ಪದ್ಯ ೪೨: ಊರ್ವಶಿಯ ಮುಖಛಾಯೆ ಹೇಗಾಯಿತು?

ರಾಹು ತುಡುಕಿದ ಶಶಿಯೊ ಮೇಣ್ರೌ
ದ್ರಾಹಿ ಮಸ್ತಕ ಮಾಣಿಕವೊ ಕಡು
ಗಾಹಿನಮೃತವೊ ಕುಪಿತಸಿಂಹದ ಗುಹೆಯ ಮೃಗಮದವೊ
ಲೋಹಧಾರೆಯ ಮಧುವೊ ಕಳಿತ ಹ
ಲಾಹಳದ ಕಜ್ಜಾಯವೆನಿಸಿತು
ರೂಹು ಸುಮನೋಹರ ಭಯಂಕರವಾಯ್ತು ಸುರಸತಿಯ (ಅರಣ್ಯ ಪರ್ವ, ೯ ಸಂಧಿ, ೪೨ ಪದ್ಯ)

ತಾತ್ಪರ್ಯ:
ರಾಹುವು ಹಿಡಿದ ಚಂದ್ರನಂತೆ, ಭಯಂಕರ ಸರ್ಪದ ಹೆಡೆಯ ಮಣಿಯಂತೆ, ಅತಿಯಾಗಿ ಬಿಸಿಮಾಡಿದ ಅಮೃತದಂತೆ, ಕೋಪಗೊಂಡ ಸಿಂಹದ ಹುಗೆಯಲ್ಲಿರುವ ಕಸ್ತೂರಿಯಂತೆ, ಕತ್ತಿಯ ಅಲಗಿಗೆ ಲೇಪಿಸಿದ ಜೇನು ತುಪ್ಪದಂತೆ, ವಿಷಪೂರಿತ ಕಜ್ಜಾಯದಂತೆ, ಊರ್ವಶಿಯ ರೂಪ ಮನೋಹರವೂ ಭಯಂಕರವೂ ಆಗಿತ್ತು.

ಅರ್ಥ:
ರಾಹು: ನವಗ್ರಹಗಳಲ್ಲಿ ಒಂದು, ಬೆಂಕಿ; ತುಡುಕು: ಬೇಗನೆ ಹಿಡಿಯುವುದು; ಶಶಿ: ಚಂದ್ರ; ಮೇಣ್: ಮತ್ತು, ಅಥವಾ; ರೌದ್ರ: ಭಯಂಕರ; ಅಹಿ: ಹಾವು; ಮಸ್ತಕ: ತಲೆ; ಮಾಣಿಕ: ಬೆಲೆಬಾಳುವ ಮಣಿ; ಕಡುಗು: ತೀವ್ರವಾಗು; ಅಮೃತ: ಸುಧೆ; ಕುಪಿತ: ಕೋಪಗೊಂಡ; ಸಿಂಹ: ಕೇಸರಿ; ಗುಹೆ: ಗವಿ; ಮೃಗ: ಪ್ರಾಣಿ, ಕಸ್ತ್ರೂರಿಮೃಗ, ಜಿಂಕೆ; ಮದ: ಅಹಂಕಾರ; ಲೋಹ: ಕಬ್ಬಿಣ; ಧಾರೆ: ಕತ್ತಿಯ ಅಲಗು; ಮಧು: ಜೇನು; ಕಳಿತ: ಪೂರ್ಣ ಹಣ್ಣಾದ; ಹಲಾಹಳ: ವಿಷ; ಕಜ್ಜಾಯ: ಸಿಹಿತಿಂಡಿ, ಅತಿರಸ; ರೂಹು: ರೂಪ; ಸುಮನೋಹರ: ಚೆಲುವು; ಭಯಂಕರ: ಘೋರವಾದ; ಸುರಸತಿ: ಅಪ್ಸರೆ;

ಪದವಿಂಗಡಣೆ:
ರಾಹು+ ತುಡುಕಿದ+ ಶಶಿಯೊ +ಮೇಣ್+ರೌದ್ರ
ಅಹಿ+ ಮಸ್ತಕ+ ಮಾಣಿಕವೊ +ಕಡು
ಗಾಹಿನ್+ಅಮೃತವೊ +ಕುಪಿತ+ಸಿಂಹದ +ಗುಹೆಯ +ಮೃಗ+ಮದವೊ
ಲೋಹಧಾರೆಯ+ ಮಧುವೊ +ಕಳಿತ +ಹ
ಲಾಹಳದ+ ಕಜ್ಜಾಯವ್+ಎನಿಸಿತು
ರೂಹು +ಸುಮನೋಹರ +ಭಯಂಕರವಾಯ್ತು +ಸುರಸತಿಯ

ಅಚ್ಚರಿ:
(೧) ವೈರುಧ್ಯಗಳನ್ನು ಸೂಚಿಸುವ ಪದ್ಯ, ಉಪಮಾನಗಳ ಬಳಕೆ – ರಾಹು ತುಡುಕಿದ ಶಶಿಯೊ, ಮೇಣ್ರೌದ್ರಾಹಿ ಮಸ್ತಕ ಮಾಣಿಕವೊ, ಕಡುಗಾಹಿನಮೃತವೊ, ಕುಪಿತಸಿಂಹದ ಗುಹೆಯ ಮೃಗಮದವೊ, ಲೋಹಧಾರೆಯ ಮಧುವೊ, ಕಳಿತ ಹಲಾಹಳದ ಕಜ್ಜಾಯ

ಪದ್ಯ ೧೮: ಶಲ್ಯನು ಭೀಮನನ್ನು ತ್ರಿಕಟುಕದ ಕಜ್ಜಾಯವೆಂದು ಏಕೆ ಕರೆದನು?

ಅಕಟ ಬಲುಗೈಯಹೆ ಕಣಾ ಸಾ
ಧಕನು ನಾನದಕೆನ್ನೆನಿಂದಿನ
ವಿಕಟ ಕೋಪಾಟೋಪ ಭೀಮನ ದಂಡಿಯದು ಬೇರೆ
ತ್ರಿಕಟುಕದ ಕಜ್ಜಾಯವಿದು ಬಾ
ಲಕರ ಸೊಗಸೇ ಕರ್ಣ ಕೇಳ್ ಕೌ
ತುಕದ ಮಾತೇ ನಿನ್ನ ಮೇಲಾಣೆಂದನಾ ಶಲ್ಯ (ಕರ್ಣ ಪರ್ವ, ೧೨ ಸಂಧಿ, ೧೮ ಪದ್ಯ)

ತಾತ್ಪರ್ಯ:
ಶಲ್ಯನು ಕರ್ಣನಿಗೆ ಉತ್ತರಿಸುತ್ತಾ, ಅಯ್ಯೋ ಕರ್ಣ ನೀನು ಬಲಶಾಲಿಯೆಂದು ನಾನು ಬಲ್ಲೆ, ಯುದ್ಧ ವಿದ್ಯೆಯನ್ನು ಸಾಧಿಸಿರುವೆ ಎಂದು ಸಂಶಯವಿಲ್ಲದೆ ಒಪ್ಪುತ್ತೇನೆ. ಅದರೆ ಇಂದು ಭೀಮನು ಉಗ್ರ ಕೋಪಾಟೋಪದಿಂದ ನುಗ್ಗಿ ಬರುತ್ತಿರುವ ರೀತಿಯೇ ಬೇರೆ. ಇವನು ಮೂರು ಬಗೆಯಾದ ವಿಷವನ್ನು ಹಾಕಿಕಟ್ಟಿದ ಕಜ್ಜಾಯದ ಹಾಗೆ ತೋರುತ್ತಿದ್ದಾನೆ, ಬಾಲಕರು ಇದನ್ನು ತಿಂದು ಸುಧಾರಿಸಬಹುದೇ ಕರ್ಣ ನಿನ್ನ ಮೇಲಾಣೆ ಇವನನ್ನು ತಡೆಯುವ ಸಾಹಸ ಬೇಡವೆಂದು ಶಲ್ಯನು ಹೇಳಿದನು.

ಅರ್ಥ:
ಅಕಟ: ಅಯ್ಯೋ; ಬಲುಗೈ: ಬಲಶಾಲಿ; ಸಾಧಕ: ಸಾಧಿಸಿದವ; ಇಂದಿನ: ಇವತ್ತು; ವಿಕಟ: ಭೀಕರವಾದ; ಕೋಪ: ಆಕ್ರೋಶ; ದಂಡಿ: ಶಕ್ತಿ, ಸಾಮರ್ಥ್ಯ; ಬೇರೆ: ಅನ್ಯ; ತ್ರಿಕಟುಕ: ಮೂರು ಬಗೆಯಾದ ವಿಷ; ಕಜ್ಜಾಯ: ಅತಿರಸ; ಬಾಲಕ: ಮಕ್ಕಳು; ಸೊಗಸು: ಚೆಲುವು; ಕೌತುಕ: ಕುತೂಹಲ; ಮಾತು: ವಾಣಿ; ಆಣೆ: ಪ್ರಮಾಣ;

ಪದವಿಂಗಡಣೆ:
ಅಕಟ +ಬಲುಗೈಯಹೆ+ ಕಣಾ +ಸಾ
ಧಕನು +ನಾನದಕ್+ಎನ್ನೆನ್+ಇಂದಿನ
ವಿಕಟ+ ಕೋಪಾಟೋಪ +ಭೀಮನ+ ದಂಡಿಯದು +ಬೇರೆ
ತ್ರಿಕಟುಕದ+ ಕಜ್ಜಾಯವಿದು +ಬಾ
ಲಕರ+ ಸೊಗಸೇ+ ಕರ್ಣ +ಕೇಳ್ ಕೌ
ತುಕದ +ಮಾತೇ +ನಿನ್ನ +ಮೇಲಾಣೆ+ಎಂದನಾ +ಶಲ್ಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ತ್ರಿಕಟುಕದ ಕಜ್ಜಾಯವಿದು ಬಾಲಕರ ಸೊಗಸೇ
(೨) ಕರ್ಣನನ್ನು ಹೊಗಳಿ ಬಾಲಕನಿಗೆ ಹೋಲಿಸುವ ಶಲ್ಯ – ಬಲುಗೈಯಹೆ; ಬಾಲಕರ ಸೊಗಸೇ

ಪದ್ಯ ೩೬: ಭೀಮನು ವೃಷಸೇನ ಮತ್ತು ಸುಷೇಣರಿಗೆ ಏನು ಹೇಳಿದನು?

ರಾಯದಳದಲಿ ಸೆಣಸಲಿದು ಕ
ಜ್ಜಾಯವೇ ಮಕ್ಕಳಿರ ಮನ್ನಿಸಿ
ಕಾಯಿದೆನು ಬಳಿಕೇನು ನಿಮ್ಮಂಘವಣೆ ಲೇಸಾಯ್ತು
ಸಾಯಲೇತಕೆ ಹಿಂಗಿ ನಿಮ್ಮನು
ನೋಯಿಸುವುದನುಚಿತವು ಸೇನಾ
ನಾಯಕನು ನಿಮ್ಮಯ್ಯನಾತನ ಕಳುಹಿ ನೀವೆಂದ (ಕರ್ಣ ಪರ್ವ, ೧೦ ಸಂಧಿ, ೩೬ ಪದ್ಯ)

ತಾತ್ಪರ್ಯ:
ಭಿಮನು ವೃಷಸೇನ ಮತ್ತು ಸುಷೇಣರನ್ನು ಕಂಡು, ಅಯ್ಯೋ ಮಕ್ಕಳಿರಾ! ಸೈನ್ಯದಲ್ಲಿ ಸೇರಿ ಯುದ್ಧ ಮಾಡಲು ಇದೇನು ಕಜ್ಜಾಯವೇ? ನಿಮ್ಮನ್ನು ಮನ್ನಿಸಿ ಕಾಪಾಡುತ್ತೇನೆ, ನಿಮ್ಮ ಪರಾಕ್ರಮವು ಹೊಗಳಲು ಯೋಗ್ಯವಾಗಿದೆ. ಸುಮ್ಮನೆ ಏಕೆ ಸಾಯುತ್ತೀರಿ? ಸೇನಾಧಿಪತಿಯಾದ ನಿಮ್ಮ ತಂದೆಯನ್ನು ಯುದ್ಧಕ್ಕೆ ಕಳಿಸಿರಿ ಎಂದು ಕರ್ಣನ ಮಕ್ಕಳಿಗೆ ಭೀಮನು ಹೇಳಿದನು.

ಅರ್ಥ:
ರಾಯ: ರಾಜ; ದಳ: ಸೈನ್ಯ; ಸೆಣಸು: ವಿರೋಧ, ಪ್ರತಿ ಭಟನೆ; ಕಜ್ಜಾಯ: ಅತಿರಸ, ಸಿಹಿತಿಂಡಿ; ಮಕ್ಕಳು: ತನುಜ; ಮನ್ನಿಸು: ಗೌರವಿಸು, ಮರ್ಯಾದೆ ಮಾಡು; ಕಾಯು:ಕಾಪಾಡು, ಕಾವಲಿರು; ಬಳಿಕ: ನಂತರ; ಅಂಘವಣೆ: ನೋಡಿ; ಲೇಸು: ಒಳಿತು; ಸಾಯಲು: ಸಾವು, ಮರಣ; ಹಿಂಗು: ಪರಿಹಾರವಾಗು, ನಿವಾರಣೆಯಾಗು; ನೋಯಿಸು: ಬೇನೆ, ಶೂಲೆ; ಅನುಚಿತ: ಸರಿಯಿಲ್ಲದ; ಸೇನಾನಾಯಕ: ಸೇನಾಧಿಪತಿ; ಅಯ್ಯ: ತಂದೆ; ಕಳುಹು: ಬರೆಮಾಡು;

ಪದವಿಂಗಡಣೆ:
ರಾಯದಳದಲಿ+ ಸೆಣಸಲಿದು+ ಕ
ಜ್ಜಾಯವೇ +ಮಕ್ಕಳಿರ+ ಮನ್ನಿಸಿ
ಕಾಯಿದೆನು +ಬಳಿಕೇನು +ನಿಮ್+ಅಂಘವಣೆ +ಲೇಸಾಯ್ತು
ಸಾಯಲೇತಕೆ+ ಹಿಂಗಿ +ನಿಮ್ಮನು
ನೋಯಿಸುವುದ್+ಅನುಚಿತವು +ಸೇನಾ
ನಾಯಕನು +ನಿಮ್ಮಯ್ಯನ್+ಆತನ +ಕಳುಹಿ +ನೀವೆಂದ

ಅಚ್ಚರಿ:
(೧) ಭೀಮನ ನುಡಿ: ರಾಯದಳದಲಿ ಸೆಣಸಲಿದು ಕಜ್ಜಾಯವೇ