ಪದ್ಯ ೪೧: ದುರ್ಯೋಧನನು ಮುಂದೆ ಹೇಗೆ ತಡವರಿಸಿದನು?

ನೊಂದುದೇ ಹಣೆ ಮನದೊಳಗೆ ಕಡು
ನೊಂದೆನವದಿರ ನಗೆಗೆ ನಡೆದೆನು
ಮುಂದಣೋವರಿ ಬಾಗಿಲನು ಕಂಡೆನ್ನ ಮನದೊಳಗೆ
ಹಿಂದೆ ಹೇರಿದ ಭಂಗವೇ ಸಾ
ಕೆಂದು ಸುಪ್ರೌಢಿಯಲಿ ಬಾಗಿಲ
ನೊಂದು ಠಾವಿನೊಳರಸಿ ತಡವರಿಸಿದೆನು ಭಿತ್ತಿಗಳ (ಸಭಾ ಪರ್ವ, ೧೩ ಸಂಧಿ, ೪೧ ಪದ್ಯ)

ತಾತ್ಪರ್ಯ:
ಗೋಡೆಗೆ ಡಿಕ್ಕಿ ಹೊಡೆದುದರಿಂದ ನನ್ನ ಹಣೆಗೆ ಬುಗುಟು ಬಂದು ನೋವಾಯಿತು ಮಾತ್ರವಲ್ಲ ಮನಸ್ಸೂ ಬಹಳವಾಗಿ ನೊಂದಿತು. ಮುಂದೆ ಒಂದು ಬಾಗಿಲು ಕಾಣಿಸಿತು. ಹಿಂದಿನ ಅಪಮಾನವೇ ಸಾಕೆಂದು ಹುಷಾರಾಗಿ ಬಾಗಿಲನ್ನು ಕೈಯಿಂದ ತಡವರಿಸಿ ನೋಡಿದೆನು.

ಅರ್ಥ:
ನೊಂದು: ಬೇಸರ, ಬೇನೆ; ಹಣೆ: ಲಲಾಟ; ಮನ: ಮನಸ್ಸು; ಕಡು: ತುಂಬ; ನೊಂದೆ: ನೋವು ಪಟ್ಟೆ; ಅವದಿರ; ಅವರ; ನಗೆ: ಹಾಸ್ಯ; ನಡೆ: ಮುಂದೆ ಹೋಗು; ಬಾಗಿಲು: ಕದ; ಕಂಡು: ನೋಡಿ; ಓವರಿ: ಒಳಮನೆ, ಕೋಣೆ, ಪಕ್ಕ, ಪಾರ್ಶ್ವ; ಮನ: ಮನಸ್ಸು; ಹಿಂದೆ: ಪೂರ್ವ; ಹೇರು: ಹೊರೆ, ಭಾರ; ಭಂಗ: ಮೋಸ, ವಂಚನೆ; ಸಾಕು: ತಡೆ, ನಿಲ್ಲುಸು; ಪ್ರೌಢಿ: ಧೈರ್ಯ, ಪ್ರಬುದ್ಧನಾದವನು; ಠಾವು:ಎಡೆ, ಸ್ಥಳ, ತಾಣ; ಅರಸು: ಹುಡುಕು; ತಡವರಿಸು: ಅಡ್ಡಿ, ತಡೆ, ತಡಕಾಡು; ಭಿತ್ತಿ: ಒಡೆಯುವುದು, ಸೀಳುವುದು;

ಪದವಿಂಗಡಣೆ:
ನೊಂದುದೇ +ಹಣೆ +ಮನದೊಳಗೆ +ಕಡು
ನೊಂದೆನ್+ಅವದಿರ +ನಗೆಗೆ +ನಡೆದೆನು
ಮುಂದಣ್+ಓವರಿ +ಬಾಗಿಲನು +ಕಂಡ್+ಎನ್ನ +ಮನದೊಳಗೆ
ಹಿಂದೆ +ಹೇರಿದ +ಭಂಗವೇ +ಸಾ
ಕೆಂದು +ಸುಪ್ರೌಢಿಯಲಿ +ಬಾಗಿಲನ್
ಒಂದು+ ಠಾವಿನೊಳ್+ಅರಸಿ +ತಡವರಿಸಿದೆನು +ಭಿತ್ತಿಗಳ

ಅಚ್ಚರಿ:
(೧) ನೊಂದೆ, ಹಿಂದೆ -ಪ್ರಾಸ ಪದ
(೨) ದುರ್ಯೋಧನನ ದುಃಖಕ್ಕೆ ಕಾರಣ – ಮನದೊಳಗೆ ಕಡು ನೊಂದೆನವದಿರ ನಗೆಗೆ ನಡೆದೆನು