ಪದ್ಯ ೧೨: ಭೂತವು ಪಾಂಡವರ ವನಕ್ಕೆ ಹೇಗೆ ಆಗಮಿಸಿತು?

ಎಂದು ನೇಮಿಸೆ ಭೂತ ಭುಗಿ ಭುಗಿ
ಲೆಂದು ಧಗ ಧಗಿಸುತ್ತಲುರಿ ಭುಗಿ
ಲೆಂದು ಕರ್ಬೊಗೆ ತುಡುಕಲಬುಜ ಭವಾಂಡಮಂಡಲವ
ನಿಂದು ನೋಡುತ ಕೆಲ ಬಲನ ನೋ
ರಂದದಿಂದವೆ ಪಾಂಡುಪುತ್ರರ
ನಂದಗೆಡಿಸುವ ಭರದೊಳೈದಿತು ಘೋರ ಕಾನನಕೆ (ಅರಣ್ಯ ಪರ್ವ, ೨೫ ಸಂಧಿ, ೧೨ ಪದ್ಯ)

ತಾತ್ಪರ್ಯ:
ಕನಕನ ನೇಮವನ್ನು ಸ್ವೀಕರಿಸಿ ಭೂತವು ವನಕ್ಕೆ ಹೊರಟಿತು ಆದರಿಂದ ಧಗಧಗಿಸುವ ಉರಿ, ಭುಗಿಲ್ಭುಗಿಲೆಂದು ಸುತ್ತಲೂ ಹಬ್ಬುತ್ತಿತ್ತು. ಕಪ್ಪು ಹೊಗೆಯು ಬ್ರಹ್ಮಾಂಡವನ್ನೇ ವ್ಯಾಪಿಸುತ್ತಿತ್ತು. ಅದು ಅಲ್ಲಲ್ಲಿ ನಿಮ್ತು ಸುತ್ತಲೂ ನೋಡುತ್ತಾ ಪಾಂಡವರನ್ನು ಹತ್ಯೆ ಮಾಡಲೆಂದು ಕಾಡಿಗೆ ಹೊರಟಿತು.

ಅರ್ಥ:
ನೇಮಿಸು: ಅಪ್ಪಣೆ ಮಾಡು; ಭೂತ: ದೆವ್ವ; ಭುಗಿಲು: ಭುಗಿಲ್ ಎಂಬ ಶಬ್ದ; ಧಗ: ಬೆಂಕಿಯ ತೀವ್ರತೆಯನ್ನು ಹೇಳುವ ಶಬ್ದ; ಉರಿ: ಬೆಂಕಿ; ಕರ್ಬೊಗೆ: ಕಪ್ಪಾದ ಹೊಗೆ; ತುಡುಕು: ಹೋರಾಡು, ಸೆಣಸು; ಅಬುಜ: ತಾವರೆ; ಭವಾಂಡ: ಬ್ರಹ್ಮಾಂಡ, ಪ್ರಪಂಚ; ಮಂಡಲ: ಜಗತ್ತು, ನಾಡಿನ ಒಂದು ಭಾಗ; ನಿಂದು: ನಿಲ್ಲು; ನೋಡು: ವೀಕ್ಷಿಸು; ಕೆಲ: ಸ್ವಲ್ಪ, ಪಕ್ಕ, ಮಗ್ಗುಲು; ಅಂದ: ಚೆಲುವು, ಸುಂದರ; ಕೆಡಿಸು: ಹಾಳುಮಾಡು; ಭರ:ವೇಗ; ಐದು: ಬಂದು ಸೇರು; ಘೋರ: ಉಗ್ರವಾದ; ಕಾನನ: ಕಾಡು; ಓರಂದ: ಒಂದೇ ಸಮಾನ;

ಪದವಿಂಗಡಣೆ:
ಎಂದು +ನೇಮಿಸೆ +ಭೂತ +ಭುಗಿ +ಭುಗಿ
ಲೆಂದು +ಧಗ +ಧಗಿಸುತ್ತಲ್+ಉರಿ +ಭುಗಿ
ಲೆಂದು +ಕರ್ಬೊಗೆ +ತುಡುಕಲ್+ಅಬುಜ +ಭವಾಂಡ+ಮಂಡಲವ
ನಿಂದು +ನೋಡುತ+ ಕೆಲ+ ಬಲನನ್
ಓರಂದದಿಂದವೆ+ ಪಾಂಡುಪುತ್ರರನ್
ಅಂದಗೆಡಿಸುವ +ಭರದೊಳೈದಿತು+ ಘೋರ +ಕಾನನಕೆ

ಅಚ್ಚರಿ:
(೧) ಭುಗಿ ಭುಗಿ, ಧಗ ದಗ – ಜೋಡಿ ಪದಗಳು

ಪದ್ಯ ೪: ಯಾಗದ ಸಮಯದಲ್ಲಿ ಯಾವ ಧ್ವನಿಯು ಕೇಳಿಬರುತ್ತಿತ್ತು?

ಅರಸ ಚಿತ್ತವಿಸೊಂದು ಲಕ್ಷದ
ಧರಣಿಯಮರರ ಭೋಜನಾಂತಕೆ
ಮೊರೆವುಯೊಂದೇ ಬಾರಿ ಶಂಖಧ್ವನಿ ಛಡಾಲದಲಿ
ಪರುಠವಣೆಯಿದು ರಾಜಸೂಯಾ
ಧ್ವರದ ಮೊದಲವಸಾನ ಪರಿಯಂ
ತರದೊಳೋರಂದದಲಿ ಹಗಲಿರುಳೂದಿತನವರತ (ಸಭಾ ಪರ್ವ, ೧೨ ಸಂಧಿ, ೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ರಾಜಸೂಯಯಾಗದಲ್ಲಿ ಒಂದು ಲಕ್ಷ ಬ್ರಾಹ್ಮಣರ ಸಂತರ್ಪಣೆ ಮುಗಿದರೆ ಒಂದು ಬಾರಿ ಶಂಖವನ್ನು ಊದುತ್ತಿದ್ದರು. ರಾಜಸೂಯಯಾಗ ಆರಂಭವಾಗಿ ಮುಗಿಯುವವರೆಗೂ ಹಗಲು ರಾತ್ರಿ ಎನ್ನದೆ ಶಂಖನಾದವು ಕೇಳಿಬರುತ್ತಿತ್ತು.

ಅರ್ಥ:
ಅರಸ: ರಾಜ; ಚಿತ್ತವಿಸು: ಗಮನವಿಟ್ಟು ಕೇಳು; ಧರಣಿ: ಭೂಮಿ; ಧರಣಿಯಮರ: ಬ್ರಾಹ್ಮಣ; ಭೋಜನ: ಊಟ; ಅಂತ: ಮುಕ್ತಾಯ; ಮೊರೆ: ದುಂಬಿಯ ಧ್ವನಿ, ಝೇಂಕಾರ; ಬಾರಿ: ಸಲ; ಶಂಖ: ಸಮುದ್ರದಲ್ಲಿ ಸಿಗುವ ಒಂದು ಬಗೆಯ ಚಿಪ್ಪು; ಧ್ವನಿ: ರವ, ಕೂಗು; ಛಡಾಳ: ಹೆಚ್ಚಳ, ಆಧಿಕ್ಯ; ಪರುಠವ: ವಿಸ್ತಾರ, ಹರಹು; ಅಧ್ವರ: ಯಾಗ; ಅವಸಾನ: ಕೊನೆ; ಪರಿ: ರೀತಿ; ಅಂತರ: ವ್ಯತ್ಯಾಸ, ಭೇದ; ಓರಂದ: ಒಂದೇ ರೀತಿ, ಸಮಾನ; ಹಗಲು: ಬೆಳಗ್ಗೆ; ಇರುಳು: ರಾತ್ರಿ; ಊದು: ಕೂಗು, ಧ್ವನಿ; ಅನವರತ: ಯಾವಾಗಲು;

ಪದವಿಂಗಡಣೆ:
ಅರಸ +ಚಿತ್ತವಿಸ್+ಒಂದು +ಲಕ್ಷದ
ಧರಣಿ+ಅಮರರ +ಭೋಜನಾಂತಕೆ
ಮೊರೆವು+ಒಂದೇ +ಬಾರಿ +ಶಂಖಧ್ವನಿ+ ಛಡಾಲದಲಿ
ಪರುಠವಣೆಯಿದು+ ರಾಜಸೂಯ
ಅಧ್ವರದ +ಮೊದಲ್+ಅವಸಾನ +ಪರಿಯಂ
ತರದೊಳ್+ಓರಂದದಲಿ +ಹಗಲ್+ಇರುಳ್+ಊದಿತ್+ಅನವರತ

ಅಚ್ಚರಿ:
(೧) ಅಂತ, ಅವಸಾನ – ಕೊನೆ ಎಂದು ಅರ್ಥೈಸುವ ಪದ