ಪದ್ಯ ೧೫: ಭಾನುಮತಿಯನ್ನು ಯಾರು ಹಿಂಬಾಲಿಸಿದರು?

ಧರಣಿಪತಿ ಹೊರವಂಟನಂತಃ
ಪುರವ ಬಿಸುಟರು ಭಾನುಮತಿ ಸಹಿ
ತರಸಿಯರು ಹೊರವಂಟರೇಕಾಂಬರದ ಬಿಡುಮುಡಿಯ
ಕರದಬಸುರಿನ ಹೊಯ್ಲ ಕಜ್ಜಳ
ಪರಿಲುಳಿತ ನಯನಾಂಬುಗಳ ಕಾ
ತರಿಪ ಕಮಲಾಕ್ಷಿಯರು ನೆರೆದುದು ಲಕ್ಕ ಸಂಖ್ಯೆಯಲಿ (ಗದಾ ಪರ್ವ, ೧೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಭಾನುಮತಿಯೊಂದಿಗೆ ಅರಮನೆಯನ್ನು ಬಿಟ್ಟು ಹೊರಟನು. ರಾಣಿವಾಸದವರೆಲ್ಲರೂ ಏಕವಸ್ತ್ರವನ್ನು ಧರಿಸಿ ಮುಡಿಯನ್ನು ಬಿಚ್ಚಿಕೊಂಡು ಹೊರಟರು. ಕಣ್ಣೀರು ಧಾರಾಕಾರವಾಗಿ ಸುರಿಯುತ್ತಿರಲು, ಕೈಯಿಂದ ಹೊಟ್ಟೆಯನ್ನು ಹೊಡೆದುಕೊಳ್ಳುತ್ತಾ ಲಕ್ಷ ಸಂಖ್ಯೆಯ ಸ್ತ್ರೀಯರು ಅವರನ್ನು ಹಿಂಬಾಲಿಸಿದರು.

ಅರ್ಥ:
ಧರಣಿಪತಿ: ರಾಜ; ಹೊರವಂಟ: ನಡೆ, ತೆರಳು; ಅಂತಃಪುರ: ರಾಣಿವಾಸದ ಅರಮನೆ; ಬಿಸುಟು: ಹೊರಹಾಕು; ಸಹಿತ: ಜೊತೆ; ಅರಸಿ: ರಾಣಿ; ಏಕ: ಒಂದೇ; ಅಂಬರ:ಬಟ್ಟೆ; ಬಿಡು: ತೆರೆದ; ಮುಡಿ: ಶಿರ, ಕೂದಲು; ಕರ: ಹಸ್ತ; ಬಸುರು: ಹೊಟ್ಟೆ; ಹೊಯ್ಲು: ಹೊಡೆತ; ಕಜ್ಜಳ: ಕಾಡಿಗೆ; ಲುಳಿ: ಸೊಗಸು, ಕಾಂತಿ; ನಯನ: ಕಣ್ಣು; ಅಂಬು: ನೀರು; ನಯನಾಂಬು: ಕಣ್ಣೀರು; ಕಾತರ: ಕಳವಳ, ಉತ್ಸುಕತೆ; ಕಮಲಾಕ್ಷಿ: ಕಮಲದಂತ ಕಣ್ಣುಳ್ಳ (ಹೆಣ್ಣು); ನೆರೆ: ಗುಂಪು; ಲಕ್ಕ: ಲಕ್ಷ; ಸಂಖ್ಯೆ: ಎಣಿಕೆ;

ಪದವಿಂಗಡಣೆ:
ಧರಣಿಪತಿ+ ಹೊರವಂಟನ್+ಅಂತಃ
ಪುರವ +ಬಿಸುಟರು +ಭಾನುಮತಿ +ಸಹಿತ್
ಅರಸಿಯರು +ಹೊರವಂಟರ್+ಏಕ+ಅಂಬರದ +ಬಿಡು+ಮುಡಿಯ
ಕರದ+ಬಸುರಿನ +ಹೊಯ್ಲ+ ಕಜ್ಜಳ
ಪರಿಲುಳಿತ +ನಯನಾಂಬುಗಳ +ಕಾ
ತರಿಪ+ ಕಮಲಾಕ್ಷಿಯರು +ನೆರೆದುದು +ಲಕ್ಕ +ಸಂಖ್ಯೆಯಲಿ

ಅಚ್ಚರಿ:
(೧) ನೋವನ್ನು ಚಿತ್ರಿಸುವ ಪರಿ – ಕರದಬಸುರಿನ ಹೊಯ್ಲ ಕಜ್ಜಳ ಪರಿಲುಳಿತ ನಯನಾಂಬುಗಳ ಕಾ
ತರಿಪ ಕಮಲಾಕ್ಷಿಯರು