ಪದ್ಯ ೯೨: ಯಾವ ಆಯುಧದಲ್ಲಿ ಯುದ್ಧ ಮಾಡಲು ಭೀಮನು ಜರಾಸಂಧನಿಗೆ ಹೇಳಿದನು?

ರಣದೊಳಾವುದು ಕೈದು ಹಿರಿಯು
ಬ್ಬಣವೊ ಪರಿಘವೊ ಸುರಗಿಯೋ ಡೊಂ
ಕಣಿಯೊ ಗದೆಯೋ ಭಿಂಡಿವಾಳವೊ ಪರಶುತೋಮರವೊ
ಕಣೆಧನುವೊ ಕಕ್ಕಡೆಯೊ ಮುಷ್ಟಿಯೊ
ಹಣಿದಕಾವುದು ಸದರವದರಲಿ
ಕೆಣಕಿ ನೋಡಾ ತನ್ನನೆಂದನು ಭೀಮ ಮಾಗಧನ (ಸಭಾ ಪರ್ವ, ೨ ಸಂಧಿ, ೯೨ ಪದ್ಯ)

ತಾತ್ಪರ್ಯ:
ಯಾವುದರಿಂದ ಯುದ್ಧಮಾಡುವುದು ಎನ್ನುವ ಪ್ರಶ್ನೆಗೆ, ಭೀಮನು ಜರಾಸಂಧನಿಗೆ, ಯುದ್ಧಕ್ಕೆ ನಿನಗಾವ ಆಯುಧವಿದ್ದರೆ ಅನುಕೂಲ? ಲಾಳವಂಡಿಗೆ, ಪರಿಘ, ಕತ್ತಿ, ಡೊಂಕಣಿ, ಗದೆ, ಭೀಂಡಿವಾಳ, ಪರಶು, ತೋಮರ, ಬಿಲ್ಲುಬಾಣ, ಕಕ್ಕಡೆ, ಅಥವ ಮಲ್ಲಯುದ್ಧವೋ, ಈ ಎಲ್ಲಾ ಆಯುಧಗಳಲ್ಲಿ ನಿನಗೆ ಸುಲಭವೆನಿಸುವ ಯಾವುದಾದರೊಂದು ಆಯುಧವನ್ನು ಆರಿಸಿಕೊ ಎಂದು ಭೀಮನು ಜರಾಸಂಧನನ್ನು ಕೆಣಕಿದನು.

ಅರ್ಥ:
ರಣ: ಯುದ್ಧ; ಕೈದು: ಆಯುಧ, ಶಸ್ತ್ರ; ಉಬ್ಬಣ: ಲಾಳವಿಂಡಿಗೆ; ಪರಿಘ:ಅಗುಳು, ಕಬ್ಬಿಣದ ಆಯುಧ; ಸುರಗಿ: ಸಣ್ಣ ಕತ್ತಿ, ಚೂರಿ; ಗದೆ: ಮುದ್ಗರ; ಪರಶು:ಕೊಡಲಿ, ಕುಠಾರ; ತೋಮರ:ಈಟಿಯಂತಹ ಒಂದು ಬಗೆಯ ಆಯುಧ; ಕಣೆ: ಬಾಣ; ಧನು: ಬಿಲ್ಲು; ಕಕ್ಕಡೆ: ಗರಗಸ; ಮುಷ್ಟಿ: ಮಲ್ಲ; ಹಣಿ:ಬಾಗು, ಮಣಿ; ಸದರ: ಸಲಿಗೆ, ಸುಲಭ; ಕೆಣಕು:ಪ್ರಚೋದಿಸು;

ಪದವಿಂಗಡಣೆ:
ರಣದೊಳ್+ಆವುದು +ಕೈದು +ಹಿರಿ+
ಉಬ್ಬಣವೊ +ಪರಿಘವೊ +ಸುರಗಿಯೋ +ಡೊಂ
ಕಣಿಯೊ +ಗದೆಯೋ +ಭಿಂಡಿವಾಳವೊ +ಪರಶು+ತೋಮರವೊ
ಕಣೆಧನುವೊ +ಕಕ್ಕಡೆಯೊ +ಮುಷ್ಟಿಯೊ
ಹಣಿದಕ್+ಆವುದು +ಸದರವ್+ಅದರಲಿ
ಕೆಣಕಿ+ ನೋಡಾ +ತನ್ನನೆಂದನು+ ಭೀಮ +ಮಾಗಧನ

ಅಚ್ಚರಿ:
(೧) ೧೧ ಬಗೆಯ ಆಯುಧಗಳ ಹೆಸರನ್ನು ಹೊಂದಿರುವ ಪದ್ಯ
(೨) ಕಣಿ, ಕಣೆ, ಕೆಣಕಿ – ಪದಗಳ ಬಳಕೆ

ಪದ್ಯ ೪೫: ಯಾವ ಯಾವ ಆಯುಧಗಳಲ್ಲಿ ಮಕ್ಕಳು ಪರಿಣತಿಹೊಂದಿದರು?

ಸುರಗಿ ಸಬಳ ಕಠಾರಿಯುಬ್ಬಣ
ಹರಿಗೆ ಹಿರಿಯುಬ್ಬಣವಡಾಯುಧ
ಪರಿಘ ಚಕ್ರ ಮುಸುಂಡಿ ತೋಮರ ಭಿಂಡಿವಾಳಚಯ
ಪರಶು ಕಕ್ಕಡೆ ಮುಸಲ ಹಲ ಮು
ಡಗರ ಧನುರ್ದಂಡಾದಿ ಶಾಸ್ತ್ರೋ
ತ್ಕರದಳನಿಬರು ಕುಶಳರಾದರು ಮುನಿಯ ಗರುಡಿಯಲಿ (ಆದಿ ಪರ್ವ, ೬ ಸಂಧಿ, ೪೫ ಪದ್ಯ)

ತಾತ್ಪರ್ಯ:
ಕಿರುಗತ್ತಿ, ಈಟಿ, ಕಠಾರಿ, ಕಬ್ಬಿಣದ ಕೋಲು, ಗುರಾಣಿ, ದೊಡ್ಡ ಲಾಳವಂಡಿಗೆ,ಅಡಾಯುಧ, ಪರಿಘ, ಚಕ್ರ, ಮುಸುಂಡಿ, ತೋಮರ, ಭಿಂಡಿವಾಳ, ಗಂಡುಗೊಡಲಿ, ಕಕ್ಕಡೆ(ತುದಿಯಲ್ಲಿ ಉರಿಯುವ ಪಂಜಿನಂತಿರುವ ಆಯುಧ), ಒನಕೆ, ನೇಗಿಲು, ಮುದ್ಗರ, ಧನುಸ್ಸು ಮೊದಲಾದ ಶಸ್ತ್ರಾಸ್ತ್ರಗಳ ಪ್ರಯೋಗಗಳಲ್ಲಿ ಕೌರವ ಪಾಂಡವರು ದ್ರೋಣನ ಗರುಡಿಯಲ್ಲಿ ಪರಿಣತಿ ಹೊಂದಿದರು.

ಅರ್ಥ:
ಸುರಗಿ: ಸಣ್ಣ ಕತ್ತಿ; ಸಬಳ: ಈಟಿ, ಭರ್ಜಿ; ಕಠಾರಿ: ಕಿತುಗಟ್ಟಿ, ಬಾಕು , ಚೂರಿ; ಕಬ್ಬಿಣದ ಕೋಲು; ಹರಿಗೆ: ಪರಿಗೆ; ಹಿರಿಯುಬ್ಬಣ: ದೊಡ್ಡ ಲಾಳವಂಡಿಗೆ. ಪರಿಘ: ಕಬ್ಬಿಣದ ಆಯುಧ; ಚಕ್ರ: ವಿಷ್ಣುವಿನ ಆಯುಧ; ಮುಸುಂಡಿ: ಒಂದು ಬಗೆಯ ಆಯುಧ; ತೋಮರ: ಈಟಿಯಂತಹ ಒಂದು ಬಗೆಯ ಆಯುಧ; ಭಿಂಡಿ: ಕೈಯಿಂದ ಎಸೆಯುವ ಸಣ್ಣ ಭಲ್ಲೆಯಂತಹ ಆಯುಧ; ಚಯ: ಸಮೂಹ, ಗುಂಪು, ಕೋಟೆಯ ಸುತ್ತುಗೋಡೆ;
ಪರಶು: ಕೊಡಲಿ; ಮುಸಲ: ಒನಕೆಯ ಆಕಾರದ ಒಂದು ಬಗೆಯ ಆಯುಧ; ಹಲ: ನೇಗಿಲು, ರೆಂಟೆ; ಮುದ್ಗರ: ಸುತ್ತಿಗೆ; ಧನು: ಬಿಲ್ಲು; ದಂಡ: ಕೋಲು, ದಂಡೆ; ಕುಶಲ: ಪರಿಣತಿ; ಗರುಡಿ: ವ್ಯಾಮ ಶಾಲೆ; ಶಸ್ತ್ರ ಕಲಿಯುವ ಶಾಲೆ; ಮುನಿ: ಋಷಿ

ಅಚ್ಚರಿ:
(೧) ೧೮ ಆಯುಧಗಳ ಪರಿಚಯ ಒಂದು ಪದ್ಯದಲ್ಲಿ ಮಾಡಿರುವುದು