ಪದ್ಯ ೧೧: ಸಂಜಯನು ಯಾರ ನಡಿಗೆಯನ್ನು ನೋಡಿದನು – ೪?

ಕಂದ ಪಖ್ಖಲೆಗಳಲಿ ತೀವಿದ
ಮಂದ ರಕುತದ ತೋದ ತಲೆಗಳ
ತಿಂದು ಬಿಸುಡುವ ನೆಣನ ಕಾರುವ ಬಸೆಯ ಬಾಡಿಸುವ
ಸಂದಣಿಸಿ ಹರಿದೇರ ಬಾಯ್ಗಳೊ
ಳೊಂದಿ ಬಾಯ್ಗಳನಿಡುವ ಪೂತನಿ
ವೃಂದವನು ಕಂಡೋಸರಿಸುವನದೊಂದು ದೆಸೆಗಾಗಿ (ಗದಾ ಪರ್ವ, ೩ ಸಂಧಿ, ೧೧ ಪದ್ಯ)

ತಾತ್ಪರ್ಯ:
ಗಟ್ಟಿರಕ್ತದಿಂದ ತೋಯಿದ್ದ ಪಾತ್ರೆಯಂತಿದ್ದ ತಲೆಗಳನ್ನು ತಿಂದು ಎಸೆಯುವ ಕೊಬ್ಬನ್ನು ತಿಂದು ಕಾರುವ, ಸತ್ತ ಆನೆಗಳನ್ನು ತಿಂದು ತೆಳ್ಳಗೆ ಮಾಡುವ, ಹೆಣಗಳ ಗಾಯದಲ್ಲಿ ಬಾಯಿಟ್ಟು ಹೀರುವ ಪೂತನಿಗಳನ್ನು ಕಂಡು ಅವನು ಪಕ್ಕಕ್ಕೆ ಸರಿದು ಹೋಗುತ್ತಿದ್ದನು.

ಅರ್ಥ:
ಪಖ್ಖಲೆ: ನೀರಿನ ಚೀಲ, ಕೊಪ್ಪರಿಗೆ; ತೀವು: ತುಂಬು, ಭರ್ತಿಮಾಡು; ಮಂದ: ನಿಧಾನ ಗತಿಯುಳ್ಳದು; ರಕುತ: ನೆತ್ತರು; ತೋದ: ನೆನೆ, ಒದ್ದೆಯಾಗು; ತಲೆ: ಶಿರ; ತಿಂದು: ತಿನ್ನು; ಬಿಸುಡು: ಹೊರಹಾಕು; ನೆಣ: ಕೊಬ್ಬು, ಮೇದಸ್ಸು; ಪೂತನಿ: ರಾಕ್ಷಸಿ; ವೃಂದ: ಗುಂಪು; ಕಂಡು: ನೋಡು; ಓಸರಿಸು: ಓರೆಮಾಡು, ಹಿಂಜರಿ; ದೆಸೆ: ದಿಕ್ಕು; ಬಸೆ: ಕೊಬ್ಬು, ನೆಣ; ಬಾಡಿಸು: ಕಳೆಗುಂದಿಸು; ಸಂದಣಿ: ಗುಂಪು;

ಪದವಿಂಗಡಣೆ:
ಕಂದ +ಪಖ್ಖಲೆಗಳಲಿ +ತೀವಿದ
ಮಂದ +ರಕುತದ+ ತೋದ +ತಲೆಗಳ
ತಿಂದು +ಬಿಸುಡುವ +ನೆಣನ +ಕಾರುವ +ಬಸೆಯ +ಬಾಡಿಸುವ
ಸಂದಣಿಸಿ +ಹರಿದೇರ+ ಬಾಯ್ಗಳೊಳ್
ಒಂದಿ +ಬಾಯ್ಗಳನಿಡುವ +ಪೂತನಿ
ವೃಂದವನು +ಕಂಡ್+ಓಸರಿಸುವನ್+ಅದೊಂದು +ದೆಸೆಗಾಗಿ

ಅಚ್ಚರಿ:
(೧) ತ ಕಾರದ ತ್ರಿವಳಿ ಪದ – ತೋದ ತಲೆಗಳ ತಿಂದು
(೨) ಸಂದಣಿಸು, ವೃಂದ – ಸಮಾನಾರ್ಥಕ ಪದ

ಪದ್ಯ ೧೦೫: ಕಾಲಾಳಿನ ಲಕ್ಷಣಗಳೇನು?

ಬೇಸರದೆ ಕಾಳೋರಗನನ
ಡ್ಡೈಸಿ ಕಟ್ಟಿರುವೆಗಳು ಖಂಡವ
ಸೂಸಿ ಕಡಿಕಡಿದೊಟ್ಟಿದಂದದಲಹಿತ ಬಲದೊಳಗೆ
ಓಸರಿಸದೊಳ ಹೊಕ್ಕು ಸಮರವಿ
ಳಾಸವನು ನೆರೆ ಮೆರೆದು ಕೇಶಾ
ಕೇಶಿಗೊದಗುವನವನೆ ಕಾಲಾಳರಸ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೧೦೫ ಪದ್ಯ)

ತಾತ್ಪರ್ಯ:
ಕೃಷ್ಣಸರ್ಪವನ್ನು ಕಟ್ಟಿರುವೆಗಳು ಮುತ್ತಿ ಅದರ ಮಾಂಸವನ್ನು ಹೊರತೆಗೆದು ಒಟ್ಟುವಂತೆ, ಹಿಂಜರಿಯದೆ ನಿರ್ಭಯವಾಗಿ ಶತ್ರು ಸೈನ್ಯದ ಒಳಹೊಕ್ಕು, ತನ್ನ ಯುದ್ಧ ಚಮತ್ಕಾರವನ್ನು ತೋರಿಸಿ, ಕೇಶಾಕೇಶಿ ಯುದ್ಧ ಮಾಡಬಲ್ಲವನೇ ಕಾಲಾಳು ಎಂದು ವಿದುರ ತಿಳಿಸಿದ.

ಅರ್ಥ:
ಬೇಸರ: ಬೇಜಾರು; ಕಾಳೋರಗ: ಕಾಳಸರ್ಪ; ಅಡ್ಡೈಸಿ: ಅಟ್ಟವಾಡಿಸಿ; ಕಟ್ಟಿ: ಬಂಧಿಸು; ಇರುವೆ: ಪಿಪೀಲ; ಖಂಡ:ತುಂಡು, ಚೂರು; ಸೂಸಿ:ಚಲ್ಲುವಿಕೆ, ಎರಚು; ಕಡಿ: ಚೂರುಮಾಡು; ಅಹಿತ: ಶತ್ರು; ಬಲ: ಸೈನ್ಯ; ಒಟ್ಟು: ರಾಶಿ, ಗುಂಪು; ಓಸರಿಸು:ಓರೆಮಾಡು, ಹಿಂಜರಿ; ಹೊಕ್ಕು: ಓತ, ನುಗ್ಗು; ಸಮರ: ಯುದ್ಧ; ವಿಳಾಸ: ಸ್ಥಳ; ನೆರೆ: ಗುಂಪು, ಹೆಚ್ಚು; ಮೆರೆ:ತೋರಿಸು, ಪ್ರದರ್ಶಿಸು; ಕೇಶ: ಕೂದಲು; ಕೇಶಾಕೇಶಿ: ಕೂದಲು ಹಿಡಿದು ಯುದ್ಧ; ಕಾಲಾಳು: ಸೈನಿಕ;

ಪದವಿಂಗಡಣೆ:
ಬೇಸರದೆ + ಕಾಳ+ಉರಗನನ್
ಅಡ್ಡೈಸಿ +ಕಟ್ಟಿ +ಇರುವೆಗಳು +ಖಂಡವ
ಸೂಸಿ +ಕಡಿಕಡಿದ್+ಒಟ್ಟಿದಂದದಲ್+ಅಹಿತ +ಬಲದೊಳಗೆ
ಓಸರಿಸದೊಳ +ಹೊಕ್ಕು +ಸಮರ+ವಿ
ಳಾಸವನು +ನೆರೆ +ಮೆರೆದು +ಕೇಶಾ
ಕೇಶಿಗ್+ಒದಗುವನವನೆ+ ಕಾಲಾಳ್+ಅರಸ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬೇಸರದೆ ಕಾಳೋರಗನನಡ್ಡೈಸಿ ಕಟ್ಟಿರುವೆಗಳು ಖಂಡವ
ಸೂಸಿ ಕಡಿಕಡಿದೊಟ್ಟಿದಂದ್
(೨) ೧-೩ ಸಾಲಿನ ೨ನೇ ಪದ ‘ಕ’ಕಾರದಿಂದ ಪ್ರಾರಂಭ – ಕಾಳೋರಗ, ಕಟ್ಟಿರುವೆ, ಕಡಿಕಡಿ
(೩) ಕಡಿಕಡಿದೊಟ್ಟು, ಕೇಶಾಕೇಶಿ – ಪದಗಳ ಬಳಕೆ