ಪದ್ಯ ೭: ವಿರಾಟನ ಸಿಂಹಾಸನವನನ್ನು ಯಾರು ಏರಿದರು?

ಅವನಿಪನ ಸಿಂಹಾಸನವನೇ
ರುವ ಸಗರ್ವಿತರಾರು ನೋಡಿದ
ಡೆವೆಗಳುರಿವುದು ಹಾಯೆನುತ ಕಂಚುಕಿಗಳೈತಂದು
ಇವರನೀಕ್ಷಿಸಿ ಕ್ಷಾತ್ರತೇಜವ
ನವಗಡಿಸಲಂಜಿದರು ಹರಿ ತಂ
ದವದಿರೆಬ್ಬಿಸಿ ಬಿನ್ನವಿಸಿದರು ಮತ್ಸ್ಯಭೂಪತಿಗೆ (ವಿರಾಟ ಪರ್ವ, ೧೧ ಸಂಧಿ, ೭ ಪದ್ಯ)

ತಾತ್ಪರ್ಯ:
ದೊರೆಯ ಸಿಂಹಾಸನವನ್ನೇರುವ ಗರ್ವಿತರು ಯಾರು ಎಂದು ನೋಡಲು ಬಂದ ದ್ವಾರಪಾಲಕರು, ಅಂತಃಪುರದ ಅಧಿಕಾರಿಗಳು, ಪಾಂಡವರ ಕ್ಷಾತ್ರ ತೇಜಸ್ಸನ್ನು ನೋಡಿ ಬೆದರಿ, ಓಡಿ ಬಂದು ವಿರಾಟನೆದುರು ಈ ವಿಷಯವನ್ನು ತಿಳಿಸಿದರು.

ಅರ್ಥ:
ಅವನಿಪ: ರಾಜ; ಸಿಂಹಾಸನ: ರಾಜನ ಪೀಠ; ಏರು: ಮೇಲೆ ಹತ್ತು; ಗರ್ವ: ದರ್ಪ, ಅಹಂಕಾರ; ನೋಡು: ವೀಕ್ಷಿಸು; ಎವೆ: ಕಣ್ಣುರೆಪ್ಪೆ; ಉರಿ: ಜ್ವಾಲೆ; ಕಂಚುಕಿ: ಅಂತಃಪುರದ ಅಧಿಕಾರಿ; ಐತಂದು: ಬಂದು ಸೇರು; ಈಕ್ಷಿಸು: ನೋದು; ಕ್ಷಾತ್ರ: ಕ್ಷತ್ರಿಯ; ತೇಜ: ಹೊಳಪು; ಅವಗಡಿಸು: ಕಡೆಗಣಿಸು; ಅಂಜು: ಹೆದರು; ಹರಿ: ಚಲಿಸು; ಎಬ್ಬಿಸು: ಮೇಲೇಳಿಸು; ಬಿನ್ನವಿಸು: ಹೇಳು; ಭೂಪತಿ: ರಾಜ;

ಪದವಿಂಗಡಣೆ:
ಅವನಿಪನ +ಸಿಂಹಾಸನವನ್
ಏರುವ +ಸಗರ್ವಿತರ್+ಆರು +ನೋಡಿದಡ್
ಎವೆಗಳ್+ಉರಿವುದು +ಹಾಯೆನುತ +ಕಂಚುಕಿಗಳ್+ಐತಂದು
ಇವರನ್+ಈಕ್ಷಿಸಿ+ ಕ್ಷಾತ್ರ+ತೇಜವನ್
ಅವಗಡಿಸಲ್+ಅಂಜಿದರು+ ಹರಿ+ ತಂದ್
ಅವದಿರ್+ಎಬ್ಬಿಸಿ +ಬಿನ್ನವಿಸಿದರು +ಮತ್ಸ್ಯ+ಭೂಪತಿಗೆ

ಅಚ್ಚರಿ:
(೧) ಪಾಂಡವರ ತೇಜಸ್ಸನ್ನು ಹೇಳುವ ಪರಿ – ಇವರನೀಕ್ಷಿಸಿ ಕ್ಷಾತ್ರತೇಜವನವಗಡಿಸಲಂಜಿದರು

ಪದ್ಯ ೩: ಕೌರವನ ಸ್ತ್ರೀಯರ ಪರಿಸ್ಥಿತಿ ಹೇಗಿತ್ತು?

ಗಾಳಿಯರಿಯದು ರವಿಯ ಕಿರಣಕೆ
ಬಾಲೆಯರು ಗೋಚರವೆ ದಡ್ಡಿಯ
ಮೇಲುಬೀಯಗದಂಗರಕ್ಷೆಯ ಕಂಚುಕಿ ವ್ರಜದ
ಮೇಳವವದೇನಾಯ್ತೊ ಬೀದಿಯ
ಗಾಳುಮಂದಿಯ ನಡುವೆ ಕುರುಭೂ
ಪಾಲನರಸಿಯರಳುತ ಹರಿದರು ಬಿಟ್ಟಮಂಡೆಯಲಿ (ಅರಣ್ಯ ಪರ್ವ, ೨೧ ಸಂಧಿ, ೩ ಪದ್ಯ)

ತಾತ್ಪರ್ಯ:
ಕೌರವರ ರಾಣೀವಾಸವನ್ನು ಗಾಳಿಯೇ ಕಾಣದು, ಎಂದ ಮೇಲೆ ಸೂರ್ಯಕಿರಣಗಳ ಸೋಂಕೆಲ್ಲಿ? ಅವರು ಓಡಾಡುವ ಕಿರುಬಾಗಿಲ ಬೀಗ, ಅವರ ಅಂಗರಕ್ಷಕರು, ಕಂಚುಕಿಗಳು ಎಲ್ಲಿ? ಬೀದಿಯ ಜನಜಾಲದ ನಡುವೆ ಕೌರವರ ಅರಸಿಯರು ತಲೆಗೆದರಿಕೊಂಡು ಅಳುತ್ತಾ ಬಂದರು.

ಅರ್ಥ:
ಗಾಳಿ: ವಾಯು; ಅರಿ: ತಿಳಿ; ರವಿ: ಭಾನು; ಕಿರಣ: ಪ್ರಕಾಶ; ಬಾಲೆ: ಹೆಂಗಸು, ಸ್ತ್ರೀ; ಗೋಚರ: ತೋರು; ದಡ್ಡಿ: ಪಂಜರ; ಅಂಗರಕ್ಷೆ: ಕಾವಲುಗಾರ; ಕಂಚುಕಿ: ಅಂತಃಪುರದ ಅಧಿಕಾರಿ; ವ್ರಜ: ಗುಂಪು; ಮೇಳ: ಗುಂಪು; ಬೀದಿ: ಕೇರಿ; ಆಳು: ಸೇವಕ; ಮಂದಿ: ಜನ; ನಡುವೆ: ಮಧ್ಯೆ; ಭೂಪಾಲ: ರಾಜ; ಅರಸಿ: ರಾಣಿ; ಅಳು: ಆಕ್ರಂದನ; ಹರಿ: ಚಲಿಸು; ಬಿಟ್ಟ: ತೊರೆ; ಮಂಡೆ: ಶಿರ;

ಪದವಿಂಗಡಣೆ:
ಗಾಳಿ+ಅರಿಯದು +ರವಿಯ +ಕಿರಣಕೆ
ಬಾಲೆಯರು +ಗೋಚರವೆ+ ದಡ್ಡಿಯ
ಮೇಲುಬೀಯಗದ್+ಅಂಗರಕ್ಷೆಯ +ಕಂಚುಕಿ +ವ್ರಜದ
ಮೇಳವವದ್+ಏನಾಯ್ತೊ +ಬೀದಿಯಗ್
ಆಳುಮಂದಿಯ+ ನಡುವೆ +ಕುರು+ಭೂ
ಪಾಲನ್+ಅರಸಿಯರ್+ಅಳುತ +ಹರಿದರು +ಬಿಟ್ಟ+ಮಂಡೆಯಲಿ

ಅಚ್ಚರಿ:
(೧) ತಲೆಗೆದರಿಕೊಂಡು ಎಂದು ಹೇಳುವ ಪರಿ – ಬಿಟ್ಟಮಂಡೆಯಲಿ
(೨) ಅಂತಃಪುರದ ರಕ್ಷಣೆಯನ್ನು ವಿವರಿಸುವ ಪರಿ – ಗಾಳಿಯರಿಯದು ರವಿಯ ಕಿರಣಕೆ
ಬಾಲೆಯರು ಗೋಚರವೆ

ಪದ್ಯ ೨೯: ಸಂಜಯನನ್ನು ಆಸ್ಥಾನದ ಒಳಗೆ ಹೇಗೆ ಕರೆತಂದರು?

ಕಳಕಳ ಫಡ ಮಾಣು ಮಾಣೆಂ
ದುಲಿಯೆ ಕಂಚುಕಿ ನಿಕರವಂಗೈ
ತಳದ ಬಾಯಲಿ ರಾಯರಿರ್ದರು ಮಣಿದ ಮುಕುಟದಲಿ
ನಳಿನನಾಭನು ನಗುತ ಪರಮಂ
ಡಲದ ಶಿಷ್ಟನು ಬರಲಿಯೆನೆ ಬಾ
ಗಿಲಲಿ ಕೈದುವ ಕೊಂಡು ಹೊಗಿಸಿದರಂದು ಸಂಜಯನ (ಉದ್ಯೋಗ ಪರ್ವ, ೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ಆಸ್ಥಾನದಲ್ಲೆಲ್ಲರು ಮಾತನಾಡುತ್ತಿರಲು, ಸದ್ದು ನಿಲ್ಲಲಿ ಎಂಬ ಆದೇಶ ಕಂಚುಕಿಗಳಿಂದ ಹೊರಬೀಳಲು ಎಲ್ಲಾ ರಾಜರು ತಮ್ಮ ಅಂಗೈಗಳಿಂದ ಬಾಯನ್ನು ಮುಚ್ಚಿದರು, ತಲೆ ತಗ್ಗಿಸಿದರು. ಶ್ರೀಕೃಷ್ಣನು ಮಂದಸ್ಮಿತನಾಗಿ ಪರಮಂಡಲದ ರಾಯಭಾರಿಯನ್ನು ಕರೆತನ್ನಿ ಎಂದು ಅಪ್ಪಣೆಯಿಟ್ಟನು. ದ್ವಾರಪಾಲಕರು ಸಂಜಯನ ಆಯುಧವನ್ನು ತೆಗೆದುಕೊಂಡು ಒಳಕ್ಕೆ ಬಿಟ್ಟರು.

ಅರ್ಥ:
ಕಳಕಳಿ: ಉತ್ಸಾಹ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಮಾಣು:ನಿಲ್ಲಿಸು; ಉಲಿ:ಧ್ವನಿ; ಕಂಚುಕಿ: ಅಂತಃಪುರದ ಅಧಿಕಾರಿ, ದ್ವಾರಪಾಲಕ; ನಿಕರ: ಗುಂಪು; ಅಂಗೈ: ಕರತಳ; ತಳ: ಕೆಳಭಾಗ; ರಾಯ: ರಾಜ; ಮಣಿ:ಬಾಗು, ನಮಸ್ಕರಿಸು; ಮುಕುಟ: ಕಿರೀಟ; ನಳಿನನಾಭ: ಕೃಷ್ಣ; ನಗುತ: ಹರ್ಷ, ಮಂದಸ್ಮಿತ; ಪರ: ಬೇರೆ; ಮಂಡಲ: ರಾಜ್ಯ, ಸೀಮೆ; ಶಿಷ್ಟ: ಉತ್ತಮ ವ್ಯಕ್ತಿ; ಬರಲಿ: ಆಗಮಿಸಲಿ; ಬಾಗಿಲು: ಕದ; ಕೈದು: ಆಯುಧ; ಕೊಂಡು: ಪಡೆದು; ಹೊಗಿಸು: ಕಳುಹಿಸು;

ಪದವಿಂಗಡಣೆ:
ಕಳಕಳ +ಫಡ +ಮಾಣು +ಮಾಣೆಂದ್
ಉಲಿಯೆ +ಕಂಚುಕಿ +ನಿಕರವ್+ಅಂಗೈ
ತಳದ+ ಬಾಯಲಿ +ರಾಯರಿರ್ದರು +ಮಣಿದ+ ಮುಕುಟದಲಿ
ನಳಿನನಾಭನು+ ನಗುತ+ ಪರ+ಮಂ
ಡಲದ +ಶಿಷ್ಟನು+ ಬರಲಿಯೆನೆ+ ಬಾ
ಗಿಲಲಿ +ಕೈದುವ +ಕೊಂಡು +ಹೊಗಿಸಿದರಂದು +ಸಂಜಯನ

ಅಚ್ಚರಿ:
(೧) ಕಳಕಳ, ಮಾಣು ಮಾಣೆಂದು – ಜೋಡಿ ಪದಗಳು
(೨) ಮಣಿದ ಮಕುಟ, ನಳಿನನಾಭನು ನಗುತ – ಜೋಡಿ ಪದಗಳು
(೩) ಬಾಯಿ ಮುಚ್ಚಿದರು ಎಂದು ಹೇಳಲು – ಅಂಗೈತಳದ ಬಾಯಲಿ ರಾಯರಿರ್ದರು