ಪದ್ಯ ೧: ಬಲರಾಮನಿಗೆ ಯಾರು ನಮಸ್ಕರಿಸಿದರು?

ಕೇಳು ಧೃತರಾಷ್ಟ್ರವನಿಪ ಸಿರಿ
ಲೋಲ ಸಹಿತ ಯುಧಿಷ್ಠಿರಾದಿ ನೃ
ಪಾಲಕರು ಕಾಣಿಕೆಯನಿತ್ತರು ನಮಿಸಿ ಹಲಧರಗೆ
ಮೇಲುದುಗುಡದ ಮುಖದ ನೀರೊರೆ
ವಾಲಿಗಳ ಕಕ್ಷದ ಗದೆಯ ಭೂ
ಪಾಲ ಬಂದನು ನೊಸಲ ಚಾಚಿದನವರ ಚರಣದಲಿ (ಗದಾ ಪರ್ವ, ೫ ಸಂಧಿ, ೧ ಪದ್ಯ)

ತಾತ್ಪರ್ಯ:
ಎಲೈ ರಾಜ ಧೃತರಾಷ್ಟ್ರ ಕೇಳು, ಧರ್ಮಜನೇ ಮೊದಲಾದ ರಾಜರು ಶ್ರೀಕೃಷ್ಣನೊಡನೆ ಬಲರಾಮನಿಗೆ ವಂದಿಸಿ ಕಾಣಿಕೆಯನ್ನು ನೀಡಿದರು. ದುರ್ಯೋಧನನ ಅಪಾರ ದುಃಖವು ಅವನ ಕಣ್ಣಿನ ಕೊನೆಯಲ್ಲಿ ತುಂಬಿದ ನೀರಿನಿಂದ ಹೊರಹೊಮ್ಮುತ್ತಿತ್ತು. ಬಗಲಿನಲ್ಲಿ ಗದೆಯನ್ನಿಟ್ಟುಕೊಂಡು ಅವನು ಬಲರಾಮನ ಪಾದಗಳಿಗೆ ಹಣೆಯನ್ನು ಚಾಚಿದನು.

ಅರ್ಥ:
ಅವನಿಪ: ರಾಜ; ಸಿರಿಲೋಲ: ಲಕ್ಷ್ಮಿಯ ಪ್ರಿಯಕರ (ಕೃಷ್ಣ); ಸಹಿತ: ಜೊತೆ; ಆದಿ: ಮುಂತಾದ; ನೃಪಾಲ: ರಾಜ; ಕಾಣಿಕೆ: ಉಡುಗೊರೆ; ನಮಿಸು: ಎರಗು; ಹಲಧರ: ಹಲವನ್ನು ಹಿಡಿದವ (ಬಲರಾಮ); ದುಗುಡ: ದುಃಖ; ಮೇಲುದುಗುಡ: ತುಂಬಾ ದುಃಖ; ಮುಖ: ಆನನ; ನೀರು: ಜಲ; ಒರೆವಾಲಿ: ಕಣ್ಣಿನ ಕೊನೆ; ಕಕ್ಷ: ಕಂಕಳು; ಗದೆ: ಮುದ್ಗರ; ಭೂಪಾಲ: ರಾಜ; ಬಂದು: ಆಗಮಿಸು; ನೊಸಲ: ಹಣೆ; ಚಾಚು: ಹರಡು; ಚರಣ: ಪಾದ;

ಪದವಿಂಗಡಣೆ:
ಕೇಳು+ ಧೃತರಾಷ್ಟ್ರ +ಅವನಿಪ +ಸಿರಿ
ಲೋಲ +ಸಹಿತ +ಯುಧಿಷ್ಠಿರಾದಿ+ ನೃ
ಪಾಲಕರು+ ಕಾಣಿಕೆಯನಿತ್ತರು+ ನಮಿಸಿ+ ಹಲಧರಗೆ
ಮೇಲು+ದುಗುಡದ +ಮುಖದ +ನೀರ್+ಒರೆ
ವಾಲಿಗಳ +ಕಕ್ಷದ+ ಗದೆಯ +ಭೂ
ಪಾಲ +ಬಂದನು +ನೊಸಲ +ಚಾಚಿದನವರ +ಚರಣದಲಿ

ಅಚ್ಚರಿ:
(೧) ಅವನಿಪ, ಭೂಪಾಲ, ನೃಪಾಲ – ಸಮಾನಾರ್ಥಕ ಪದ
(೨) ದುಃಖವನ್ನು ವಿವರಿಸುವ ಪರಿ – ಮೇಲುದುಗುಡದ ಮುಖದ ನೀರೊರೆವಾಲಿಗಳ

ಪದ್ಯ ೧೭: ಧರ್ಮಜನನ್ನು ಯಾರು ಕರೆಸಿಕೊಂಡರು?

ಹದುಳವಿಟ್ಟನು ಭೀಮನನು ನಿ
ರ್ಮದನು ಮತ್ಸ್ಯನಪುರಿಗೆ ಯತಿವೇ
ಷದಲಿ ಬಂದನು ಹೊನ್ನಸಾರಿಯ ಚೀಲ ಕಕ್ಷದಲಿ
ಇದಿರೊಳಾನತರಾಯ್ತು ಕಂಡವ
ರುದಿತ ತೇಜಃಪುಂಜದಲಿ ಸೊಂ
ಪೊದವಿ ಬರಲು ವಿರಾಟ ಕಾಣಿಸಿಕೊಂಡು ಬೆಸಗೊಂಡ (ವಿರಾಟ ಪರ್ವ, ೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ಭೀಮನನ್ನು ಸಂತೈಸಿ ಧರ್ಮರಾಯನು ಯತಿವೇಷದಿಂದ ಮತ್ಸ್ಯನಗರಕ್ಕೆ ಬಂದನು. ಅವನು ಬಂಗಾರದ ಪಗಡೆಯ ಚೀಲವನ್ನು ಕಂಕುಳಿನಲ್ಲಿ ಅವಚಿಕೊಂಡಿದ್ದನು. ಅವನ ತೇಜಸ್ಸನ್ನು ನೋಡಿ ಎದುರಿನಲ್ಲಿ ಕಂಡವರು ನಮಸ್ಕರಿಸಿದರು. ವಿರಾಟನು ಅವನನ್ನು ಕರೆಸಿಕೊಂಡು ಕೇಳಿದನು.

ಅರ್ಥ:
ಹದುಳ: ಸೌಖ್ಯ, ಕ್ಷೇಮ; ನಿರ್ಮದ: ಅಹಂಕಾರವಿಲ್ಲದ; ಪುರಿ: ಊರು; ಯತಿ: ಋಷಿ; ವೇಷ: ರೂಪ; ಬಂದು: ಆಗಮಿಸು; ಹೊನ್ನು: ಚಿನ್ನ; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಚೀಲ: ಸಂಚಿ; ಕಕ್ಷ: ಕಂಕಳು; ಇದಿರು: ಎದುರು; ಆನತ: ನಮಸ್ಕರಿಸಿದವನು; ಕಂಡು: ನೋದು; ಉದಿತ: ಹುಟ್ಟುವ; ತೇಜ: ಕಾಂತಿ; ಪುಂಜ: ಸಮೂಹ, ಗುಂಪು; ಸೊಂಪು: ಸೊಗಸು, ಚೆಲುವು; ಒದಗು: ಲಭ್ಯ, ದೊರೆತುದು; ಕಾಣಿಸು: ಗೋಚರಿಸು; ಬೆಸ: ಕೆಲಸ, ಕಾರ್ಯ, ಅಪ್ಪಣೆ;

ಪದವಿಂಗಡಣೆ:
ಹದುಳವಿಟ್ಟನು+ ಭೀಮನನು +ನಿ
ರ್ಮದನು +ಮತ್ಸ್ಯನ+ಪುರಿಗೆ +ಯತಿ+ವೇ
ಷದಲಿ +ಬಂದನು +ಹೊನ್ನ+ಸಾರಿಯ +ಚೀಲ +ಕಕ್ಷದಲಿ
ಇದಿರೊಳ್+ಆನತರ್+ಆಯ್ತು +ಕಂಡವರ್
ಉದಿತ +ತೇಜಃ+ಪುಂಜದಲಿ +ಸೊಂ
ಪೊದವಿ +ಬರಲು +ವಿರಾಟ +ಕಾಣಿಸಿಕೊಂಡು +ಬೆಸಗೊಂಡ

ಅಚ್ಚರಿ:
(೧) ಧರ್ಮಜನನ್ನು ಕರೆದ ಪರಿ – ನಿರ್ಮದನು, ಉದಿತ ತೇಜಃಪುಂಜ

ಪದ್ಯ ೫೯: ಭೀಮನು ಹೇಗೆ ಹಿಂದಿರುಗಿದನು?

ತಿರಿದು ತಾವರೆವನವ ಕಕ್ಷದೊ
ಳಿರುಕಿ ಗದೆಯನು ಕೊಂಡು ಸರಸಿಯ
ಹೊರವಳಯದಲಿ ನಿಮ್ದು ಕಾಹಿನ ಯಕ್ಷರಾಕ್ಷಸರ
ಒರಲಿ ಕರೆದನು ನಿಮ್ಮ ಕೊಳನಿದೆ
ಬರಿದೆ ದೂರದಿರೆಮ್ಮನೆನುತಾ
ಸರಿನ ಮಾತಿನ ನಲವಿನಲಿ ಮರಳಿದನು ಕಲಿಭೀಮ (ಅರಣ್ಯ ಪರ್ವ, ೧೧ ಸಂಧಿ, ೫೯ ಪದ್ಯ)

ತಾತ್ಪರ್ಯ:
ತಾವರೆಯ ವನದಲ್ಲಿ ತನಗಿಷ್ಟ ಬಂದಷ್ಟನ್ನು ತೆಗೆದುಕೊಂಡು ಕಂಕುಳಿನಲ್ಲಿಟ್ಟುಕೊಂಡು, ಗದೆಯನ್ನು ತೆಗೆದುಕೊಂಡು ಸರೋವರದ ಹೊರಕ್ಕೆ ಬಂದು, ಕಾವಲಿದ್ದ ಯಕ್ಷರಾಕ್ಷಸರಿಗೆ ಭೀಮನು, ಇದೋ ನಿಮ್ಮ ಸರೋವರವು ಹಾಗೇ ಇದೆ, ನಮ್ಮನ್ನು ವೃಥಾ ದೂರಬೇಡಿ ಎಂದು ಹೇಳಿ ಹಿತದ ಮಾತನ್ನು ನುಡಿದು ಸಂತೋಷದಿಂದ ಹಿಂದಿರುಗಿ ಹೊರಟನು.

ಅರ್ಥ:
ತಿರಿ: ಸುತ್ತಾಡು, ತಿರುಗಾಡು; ತಾವರೆ: ಕಮಲ; ವನ: ಕಾಡು; ಕಕ್ಷ: ಕಂಕಳು; ಇರುಕು: ಅದುಮಿ ಭದ್ರವಾಗಿ ಹಿಸುಕಿ ಹಿಡಿ; ಗದೆ: ಮುದ್ಗರ; ಸರಸಿ: ಸರೋವರ; ಹೊರವಳಯ: ಆಚೆ, ಹೊರಭಾಗ; ಕಾಹು: ಸಂರಕ್ಷಣೆ; ಒರಲು: ಅರಚು, ಕೂಗಿಕೊಳ್ಳು; ಕರೆ: ಬರೆಮಾಡು; ಕೊಳ: ಸರೋವರ; ದೂರ: ಆಚೆ; ಸರಿ: ಮಳೆ; ಮಾತು: ವಾಣಿ; ನಲವು: ಸಂತೋಷ; ಮರಳು: ಹಿಂದಿರುಗು; ಕಲಿ: ಶೂರ;

ಪದವಿಂಗಡಣೆ:
ತಿರಿದು +ತಾವರೆ+ವನವ +ಕಕ್ಷದೊಳ್
ಇರುಕಿ +ಗದೆಯನು +ಕೊಂಡು +ಸರಸಿಯ
ಹೊರವಳಯದಲಿ+ ನಿಂದು+ ಕಾಹಿನ +ಯಕ್ಷ+ರಾಕ್ಷಸರ
ಒರಲಿ+ ಕರೆದನು+ ನಿಮ್ಮ +ಕೊಳನಿದೆ
ಬರಿದೆ +ದೂರದಿರ್+ಎಮ್ಮನ್+ ಎನುತಾ
ಸರಿನ+ ಮಾತಿನ +ನಲವಿನಲಿ +ಮರಳಿದನು +ಕಲಿ+ಭೀಮ

ಅಚ್ಚರಿ:
(೧) ಭೀಮನು ಹಿಂದಿರುಗಿದ ಪರಿ – ಸರಿನ ಮಾತಿನ ನಲವಿನಲಿ ಮರಳಿದನು ಕಲಿಭೀಮ

ಪದ್ಯ ೧೫: ಭೀಮನು ನೇರಳೆ ಹಣ್ಣನು ಹೇಗೆ ಕಿತ್ತನು?

ಇದು ವಿಚಿತ್ರದ ಫಲವು ತಾನೊಂ
ದಿದೆ ಮತಂಗಜ ಗಾತ್ರದಲಿ ನಾ
ನಿದನು ಕೊಂಡೊಯ್ವೆನು ಮಹೀಪಾಲನ ನಿರೀಕ್ಷಣೆಗೆ
ಗದೆಯ ಕಕ್ಷದೊಳೌಕಿ ಮಾರುತಿ
ಮುದದಿ ಕೃಷ್ಣನ ನೆನೆಯುತಾನಂ
ದದಲಿ ವೃಕ್ಷವನಡರಿ ಕೊಯ್ದಿಳುಹಿದನು ತವಕದಲಿ (ಅರಣ್ಯ ಪರ್ವ, ೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ಮರಗಳ ಗುಂಪಿನಲ್ಲಿದ್ದ ಒಂದು ನೇರಳೆ ಮರವನ್ನು ನೋಡಿ, ಇದು ಬಹಳ ವಿಚಿತ್ರವಾಗಿದೆಯೆಲ್ಲಾ, ಮರಿಯಾನೆಯ ಗಾತ್ರದಲ್ಲಿ ಒಂದು ವಿಚಿತ್ರವಾದ ಹಣ್ಣಿದೆ, ಇದನ್ನು ತೆಗೆದುಕೊಂಡು ಧರ್ಮಜನಿಗೆ ತೋರಿಸಬೇಕೆಂದುಕೊಂಡು, ಭೀಮನು ತನ್ನ ಗದೆಯನ್ನು ಕಂಕುಳಲ್ಲಿ ನೂಕಿ, ಕೃಷ್ಣನನ್ನು ನೆನೆಯುತ್ತಾ ಮರವನ್ನು ಹತ್ತಿ ಆ ಹಣ್ಣನ್ನು ಕಿತ್ತುಕೊಂಡು ಕೆಳಕ್ಕಿಳಿದನು.

ಅರ್ಥ:
ವಿಚಿತ್ರ: ಆಶ್ಚರ್ಯ, ಬೆರಗು; ಫಲ: ಹಣ್ಣು; ಮತಂಗಜ: ಆನೆಯ ಮರಿ; ಗಾತ್ರ: ದಪ್ಪ; ಒಯ್ಯು: ತೆಗೆದುಕೊಂಡು ಹೋಗು; ಮಹೀಪಾಲ: ರಾಜ; ಮಹೀ: ಭೂಮಿ; ನಿರೀಕ್ಷೆ: ನೋಡುವುದು; ಗದೆ: ಮುದ್ಗರ; ಕಕ್ಷ: ಕಂಕಳು; ಔಕು: ನೂಕು; ಮಾರುತಿ: ಭೀಮ; ಮುದ: ಸಂತಸ; ನೆನೆ: ಜ್ಞಾಪಿಸಿಕೊ; ಆನಂದ: ಸಂತಸ; ವೃಕ: ಮರ; ಅಡರು: ಹತ್ತು; ಕೊಯ್ದು: ಸೀಳು; ತವಕ: ಬಯಕೆ, ಆತುರ;

ಪದವಿಂಗಡಣೆ:
ಇದು+ ವಿಚಿತ್ರದ +ಫಲವು +ತಾನೊಂ
ದಿದೆ +ಮತಂಗಜ+ ಗಾತ್ರದಲಿ +ನಾನ್
ಇದನು +ಕೊಂಡೊಯ್ವೆನು +ಮಹೀಪಾಲನ +ನಿರೀಕ್ಷಣೆಗೆ
ಗದೆಯ +ಕಕ್ಷದೊಳ್+ಔಕಿ+ ಮಾರುತಿ
ಮುದದಿ+ ಕೃಷ್ಣನ +ನೆನೆಯುತ್+ಆನಂ
ದದಲಿ +ವೃಕ್ಷವನ್+ಅಡರಿ +ಕೊಯ್ದ್+ಇಳುಹಿದನು +ತವಕದಲಿ

ಅಚ್ಚರಿ:
(೧) ಹಣ್ಣನ್ನು ವಿವರಿಸುವ ಪರಿ – ಫಲವು ತಾನೊಂದಿದೆ ಮತಂಗಜ ಗಾತ್ರದಲಿ
(೨) ಮುದ, ಆನಂದ – ಸಮನಾರ್ಥಕ ಪದ