ಪದ್ಯ ೧೩: ಕುಂತಿ ಯಾರ ಬಳಿ ಬೆಳೆಯುತ್ತಿದ್ದಳು?

ಇತ್ತ ಕುಂತಿಭೋಜನೆಂಬ ನೃ
ಪೋತ್ತಮನ ಭವನದಲಿ ಮುರಹರ
ನತ್ತೆ ಬೆಳೆವುತ್ತಿರ್ದಳಾ ವಸುದೇವ ನೃಪನನುಜೆ
ಹೆತ್ತವರಿಗೋಲೈಸುವರಿಗೆ ಮ
ಹೋತ್ತಮರಿಗುಳಿದಖಿಳ ಲೋಕದ
ಚಿತ್ತಕಹುದೆನೆ ನಡೆವ ಗುಣದಲಿ ಮೆರೆದಳಾ ಕುಂತಿ (ಆದಿ ಪರ್ವ, ೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ವಸುದೇವನ ತಂಗಿಯಾದ, ಶ್ರೀಕೃಷ್ಣನ ಅತ್ತೆಯಾದ ಕುಂತಿಯು ಕುಂತೀಭೋಜನನೆಂಬ ರಾಜನಲ್ಲಿ ಬೆಳೆಯುತ್ತಿದ್ದಳು. ತನ್ನನ್ನು ಹೆತ್ತ ತಂದೆ ತಾಯಿಗಳಿಗೂ, ಸಾಕು ತಂದೆ ತಾಯಿಗಳಿಗೂ, ಶ್ರೇಷ್ಠರಾದವರಿಗೂ ಸಮಸ್ತಲೋಕಕ್ಕೂ ಮೆಚ್ಚುಗೆಯಾಗುವಂತೆ ಉತ್ತಮ ಗುಣಶಾಲಿಯಾಗಿದ್ದಳು.

ಅರ್ಥ:
ನೃಪ: ರಾಜ; ಉತ್ತಮ: ಶ್ರೇಷ್ಠ; ಭವನ: ಆರಮನೆ, ಆಲಯ; ಮುರಹರ: ಕೃಷ್ಣ; ಅತ್ತೆ: ತಂದೆಯ ತಂಗಿ; ಬೆಳೆ: ಏಳಿಗೆ ಹೊಂದು; ಅನುಜೆ: ತಂಗಿ; ಹೆತ್ತ: ಹುಟ್ಟಿಸಿದ; ಓಲೈಸು: ಉಪಚರಿಸು; ಮಹೋತ್ತಮ: ಶ್ರೇಷ್ಠ; ಉಳಿದ: ಮಿಕ್ಕ; ಅಖಿಳ: ಎಲ್ಲಾ; ಲೋಕ: ಜಗತ್ತು; ಚಿತ್ತ: ಮನಸ್ಸು; ಅಹುದು: ಒಪ್ಪಿಗೆಯಾಗುವಂತೆ; ನಡೆ: ನಡಗೆ, ಆಚರಣೆ; ಗುಣ: ನಡತೆ, ಸ್ವಭಾವ; ಮೆರೆ: ಶೋಭಿಸು;

ಪದವಿಂಗಡಣೆ:
ಇತ್ತ +ಕುಂತಿಭೋಜನೆಂಬ +ನೃಪ
ಉತ್ತಮನ +ಭವನದಲಿ +ಮುರಹರನ್
ಅತ್ತೆ+ ಬೆಳೆವುತ್ತಿರ್ದಳಾ +ವಸುದೇವ+ ನೃಪನ್+ಅನುಜೆ
ಹೆತ್ತವರಿಗ್+ಓಲೈಸುವರಿಗೆ +ಮ
ಹೋತ್ತಮರಿಗ್+ಉಳಿದ್+ಅಖಿಳ +ಲೋಕದ
ಚಿತ್ತಕ್+ಅಹುದ್+ಎನೆ +ನಡೆವ +ಗುಣದಲಿ +ಮೆರೆದಳಾ +ಕುಂತಿ

ಅಚ್ಚರಿ:
(೧) ಕುಂತಿಯನ್ನು ಕರೆದ ಪರಿ – ಮುರಹರನತ್ತೆ, ವಸುದೇವ ನೃಪನನುಜೆ
(೨) ಕುಂತಿಯನ್ನು ಹೊಗಳಿದ ಪರಿ – ಹೆತ್ತವರಿಗೋಲೈಸುವರಿಗೆ ಮಹೋತ್ತಮರಿಗುಳಿದಖಿಳ ಲೋಕದ
ಚಿತ್ತಕಹುದೆನೆ ನಡೆವ ಗುಣ

ಪದ್ಯ ೨೧: ಅಶ್ವತ್ಥಾಮನು ಯಾವ ಯಜ್ಞವನ್ನು ಮಾಡಲು ನಿರ್ಧರಿಸಿದನು?

ಇದು ವಿರೂಪಾಕ್ಷನ ಮನಃಕ್ಷೋ
ಭದ ವಿಕಾರವಲಾ ಪಿನಾಕಿಯ
ಪದವ ಹಿಡಿದೋಲೈಸುವೆನು ಸರ್ವಾಂಗಯಜ್ಞದಲಿ
ಇದುಕುಪಾಯವ ಬಲ್ಲೆನೆಂದು
ಬ್ಬಿದನು ಬೊಬ್ಬಿರಿದಾರಿ ತೋಡಿದ
ನುದರವಹ್ನಿಯನಿದಿರೊಳಗ್ನಿತ್ರಯವ ನಿರ್ಮಿಸಿದ (ಗದಾ ಪರ್ವ, ೯ ಸಂಧಿ, ೨೧ ಪದ್ಯ)

ತಾತ್ಪರ್ಯ:
ಆಗ ಅಶ್ವತ್ಥಾಮನು, ಇದು ವಿರೂಪಾಕ್ಷನ ಮನಃಕ್ಷೋಭೆಯಿಂದಾದ ವಿಕಾರ. ಇದಕ್ಕೆ ಉಪಾಯವನ್ನು ಬಲ್ಲೆ, ಸರ್ವಾಂಗ ಯಜ್ಞದಿಂದ ಶಿವನನ್ನು ಒಲಿಸುತ್ತೇನೆ ಎಂದುಕೊಂಡು, ವೈಶ್ವಾನರನನ್ನು ಬಗೆದು ತೋಡಿ ಇದಿರಿನಲ್ಲಿ ಗಾರ್ಹಪತ್ಯ, ಅಹವನೀಯ, ದಕ್ಷಿಣಾಗ್ನಿಗಳೆಂಬ ಮುರು ಅಗ್ನಿಗಲನ್ನು ಸ್ಥಾಪಿಸಿದನು.

ಅರ್ಥ:
ವಿರೂಪಾಕ್ಷ: ಶಿವ; ಮನಃ: ಮನಸ್ಸು; ಕ್ಷೋಭೆ: ಕೋಪ, ವಿಪತ್ತು; ವಿಕಾರ: ರೂಪಾಂತರ, ವಿಕೃತಿ; ಪಿನಾಕಿ: ತ್ರಿಶೂಲ; ಪದ: ಚರಣ; ಹಿಡಿ: ಗ್ರಹಿಸು; ಓಲೈಸು: ಉಪಚರಿಸು; ಸರ್ವಾಂಗ: ಎಲ್ಲಾ ಅಂಗಗಳು; ಯಜ್ಞ: ಕ್ರತು; ಉಪಾಯ: ಯುಕ್ತಿ, ಹಂಚಿಕೆ; ಬಲ್ಲೆ: ತಿಳಿ; ಉಬ್ಬು: ಹಿಗ್ಗು, ಗರ್ವಿಸು; ಬೊಬ್ಬಿರಿ: ಗರ್ಜಿಸು; ತೋಡು: ಹಳ್ಳ, ಅಗೆ; ಉದರ: ಹೊಟ್ಟೆ; ವಹ್ನಿ: ಅಗ್ನಿ; ಇದಿರು: ಎದುರು; ಅಗ್ನಿ: ಬೆಂಕಿ; ತ್ರಯ: ಮೂರು; ನಿರ್ಮಿಸು: ಕಟ್ಟು, ರಚಿಸು;

ಪದವಿಂಗಡಣೆ:
ಇದು +ವಿರೂಪಾಕ್ಷನ+ ಮನಃ+ಕ್ಷೋ
ಭದ +ವಿಕಾರವಲಾ +ಪಿನಾಕಿಯ
ಪದವ +ಹಿಡಿದ್+ಓಲೈಸುವೆನು +ಸರ್ವಾಂಗ+ಯಜ್ಞದಲಿ
ಇದುಕ್+ಉಪಾಯವ +ಬಲ್ಲೆನೆಂದ್
ಉಬ್ಬಿದನು +ಬೊಬ್ಬಿರಿದ್+ಆರಿ +ತೋಡಿದನ್
ಉದರ+ವಹ್ನಿಯನ್+ಇದಿರೊಳ್+ಅಗ್ನಿತ್ರಯವ +ನಿರ್ಮಿಸಿದ

ಅಚ್ಚರಿ:
(೧) ವಹ್ನಿ, ಅಗ್ನಿ; ವಿರೂಪಾಕ್ಷ, ಪಿನಾಕಿ – ಸಮಾನಾರ್ಥಕ ಪದ

ಪದ್ಯ ೧೨: ಭೀಮನ ಹೊಡೆತದ ಪ್ರಭಾವ ಹೇಗಿತ್ತು?

ಅಳಿದುದೈನೂರಾನೆ ಸಾವಿರ
ಬಲುಗುದುರೆ ರಥ ಮೂರು ಸಾವಿರ
ನೆಲಕೆ ಕೈವರ್ತಿಸಿತು ಭೀಮನ ಹೊಯ್ಲ ಹೋರಟೆಗೆ
ಬಿಲುಹರಿಗೆ ಸಬಳದ ಪದಾತಿಯ
ತಲೆಯ ತೊಡಸಿದನೆಂಟು ಲಕ್ಕವ
ನುಳಿದ ಬಲವೋಲೈಸುತಿರ್ದುದು ಘನ ಪಲಾಯನವ (ಶಲ್ಯ ಪರ್ವ, ೩ ಸಂಧಿ, ೧೨ ಪದ್ಯ)

ತಾತ್ಪರ್ಯ:
ಐನೂರು ಆನೆಗಳು, ಸಾವಿರ ಕುದುರೆಗಳು, ಮೂರು ಸಾವಿರ ರಥಗಳು ಭೀಮನ ಹೊಡೆತಕ್ಕೆ ಸಿಕ್ಕಿ ನೆಲಕ್ಕೆ ಬಿದ್ದವು. ಬಿಲ್ಲು, ಹರಿಗೆ ಸಬಳಗಳನ್ನು ಹಿಡಿದ ಎಂಟು ಲಕ್ಷ ಸೈನಿಕರನ್ನು ಸಂಹರಿಸಿದನು. ಉಳಿದವರು ಯುದ್ಧದಿಂದ ಪಲಾಯನ ಮಾಡಿದರು.

ಅರ್ಥ:
ಅಳಿ: ನಾಶ; ಸಾವಿರ: ಸಹಸ್ರ; ಬಲು: ಸೈನ್ಯ; ಕುದುರೆ: ಅಶ್ವ; ರಥ: ಬಂಡಿ; ನೆಲ: ಭೂಮಿ; ವರ್ತಿಸು: ಚಲಿಸು; ಹೊಯ್ಲು: ಏಟು, ಹೊಡೆತ; ಹೋರಟೆ: ಕಾಳಗ, ಯುದ್ಧ; ಬಿಲು: ಬಿಲ್ಲು, ಚಾಪ; ಸಬಳ: ಈಟಿ; ಪದಾತಿ: ಕಾಲಾಳು, ಸೈನಿಕ; ತಲೆ: ಶಿರ; ತೊಡಸು: ಸಿಕ್ಕಿಸು; ಲಕ್ಕ: ಲಕ್ಷ; ಉಳಿದ: ಮಿಕ್ಕ; ಬಲ: ಸೈನ್ಯ; ಓಲೈಸು: ಪ್ರೀತಿಸು; ಘನ: ಶ್ರೇಷ್ಠ; ಪಲಾಯನ: ಹಿಂದಿರುಗು, ಪರಾರಿ;

ಪದವಿಂಗಡಣೆ:
ಅಳಿದುದ್+ಐನೂರ್+ಆನೆ +ಸಾವಿರ
ಬಲು+ಕುದುರೆ +ರಥ +ಮೂರು +ಸಾವಿರ
ನೆಲಕೆ+ ಕೈವರ್ತಿಸಿತು +ಭೀಮನ +ಹೊಯ್ಲ +ಹೋರಟೆಗೆ
ಬಿಲುಹರಿಗೆ +ಸಬಳದ+ ಪದಾತಿಯ
ತಲೆಯ +ತೊಡಸಿದನ್+ಎಂಟು +ಲಕ್ಕವನ್
ಉಳಿದ +ಬಲವ್+ಓಲೈಸುತಿರ್ದುದು +ಘನ +ಪಲಾಯನವ

ಅಚ್ಚರಿ:
(೧) ಓಡಿದರು ಎಂದು ಹೇಳುವ ಪರಿ – ಉಳಿದ ಬಲವೋಲೈಸುತಿರ್ದುದು ಘನ ಪಲಾಯನವ

ಪದ್ಯ ೨: ಸೈರಂಧ್ರಿಯು ಹೋಗಲೇಕೆ ಹಿಂಜರಿದಳು?

ಅಮ್ಮೆನಲ್ಲಿಗೆ ದೇವಿ ನಿಮ್ಮಯ
ತಮ್ಮ ದುರುಳನು ಲೇಸು ಹೊಲ್ಲೆಹ
ವೆಮ್ಮತಾಗುವುದಾತನಳಿದರೆ ಬಳಿಕ ಹಳಿವೆಮಗೆ
ನಿಮ್ಮನಾವೋಲೈಸಿ ನಿಮಗೆ ವಿ
ಕರ್ಮವನು ಮಾಡುವುದು ನಮಗದು
ಧರ್ಮವಲ್ಲುಳಿದವರ ಕಳುಹುವುದೆಂದಳಿಂದುಮುಖಿ (ವಿರಾಟ ಪರ್ವ, ೩ ಸಂಧಿ, ೨ ಪದ್ಯ)

ತಾತ್ಪರ್ಯ:
ಸೈರಂಧ್ರಿಯು ಸುದೇಷ್ಣೆಯ ಮಾತನ್ನು ಕೇಳಿ, ನಾನಲ್ಲಿಗೆ ಹೋಗಲು ಒಲ್ಲೆ, ನಿಮ್ಮ ತಮ್ಮನು ದುಷ್ಟ, ಅವನು ಸತ್ತರೆ ನನಗೆ ಕೆಟ್ಟ ಹೆಸರು ಬರುತ್ತದೆ, ನಿಮ್ಮ ಆಶ್ರಯದಲ್ಲಿದ್ದು ನಿಮಗೆ ಕೇಡನ್ನು ಮಾಡುವುದು ಧರ್ಮವಲ್ಲ. ನಿಮ್ಮ ಮಿಕ್ಕ ಸೇವಕಿಯರೊಬ್ಬಳ್ಳನ್ನು ಕಳುಹಿಸಿ ಎಂದಳು.

ಅರ್ಥ:
ತಮ್ಮ: ಸೋದರ; ದುರುಳ: ದುಷ್ಟ; ಲೇಸು: ಒಳಿತು; ಹೊಲ್ಲೆಹ: ದೋಷ; ತಾಗು: ಮುಟ್ಟು; ಅಳಿ: ಸಾವು, ಮಡಿ; ಬಳಿಕ: ನಂತರ; ಹಳಿವು: ಅನ್ಯಾಯದ ಆರೋಪ, ನಿಂದೆ; ಓಲೈಸು: ಪ್ರೀತಿಸು; ವಿಕರ್ಮ: ಕೇಡು; ಧರ್ಮ: ಧಾರಣೆ ಮಾಡಿದುದು; ಉಳಿದ: ಮಿಕ್ಕ; ಕಳುಹು: ತೆರಳು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಅಮ್ಮೆನ್+ಅಲ್ಲಿಗೆ +ದೇವಿ +ನಿಮ್ಮಯ
ತಮ್ಮ+ ದುರುಳನು+ ಲೇಸು+ ಹೊಲ್ಲೆಹವ್
ಎಮ್ಮ+ತಾಗುವುದ್+ಆತನ್+ಅಳಿದರೆ+ ಬಳಿಕ+ ಹಳಿವೆಮಗೆ
ನಿಮ್ಮ+ನಾವ್+ಓಲೈಸಿ +ನಿಮಗೆ +ವಿ
ಕರ್ಮವನು +ಮಾಡುವುದು +ನಮಗದು
ಧರ್ಮವಲ್ಲ+ಉಳಿದವರ+ ಕಳುಹುವುದೆಂದಳ್+ಇಂದುಮುಖಿ

ಅಚ್ಚರಿ:
(೧) ಧರ್ಮದ ನುಡಿ – ನಿಮ್ಮನಾವೋಲೈಸಿ ನಿಮಗೆ ವಿಕರ್ಮವನು ಮಾಡುವುದು ನಮಗದುಧರ್ಮವಲ್ಲ

ಪದ್ಯ ೫೧: ಕೃಷ್ಣನು ದುರ್ಯೋಧನನಿಗೆ ಯಾವ ಆಸೆಯಿಂದ ಸಾವಿಗೀಡಾಗಬೇಡ ಎಂದು ಹೇಳಿದನು?

ಲೀಲೆಯೊಳು ನೀನಖಿಳರಾಯರ
ನೋಲಗಿಸಿಕೊಳಲಲಸಿ ಕಾಲನ
ಕಾಲಕೆಳಗೋಲೈಸುವುದು ಕುಂದಲ್ಲವೇ ನಿನಗೆ
ಸೋಲ ತಪ್ಪದು ಭೀಮ ಪಾರ್ಥರ
ಕೋಲು ಕೊಂಕುವುದಲ್ಲ ಧರಣಿಯ
ಲೋಲುಪತೆಯಿಂದಳಿಯಬೇಡೆಂದಸುರರಿಪು ನುಡಿದ (ಉದ್ಯೋಗ ಪರ್ವ, ೯ ಸಂಧಿ, ೫೧ ಪದ್ಯ)

ತಾತ್ಪರ್ಯ:
ನೀನು ಆನಂದದಿಂದ ಎಲ್ಲಾ ರಾಜರ ಸೇವೆಯನ್ನು ಪಡೆಯುತ್ತಿರುವುದು ನಿನಗೆ ಬೇಸರವಾಗಿ ಯಮನ ಪಾದಸೇವೆ ಮಾಡಲು ಬಯಸಿ ನೀನು ಹೊರಟಿರುವುದು ದೋಷವಲ್ಲವೇ? ನೀನು ಸೋಲುವುದು ಖಚಿತ. ಭೀಮಾರ್ಜುನರ ಬಾಣಗಳು ಗುರಿ ತಪ್ಪುವುದಿಲ್ಲ. ಭೂಮಿಯ ಮೇಲಿನ ಅತಿಯಾದ ವ್ಯಾಮೋಹದಿಂದ ನಿನ್ನ ಸಾವನ್ನು ನೀನೆ ಬರಮಾಡಿಕೊಳ್ಳಬೇಡವೆಂದು ಕೃಷ್ಣನು ತಿಳಿಸಿದನು.

ಅರ್ಥ:
ಲೀಲೆ: ಆನಂದ, ಸಂತೋಷ; ಅಖಿಳ: ಎಲ್ಲಾ; ರಾಯ: ರಾಜ; ಓಲಗಿಸು: ಅಗ್ರಪೂಜೆಗಾಗಿ ಕೂಡಿದ, ಸೇವೆ; ಅಸಿ: ಖಡ್ಗ; ಕಾಲ: ಯಮ; ಕಾಲು: ಪಾದ; ಕೆಳಗೆ: ಅಧೀನ; ಓಲೈಸು: ಸೇವೆಮಾಡು; ಕುಂದು: ಕೊರತೆ, ನೂನ್ಯತೆ, ದೋಷ; ಸೋಲು: ಪರಾಭವ; ತಪ್ಪದು: ಸುಳ್ಳಾಗದು; ಕೋಲು: ಬಾಣ; ಕೊಂಕು: ಡೊಂಕು, ವಕ್ರತೆ; ಧರಣಿ: ಭೂಮಿ; ಲೋಲುಪತೆ: ಅತಿಯಾಸೆ; ಅಳಿ: ಸಾವು; ಅಸುರರಿಪು: ರಾಕ್ಷಸರ ವೈರಿ (ಕೃಷ್ಣ); ನುಡಿ: ಮತಾಡು;

ಪದವಿಂಗಡಣೆ:
ಲೀಲೆಯೊಳು +ನೀನ್+ಅಖಿಳ+ರಾಯರನ್
ಓಲಗಿಸಿಕೊಳಲಲ್+ಅಸಿ +ಕಾಲನ
ಕಾಲಕೆಳಗ್+ಓಲೈಸುವುದು +ಕುಂದಲ್ಲವೇ +ನಿನಗೆ
ಸೋಲ +ತಪ್ಪದು +ಭೀಮ +ಪಾರ್ಥರ
ಕೋಲು +ಕೊಂಕುವುದಲ್ಲ+ ಧರಣಿಯ
ಲೋಲುಪತೆಯಿಂದ್+ಅಳಿಯ+ಬೇಡೆಂದ್+ಅಸುರರಿಪು+ ನುಡಿದ

ಅಚ್ಚರಿ:
(೧) ಕೋಲು, ಲೋಲು – ಪ್ರಾಸ ಪದ
(೨) ಸಾಯುತ್ತೀಯ ಎಂದು ತಿಳಿಸುವ ಬಗೆ – ಅಸಿ ಕಾಲನ ಕಾಲಕೆಳಗೋಲೈಸುವುದು