ಪದ್ಯ ೧೩: ಭೀಷ್ಮನನ್ನು ಎದುರಿಸಲು ಯಾರು ಎದುರಾದರು?

ಸೋಲ ಮಿಗಲೊಳಸರಿವ ಬಿರುದರ
ಬೀಳಗೆಡಹಿಸಿ ಕಪಿಯ ಹಳವಿಗೆ
ಗೋಲನೆತ್ತಿಸಿ ಕೆಲಬಲದ ಮನ್ನೆಯರ ಕೈವೀಸಿ
ಆಲಿಯಲಿ ಕಿಡಿ ಸೂಸೆ ಮೀಸೆಯ
ಮೇಲುದಿರುಹುತಲೌಡುಗಚ್ಚಿ ಕ
ರಾಳರೋಷ ಮಹೋಗ್ರವೀರನು ಪಾರ್ಥನಿದಿರಾದ (ಭೀಷ್ಮ ಪರ್ವ, ೬ ಸಂಧಿ, ೧೩ ಪದ್ಯ)

ತಾತ್ಪರ್ಯ:
ಸೋಲನ್ನು ತಪ್ಪಿಸಿಕೊಳ್ಳಲು ಹಿಂದೆ ಸರಿಯುತ್ತಿದ್ದ ವೀರರನ್ನು ತನ್ನವರಿಮ್ದ ಹೊಡೆದು ಕೆಡವಿಸಿ, ಕಪಿಧ್ವಜವನ್ನು ರಥಕ್ಕೆ ಕಟ್ಟಿಸಿ ಸುತ್ತಮುತ್ತಲಿದ್ದ ಸಾಮಂತರನ್ನು ಕೈಬೀಸಿ ಬರಲು ಸನ್ನೆ ಮಾಡಿ ಕಣ್ಣಲ್ಲಿ ಕಿಡಿಗೆದರಲು, ಮೀಸೆಯನ್ನು ಮೇಲಕ್ಕೆ ತಿರುವಿ, ಹಲ್ಲನ್ನು ಕಚುತ್ತಾ, ಮಹಾರೋಷಭರಿತನೂ ಭಯಂಕರನೂ ಆದ ವೀರ ಪಾರ್ಥನು ಭೀಷ್ಮನನ್ನು ಎದುರಿಸಿ ನಿಂತನು.

ಅರ್ಥ:
ಸೋಲು: ಪರಾಭವ; ಮಿಗಲು: ಹೆಚ್ಚಾಗಲು; ಒಳಸರಿ: ಹಿಂದೆ ಹೋಗು; ಬಿರುದು: ಗೌರವ ಸೂಚಕ ಹೆಸರು; ಬೀಳು: ಕೆಡೆ, ಕುಸಿ; ಕಪಿ: ಹನುಮಂತ; ಹಳವಿಗೆ: ಬಾವುಟ; ಗೋಲು: ಪಕ್ಕ, ಪಾರ್ಶ್ವ; ಎತ್ತು: ಮೇಲೇರು; ಕೆಲ: ಪಕ್ಕ, ಮಗ್ಗುಲು; ಬಲ: ಸೈನ್ಯ; ಮನ್ನೆಯ: ಮೆಚ್ಚಿನ; ಕೈ: ಹಸ್ತ; ವೀಸು: ತೂಗುವಿಕೆ; ಆಲಿ: ಕಣ್ಣು; ಕಿಡಿ: ಬೆಂಕಿ; ಸೂಸು: ಹರಡು; ಮೇಲು: ಮೇಲಕ್ಕೆ; ತಿರುಹು: ತಿರುಗಿಸು; ಔಡು: ಹಲ್ಲಿನಿಂದ ಕಚ್ಚು; ಕರಾಳ: ಭಯಂಕರ; ರೋಷ: ಕೋಪ; ಮಹೋಗ್ರ: ಬಹಳ ಪ್ರಚಂಡ, ಕೋಪಿಷ್ಠ; ವೀರ: ಪರಾಕ್ರಮಿ; ಇದಿರು: ಎದುರು;

ಪದವಿಂಗಡಣೆ:
ಸೋಲ+ ಮಿಗಲ್+ಒಳಸರಿವ +ಬಿರುದರ
ಬೀಳ+ಕೆಡಹಿಸಿ +ಕಪಿಯ +ಹಳವಿಗೆ
ಗೋಲನೆತ್ತಿಸಿ+ ಕೆಲಬಲದ+ ಮನ್ನೆಯರ +ಕೈವೀಸಿ
ಆಲಿಯಲಿ +ಕಿಡಿ +ಸೂಸೆ +ಮೀಸೆಯ
ಮೇಲು+ತಿರುಹುತಲ್+ಔಡುಗಚ್ಚಿ+ ಕ
ರಾಳರೋಷ+ ಮಹೋಗ್ರ+ವೀರನು+ ಪಾರ್ಥನ್+ಇದಿರಾದ

ಅಚ್ಚರಿ:
(೧) ಅರ್ಜುನನ ಚಿತ್ರಣ – ಆಲಿಯಲಿ ಕಿಡಿ ಸೂಸೆ ಮೀಸೆಯ ಮೇಲುದಿರುಹುತಲೌಡುಗಚ್ಚಿ ಕ
ರಾಳರೋಷ ಮಹೋಗ್ರವೀರನು ಪಾರ್ಥನಿದಿರಾದ

ಪದ್ಯ ೨೦: ಧರ್ಮಜನ ನುಡಿಗೆ ಭೀಮನು ಹೇಗೆ ಪ್ರತಿಕ್ರಯಿಸಿದನು?

ಔಡುಗಚ್ಚಿದನಂಘ್ರಿಯಲಿ ನೆಲ
ಬೀಡ ಬಿಡಲೊದೆದನು ಕರಾಂಗುಲಿ
ಗೂಡಿ ಮುರಿದೌಕಿದನು ಖತಿಯಲಿ ನಿಜ ಗದಾಯುಧವ
ನೋಡಿದನು ಕುರುರಾಯನಲಿ ಹೊ
ಯ್ದಾಡಿ ಬರಬೇಕೆಂಬ ಭೀಮನ
ಮೋಡಿಯನು ನೃಪನರಿದು ಸಂತೈಸಿದನು ಸಾಮದಲಿ (ಅರಣ್ಯ ಪರ್ವ, ೧೯ ಸಂಧಿ, ೨೦ ಪದ್ಯ)

ತಾತ್ಪರ್ಯ:
ಭೀಮನು ಧರ್ಮಜನ ಮಾತನ್ನು ಕೇಳಿ ಕೋಪದಿಂದ ತನ್ನ ಹಲ್ಲನ್ನು ಕಡಿದು, ನೆಲವನ್ನೊದೆಯಲು, ಆ ನೆಲವು ತಗ್ಗುಬಿದ್ದಿತು. ಸಿಟ್ಟಿನಿಂದ ಗದಾಯುಧವನ್ನು ಹಿಡಿದು ಬೆರಳುಗಳನ್ನು ಒತ್ತಿದನು. ಕೌರವನೊಡನೆ ಯುದ್ಧಕ್ಕೆ ಹೋಗಿ ಹೊಯ್ದಾಡಿ ಬರಬೇಕೆಂಬ ಭೀಮನ ಬಗೆಯನ್ನು ಅರಿತ ಧರ್ಮಜನು ಅವನನ್ನು ಸಮಾಧಾನ ಪಡಿಸಿದನು.

ಅರ್ಥ:
ಔಡು: ಹಲ್ಲಿನಿಂದ ಕಚ್ಚು; ಕಚ್ಚು: ಹಲ್ಲಿನಿಂದ ಹಿಡಿ; ಅಂಘ್ರಿ: ಪಾದ; ನೆಲ: ಭೂಮಿ; ಬೀಡು: ವಸತಿ; ಒದೆ: ಕಾಲಲ್ಲಿ ನೂಕು; ಕರ: ಹಸ್ತ; ಅಂಗುಲಿ: ಬೆರಳು; ಕೂಡು: ಜೊತೆಯಾಗು; ಮುರಿ: ಸೀಳು; ಔಕು: ನೂಕು; ಖತಿ: ಕೋಪ; ನಿಜ: ದಿಟ, ತನ್ನ; ಗದೆ: ಮುದ್ಗರ; ಆಯುಧ: ಶಸ್ತ್ರ; ನೋಡು: ವೀಕ್ಷಿಸು; ರಾಯ: ರಾಜ; ಹೊಯ್ದಾಡು: ಹೋರಾಡು; ಬರಬೇಕು: ಆಗಮನ; ಮೋಡಿ: ಬಿಂಕ, ಬೆಡಗು; ನೃಪ: ರಾಜ; ಅರಿ: ತಿಳಿ; ಸಂತೈಸು: ಸಮಾಧಾನ ಪಡಿಸು; ಸಾಮ: ಶಾಂತಗೊಳಿಸುವಿಕೆ;

ಪದವಿಂಗಡಣೆ:
ಔಡುಗಚ್ಚಿದನ್ +ಅಂಘ್ರಿಯಲಿ +ನೆಲ
ಬೀಡ +ಬಿಡಲ್+ಒದೆದನು +ಕರಾಂಗುಲಿ
ಗೂಡಿ +ಮುರಿದ್+ಔಕಿದನು +ಖತಿಯಲಿ+ ನಿಜ +ಗದಾಯುಧವ
ನೋಡಿದನು+ ಕುರುರಾಯನಲಿ+ ಹೊ
ಯ್ದಾಡಿ +ಬರಬೇಕೆಂಬ +ಭೀಮನ
ಮೋಡಿಯನು +ನೃಪನರಿದು +ಸಂತೈಸಿದನು +ಸಾಮದಲಿ

ಅಚ್ಚರಿ:
(೧) ಭೀಮನ ಕೋಪದ ಚಿತ್ರಣ: ಔಡುಗಚ್ಚಿದನಂಘ್ರಿಯಲಿ ನೆಲಬೀಡ ಬಿಡಲೊದೆದನು ಕರಾಂಗುಲಿ
ಗೂಡಿ ಮುರಿದೌಕಿದನು ಖತಿಯಲಿ ನಿಜ ಗದಾಯುಧವ