ಪದ್ಯ ೯: ಸಂಜಯನು ಯಾರ ನಡಿಗೆಯನ್ನು ನೋಡಿದನು – ೨?

ಎಡಹುದಲೆಗಳ ದಾಂಟಿ ರಕುತದ
ಮಡುವಿನಲಿ ಗದೆಯೂರಿ ನೆಲೆಗಳ
ಪಡೆದು ಕಂಪಿಸಿ ಕುಣಿವ ಮುಂಡವ ಗದೆಯಲಪ್ಪಳಿಸಿ
ಅಡಿಗಡಿಗೆ ಹೇರಾನೆಗಳ ಹೇ
ರೊಡಲ ಹತ್ತಿಳಿದೇರಿ ಝೊಂಪಿಸಿ
ಮಿಡುಕಿ ನಿಲುವನು ಬಳಲಿದೂರ್ಧ್ವಶ್ವಾಸ ಲಹರಿಯಲಿ (ಗದಾ ಪರ್ವ, ೩ ಸಂಧಿ, ೯ ಪದ್ಯ)

ತಾತ್ಪರ್ಯ:
ಎಡವಿ ಬೀಳುವಂತಹ ಜಾಗಗಳನ್ನು ದಾಟಿ, ರಕ್ತದ ಮಡುವುಗಳಲ್ಲಿ ಗದೆಯನ್ನೂರಿ ಕಾಲಿಡಲು ಜಾಗವನ್ನು ಹುಡುಕಿಕೊಂಡು ನಡುಗುತ್ತಾ ಕುಣೀಯುವ ಮೂಂಡಗಳನ್ನು ಗದೆಯಿಂದ ಅಪ್ಪಳಿಸಿ ದೊಡ್ಡ ಆನೆಗಳ ದೇಹವನ್ನು ಹತ್ತಿಳಿದು ಹೊಯ್ದಾಡಿ ಬಳಲಿ ಮೇಲುಸಿರು ಹತ್ತಿ ನಡುಗುತ್ತಾ ನಿಲ್ಲುತ್ತಿದ್ದನು.

ಅರ್ಥ:
ಎಡಹು: ಬೀಳು; ತಲೆ: ಶಿರ; ದಾಂಟಿ: ದಾಟು; ರಕುತ: ನೆತ್ತರು; ಮಡು: ಹಳ್ಳ, ಕೊಳ್ಳ; ಗದೆ: ಮುದ್ಗರ; ಊರು: ನೆಲೆಸು; ನೆಲೆ: ಭೂಮಿ, ಜಾಗ; ಪಡೆದು: ದೊರಕಿಸು; ಕಂಪಿಸು: ನಡುಗು; ಕುಣಿ: ನರ್ತಿಸು; ಮುಂಡ: ಶಿರವಿಲ್ಲದ ದೇಹ; ಅಪ್ಪಳಿಸು: ತಟ್ಟು; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೆ; ಹೇರಾನೆ: ದೊಡ್ಡ ಗಜ; ಹೇರೊಡಲು: ದೊಡ್ಡದಾದ ಶರೀರ; ಹತ್ತಿಳಿ: ಮೇಲೇರಿ ಕೆಳಗಿಳಿ; ಝೊಂಪಿಸು: ಭಯಗೊಳ್ಳು; ಮಿಡುಕು: ನಡುಕ, ಕಂಪನ; ಬಳಲು: ಆಯಾಸಗೊಳ್ಳು; ಉರ್ಧ್ವಶ್ವಾಸ: ಏದುಸಿರು, ಮೇಲುಸಿರು; ಲಹರಿ: ರಭಸ, ಆವೇಗ;

ಪದವಿಂಗಡಣೆ:
ಎಡಹು+ತಲೆಗಳ +ದಾಂಟಿ +ರಕುತದ
ಮಡುವಿನಲಿ +ಗದೆಯೂರಿ +ನೆಲೆಗಳ
ಪಡೆದು +ಕಂಪಿಸಿ +ಕುಣಿವ +ಮುಂಡವ+ ಗದೆಯಲ್+ಅಪ್ಪಳಿಸಿ
ಅಡಿಗಡಿಗೆ +ಹೇರಾನೆಗಳ +ಹೇ
ರೊಡಲ +ಹತ್ತಿಳಿದ್+ಏರಿ+ ಝೊಂಪಿಸಿ
ಮಿಡುಕಿ +ನಿಲುವನು +ಬಳಲಿದ್+ಊರ್ಧ್ವಶ್ವಾಸ+ ಲಹರಿಯಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೇರಾನೆಗಳ ಹೇರೊಡಲ ಹತ್ತಿಳಿದೇರಿ
(೨) ನಿಲ್ಲಲು ಜಾಗವನ್ನು ವಿವರಿಸುವ ಪರಿ – ರಕುತದ ಮಡುವಿನಲಿ ಗದೆಯೂರಿ ನೆಲೆಗಳ ಪಡೆದು

ಪದ್ಯ ೩೬: ಶ್ರೀಕೃಷ್ಣನನ್ನು ಕಂಡು ಅರ್ಜುನನೇಕೆ ಬೆರಗಾದ?

ಶಿವಶಿವೆಂದುದು ನಿಖಿಳಜಗ ಕೌ
ರವರು ಕಂಪಿಸಿ ಥಟ್ಟುಗೆಡೆದರು
ಭುವನದಲಿ ಭಾರಿಸಿತು ಜಯಜಯ ಜಯಮಹಾಧ್ವಾನ
ತವತವಗೆ ತಳ್ಳಂಕದಲಿ ಪಾಂ
ಡವರು ನಡುಗಿತು ಪಾರ್ಥ ಬಲು ಗರ
ವವಚಿದಂತಿರೆ ಮೂಕನಾದನು ಬೆರಳ ಮೂಗಿನಲಿ (ಭೀಷ್ಮ ಪರ್ವ, ೬ ಸಂಧಿ, ೩೬ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ಉಗ್ರಕೋಪವನ್ನು ನೋಡಿ ಜಗತ್ತೆಲ್ಲವೂ ಭಯಗೊಂಡು ಶಿವಶಿವಾ ಎಂದಿತು. ಕೌರವರು ನಡನಡುಗಿ ಓಡಿದರು. ಶ್ರೀಕೃಷ್ಣನಿಗೆ ಜಯ ಜಯಕಾರ ಹಾಕುವ ಮಹಾಘೋಷವು ಎಲ್ಲೆಡೆ ತುಂಬಿತು. ಪಾಂಡವರು ಭಯದಿಂದ ನಡುಗಿದರು. ಗ್ರಹ ಬಡಿದವನಂತೆ ಅರ್ಜುನನು ಮೂಕನಾಗಿ ಮೂಗಿನ ಮೇಲೆ ಬೆರಳಿಟ್ಟುಕೊಂಡನು.

ಅರ್ಥ:
ನಿಖಿಳ: ಎಲ್ಲಾ; ಜಗ: ಪ್ರಪಂಚ; ಕಂಪಿಸು: ನಡುಗು; ಥಟ್ಟು: ಪಕ್ಕ, ಕಡೆ; ಕೆಡೆ: ಬೀಳು, ಕುಸಿ; ಭುವನ: ಜಗತ್ತು; ಅಧ್ವಾನ: ಅಲೆದಾಟ, ದಾರಿ; ಜಯ: ಉಘೇ; ಅಂಕ: ಯುದ್ಧ; ನಡುಗು: ನಡುಕ, ಕಂಪನ; ಬಲು: ಬಹಳ; ಅವಚು: ಅಪ್ಪಿಕೊಳ್ಳು; ಮೂಕ: ಮಾತಿಲ್ಲದ ಸ್ಥಿತಿ; ಬೆರಳು: ಅಂಗುಲಿ; ಮೂಗು: ನಾಸಿಕ;

ಪದವಿಂಗಡಣೆ:
ಶಿವಶಿವೆಂದುದು +ನಿಖಿಳ+ಜಗ+ ಕೌ
ರವರು +ಕಂಪಿಸಿ+ ಥಟ್ಟು+ಕೆಡೆದರು
ಭುವನದಲಿ+ ಭಾರಿಸಿತು+ ಜಯಜಯ +ಜಯ+ಮಹಾಧ್ವಾನ
ತವತವಗೆ +ತಳ್ಳಂಕದಲಿ +ಪಾಂ
ಡವರು +ನಡುಗಿತು +ಪಾರ್ಥ +ಬಲು +ಗರವ್
ಅವಚಿದಂತಿರೆ+ ಮೂಕನಾದನು+ ಬೆರಳ +ಮೂಗಿನಲಿ

ಅಚ್ಚರಿ:
(೧) ಪಾರ್ಥನ ಸ್ಥಿತಿಯನ್ನು ವಿವರಿಸುವ ಪರಿ – ಪಾರ್ಥ ಬಲು ಗರವವಚಿದಂತಿರೆ ಮೂಕನಾದನು ಬೆರಳ ಮೂಗಿನಲಿ

ಪದ್ಯ ೭: ಭೀಮನು ಕಾಡನ್ನು ಹೇಗೆ ಹೊಕ್ಕನು?

ಬಿಗಿದು ಬತ್ತಳಿಕೆಯನು ಹೊನ್ನಾ
ಯುಗದ ಖಡ್ಗ ಶರಾಸನವ ಕೊಂ
ಡಗಧರನ ನೆನೆದನಿಲಸುತ ಹೊರವಂಟನಾಶ್ರಮವ
ಬಿಗಿದು ಹೊಕ್ಕನರಣ್ಯವನು ಬೊ
ಬ್ಬೆಗಳ ಬಿರುದಿನ ಬಾಹು ಸತ್ವದ
ವಿಗಡ ಭೀಮನ ಕಾಲ್ದುಳಿಗೆ ಕಂಪಿಸಿತು ವನನಿವಹ (ಅರಣ್ಯ ಪರ್ವ, ೧೧ ಸಂಧಿ, ೭ ಪದ್ಯ)

ತಾತ್ಪರ್ಯ:
ಭೀಮನು ತನ್ನ ಬತ್ತಳಿಕೆಯನ್ನು ಕಟ್ಟಿಕೊಂಡು, ಚಿನ್ನದ ಹಿಡಿಕೆಯ ಖಡ್ಗವನ್ನು ತೆಗೆದು, ಬಿಲ್ಲನ್ನು ಹೆದೆಯೇರಿಸಿಕೊಂಡು ಶ್ರೀಕೃಷ್ಣನನ್ನು ಮನಸ್ಸಿನಲ್ಲಿ ನೆನೆದು ಆಶ್ರಮದಿಂದ ಹೊರಹೊಂಟನು. ಜೋರಾಗಿ ಗರ್ಜಿಸುತ್ತಾ, ಕಾಡನ್ನು ಹೊಕ್ಕನು. ಆತನ ಕಾಲ್ತುಳಿತಕ್ಕೆ ಕಾಡು ನಡುಗಿತು.

ಅರ್ಥ:
ಬಿಗಿ: ಕಟ್ಟು; ಬತ್ತಳಿಕೆ: ಬಾಣಗಳನ್ನಿಡುವ ಕೋಶ, ತೂಣೀರ; ಹೊನ್ನು: ಚಿನ್ನ; ಖಡ್ಗ: ಕತ್ತಿ; ಶರಾಸನ: ಬಿಲ್ಲು; ಕೊಂಡು: ತೆಗೆದು; ಅಗಧರ: ಕೃಷ್ಣ; ಅಗ: ಬೆಟ್ಟ; ಧರ: ಹಿಡಿದಿರುವ; ನೆನೆದು: ಜ್ಞಾಪಿಸಿಕೊಂಡು; ಅನಿಲಸುತ: ವಾಯುಪುತ್ರ; ಹೊರವಂಟ: ತೆರಳಿದ; ಆಶ್ರಮ: ಕುಟೀರ; ಹೊಕ್ಕು: ಸೇರು; ಅರಣ್ಯ: ಕಾಡು; ಬೊಬ್ಬೆ: ಜೋರಾಗಿ ಕೂಗು; ಬಿರುಸು: ಜೋರು, ರಭಸ; ಬಾಹು: ಭುಜ; ಸತ್ವ: ಶಕ್ತಿ; ವಿಗಡ: ಶೌರ್ಯ, ಪರಾಕ್ರಮ; ತುಳಿತ: ಮೆಟ್ಟು; ಕಾಲು: ಪಾದ; ಕಂಪಿಸು: ಅಲುಗಾಡು; ವನ: ಕಾಡು; ನಿವಹ: ಗುಂಪು;

ಪದವಿಂಗಡಣೆ:
ಬಿಗಿದು +ಬತ್ತಳಿಕೆಯನು +ಹೊನ್ನಾ
ಯುಗದ +ಖಡ್ಗ +ಶರಾಸನವ +ಕೊಂಡ್
ಅಗಧರನ +ನೆನೆದ್+ಅನಿಲಸುತ +ಹೊರವಂಟನ್+ಆಶ್ರಮವ
ಬಿಗಿದು +ಹೊಕ್ಕನ್+ಅರಣ್ಯವನು +ಬೊ
ಬ್ಬೆಗಳ +ಬಿರುದಿನ +ಬಾಹು +ಸತ್ವದ
ವಿಗಡ+ ಭೀಮನ +ಕಾಲ್ದುಳಿಗೆ +ಕಂಪಿಸಿತು +ವನ+ನಿವಹ

ಅಚ್ಚರಿ:
(೧) ಕೃಷ್ಣನನ್ನು ಅಗಧರ, ಭೀಮನನ್ನು ಅನಿಲಸುತ ಎಂದು ಹೇಳಿರುವುದು
(೨) ಭೀಮನ ಬಲವನ್ನು ತಿಳಿಸುವ ಪರಿ – ಬೊಬ್ಬೆಗಳ ಬಿರುದಿನ ಬಾಹು ಸತ್ವದ ವಿಗಡ ಭೀಮನ ಕಾಲ್ದುಳಿಗೆ ಕಂಪಿಸಿತು ವನನಿವಹ