ಪದ್ಯ ೨೧: ಕೃಷ್ಣನು ಜರಾಸಂಧನಿಗೆ ಹೇಗೆ ಮೋಸ ಮಾಡಿದನೆಂದು ಶಿಶುಪಾಲ ಹೇಳಿದ?

ಕಪಟದಲಿ ಭೀಮಾರ್ಜುನರು ಸಹಿ
ತುಪಚಿತ ದ್ವಿಜವೇಷದಲಿ ನಿ
ಷ್ಕಪಟ ಮಗಧನ ಮನೆಯನದ್ವಾರದಲಿ ಹೊಕ್ಕನಲಾ
ಕೃಪಣರಿವದಿರು ವಿಪ್ರವೇಷದ
ಲಪಸದರು ಕಾದಿದರು ಭೀಷ್ಮಗೆ
ಜಪವಲಾ ಕಂಸಾರಿ ಮಾಡಿದ ಕಷ್ಟ ಕೃತಿಯೆಂದ (ಸಭಾ ಪರ್ವ, ೧೧ ಸಂಧಿ, ೨೧ ಪದ್ಯ)

ತಾತ್ಪರ್ಯ:
ಈ ಕೃಷ್ಣನು ಭೀಮಾರ್ಜುನರೊಡನೆ ಪೂಜ್ಯ ಬ್ರಾಹ್ಮಣ ವೇಷ ಹಾಕಿಕೊಂಡು ಜರಾಸಂಧನ ಮನೆಯನ್ನು ಹಿಂಬಾಗಿಲಿನಿಂದ ಹೊಕ್ಕನು. ಈ ಮೂವರು ದುಷ್ಟರು ಯುದ್ಧಮಾಡಿದರು. ಕೃಷ್ಣನು ಮಾಡಿದ ಈ ದುಷ್ಕೃತ್ಯಗಳೆಲ್ಲಾ ಭೀಷ್ಮನಿಗೆ ಮಹಾ ಸತ್ಕೃತಿಗಳು, ಅವೇ ಇವನಿಗೆ ಜಪಮಾಲೆ ಎಂದು ಭೀಷ್ಮರನ್ನು ಹಂಗಿಸಿದನು.

ಅರ್ಥ:
ಕಪಟ: ಮೋಸ; ಉಪಚಿತ: ಗೌರವಿಸಲ್ಪಟ್ಟ; ದ್ವಿಜ: ಬ್ರಾಹ್ಮಣ; ವೇಷ: ರೂಪ; ನಿಷ್ಕಪಟ: ಮೋಸವರಿಯದ; ಮಗಧ: ಜರಾಸಂಧ; ಮನೆ: ಆಲಯ; ದ್ವಾರ: ಕದ, ಬಾಗಿಲು; ಹೊಕ್ಕು: ಸೇರಿ; ಕೃಪಣ: ದೀನ, ಜಿಪುಣ; ಅಪಸದ: ನೀಚ, ಕೀಳು; ಕಾದು: ಹೋರಾಡು; ಜಪ: ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು; ಕಂಸಾರಿ: ಕೃಷ್ಣ; ಕಷ್ಟ: ತೊಂದರೆ; ಕೃತಿ: ಕೆಲಸ, ಕಾರ್ಯ;

ಪದವಿಂಗಡಣೆ:
ಕಪಟದಲಿ +ಭೀಮಾರ್ಜುನರು +ಸಹಿತ್
ಉಪಚಿತ+ ದ್ವಿಜವೇಷದಲಿ +ನಿ
ಷ್ಕಪಟ +ಮಗಧನ+ ಮನೆಯನ್+ಅದ್ವಾರದಲಿ+ ಹೊಕ್ಕನಲಾ
ಕೃಪಣರ್+ಇವದಿರು +ವಿಪ್ರ+ವೇಷದಲ್
ಅಪಸದರು +ಕಾದಿದರು+ ಭೀಷ್ಮಗೆ
ಜಪವಲಾ +ಕಂಸಾರಿ +ಮಾಡಿದ +ಕಷ್ಟ +ಕೃತಿಯೆಂದ

ಅಚ್ಚರಿ:
(೧) ಬಯ್ಯುವ ಪರಿ – ಕೃಪಣ, ಅಪಸದ
(೨) ಹಿಂಬಾಗಿಲೆಂದು ಹೇಳಲು – ಅದ್ವಾರ ಪದದ ಬಳಕೆ
(೩) ಜರಾಸಂಧನ ಪರವಾಗಿ ನಿಲ್ಲುವ ಪರಿ – ನಿಷ್ಕಪಟ ಮಗಧ
(೪) ಜರಾಸಂಧನ ವಧೆಯ ಬಗ್ಗೆ ಹೇಳುವ ಪರಿ – ಕಷ್ಟ ಕೃತಿ
(೫) ವಿಪ್ರ, ದ್ವಿಜ – ಸಮನಾರ್ಥಕ ಪದ

ಪದ್ಯ ೧೨೭: ಕೃಷ್ಣ ಭೀಮಾರ್ಜುನರಿಗೆ ಜನರು ಹೇಗೆ ಕೃತಜ್ಞತೆಯನ್ನು ತಿಳಿಸಿದರು?

ಪೌರಜನ ಕಾಣಿಕೆಗಳಲಿ ಕಂ
ಸಾರಿ ಭೀಮಾರ್ಜುನರ ಕಂಡುದು
ಧಾರುಣೀ ಪಾಲಕರು ಬಂದರು ಬೆನ್ನಲಿವರುಗಳ
ಘೋರವಡಗಿದುದೆಮ್ಮ ಕಾರಾ
ಗಾರ ಬಂಧವಿಮುಕ್ತವಾಯ್ತುಪ
ಕಾರವೆಮ್ಮಿಂದಾವುದೆಂದರು ನೃಪರು ಕೈಮುಗಿದು (ಸಭಾ ಪರ್ವ, ೨ ಸಂಧಿ, ೧೨೭ ಪದ್ಯ)

ತಾತ್ಪರ್ಯ:
ಕೃಷ್ಣನು ಅಭಯವನ್ನು ನೀಡಿ, ಎಲ್ಲಾ ರಾಜರನ್ನು ಬಂಧಮುಕ್ತಮಾಡಿದ ಬಳಿಕ, ಗಿರಿವ್ರಜದ ಪುರಜನರು ಕಾಣಿಕೆಗಳನ್ನು ತೆಗೆದುಕೊಂಡು ಬಂದು ಶ್ರೀಕೃಷ್ಣ, ಭೀಮಾರ್ಜುನರನ್ನು ಕಂಡರು. ಸೆರೆಮನೆಯಿಂದ ಬಂದ ರಾಜರು, “ನಮಗೆ ಒದಗಿದ್ದ ಘೋರವು ಉಪಶಮನವಾಯಿತು, ಬಂಧನದಿಂದ ಬಿಡುಗಡೆಯಾಯಿತು, ನಾವು ನಿಮಗೆ ಹೇಗೆ ಕೃತಜ್ಞತೆಯನ್ನು ತೋರಿಸೋಣ” ಎಂದು ಕೇಳಿದರು.

ಅರ್ಥ:
ಪೌರಜನ: ಊರಿನ ಜನ; ಕಾಣಿಕೆ: ಉಡುಗೊರೆ; ಅರಿ: ವೈರಿ; ಕಂಡು: ನೋಡಿ; ಧಾರುಣಿ: ಭೂಮಿ; ಪಾಲಕ: ಪೋಷಿಸು, ರಕ್ಷಣೆ; ಬಂದರು: ಆಗಮಿಸು; ಘೋರ: ಭಯಂಕರ; ಅಡಗು: ಮುಚ್ಚಿಕೊಳ್ಳು, ಅವಿತುಕೊಳ್ಳು; ಕಾರಾಗಾರ: ಸೆರೆಮನೆ; ಬಂಧ: ವಶ, ಕಟ್ಟು; ಮುಕ್ತ: ಸ್ವತಂತ್ರ; ಉಪಕಾರ: ಸಹಾಯ; ನೃಪ: ರಾಜ; ಕೈ: ಕರ;

ಪದವಿಂಗಡಣೆ:
ಪೌರಜನ+ ಕಾಣಿಕೆಗಳಲಿ +ಕಂಸ
ಅರಿ+ ಭೀಮಾರ್ಜುನರ+ ಕಂಡುದು
ಧಾರುಣೀ +ಪಾಲಕರು +ಬಂದರು +ಬೆನ್ನಲ್+ಇವರುಗಳ
ಘೋರವ್+ಅಡಗಿದುದ್+ಎಮ್ಮ +ಕಾರಾ
ಗಾರ +ಬಂಧವಿಮುಕ್ತವಾಯ್ತ್+ಉಪ
ಕಾರವ್+ಎಮ್ಮಿಂದಾವುದ್+ಎಂದರು +ನೃಪರು +ಕೈಮುಗಿದು

ಅಚ್ಚರಿ:
(೧) ನೃಪ, ಧಾರುಣೀಪಾಲಕ – ಸಮನಾರ್ಥಕ ಪದ
(೨) ಕೃಷ್ಣನನ್ನು ಕಂಸಾರಿ ಎಂದು ಸಂಬೋಧಿಸಿರುವುದು