ಪದ್ಯ ೧೫: ಜಯದ್ರಥನು ಎಲ್ಲಿಗೆ ಬಂದನು?

ಹೆಗಲ ಹಿರಿಯುಬ್ಬಣ ಕಠಾರಿಯ
ಬಿಗಿದುಡಿಗೆ ರತ್ನಾಭರಣ ಝಗ
ಝಗಿಸೆ ಝಣ ಝಣರವದ ರಭಸದ ಖಡಿಯ ಮಿಗೆ ಮೆರೆಯೆ
ಒಗುವ ಸಾದು ಜವಾದಿ ಕತ್ತುರಿ
ಯಗರು ಪರಿಮಳದಂಗಸಾರದ
ವಿಗಡ ಹೊಕ್ಕನು ಬನವನಾ ಪಾಂಚಾಲಿಯಾಶ್ರಮವ (ಅರಣ್ಯ ಪರ್ವ, ೨೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ಬಿಗಿಯುಡಿಗೆ ತೊಟ್ಟು, ರತ್ನಾಭರಣಗಳು ಝಗ ಝಗಿಸುತ್ತಿರಲು, ಆಭರಣಗಳ ಸದ್ದಿನ ಅಬ್ಬರ ಕೇಳುತ್ತಿರಲು, ಲೇಪಿಸಿಕೊಂಡ ಸಾದು ಜವಾಜಿ, ಅಗರು, ಕಸ್ತೂರಿಗಳ ಪರಿಮಳ ಸುತ್ತಲೂ ಹಬ್ಬುತ್ತಿರಲು, ಹೆಗಲ ಮೇಲೆ ಉಬ್ಬಣವನ್ನು ಹೊತ್ತು ಜಯದ್ರಥನು ದ್ರೌಪದಿಯ ಪರ್ಣಕುಟೀರವಿದ್ದ ಪ್ರದೇಶಕ್ಕೆ ಬಂದನು.

ಅರ್ಥ:
ಹೆಗಲು: ಭುಜ; ಹಿರಿ: ದೊಡ್ಡ; ಉಬ್ಬಣ: ಚೂಪಾದ ಆಯುಧ; ಕಠಾರಿ: ಚೂರಿ, ಕತ್ತಿ; ಬಿಗಿ: ಗಟ್ಟಿ; ಉಡಿಗೆ: ಬಟ್ಟೆ, ವಸ್ತ್ರ; ರತ್ನ: ಬೆಲೆಬಾಳುವ ಮಣಿ; ಆಭರಣ: ಒಡವೆ; ಝಗ: ಹೊಳೆ; ಝಣ: ಶಬ್ದವನ್ನು ವಿವರಿಸುವ ಪದ; ರವ: ಶಬ್ದ; ಖಡಿ: ಚೂರು, ತುಂಡು; ಮಿಗೆ: ಮತ್ತು; ಮೆರೆ: ಹೊಳೆ, ಪ್ರಕಾಶಿಸು; ಒಗು: ಚೆಲ್ಲು, ಸುರಿ; ಸಾದು: ಸಿಂಧೂರ; ಜವಾಜಿ: ಸುವಾಸನಾ ದ್ರವ್ಯ; ಕತ್ತುರಿ: ಕಸ್ತೂರಿ; ಅಗರು: ಒಂದು ಜಾತಿಯ ಸುಗಂಧದ ಮರ; ಪರಿಮಳ: ಸುಗಂಧ; ಅಂಗ: ದೇಹದ ಭಾಗ; ಸಾರು: ಹರಡು; ವಿಗಡ: ಶೌರ್ಯ, ಪರಾಕ್ರಮ; ಹೊಕ್ಕು: ಸೇರು; ಬನ: ಕಾಡು; ಪಾಂಚಾಲಿ: ದ್ರೌಪದಿ; ಆಶ್ರಮ: ಕುಟೀರ;

ಪದವಿಂಗಡಣೆ:
ಹೆಗಲ +ಹಿರಿಯುಬ್ಬಣ+ ಕಠಾರಿಯ
ಬಿಗಿದುಡಿಗೆ +ರತ್ನಾಭರಣ+ ಝಗ
ಝಗಿಸೆ +ಝಣ+ ಝಣ+ರವದ +ರಭಸದ +ಖಡಿಯ +ಮಿಗೆ +ಮೆರೆಯೆ
ಒಗುವ +ಸಾದು +ಜವಾದಿ +ಕತ್ತುರಿ
ಯಗರು+ ಪರಿಮಳದ್+ಅಂಗಸಾರದ
ವಿಗಡ +ಹೊಕ್ಕನು +ಬನವನ್+ಆ+ ಪಾಂಚಾಲಿ+ಆಶ್ರಮವ

ಅಚ್ಚರಿ:
(೧) ಜೋಡಿ ಪದಗಳು – ಝಗ ಝಗಿಸೆ ಝಣ ಝಣರವದ

ಪದ್ಯ ೪೬: ಸರೋವರವನ್ನು ಯಾರು ಕಾಯುತ್ತಿದ್ದರು?

ಸಾರೆ ಬರೆ ಬರೆ ಕಂಡನಲ್ಲಿ ಕು
ಬೇರನಾಳಿದ್ದುದು ತದೀಯ ಸ
ರೋರುಹದ ಕಾಹಿನಲಿ ಯಕ್ಷರು ಲಕ್ಷಸಂಖ್ಯೆಯಲಿ
ಸಾರೆ ಚಾಚಿದ ಹರಿಗೆಗಳ ಬಲು
ಕೂರಲಗು ಹೊದೆಯಂಬು ಚಾಪ ಕ
ಠಾರಿ ಸೆಲ್ಲೆಯ ಸಬಳಗಳ ಸೋಪಾನ ಪಂಕ್ತಿಯಲಿ (ಅರಣ್ಯ ಪರ್ವ, ೧೧ ಸಂಧಿ, ೪೬ ಪದ್ಯ)

ತಾತ್ಪರ್ಯ:
ಭೀಮನು ಕಮಲದ ಸರೋವರದ ಹತ್ತಿರಕ್ಕೆ ಹೋದಗ ಆ ಸರೋವರದ ಮೆಟ್ಟಿಲುಗಳ ಮೇಲೆ ಕುಬೇರನ ಯೋಧರರಾದ ಯಕ್ಷರು ಲಕ್ಷ ಲಕ್ಷ ಸಂಖ್ಯೆಗಳಲ್ಲಿದ್ದುದನು ನೋಡಿದನು. ಕತ್ತಿ, ಗುರಾಣಿ, ಬಿಲ್ಲು ಬಾಣ, ಈಟಿ, ಭರ್ಜಿಗಳಿಂದ ಶಸ್ತ್ರಸನ್ನದ್ಧರಾಗಿ ಅವರು ಸರೋವರವನ್ನು ಕಾಯುತ್ತಿದ್ದರು.

ಅರ್ಥ:
ಸಾರೆ: ಹತ್ತಿರ, ಸಮೀಪ; ಬರೆ: ಆಗಮನ; ಕಂಡು: ನೋಡು; ಆಳು: ಸೇವಕ; ತದೀಯ: ಅದಕ್ಕೆ ಸಂಬಂಧಪಟ್ಟ; ಸರೋರುಹ: ಕಮಲ; ಕಾಹಿ: ರಕ್ಷಿಸುವ; ಸಂಖ್ಯೆ: ಎಣಿಕೆ; ಚಾಚು: ಹರಡು; ಹರಿಗೆ: ಚಿಲುಮೆ, ತಲೆಪೆರಿಗೆ; ಕೂರಲಗು: ಹರಿತವಾದ ಬಾಣ; ಹೊದೆ: ಬತ್ತಳಿಕೆ; ಅಂಬು: ಬಾಣ; ಚಾಪ: ಬಿಲ್ಲು; ಕಠಾರಿ: ಬಾಕು, ಚೂರಿ, ಕತ್ತಿ; ಸಬಲ: ಈಟಿ; ಸೋಪಾನ: ಮೆಟ್ಟಿಲು; ಸೆಲ್ಲೆ: ಉತರೀಯ; ಪಂಕ್ತಿ: ಗುಂಪು;

ಪದವಿಂಗಡಣೆ:
ಸಾರೆ +ಬರೆ +ಬರೆ +ಕಂಡನಲ್ಲಿ +ಕು
ಬೇರನ್+ಆಳ್+ಇದ್ದುದು +ತದೀಯ +ಸ
ರೋರುಹದ +ಕಾಹಿನಲಿ +ಯಕ್ಷರು +ಲಕ್ಷ+ಸಂಖ್ಯೆಯಲಿ
ಸಾರೆ +ಚಾಚಿದ +ಹರಿಗೆಗಳ +ಬಲು
ಕೂರಲಗು +ಹೊದೆ+ಅಂಬು +ಚಾಪ +ಕ
ಠಾರಿ +ಸೆಲ್ಲೆಯ +ಸಬಳಗಳ +ಸೋಪಾನ +ಪಂಕ್ತಿಯಲಿ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸೆಲ್ಲೆಯ ಸಬಳಗಳ ಸೋಪಾನ

ಪದ್ಯ ೪೩: ಅರ್ಜುನನು ಹೇಗೆ ತಪಸ್ಸನ್ನು ಮಾಡಿದನು?

ಮುಗುಳುಗಂಗಳ ಮೇಲುಗುಡಿದೋ
ಳುಗಳ ಮಿಡುಕುವ ತುಟಿಯ ತುದಿಗಾ
ಲುಗಳ ಹೊರಿಗೆಯ ತಪದ ನಿರಿಗೆಯ ನಿಷ್ಪ್ರಕಂಪನನ್ದ
ಬಿಗಿದ ಬಿಲ್ಲಿನ ಬೆನ್ನ ಬತ್ತಳಿ
ಕೆಗಳ ಕಿಗ್ಗಟ್ಟಿನ ಕಠಾರಿಯ
ಹೆಗಲಡಾಯುಧ ಹೊಸ ತಪಸಿ ತೊಡಗಿದನು ಬಲುತಪವ (ಅರಣ್ಯ ಪರ್ವ, ೫ ಸಂಧಿ, ೪೩ ಪದ್ಯ)

ತಾತ್ಪರ್ಯ:
ಅರ್ಜುನನು ತಪಸ್ಸಿಗೆ ಅಡಿಯಾದನು. ಅವನು ತನ್ನ ಕಣ್ಣುಗಳನ್ನು ಮುಚ್ಚಿ, ತೋಳುಗಳನ್ನು ಮೇಲಕ್ಕೆತ್ತಿ, ತುದಿಗಾಲಿನಲ್ಲಿ ನಿಂತು, ತುಟಿಗಳನ್ನು ಅಲುಗಿಸುತ್ತಾ, ತಪಸ್ಸಿನಲ್ಲೇ ಚಿತ್ತವಿಟ್ಟು ಅಲುಗಾಡದಿದ್ದನು. ಬಿಲ್ಲು ಬತ್ತಳಿಕೆಗಳನ್ನು ಕಟ್ಟಿ, ಹೆಗಲಲ್ಲಿ ಕತ್ತಿಯನ್ನು, ಸೊಂಟದಲ್ಲಿ ಕಠಾರಿಯನ್ನು ಧರಿಸಿ, ಹೀಗೆ ಈ ಹೊಸ ರೀತಿಯಲ್ಲಿ ಅರ್ಜುನನು ತಪಸ್ವಿಯಾಗಿ ತಪೋಮಗ್ನನಾದನು.

ಅರ್ಥ:
ಮುಗುಳು: ಮುಚ್ಚಿಕೊಳ್ಳು; ಕಂಗಳು: ಕಣ್ಣುಗಳು; ಮೇಲು: ಎತ್ತರ; ಕುಡಿ: ತುದಿ, ಕೊನೆ; ತೋಳು: ಬಾಹು; ಮಿಡುಕು: ಅಲುಗಾಟ, ಚಲನೆ; ತುಟಿ: ಅಧರ; ತುದಿ: ಅಗ್ರಭಾಗ; ಕಾಲು: ಪಾದ; ಹೊರಿಗೆ: ಭಾರ, ಹೊರೆ; ತಪ: ತಪಸ್ಸು; ನಿರಿಗೆ: ಸೀರೆ, ಧೋತ್ರ; ಕಂಪನ: ಅಲ್ಲಾಡು; ಬಿಗಿ: ಬಂಧನ; ಬಿಲ್ಲು: ಚಾಪ; ಬೆನ್ನು: ಹಿಂಭಾಗ; ಬತ್ತಳಿಕೆ: ಬಾಣಗಳನ್ನಿಡುವ ಕೋಶ; ಕಿಗ್ಗಟ್ಟು: ಕೆಳಭಾಗದ ಕಟ್ಟು; ಕಠಾರಿ: ಕತ್ತಿ; ಹೆಗಲು: ಭುಜ; ಆಯುಧ: ಶಸ್ತ್ರ; ಹೊಸ: ನವ; ತಪಸಿ: ತಪಸ್ಸುಮಾಡುವವ, ತಪಸ್ವಿ; ತೊಡಗು: ಪ್ರಾರಂಭಿಸು, ಮೊದಲು; ಬಲು: ಹೆಚ್ಚು; ತಪ: ತಪಸ್ಸು;

ಪದವಿಂಗಡಣೆ:
ಮುಗುಳು+ಕಂಗಳ +ಮೇಲು+ಕುಡಿ+ತೋ
ಳುಗಳ +ಮಿಡುಕುವ +ತುಟಿಯ +ತುದಿ+ಕಾ
ಲುಗಳ +ಹೊರಿಗೆಯ +ತಪದ +ನಿರಿಗೆಯ +ನಿಷ್ಪ್ರಕಂಪನದ
ಬಿಗಿದ +ಬಿಲ್ಲಿನ +ಬೆನ್ನ +ಬತ್ತಳಿ
ಕೆಗಳ +ಕಿಗ್ಗಟ್ಟಿನ +ಕಠಾರಿಯ
ಹೆಗಲಡ್+ಆಯುಧ +ಹೊಸ +ತಪಸಿ+ ತೊಡಗಿದನು +ಬಲುತಪವ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬಿಗಿದ ಬಿಲ್ಲಿನ ಬೆನ್ನ ಬತ್ತಳಿಕೆ
(೨) ಅರ್ಜುನನನ್ನು ಕರೆದ ಪರಿ – ಹೊಸ ತಪಸಿ ತೊಡಗಿದನು ಬಲುತಪವ
(೩) ಅರ್ಜುನನ ತಪಸ್ಸಿನ ಭಂಗಿ – ಬಿಗಿದ ಬಿಲ್ಲಿನ ಬೆನ್ನ ಬತ್ತಳಿಕೆಗಳ ಕಿಗ್ಗಟ್ಟಿನ ಕಠಾರಿಯ
ಹೆಗಲಡಾಯುಧ ಹೊಸ ತಪಸಿ ತೊಡಗಿದನು ಬಲುತಪವ

ಪದ್ಯ ೩೨: ಅರ್ಜುನನು ಹೇಗೆ ತೆರಳಿದನು?

ಬಿಗಿದ ಬತ್ತಳಿಕೆಯನು ಹೊನ್ನಾ
ಯುಗದ ಖಡುಗ ಕಠಾರಿ ಚಾಪವ
ತೆಗೆದನಳವಡೆಗಟ್ಟಿ ಬದ್ದುಗೆದಾರ ಗೊಂಡೆಯವ
ದುಗುಡ ಹರುಷದ ಮುಗಿಲ ತಲೆಯೊ
ತ್ತುಗಳಿಗೆಟ್ಟೆಡೆಯಾಗಿ ಗುಣ ಮೌ
ಳಿಗಳ ಮಣಿ ಕಲಿಪಾರ್ಥ ಬೀಳ್ಕೊಂಡನು ನಿಜಾಗ್ರಜನ (ಅರಣ್ಯ ಪರ್ವ, ೫ ಸಂಧಿ, ೩೨ ಪದ್ಯ)

ತಾತ್ಪರ್ಯ:
ಅರ್ಜುನನು ಬತ್ತಳಿಕೆಯನ್ನು ಬೆನ್ನಿಗೆ ಬಿಗಿದನು. ಬಿಲ್ಲನ್ನು ಹಿಡಿದನು. ಬಂಗಾರದ ಹಿಡಿಕೆಯುಳ್ಳ ಕತ್ತಿ, ಕಠಾರಿಗಳನ್ನು ಸೊಂಟಕ್ಕೆ ಕಟ್ಟಿಕೊಂಡು ಅದಕ್ಕೆ ಹೊಂದುವಹಾಗೆ ತನ್ನ ಬಟ್ಟೆಯನ್ನು ಸರಿಪಡಿಸಿಕೊಂಡನು. ಶಿವನನ್ನು ಕುರಿತ ತಪಸ್ಸಿನ ಸಂತಸ, ಅಣ್ಣ ತಮ್ಮಂದಿರನ್ನು ಬಿಡಬೇಕಾದ ನೋವು ಇವೆರಡು ಮನಸ್ಸನ್ನು ಆಗಸದವರೆಗೂ ಕೊರೆಯುತ್ತಿರಲು, ಪರಾಕ್ರಮಿ, ಗುಣಗಳಲ್ಲಿ ಶ್ರೇಷ್ಠನಾದ ಅರ್ಜುನನು ಧರ್ಮಜನನ್ನು ಬೀಳ್ಕೊಂಡು ತನ್ನ ತಪಸ್ಸಿಗೆ ತೆರಳಿದನು.

ಅರ್ಥ:
ಬಿಗಿ: ಬಂಧಿಸು, ಕಟ್ಟು; ಬತ್ತಳಿಕೆ: ಬಾಣಗಳನ್ನಿಡುವ ಕೋಶ, ತೂಣೀರ; ಹೊನ್ನ: ಚಿನ್ನ; ಖಡುಗ: ಕತ್ತಿ; ಯುಗ: ನೊಗ, ಹಿಡಿಕೆ; ಕಠಾರಿ: ಚೂರಿ, ಕತ್ತಿ; ಚಾಪ: ಬಿಲ್ಲು; ತೆಗೆದು: ಹೊರತಂದು; ಅಳವಡಿಸು: ಸರಿಪಡಿಸು; ಬದ್ದುಗೆ: ವಸ್ತ್ರದ ಕೊನೆ; ದಾರ: ಹಗ್ಗ; ಗೊಂಡೆ:ಕುಚ್ಚು; ದುಗುಡ: ದುಃಖ; ಹರುಷ: ಸಂತಸ; ಮುಗಿಲು: ಆಗಸ, ಮೇಲುಭಾಗ; ತಲೆ: ಶಿರ; ಒತ್ತು: ಒತ್ತಡ, ಮುತ್ತು; ಇಟ್ಟೆಡೆ: ಇಕ್ಕಟ್ಟು; ಗುಣ: ನಡತೆ, ಸ್ವಭಾವ; ಮೌಳಿ: ಶಿರ; ಮಣಿ: ಬೆಲೆಬಾಳುವ ರತ್ನ; ಕಲಿ: ಶೂರ; ಬೀಳ್ಕೊಂಡು: ತೆರಳು; ನಿಜ: ತನ್ನ; ಅಗ್ರಜ: ಅಣ್ಣ;

ಪದವಿಂಗಡಣೆ:
ಬಿಗಿದ +ಬತ್ತಳಿಕೆಯನು +ಹೊನ್ನಾ
ಯುಗದ +ಖಡುಗ +ಕಠಾರಿ +ಚಾಪವ
ತೆಗೆದನ್+ಅಳವಡೆಗಟ್ಟಿ+ ಬದ್ದುಗೆ+ದಾರ +ಗೊಂಡೆಯವ
ದುಗುಡ +ಹರುಷದ +ಮುಗಿಲ +ತಲೆ
ಒತ್ತುಗಳಿಗ್+ಎಟ್ಟೆಡೆಯಾಗಿ +ಗುಣ ಮೌ
ಳಿಗಳ ಮಣಿ +ಕಲಿಪಾರ್ಥ +ಬೀಳ್ಕೊಂಡನು +ನಿಜಾಗ್ರಜನ

ಅಚ್ಚರಿ:
(೧) ಅರ್ಜುನನ ಗುಣವಿಶೇಷಗಳು – ಗುಣ ಮೌಳಿಗಳ ಮಣಿ, ಕಲಿಪಾರ್ಥ
(೨) ಆಯುಧದ ವರ್ಣನೆ – ಹೊನ್ನಾಯುಗದ ಖಡುಗ ಕಠಾರಿ ಚಾಪ

ಪದ್ಯ ೬೨: ದುಶ್ಯಾಸನನು ದ್ರೌಪದಿಯನ್ನು ಹೇಗೆ ಸಮೀಪಿಸಿದನು?

ಹರಿದನವ ಬೀದಿಯಲಿ ಬಿಡುದಲೆ
ವೆರಸಿ ಸತಿಯರಮನೆಯ ಬಾಗಿಲ
ಚರರು ತಡೆದರೆ ಮೆಟ್ಟಿದನು ತಿವಿದನು ಕಠಾರಿಯಲಿ
ತರುಣಿಯರು ಕಂಡಂಜಿ ಹೊಕ್ಕರು
ಸರಸಿಜಾಕ್ಷಿಯ ಮರೆಯನೀ ಖಳ
ನುರವಣಿಸಿದನು ರಾಹು ತಾರಾಧಿಪನ ತಗುಳ್ವಂತೆ (ಸಭಾ ಪರ್ವ, ೧೫ ಸಂಧಿ, ೬೨ ಪದ್ಯ)

ತಾತ್ಪರ್ಯ:
ದುರ್ಯೋಧನನಿಂದ ಅಪ್ಪಣೆಪಡೆದ ದುಶ್ಯಾಸನನು ಕೆದರಿದ ಕೂದಲನ್ನು ಹೊತ್ತು, ಬೀದಿಯಲ್ಲಿ ಅವೇಶದಿಂದ ಬಂದು ದ್ರೌಪದಿಯಿದ್ದ ಅರಮನೆಯನ ಬಳಿ ಬಂದನು, ಬಾಗಿಲ ದೂತರು ಅವನನ್ನು ತಡೆಯಲು ಮುಂದಾದರೆ ಅವರನ್ನು ಮೆಟ್ಟಿ ಕತ್ತಿಯಲ್ಲಿ ಚುಚ್ಚಿ ಮುನ್ನಡೆದನು, ಇವನ ಆವೇಶಕ್ಕೆ ಬೆದರಿದ ಸಖಿಯರು ದ್ರೌಪದಿಯ ಮೊರೆಹೊಕ್ಕು ಆಕೆಯ ಹಿಂಭಾಗದಲ್ಲಿ ಸೇರಿದರು, ಅವನು ರಾಹುವು ಚಂದ್ರನನ್ನು ಆವರಿಸುವ ಪರಿ ಬರುತ್ತಿದ್ದನು.

ಅರ್ಥ:
ಹರಿದ: ಚಲಿಸು; ಬೀದಿ: ಮಾರ್ಗ; ಬಿಡುದಲೆ: ಕೆದರಿದ ಕೂದಲು; ಎರಸಿ: ಹೊತ್ತು; ಸತಿ: ಹೆಂಗಸು; ಅರಮನೆ: ಆಲಯ; ಬಾಗಿಲ: ಕದ; ಚರ: ದಾಸ; ತಡೆ: ನಿಲ್ಲು; ಮೆಟ್ಟು: ತುಳಿ; ತಿವಿ: ಚುಚ್ಚು; ಕಠಾರಿ: ಕತ್ತಿ; ತರುಣಿ: ಹೆಂಗಸು; ಕಂಡು: ನೋಡಿ; ಅಂಜು: ಹೆದರು; ಹೊಕ್ಕು: ಸೇರು; ಸರಸಿಜಾಕ್ಷಿ: ಕಮಲದಂತ ಕಣ್ಣು; ಮರೆ: ಬಳಿ, ಹಿಂಭಾಗ; ಖಳ: ದುಷ್ಟ; ಉರವಣೆ: ಆತುರ, ಅವಸರ, ಗರ್ವ; ತಾರಾಧಿಪ: ಚಂದ್ರ; ತಾರೆ: ನಕ್ಷತ್ರ; ಅಧಿಪ: ಒಡೆಯ; ತಗುಳು: ಆವರಿಸು, ಮುತ್ತು;

ಪದವಿಂಗಡಣೆ:
ಹರಿದನವ +ಬೀದಿಯಲಿ +ಬಿಡುದಲೆ
ವೆರಸಿ+ ಸತಿ+ಅರಮನೆಯ +ಬಾಗಿಲ
ಚರರು+ ತಡೆದರೆ+ ಮೆಟ್ಟಿದನು +ತಿವಿದನು +ಕಠಾರಿಯಲಿ
ತರುಣಿಯರು +ಕಂಡ್+ಅಂಜಿ +ಹೊಕ್ಕರು
ಸರಸಿಜಾಕ್ಷಿಯ +ಮರೆಯನ್+ಈ+ ಖಳನ್
ಉರವಣಿಸಿದನು +ರಾಹು +ತಾರಾಧಿಪನ+ ತಗುಳ್ವಂತೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಶುಭ್ರವಾದ ಚಂದ್ರನನ್ನು ರಾಹುವು ಆವರಿಸಿ ಚಂದ್ರನ ಬೆಳಕನ್ನು ಮುಚ್ಚುವಂತೆ – ರಾಹು ತಾರಾಧಿಪನ ತಗುಳ್ವಂತೆ
(೨) ದುಶ್ಯಾಸನ ಆವೇಶ – ಹರಿದನವ ಬೀದಿಯಲಿ ಬಿಡುದಲೆವೆರಸಿ; ಸತಿಯರಮನೆಯ ಬಾಗಿಲ
ಚರರು ತಡೆದರೆ ಮೆಟ್ಟಿದನು ತಿವಿದನು ಕಠಾರಿಯಲಿ

ಪದ್ಯ ೪೬: ಅರ್ಜುನನು ಕರ್ಣನ ಮೇಲೆ ಹೇಗೆ ಆಕ್ರಮಣ ಮಾಡಿದನು?

ಹಿಡಿ ಧನುವನನುವಾಗುಸಾಕಿ
ನ್ನೆಡಬಲನ ಹಾರದಿರೆನುತ ಕಯ್
ಗಡಿಯನೆಚ್ಚನು ನೂರು ಶರದಲಿ ಸೂತನಂದನನ
ತೊಡಗಿತೇ ಕಕ್ಕುಲಿತೆ ಮನದಲಿ
ಫಡ ಎನುತ ನೂರಂಬನೆಡೆಯಲಿ
ಕಡಿದು ಬಿಸುಟನು ಸೆಳೆದು ಕಿಗ್ಗಟ್ಟಿನ ಕಠಾರಿಯಲಿ (ಕರ್ಣ ಪರ್ವ, ೨೬ ಸಂಧಿ, ೪೬ ಪದ್ಯ)

ತಾತ್ಪರ್ಯ:
ಕೃಷ್ಣನ ಮಾತನ್ನು ಕೇಳಿ ಅರ್ಜುನನು ಕರ್ಣನಿಗೆ, ಎಲೈ ಕರ್ಣ ಸಿದ್ಧನಾಗು ಧನುಸ್ಸನ್ನು ಹಿಡಿ, ಅಕ್ಕಪಕ್ಕದವರ ಬೆಂಬಲವನ್ನು ನಿರೀಕ್ಷಿಸಬೇಡ, ಎನ್ನುತ್ತಾ ನೂರು ಬಾಣಗಳನ್ನು ಕರ್ಣನ ಮೇಲೆ ಬಿಟ್ಟನು. ಇಂತಹ ಸ್ಥಿತಿಯಲ್ಲಿ ನನ್ನನ್ನು ಗೆಲ್ಲಬಹುದೆಂಬ ಚಿಂತೆ ನಿನ್ನ ಮನಸ್ಸಿನಲ್ಲಿ ಬಂದೀತೇ? ಎಂದು ಹೇಳಿ ಕರ್ಣನು ಕಠಾರಿಯಿಂದ ಆ ಬಾಣಗಳನ್ನು ಕಡಿದನು.

ಅರ್ಥ:
ಹಿಡಿ: ಬಂಧಿಸು; ಧನು: ಬಿಲ್ಲು; ಅನುವಾಗು: ಅನುಕೂಲ; ಎಡಬಲ: ಅಕ್ಕ ಪಕ್ಕ; ಬಲ: ಸೈನ್ಯ; ಹಾರು: ಬಯಸು; ಕಯ್: ಹಸ್ತ; ಗಡಿ: ಎಲ್ಲೆ; ಕಯ್ಗಡಿ: ಕೈಯ ತುದಿ; ಎಚ್ಚು: ಬಾಣ ಬಿಡು; ನೂರು: ಶತ; ಶರ: ಬಾಣ; ಸೂತ: ರಥವನ್ನು ಓಡಿಸುವವ; ನಂದನ: ಮಗ; ತೊಡಗು: ಸೆಣಸು, ಹೋರಾಡು; ಕಕ್ಕುಲಿತೆ:ಚಿಂತೆ; ಮನ: ಮನಸ್ಸು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಎನುತ: ಹೇಳುತ್ತಾ; ಅಂಬು: ಬಾಣ; ಎಡೆ: ತೆಗೆ, ತಕ್ಷಣ; ಕಡಿ: ಸೀಳು; ಬಿಸುಟು: ಹೊರಹಾಕು; ಸೆಳೆ: ಹತ್ತಿರ ತರು; ಕಿಗ್ಗಟ್ಟು: ಕೆಳಭಾಗದ ಕಟ್ಟು; ಕಠಾರಿ: ಕತ್ತಿ

ಪದವಿಂಗಡಣೆ:
ಹಿಡಿ +ಧನುವನ್+ಅನುವಾಗು+ಸಾಕಿನ್
ಎಡಬಲನ +ಹಾರದಿರ್+ಎನುತ +ಕಯ್
ಗಡಿಯನ್+ಎಚ್ಚನು +ನೂರು +ಶರದಲಿ +ಸೂತ+ನಂದನನ
ತೊಡಗಿತೇ+ ಕಕ್ಕುಲಿತೆ+ ಮನದಲಿ
ಫಡ+ ಎನುತ +ನೂರಂಬನ್+ಎಡೆಯಲಿ
ಕಡಿದು +ಬಿಸುಟನು +ಸೆಳೆದು+ ಕಿಗ್ಗಟ್ಟಿನ +ಕಠಾರಿಯಲಿ

ಅಚ್ಚರಿ:
(೧) ಕರ್ಣನ ಪರಾಕ್ರಮ: ನೂರಂಬನೆಡೆಯಲಿ ಕಡಿದು ಬಿಸುಟನು ಸೆಳೆದು ಕಿಗ್ಗಟ್ಟಿನ ಕಠಾರಿಯಲಿ
(೨) ಕರ್ಣನು ಅರ್ಜುನನನ್ನು ಬಯ್ಯುವ ಪರಿ – ತೊಡಗಿತೇ ಕಕ್ಕುಲಿತೆ ಮನದಲಿ ಫಡ

ಪದ್ಯ ೩೭: ಸೈನಿಕರು ಯುದ್ಧವನ್ನು ಕಂಡು ಹೇಗೆ ಪ್ರತಿಕ್ರಯಿಸಿದರು?

ಬಡಿಸಿದರೆ ಕುತ್ತುವ ವಿಘಾತಿಯ
ಮಡಮುರಿಯಲೇ ಕಳೆವ ದಂಡೆಯ
ತುಡುಕಿದಡೆ ನೋಡುವ ನಿವಾರಿಸಿ ಜಡಿದು ಝಳಪಿಸುವ
ಪಡಿಮುಖದೊಳಂಘೈಸಿ ಬವರಿಯ
ಲೊಡಲನೊಲೆವ ಕಠಾರಿಕಾರರ
ಬಿಡುಶ್ರಮದ ಬಿನ್ನಣಕೆ ಮಝ ಭಾಪೆಂದುದುಭಯಬಲ (ಕರ್ಣ ಪರ್ವ, ೧೯ ಸಂಧಿ, ೩೭ ಪದ್ಯ)

ತಾತ್ಪರ್ಯ:
ಸರಿದರೆ ಇರಿಯುವ, ಹೊಡೆತವನ್ನು ಭುಜ ಚಲನೆಯಿಂದಲೇ ತಪ್ಪಿಸಿಕೊಳ್ಳುವ, ದಂಡೆಯನ್ನು ತಪ್ಪಿಸಲು ಬಂದಾಗ, ಏಟನ್ನು ತಪ್ಪಿಸಿಕೊಂಡು ತನ್ನಾಯುಧವನ್ನು ಝಳಪಿಸುವ, ಮುಖಾಮುಖಿಯಾಗಿ ಇದುರಿಸಿ ಬವರಿಯಿಂದ ದೇಹವನ್ನು ಒಲೆಯುವ ಕಠಾರಿಕಾರರ ಚಮತ್ಕಾರವನ್ನು ಕಂಡು ಎರಡೂ ಸೇನೆಗಳು ” ಭಲೇ, ಭೇಷ್, ಭಾಪು” ಎಂದು ಹೊಗಳಿದರು.

ಅರ್ಥ:
ಬಿಡಿಸು: ಕಳಚು, ಸಡಿಲಿಸು; ಕುತ್ತು:ತೊಂದರೆ, ಆಪತ್ತು; ವಿಘಾತಿ: ಹೊಡೆತ, ವಿರೋಧಿ; ಮಡಮುರಿ: ಹಿಮ್ಮೆಟ್ಟು, ಹಿಂಜರಿ; ಕಳೆ: ಬೀಡು, ತೊರೆ; ದಂಡೆ: ಮಲ್ಲ ಯುದ್ಧದ ಒಂದು ವರಸೆ; ತುಡುಕು: ಹೋರಾಡು, ಸೆಣಸು; ನೋಡು: ವೀಕ್ಷಿಸು; ನಿವಾರಿಸು: ಹೋಗಲಾಡಿಸು; ಜಡಿ: ಗದರಿಸು, ಬೆದರಿಸು; ಝಳಪಿಸು: ಹೆದರಿಸು, ಬೀಸು; ಪಡಿಮುಖ: ಎದುರು, ಮುಂಭಾಗ; ಅಂಘೈಸು: ನೋಡಿ; ಬವರಿ:ತಿರುಗುವುದು; ಒಡಲು: ದೇಹ; ಕಠಾರಿ: ಕತ್ತಿ; ಶ್ರಮ: ದಣಿವು, ಆಯಾಸ; ಬಿನ್ನಣ: ಪಾಂಡಿತ್ಯ; ಮಝ: ಭೇಷ್; ಉಭಯ: ಎರಡು; ಬಲ: ಸೈನ್ಯ;

ಪದವಿಂಗಡಣೆ:
ಬಡಿಸಿದರೆ +ಕುತ್ತುವ +ವಿಘಾತಿಯ
ಮಡಮುರಿಯಲೇ +ಕಳೆವ+ ದಂಡೆಯ
ತುಡುಕಿದಡೆ +ನೋಡುವ +ನಿವಾರಿಸಿ +ಜಡಿದು +ಝಳಪಿಸುವ
ಪಡಿಮುಖದೊಳ್+ಅಂಘೈಸಿ +ಬವರಿಯಲ್
ಒಡಲನ್+ಒಲೆವ +ಕಠಾರಿಕಾರರ
ಬಿಡುಶ್ರಮದ+ ಬಿನ್ನಣಕೆ+ ಮಝ+ ಭಾಪೆಂದುದ್+ಉಭಯಬಲ

ಅಚ್ಚರಿ:
(೧) ಜೋಡಿ ಪದಗಳು – ಬಿಡುಶ್ರಮದ ಬಿನ್ನಣಕೆ; ಜಡಿದು ಝಳಪಿಸುವ

ಪದ್ಯ ೨೩: ಯಾವ ಆಯುಧಗಳು ರಥಗಳಲ್ಲಿದ್ದವು?

ಪರಶು ಮುಸಲ ಮುಸುಂಡಿ ಸೆಲ್ಲೆಹ
ಪರಿಘ ತೋಮರ ಚಕ್ರವಸಿಮು
ದ್ಗರ ತ್ರಿಶೂಲ ಕಠಾರಿ ಖೇಟಕ ಪಿಂಡಿವಾಳಾಯ
ಸುರಗಿ ಮೊದಲಾದಖಿಳ ಶಸ್ತ್ರೋ
ತ್ಕರವನೊಂದೇ ಬಂಡಿಯಲಿ ಸಂ
ವರಿಸಿದೆನು ರಿಪುರಾಯರೊಡಲಲಿ ಬೀಯಮಾಡೆಂದ (ಕರ್ಣ ಪರ್ವ, ೧೮ ಸಂಧಿ, ೨೩ ಪದ್ಯ)

ತಾತ್ಪರ್ಯ:
ಗಂಡುಕೊಡಲಿ, ಒನಕೆ, ಮುಸುಂಡಿ, ಸೆಲ್ಲೆಹ, ಪರಿಘ, ತೋಮರ, ಚಕ್ರ, ಖಡ್ಗ, ಮುದ್ಗರ, ತ್ರಿಶೂಲ, ಕಠಾರಿ, ಖೇಟಕ, ಭಿಂಡಿವಾಳ, ಸುರಗಿ, ಇವನ್ನೆಲ್ಲಾ ಒಂದೇ ಬಂಡಿಯಲ್ಲಿ ಸೇರಿಸಿಟ್ಟಿದ್ದೇನೆ. ಇವನ್ನು ಶತ್ರುರಾಜರ ದೇಹಗಳಲ್ಲಿ ವ್ಯಯಮಾಡು ಎಂದು ವಿಶೋಕನು ಭೀಮನಿಗೆ ತಿಳಿಸಿದನು.

ಅರ್ಥ:
ಪರಶು: ಕೊಡಲಿ, ಕುಠಾರ; ಮುಸಲ: ಗದೆ; ಮುಸುಂಡಿ: ಆಯುಧದ ಹೆಸರು; ಸೆಲ್ಲೆಹ: ಈಟಿ, ಭರ್ಜಿ; ಪರಿಘ: ಕಬ್ಬಿಣದ ಆಯುಧ, ಗದೆ; ತೋಮರ: ತಿದಿಯಲ್ಲಿ ಅರ್ಧಚಂದ್ರಾಕೃತಿಯಲ್ಲಿರುವ ಒಂದು ಬಗೆಯ ಬಾಣ, ಈಟಿಯಂತಿರುವ ಆಯುಧ; ಚಕ್ರ: ಗುಂಡಾಗಿ ತಿರುಗುವ ಆಯುಧ; ಮುದ್ಗರ: ಗದೆ; ತ್ರಿಶೂಲ: ಮೂರುಮೊನೆಯ ಆಯುಧ; ಕಠಾರಿ: ಚೂರಿ, ಕತ್ತಿ; ಖೇಟಕ: ಗುರಾಣಿ; ಪಿಂಡಿವಾಳ: ಒಂದು ಬಗೆಯ ಆಯುಧ, ಈಟಿ; ಚಯ: ಗುಂಪು, ರಾಶಿ; ಸುರಗಿ: ಸಣ್ಣ ಕತ್ತಿ, ಚೂರಿ; ಮೊದಲಾದ: ಮುಂತಾದ; ಅಖಿಳ: ಎಲ್ಲಾ; ಶಸ್ತ್ರ: ಆಯುಧ; ಉತ್ಕರ: ಸಮೂಹ; ಬಂಡಿ: ರಥ; ಸಂವರಿಸು: ಸಂಗ್ರಹಿಸು; ರಿಪು: ವೈರಿ; ರಾಯ: ರಾಜ; ಒಡಲು: ದೇಹ; ಬೀಯ: ವ್ಯಯ, ಖರ್ಚು;

ಪದವಿಂಗಡಣೆ:
ಪರಶು +ಮುಸಲ +ಮುಸುಂಡಿ +ಸೆಲ್ಲೆಹ
ಪರಿಘ+ ತೋಮರ +ಚಕ್ರವಸಿ+ಮು
ದ್ಗರ +ತ್ರಿಶೂಲ +ಕಠಾರಿ +ಖೇಟಕ +ಪಿಂಡಿವಾಳಾಯ
ಸುರಗಿ+ ಮೊದಲಾದ್+ಅಖಿಳ +ಶಸ್ತ್ರೋ
ತ್ಕರವನ್+ಒಂದೇ +ಬಂಡಿಯಲಿ +ಸಂ
ವರಿಸಿದೆನು +ರಿಪುರಾಯರ್+ಒಡಲಲಿ +ಬೀಯಮಾಡೆಂದ

ಅಚ್ಚರಿ:
(೧) ಆಯುಧಗಳ ಹೆಸರು: ಪರಶು, ಮುಸಲ, ಮುಸುಂಡಿ, ಸೆಲ್ಲೆಹ, ಪರಿಘ, ತೋಮರ, ಚಕ್ರವಸಿ, ಮುದ್ಗರ, ತ್ರಿಶೂಲ, ಕಠಾರಿ, ಖೇಟಕ, ಪಿಂಡಿವಾಳ, ಸುರಗಿ

ಪದ್ಯ ೨೮: ದುರ್ಯೋಧನನು ತನ್ನ ಶಸ್ತ್ರ ಕೌಶಲ್ಯವನು ಹೇಗೆ ಪ್ರದರ್ಶಿಸಿದನು?

ಬವರಿಯಲಿ ಪಯಪಾಡಿನಲಿ ಮೈ
ಲವಣಿಯಲಿ ಬಿನ್ನಾಣದಲಿ ಭಾ
ರವಣೆಯಲಿ ದೆಖ್ಖಾಳದಲಿ ವೇಗಾಯ್ಲ ರೇಖೆಯಲಿ
ತಿವಿವ ಮೊನೆಯೊಂದರಲಿ ನೂರಂ
ಗವನು ತೋರ್ಪ ವಿಭೇದದಲಿ ಕೌ
ರವ ಮಹೀಪತಿ ತೋರಿದನು ಶ್ರಮವನು ಕಠಾರಿಯಲಿ (ಆದಿ ಪರ್ವ, ೭ ಸಂಧಿ, ೨೮ ಪದ್ಯ)

ತಾತ್ಪರ್ಯ:
ದುರ್ಯೋಧನನು ಕಠಾರಿಯ ಕೌಶಲವನ್ನು ತೋರಿಸಲು ಪ್ರಾರಂಭಿಸಿದನು. ಅದನ್ನು ಯುದ್ಧದಲ್ಲಿ ಪ್ರಯೊಗಿಸುವಾಗ ಅದಕ್ಕೆ ಬೇಕಾದ ಹೆಜ್ಜೆಗಳನ್ನು ಹಾಕಿ ಸುತ್ತುತ್ತಾ ತನ್ನ ಮೈಕಾಂತಿಯನ್ನು ವಿಶೇಷವಾದ ಗತ್ತು, ಗಂಭೀರವಾದ ಭಂಗಿ, ವೇಗವಾದ ನಡೆಗಳನ್ನು, ಇದರ ತಿವಿತದ ನೂರಾರು ವಿಭೇದಗಳನ್ನು ಪ್ರದರ್ಶಿಸಿದನು.

ಅರ್ಥ:
ಬವರಿ: ತಿರುಗುವುದು, ಸುತ್ತುವಿಕೆ; ಪಯ: ಅಡಿ, ಪಾದ; ಪಯಪಾಡು: ಹೆಜ್ಜೆಯಿಡುವ ಕ್ರಮ, ಕಾಳಗದಲ್ಲಿ ಒಂದು ವರಸೆ; ಲವಣಿ: ಕಾಂತಿ, ಶೋಭೆ, ಯುದ್ಧದ ಒಂದು ವರಸೆ; ಬಿನ್ನಾಣ: ಕೌಶಲ್ಯ, ನೈಪುಣ್ಯ; ಭಾರಣೆ: ಭಾರ, ಹೆಚ್ಚಳ, ಹಿರಿಮೆ;ದೆಖ್ಖಾಳ: ವೈಭವ, ಸಂಭ್ರಮ; ವೇಗ್ಗಳ: ಹಿರಿಮೆ, ಶ್ರೇಷ್ಠತೆ; ರೇಖೆ: ಗೆರೆ,ಲಾವಣ್ಯ, ಸೊಗಸು; ತಿವಿ: ಇರಿ, ಚುಚ್ಛು; ಮೊನೆ: ತುದಿ, ಕೊನೆ, ತೀಕ್ಷ್ಣತೆ; ಅಂಗ: ರೀತಿ, ವಿಧ; ತೋರ್ಪ: ತೋರಿಸು; ವಿಭೇದ: ಪ್ರಕಾರ; ಮಹೀಪತಿ: ರಾಜ; ತೋರಿದನು: ಪ್ರದರ್ಶಿಸು; ಶ್ರಮ: ಶಸ್ತ್ರಾಭ್ಯಾಸ; ಕಠಾರಿ: ಚೂರಿ, ಚಾಕು;

ಪದವಿಂಗಡನೆ:
ಬವರಿಯಲಿ+ ಪಯಪಾಡಿನಲಿ+ ಮೈ
ಲವಣಿಯಲಿ + ಬಿನ್ನಾಣದಲಿ +ಭಾ
ರವಣೆಯಲಿ+ ದೆಖ್ಖಾಳದಲಿ +ವೇಗಾಯ್ಲ +ರೇಖೆಯಲಿ
ತಿವಿವ +ಮೊನೆಯೊಂದರಲಿ+ ನೂರಂ
ಗವನು +ತೋರ್ಪ +ವಿಭೇದದಲಿ+ ಕೌ
ರವ+ ಮಹೀಪತಿ +ತೋರಿದನು +ಶ್ರಮವನು +ಕಠಾರಿಯಲಿ

ಅಚ್ಚರಿ:
(೧) ಯುದ್ಧದ ನಡಿಗೆ ಲಕ್ಷಣಗಳ ವಿವರ: ಬವರಿ, ಪಯಪಾಡಿ, ಬಿನಾಣ, ಭಾರವಣೆ, ದೆಖ್ಖಾಳ, ಬೆಗಾಯ್ಲ, ರೇಖೆ
(೨) ೧೦ ಬಾರಿ ಯಲಿ ಪದದಿಂದ ಕೊನೆಗೊಂಡಿರುವುದು
(೩) ತೋರ್ಪ, ತೋರಿಸಿದನು – ಸಮಾನಾರ್ಥಕ ಪದಗಳು