿಡೆ
ಜಡಿದುದಂತಕ ನಗರವದ್ಭುತವಾಯ್ತು ಸಂಗ್ರಾಮ (ಭೀಷ್ಮ ಪರ್ವ, ೯ ಸಂಧಿ, ೧೧ ಪದ್ಯ)

ತಾತ್ಪರ್ಯ:
ಪಾಂಡವ ಸೈನಿಕರ ತಲೆಗಳು ಭೀಷ್ಮನ ಬಾಣಗಳಿಂದ ಕತ್ತರಿಸಿ ಆಕಾಶವನ್ನೆಲ್ಲಾ ತುಂಬಿದವು. ದಿಕ್ಕುಗಳೆಲ್ಲವೂ ಬಾಣಗಳ ತುಂಡಿನಿಂದ ತುಂಬಿದವು. ರಣಭೂಮಿಯು ಹೆಣಗಳಿಂದ ತುಂಬಿತು. ಭೀಷ್ಮನ ಚಾತುರ್ಯದೆಸೆಗೆಗೆ ವೈರಿ ಸೈನಿಕರು ತಮ್ಮ ದೇಹಗಳನ್ನು ಒಪ್ಪಿಸಿದರು. ಯಮನಗರ ತುಂಬಿತು. ಯುದ್ಧವು ಅದ್ಭುತವಾಯಿತು.

ಅರ್ಥ:
ಅಡಸು: ಬಿಗಿಯಾಗಿ ಒತ್ತು; ತುಂಬು: ಭರ್ತಿಯಾಗು, ಪೂರ್ಣವಾಗು; ಗಗನ: ಆಗಸ; ತಲೆ: ಶಿರ; ಗಡಣ: ಕೂಡಿಸುವಿಕೆ; ದೆಸೆ: ದಿಕ್ಕು; ಬಾಣ: ಅಂಬು; ಕಡಿ: ಸೀಳು; ಹೆಣ: ಜೀವವಿಲ್ಲದ ಶರೀರ; ರಣಭೂಮಿ: ರಣರಂಗ; ಕಡುಗಲಿ: ಶೂರ; ಚಳಕ: ಚಾತುರ್ಯ; ಅಂಬು: ಬಾಣ; ತೆತ್ತು: ತಿರಿಚು, ಸುತ್ತು; ವೈರಿ: ಶತ್ರು; ಬಲ: ಸೇನೆ; ಬಿಡು: ತೊರೆ, ತ್ಯಜಿಸು; ಜಡಿ: ಕೊಲ್ಲು; ಅಂತಕ: ಯಮ; ನಗರ: ಊರು; ಅದ್ಭುತ: ಆಶ್ಚರ್ಯ; ಸಂಗ್ರಾಮ: ಯುದ್ಧ, ಕಾಳಗ; ಒಡಲು: ದೇಹ;

ಪದವಿಂಗಡಣೆ:
ಅಡಸಿ +ತುಂಬಿತು +ಗಗನ +ತಲೆಗಳ
ಗಡಣದಲಿ +ದೆಸೆಯೆಲ್ಲ +ಬಾಣದ
ಕಡಿಯಮಯವಾಯಿತ್ತು +ಹೆಣಮಯವಾಯ್ತು +ರಣಭೂಮಿ
ಕಡುಗಲಿಯ +ಕೈಚಳಕದ್+ಅಂಬಿಂಗ್
ಒಡಲ+ ತೆತ್ತುದು +ವೈರಿಬಲ +ಬಿಡೆ
ಜಡಿದುದ್+ಅಂತಕ +ನಗರವ್+ಅದ್ಭುತವಾಯ್ತು +ಸಂಗ್ರಾಮ

ಅಚ್ಚರಿ:
(೧) ರಣರಂಗದ ರೌದ್ರ ರೂಪ – ಹೆಣಮಯವಾಯ್ತು ರಣಭೂಮಿ; ವೈರಿಬಲ ಬಿಡೆ ಜಡಿದುದಂತಕ ನಗರವದ್ಭುತವಾಯ್ತು ಸಂಗ್ರಾಮ

ಪದ್ಯ ೩೯: ಯಾವ ಖಡ್ಗಗಳನ್ನು ಯುದ್ಧದಲ್ಲಿ ಬಳಸಲಾಯಿತು?

ಖಡುಗ ತೋಮರ ಪರಶುಗಳ ಕ
ಕ್ಕಡೆಯ ಕುಂತದ ಪಿಂಡಿವಾಳದ
ಕಡುಗಲಿಗಳುರೆ ಮಗ್ಗಿದರು ತಗ್ಗಿದುದು ಯಮಲೋಕ
ಬಿಡದೆ ನಾಯಕವಾಡಿ ಚೂಣಿಯ
ಹಿಡಿದು ಕಾದಿತ್ತು ಭಯರಾಯರು
ದಡಿಯಕೈಯವರಿಂದ ಕವಿಸಿದರಂದು ಸಬಳಿಗರ (ಭೀಷ್ಮ ಪರ್ವ, ೪ ಸಂಧಿ, ೩೯ ಪದ್ಯ)

ತಾತ್ಪರ್ಯ:
ಖಡ್ಗ, ತೋಮರ, ಗಂಡುಕೊಡಲಿ, ಕಕ್ಕಡೆ, ಕುಂತ, ಭಿಂಡಿವಾಳಗಳನ್ನು ಹಿಡಿದ ವೀರರು ಹೋರಾಡಿ ಸತ್ತರು, ಯಮಲೋಕವು ಅವರ ಭಾರದಿಂದ ಕುಸಿಯಿತು. ನಾಯಕರು ತಮ್ಮ ಎದುರಿನಲ್ಲಿದ್ದವರೊಡನೆ ಕಾದಿದರು, ಆಗ ಎರಡೂ ಸೈನ್ಯಗಳ ರಾಜರು ಕೈಗೋಲು ಹಿಡಿದ ದೂತರ ಮುಖಾಂತರ ಈಟಿಯನ್ನು ಹಿಡಿದ ಯೋಧರು ಮುನ್ನುಗ್ಗಲು ಅಪ್ಪಣೆಯನ್ನು ನೀಡಿದರು.

ಅರ್ಥ:
ಖಡುಗ: ಕತ್ತಿ, ಕರವಾಳ; ತೋಮರ: ಈಟಿ; ಪರಶು: ಕೊಡಲಿ, ಕುಠಾರ; ಕಕ್ಕಡೆ: ಗರಗಸ; ಕುಂತ: ಈಟಿ, ಭರ್ಜಿ; ಪಿಂಡಿವಾಳ: ಈಟಿ; ಕಲಿ: ಶೂರ; ಉರೆ: ಅಧಿಕ; ಮಗ್ಗು: ಕುಂದು, ಕುಗ್ಗು; ತಗ್ಗು: ಕುಗ್ಗು, ಕುಸಿ; ಯಮಲೋಕ: ಅಧೋಲೋಕ; ಬಿಡು: ತೊರೆ; ನಾಯಕ: ಒಡೆಯ; ಚೂಣಿ: ಮೊದಲು; ಹಿಡಿ: ಬಂಧಿಸು; ಕಾದು: ಹೋರಾಡು; ಭಯ: ಅಂಜಿಕೆ; ರಾಯ: ರಾಜ; ದಡಿ: ಕೋಲು, ಜೀನು; ಕವಿಸು: ಆವರಿಸು, ಮುಸುಕು; ಸಬಳಿಗ: ಈಟಿಯನ್ನು ಆಯುಧವಾಗುಳ್ಳವನು;

ಪದವಿಂಗಡಣೆ:
ಖಡುಗ +ತೋಮರ +ಪರಶುಗಳ +ಕ
ಕ್ಕಡೆಯ +ಕುಂತದ +ಪಿಂಡಿವಾಳದ
ಕಡುಗಲಿಗಳ್+ಉರೆ +ಮಗ್ಗಿದರು+ ತಗ್ಗಿದುದು +ಯಮಲೋಕ
ಬಿಡದೆ +ನಾಯಕವಾಡಿ+ ಚೂಣಿಯ
ಹಿಡಿದು +ಕಾದಿತ್ +ಉಭಯ+ರಾಯರು
ದಡಿಯಕೈ+ಅವರಿಂದ +ಕವಿಸಿದರ್+ಅಂದು +ಸಬಳಿಗರ

ಅಚ್ಚರಿ:
(೧) ಆಯುಧಗಳ ಹೆಸರು – ಖಡುಗ, ತೋಮರ, ಪರಶು, ಕಕ್ಕಡಿ, ಕುಂತ, ಪಿಂಡಿವಾಳ
(೨) ಬಹಳ ಜನ ಸತ್ತರು ಎಂದು ಹೇಳಲು -ತಗ್ಗಿದುದು ಯಮಲೋಕ

ಪದ್ಯ ೨೯: ವಿರಾಟನು ಉತ್ತರನನ್ನು ಏನು ಕೇಳಿದ?

ಮಗನೆ ಕರ್ಣ ದ್ರೋಣ ಭೀಷ್ಮಾ
ದಿಗಳನೊಬ್ಬನೆ ಗೆಲಿದೆಯೀ ಕಾ
ಳಗದ ಕಡುಗಲಿತನಗಳುಂಟೇ ಪೂರ್ವ ಪುರುಷರಲಿ
ದುಗುಡವೇಕೆನ್ನಾಣೆ ಹೆತ್ತರ
ಮೊಗಕೆ ಹರ್ಷವ ತಂದೆಲಾ ಹಂ
ಗಿಗನೆ ನೀ ತಲೆಗುತ್ತಲೇಕೆಂದೆತ್ತಿದನು ಮುಖವ (ವಿರಾಟ ಪರ್ವ, ೧೦ ಸಂಧಿ, ೨೯ ಪದ್ಯ)

ತಾತ್ಪರ್ಯ:
ಮಗನೇ, ನೀನು ಏಕಾಂಗಿಯಾಗಿ ಭೀಷ್ಮ, ದ್ರೋಣ ಕರ್ಣರನ್ನು ಜಯಿಸಿರುವೆ, ನಮ್ಮ ವಂಶದ ಪೂರ್ವಿಕರಲ್ಲಿ ಇಂತಹ ಮಹಾಪರಾಕ್ರಮವಿದ್ದಿತೇ? ಏಕೆ ದುಃಖಿಸುತ್ತಿರುವೆ? ನಿನ್ನ ತಂದೆತಾಯಿಗಳ ಮುಖಕ್ಕೆ ನೀನು ಹರ್ಷವನ್ನು ತಂದಿರುವೆ ನಿನಗೆ ಇನ್ನಾರ ಹಂಗು? ತಲೆಯನ್ನೇಕೆ ತಗ್ಗಿಸಿರುವೆ? ಎನ್ನುತ್ತಾ ವಿರಾಟನು ಉತ್ತರನ ಮುಖವನ್ನೆತ್ತಿದನು.

ಅರ್ಥ:
ಮಗ: ಪುತ್ರ; ಆದಿ: ಮುಂತಾದ; ಗೆಲಿದೆ: ಜಯಿಸಿದೆ; ಕಾಳಗ: ಯುದ್ಧ; ಕಡುಗಲಿತನ: ಪರಾಕ್ರಮ; ಪೂರ್ವ: ಹಿಂದಿನ; ಪುರುಷ: ವೀರ; ದುಗುಡ: ದುಃಖ; ಆಣೆ: ಪ್ರಮಾಣ; ಹೆತ್ತ: ಹುಟ್ಟಿಸಿದ; ಮೊಗ: ಮುಖ; ಹರ್ಷ: ಸಂತಸ; ಹಂಗು: ದಾಕ್ಷಿಣ್ಯ, ಆಭಾರ; ತಲೆ: ಶಿರ; ತಲೆಗುತ್ತು: ತಲೆ ತಗ್ಗಿಸು; ಮುಖ: ಆನನ;

ಪದವಿಂಗಡಣೆ:
ಮಗನೆ +ಕರ್ಣ +ದ್ರೋಣ +ಭೀಷ್ಮಾ
ದಿಗಳನ್+ಒಬ್ಬನೆ +ಗೆಲಿದೆ+ಈ+ ಕಾ
ಳಗದ +ಕಡುಗಲಿತನಗಳುಂಟೇ +ಪೂರ್ವ +ಪುರುಷರಲಿ
ದುಗುಡವೇಕ್+ಎನ್ನಾಣೆ+ ಹೆತ್ತರ
ಮೊಗಕೆ+ ಹರ್ಷವ +ತಂದೆಲಾ +ಹಂ
ಗಿಗನೆ +ನೀ +ತಲೆ+ಕುತ್ತಲೇಕೆಂದ್+ಎತ್ತಿದನು +ಮುಖವ

ಅಚ್ಚರಿ:
(೧) ಹ ಕಾರದ ಪದಗಳು ರಚನೆ – ಹೆತ್ತರ ಮೊಗಕೆ ಹರ್ಷವ ತಂದೆಲಾ ಹಂಗಿಗನೆ

ಪದ್ಯ ೩೬: ಅರ್ಜುನನ ಬಾಣ ದೇವೆಂದ್ರನ ಆಸ್ಥಾನವನ್ನು ಹೇಗೆ ಕಂಪಿಸಿತು?

ಕಡುಗಲಿಯು ನರನೆಚ್ಚ ಬಾಣವು
ತಡೆಯದೈದಿದುದಿಂದ್ರ ಸಭೆಯಲಿ
ನಡುವೆ ರತ್ನದ ಕಂಬವನು ತಾನೊಡೆದು ಕೀಲಿಸಲು
ಸಿಡಿಲು ಹೊಡೆದೊಂತಾಯ್ತು ದಿವಿಜರು
ನಡುಗೆ ಝಲ್ಲೆನೆ ಚೆಲ್ಲೆ ಓಡಲು
ನಡುಗಿ ಮೃತ್ಯುಂಜಯ ಶಿವಾ ಎನುತಿರ್ದನಮರೇಂದ್ರ (ಆದಿ ಪರ್ವ, ೨೧ ಸಂಧಿ, ೩೬ ಪದ್ಯ)

ತಾತ್ಪರ್ಯ:
ಪರಾಕ್ರಮಿಯಾದ ಅರ್ಜುನನು ಬಿಟ್ಟ ಬಾಣವು ಅಡೆತಡೆಗಳಿಲ್ಲದೆ ಇಂದ್ರನ ಸಭೆಯನ್ನು ಹೊಕ್ಕು ಅಲ್ಲಿದ್ದ ರತ್ನದ ಕಂಬಕ್ಕೆ ಚುಚ್ಚಲು ಸಿಡಿಲು ಹೊಡೆದಂತಹ ಶಬ್ದವಾಯಿತು. ದೇವದೇವತೆಗಳು ಝಲ್ಲೆಂದು ನಡುಗಿದವು. ಅವರು ದಿಕ್ಕಾಪಾಲಾಗಿ ಓಡಿದರು. ಇಂದ್ರನು ನಡುಗಿ ಶಿವ ಶಿವಾ ಎಂದನು.

ಅರ್ಥ:
ಕಡುಗಲಿ: ಪರಾಕ್ರಮಿ; ನರ: ಅರ್ಜುನ; ಬಾಣ: ಅಂಬು, ಶರ; ಐದು: ಸೇರು, ಹೋಗು; ಇಂದ್ರ: ಶಕ್ರ; ಸಭೆ: ದರ್ಬಾರು; ನಡುವೆ: ಮಧ್ಯೆ; ರತ್ನ: ಬೆಲೆಬಾಳುವ ಒಡವೆ; ಕಂಬ: ಮಾಡಿನ ಆಧಾರಕ್ಕೆ ನಿಲ್ಲಿಸುವ ಕಲ್ಲು; ಒಡೆ: ಸೀಳು; ಕೀಲಿಸು:ನಾಟು, ಚುಚ್ಚು; ಸಿಡಿಲು: ಅಶನಿ, ಚಿಮ್ಮು, ಹರಡು; ಹೊಡೆ:ಏಟು, ಹೊಡೆತ; ದಿವಿಜ: ಸುರರು
ನಡುಗು: ನಡುಕ, ಕಂಪನ; ಝಲ್ಲೆನೆ: ಜೋರಾದ ಶಬ್ದ; ಚೆಲ್ಲು: ಚೆದುರು; ಓಡು: ಜೋರಾಗಿ ಹೋಗು; ಮೃತ್ಯುಂಜಯ: ಶಿವ; ಅಮರೇಂದ್ರ: ಇಂದ್ರ;

ಪದವಿಂಗಡಣೆ:
ಕಡುಗಲಿಯು +ನರನ್+ಎಚ್ಚ+ ಬಾಣವು
ತಡೆಯದ್+ಐದಿದುದ್+ಇಂದ್ರ +ಸಭೆಯಲಿ
ನಡುವೆ +ರತ್ನದ +ಕಂಬವನು +ತಾನೊಡೆದು +ಕೀಲಿಸಲು
ಸಿಡಿಲು +ಹೊಡೆದೊಂತಾಯ್ತು +ದಿವಿಜರು
ನಡುಗೆ +ಝಲ್ಲೆನೆ +ಚೆಲ್ಲೆ +ಓಡಲು
ನಡುಗಿ +ಮೃತ್ಯುಂಜಯ +ಶಿವಾ +ಎನುತಿರ್ದನ್+ಅಮರೇಂದ್ರ

ಅಚ್ಚರಿ:
(೧) ನಡುವೆ, ನಡುಗೆ, ನಡುಗಿ – ನಡು ಇಂದು ಶುರುವಾಗುವ ಪದಗಳು
(೨) ಶಿವ ಶಿವ ಎಂದು ಹೇಳುಲು ಮೃತ್ಯುಂಜಯ ಶಿವಾ ಪದದ ಬಳಕೆ