ಪದ್ಯ ೧೮: ರಾಜರು ಯಾವುದರ ಮರೆಯಲ್ಲಿ ಅವಿತುಕೊಂಡರು?

ತೊಡರ ತೆಗೆದರು ಕೈಯಡಾಯ್ದವ
ಜಡಿಯಲಮ್ಮರು ಹೊತ್ತ ದುಗುಡದ
ನಿಡು ಮುಸುಕುಗಳ ಬಿಗಿದ ಬೆರಗಿನ ಬಿಟ್ಟ ಕಣ್ಣುಗಳ
ಒಡೆಯನಿದಿರಲಿ ಕುಳ್ಳಿರದೆ ಕೆಲ
ಕಡೆಯ ಕೈದೀವಿಗೆಯ ಮರೆಯಲಿ
ಮಿಡುಕದಿರ್ದುದು ರಾಯನೋಲಗದೊಳಗೆ ಪರಿವಾರ (ಕರ್ಣ ಪರ್ವ, ೧ ಸಂಧಿ, ೧೮ ಪದ್ಯ)

ತಾತ್ಪರ್ಯ:
ಆ ರಾತ್ರಿ ದುರ್ಯೋಧನನ ಆಸ್ಥಾನಕ್ಕೆ ಬಂದವರು ತಮ್ಮ ಆಭರಣಗಳನ್ನು ತೆಗೆದಿಟ್ಟಿದ್ದರು. ಕೈಯಲ್ಲಿ ಕತ್ತಿಯನ್ನು ಹಿಡಿದಿರಲಿಲ್ಲ. ದುಃಖದ ಮುಸುಕು ಅವರ ಮುಖಗಳ ಮೇಲಿತ್ತು. ವಿಸ್ಮಯದಿಂದ ಕಣ್ಣುಗಳನ್ನು ಬಿಡುತ್ತಿದ್ದರು. ದೊರೆಯ ಇದಿರಿನಲ್ಲಿ ಕುಳಿತುಕೊಳ್ಳದೆ ದೀವಿಗೆಗಳ ಮರೆಯಲ್ಲಿ ಅವಿತುಕೊಂಡಿದ್ದರು.

ಅರ್ಥ:
ತೊಡರು: ಸಂಬಂಧ, ಸಂಕೋಲೆ; ತೆಗೆ: ಈಚೆಗೆ ತರು, ಹೊರತರು; ಕೈ: ಕರ; ಆಯ್ದವ: ಆಯುಧ, ಶಸ್ತ್ರ; ಜಡಿ: ಗರ್ಜಿಸು; ಹೊತ್ತ: ತೋರಿದ; ದುಗುಡ: ದುಃಖ; ನಿಡು: ದೊಡ್ಡದಾದ, ದೀರ್ಘ; ಮುಸುಕು: ಹೊದ್ದಿಕೆ; ಬಿಗಿದ: ಆವರಿಸಿದ; ಬೆರಗು: ಆಶ್ಚರ್ಯ; ಬಿಟ್ಟ: ತೋರಿದ; ಕಣ್ಣು: ನಯನ; ಒಡೆಯ: ರಾಜ; ಇದಿರು: ಎದುರು; ಕುಳ್ಳೀರು: ಆಸೀನನಾಗು; ಕೆಲ: ಮಿಕ್ಕ; ಕಡೆ: ಕೊನೆ, ಪಕ್ಕ; ಕೈದೀವಿಗೆ: ಸೊಡರು, ದೀಪಿಕೆ; ಮರೆ: ಹಿಂಭಾಗ, ಹಿಂಬದಿ; ಮಿಡುಕು: ಅಲುಗಾಟ, ಚಲನೆ; ರಾಯ: ರಾಜ; ಓಲಗ: ದರ್ಬಾರು; ಪರಿವಾರ: ಸಂಬಂಧಿಕರು;

ಪದವಿಂಗಡಣೆ:
ತೊಡರ +ತೆಗೆದರು +ಕೈಯಡ್+ಆಯ್ದವ
ಜಡಿಯಲಮ್ಮರು +ಹೊತ್ತ +ದುಗುಡದ
ನಿಡು +ಮುಸುಕುಗಳ +ಬಿಗಿದ +ಬೆರಗಿನ +ಬಿಟ್ಟ +ಕಣ್ಣುಗಳ
ಒಡೆಯನ್+ಇದಿರಲಿ +ಕುಳ್ಳಿರದೆ +ಕೆಲ
ಕಡೆಯ +ಕೈದೀವಿಗೆಯ +ಮರೆಯಲಿ
ಮಿಡುಕದಿರ್ದುದು+ ರಾಯನ್+ಓಲಗದೊಳಗೆ+ ಪರಿವಾರ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕುಳ್ಳಿರದೆ ಕೆಲಕಡೆಯ ಕೈದೀವಿಗೆಯ
(೨) ದುರ್ಯೋಧನನ ಮೇಲಿನ ಅಂಜಿಕೆಯನ್ನು ತೋರುವ ಸಾಲು – ಒಡೆಯನಿದಿರಲಿ ಕುಳ್ಳಿರದೆ ಕೆಲ ಕಡೆಯ ಕೈದೀವಿಗೆಯ ಮರೆಯಲಿ ಮಿಡುಕದಿರ್ದುದು ರಾಯನೋಲಗದೊಳಗೆ ಪರಿವಾರ

ಪದ್ಯ ೩೨: ಕುಂತಿ ಕರ್ಣನ ಬಳಿ ಏನು ಬೇಡಿದಳು?

ಮಗನೆ ತಮ್ಮಂದಿರನು ಪಾಲಿಸು
ವಿಗಡತನವನು ಮಾಣು ಪರರೋ
ಲಗವ ನೀಂ ಮಾಡುವುದೆ ನಿನಗಿತ್ತಂಡವನುಜರಲೇ
ಸೊಗಸು ನಾನೆಂದುದನು ಪಿಸುಣರ
ಹಗೆನುಡಿಯ ಕೇಳದಿರು ಪಟ್ಟವ
ಬಿಗಿಸಿಕೊಳು ಸಲಿಸೆನ್ನ ವಚನವನೆಂದಳಾ ಕುಂತಿ (ಉದ್ಯೋಗ ಪರ್ವ, ೧೧ ಸಂಧಿ, ೩೨ ಪದ್ಯ)

ತಾತ್ಪರ್ಯ:
ಕರ್ಣನನ್ನು ನೋಡಿ ಬಿಗಿದಪ್ಪಿದ ಕುಂತಿ ಮಗನೇ ನಿನ್ನ ತಮ್ಮಂದಿರನ್ನು ಪೋಷಿಸು, ಯುದ್ಧವು ಒಳಿತಲ್ಲ ಅದಕ್ಕೆ ಸಮ್ಮತಿಸಬೇಡ, ಬೇರೆಯವರ ಓಲಗದಲ್ಲಿ ನೀನು ಆಳಾಗೇಕಿರುವೆ, ಎರಡು ತಂಡದವರು ನಿನಗೆ ಅನುಜರಲ್ಲವೇ? ಹಗೆಯನ್ನು ಬಿತ್ತುವ ಚಾಡಿಮಾತುಗಳನ್ನು ಕೇಳದೆ ನೀನು ಪಟ್ಟವನ್ನು ಕಟ್ಟಿಸಿಕೊಂಡು ಚಕ್ರವರ್ತಿಯಾಗು. ನನ್ನ ಮಾತನ್ನು ನಡೆಸಿಕೊಡು ಎಂದು ಕುಂತಿ ಕರ್ಣನನ್ನು ಬೇಡಿದಳು.

ಅರ್ಥ:
ಮಗ: ಸುತ; ತಮ್ಮ: ಅನುಜ; ಪಾಲಿಸು: ಕಾಪಾಡು; ವಿಗಡ: ಯುದ್ಧ; ಮಾಣು: ಮಾಡಬೇಡ; ಪರರ: ಬೇರೆ; ಓಲಗ: ದರ್ಬಾರು; ತಂಡ: ಗುಂಪು; ಸೊಗಸು: ಚೆನ್ನ; ಪಿಸುಣ:ಚಾಡಿಕೋರ; ಹಗೆ: ವೈರ; ನುಡಿ: ಮಾತು; ಕೇಳು: ಆಲಿಸು; ಪಟ್ಟ: ಅಧಿಕಾರ, ಪದವಿ; ಬಿಗಿಸು: ಕಟ್ಟು; ಸಲಿಸು: ದೊರಕಿಸಿ ಕೊಡು, ಪೂರೈಸು; ವಚನ: ಮಾತು;

ಪದವಿಂಗಡಣೆ:
ಮಗನೆ +ತಮ್ಮಂದಿರನು +ಪಾಲಿಸು
ವಿಗಡತನವನು +ಮಾಣು +ಪರರ್+
ಓಲಗವ +ನೀಂ +ಮಾಡುವುದೆ +ನಿನಗಿತ್ತಂಡವ್+ಅನುಜರಲೇ
ಸೊಗಸು +ನಾನ್+ಎಂದುದನು +ಪಿಸುಣರ
ಹಗೆನುಡಿಯ +ಕೇಳದಿರು +ಪಟ್ಟವ
ಬಿಗಿಸಿಕೊಳು +ಸಲಿಸೆನ್ನ+ ವಚನವನೆಂದಳಾ +ಕುಂತಿ

ಅಚ್ಚರಿ:
(೧) ಅನುಜ, ತಮ್ಮ; ವಚನ, ನುಡಿ – ಸಮನಾರ್ಥಕ ಪದ

ಪದ್ಯ ೪೫: ಗೋಗ್ರಹಣದ ವಾರ್ತೆಯನ್ನು ಆಸ್ಥಾನದಲ್ಲಿ ಯಾವ ಸ್ಥಿತಿ ನಿರ್ಮಾಣವಾಯಿತು?

ಕೇಳಿ ಬಿಸುಸುಯ್ದನು ವಿರಾಟ ನೃ
ಪಾಲನಿಂದಿನಲಳಿದನೇ ಕ
ಟ್ಟಾಳು ಕೀಚಕನೆನುತ ನೋಡಿದನಂದು ಕೆಲಬಲನ
ಆಳು ಗಜಬಜಿಸಿತ್ತು ಹಾಯಿಕು
ವೀಳೆಯವನಿಂದೆನಗೆ ತನಗೆಂ
ದೋಲಗದೊಳಬ್ಬರಣೆ ಮಸಗಿತು ಕದಡಿತಾಸ್ಥಾನ (ವಿರಾಟ ಪರ್ವ, ೫ ಸಂಧಿ, ೪೫ ಪದ್ಯ)

ತಾತ್ಪರ್ಯ:
ಗೋಗ್ರಹಣದ ಸುದ್ದಿಯನ್ನು ಕೇಳಿ ವಿರಾಟನು ನಿಟ್ಟುಸಿರು ಬಿಟ್ಟು ಅಯ್ಯೋ ಕೀಚಕನು ಈ ಹಿಂದೆ ಅಳಿದನೇ, ಅವನು ಇದ್ದಿದ್ದರೆ ಹೀಗೆ ಆಕ್ರಮಿಸುವ ಧೈರ್ಯ ಯಾರಿಗೂ ಬರುತ್ತಿರಲಿಲ್ಲ ಎಂದು ಉದ್ಗರಿಸಿ, ಸುತ್ತ ಮುತ್ತಲಿರುವವರನ್ನು ನೋಡಿದನು. ಆಸ್ಥಾನದಲ್ಲಿದ್ದ ಯೋಧರು ಯುದ್ಧ ಮಾಡಲು ನನಗೆ ವೀಳೆಯವನ್ನು ಕೊಡಿ ಎಂದು ಮುಂದೆ ಬಂದರು, ಆಸ್ಥಾನದಲ್ಲಿ ಕೋಲಾಹಲವಾಯಿತು.

ಅರ್ಥ:
ಕೇಳಿ: ಆಲಿಸಿ; ಬಿಸುಸುಯ್: ನಿಟ್ಟುಸಿರು ಬಿಡು; ನೃಪಾಲ: ರಾಜ; ಅಳಿ: ನಾಶವಾಗು; ಕಟ್ಟಾಳು: ನಂಬಿಕಸ್ಥ ಸೇವಕ; ನೋಡು: ವೀಕ್ಷಿಸು; ಕೆಲ: ಕೆಲವರು; ಬಲ: ಸೈನ್ಯ; ಆಳು: ಸೇವಕ; ಗಜಬಜ: ಗೊಂದಲ; ಹಾಯಿಕು:ಕಳಚು, ತೆಗೆ; ವೀಳೆ: ಆಮಂತ್ರಣ; ಓಲಗ: ದರ್ಬಾರು, ಆಸ್ಥಾನ; ಅಬ್ಬರಣೆ: ಕೋಲಾಹಲ; ಮಸಗು: ಹರಡು; ಕದಡು: ಕಲಕು;

ಪದವಿಂಗಡಣೆ:
ಕೇಳಿ +ಬಿಸುಸುಯ್ದನು +ವಿರಾಟ +ನೃ
ಪಾಲನಿಂದ್+ಇನಲ್+ಅಳಿದನೇ +ಕ
ಟ್ಟಾಳು +ಕೀಚಕನ್+ಎನುತ+ ನೋಡಿದನ್+ಅಂದು +ಕೆಲಬಲನ
ಆಳು +ಗಜಬಜಿಸಿತ್ತು +ಹಾಯಿಕು
ವೀಳೆಯವನ್+ಇಂದ್+ಎನಗೆ +ತನಗೆಂದ್
ಓಲಗದೊಳ್+ಅಬ್ಬರಣೆ+ ಮಸಗಿತು +ಕದಡಿತ್+ಆಸ್ಥಾನ

ಅಚ್ಚರಿ:
(೧) ಓಲಗ, ಆಸ್ಥಾನ – ಸಮನಾರ್ಥಕ ಪದ – ೬ ಸಾಲಿನ ಮೊದಲ ಮತ್ತು ಕೊನೆ ಪದ
(೨) ಆಳು – ೩, ೪ ಸಾಲಿನ ಮೊದಲ ಪದ