ಪದ್ಯ ೨೭: ಧೃಷ್ಟದ್ಯುಮ್ನನು ಸಾತ್ಯಕಿಗೆ ಏನು ಹೇಳಿದನು?

ಸೆಳೆದನೊರೆಯಲಡಾಯುಧವನ
ವ್ವಳಿಸಿದನು ಪಾಂಚಾಲಸುತನೀ
ಗಳಹನನು ಬಿಡು ಭೀಮ ಕೊಡು ಸಾತ್ಯಕಿಯ ಖಂಡೆಯವ
ಎಲವೊ ಸಾತ್ಯಕಿ ಕೃಷ್ಣದೇವರಿ
ಗಳುಕಿ ಸೈರಿಸಿದರೆ ದೊಠಾರಿಸಿ
ಗೆಲನುಡಿವೆ ಹೆಡತಲೆಯಲುಗಿವೆನು ನಿನ್ನ ನಾಲಗೆಯ (ದ್ರೋಣ ಪರ್ವ, ೧೯ ಸಂಧಿ, ೨೭ ಪದ್ಯ)

ತಾತ್ಪರ್ಯ:
ಧೃಷ್ಟದ್ಯುಮ್ನನು ಸೆರೆಯಿಂದ ಕತ್ತಿಯನ್ನು ಹೊರಗೆಳೆದು, ಭೀಮ ಈ ಬಾಯಿಬಡಕನನ್ನು ಬಿಡು, ಅವನಿಗೆ ಕತ್ತಿಯನ್ನು ಕೊಡು, ಎಲವೋ ಸಾತ್ಯಕಿ, ಕೃಷ್ಣನಿಗೆ ಹೆದರಿ ನಾನು ಸುಮ್ಮನಿದ್ದೆ. ನೀನು ನನ್ನನ್ನು ನಿಂದಿಸುವೆಯಾ? ನಿನ್ನ ನಾಲಗೆಯನ್ನು ಹಿಂದಲೆಯಿಂದ ಹೊರಗೆಳೆಯುತ್ತೇನೆ ಎಂದು ವೀರಾವೇಶದಿಂದ ನುಡಿದನು.

ಅರ್ಥ:
ಸೆಳೆ: ಜಗ್ಗು, ಎಳೆ; ಒರೆ: ಉಜ್ಜು, ತಿಕ್ಕು; ಆಯುಧ: ಶಸ್ತ್ರ; ಅವ್ವಳಿಸು: ತಟ್ಟು, ತಾಗು; ಸುತ: ಮಗ; ಗಳಹ: ಬಾಯಿಬಡಕ; ಬಿಡು: ತೊರೆ; ಕೊಡು: ನೀಡು; ಖಂಡೆಯ: ಕತ್ತಿ; ಅಳುಕು: ಹೆದರು; ಸೈರಿಸು: ತಾಳ್ಮೆ; ದೊಠಾರ: ಶೂರ, ಕಲಿ; ನುಡಿ: ಮಾತು; ಹೆಡತಲೆ: ಹಿಂದಲೆ; ಅಲುಗು: ಅಳ್ಳಾಡು, ಅದುರು; ನಾಲಗೆ: ಜಿಹ್ವೆ;

ಪದವಿಂಗಡಣೆ:
ಸೆಳೆದನ್+ಒರೆಯಲಡ್+ಆಯುಧವನ್
ಅವ್ವಳಿಸಿದನು +ಪಾಂಚಾಲಸುತನ್+ಈ
ಗಳಹನನು +ಬಿಡು +ಭೀಮ +ಕೊಡು +ಸಾತ್ಯಕಿಯ +ಖಂಡೆಯವ
ಎಲವೊ +ಸಾತ್ಯಕಿ +ಕೃಷ್ಣ+ದೇವರಿಗ್
ಅಳುಕಿ +ಸೈರಿಸಿದರೆ +ದೊಠಾರಿಸಿ
ಗೆಲನುಡಿವೆ +ಹೆಡತಲೆ+ಅಲುಗಿವೆನು +ನಿನ್ನ +ನಾಲಗೆಯ

ಅಚ್ಚರಿ:
(೧) ಬಿಡು, ಕೊಡು – ಪ್ರಾಸ ಪದಗಳು
(೨) ಸಾತ್ಯಕಿಯನ್ನು ಗದರಿಸುವ ಪರಿ – ದೊಠಾರಿಸಿ ಗೆಲನುಡಿವೆ ಹೆಡತಲೆಯಲುಗಿವೆನು ನಿನ್ನ ನಾಲಗೆಯ

ಪದ್ಯ ೧೬: ಕೌರವ ಸೈನ್ಯದ ಸ್ಥಿತಿ ಹೇಗಿತ್ತು?

ಜರಿದುದಬ್ಜವ್ಯೂಹ ನೂಕಿದ
ಕರಿ ತುರಗ ಕಾಲಾಳು ತೇರಿನ
ಮರಳುದಲೆ ತಾನಿಲ್ಲ ನೆರೆ ನುಗ್ಗಾಯ್ತು ಕುರುಸೇನೆ
ದೊರೆಗಳಹ ದ್ರೋಣಾದಿಗಳು ಕೈ
ಮರೆದು ಕಳೆದರು ಪಾರ್ಥತನಯನ
ಸರಿಯೊರೆಗೆ ಭಟನಾವನೆಂದನು ಕೌರವರ ರಾಯ (ದ್ರೋಣ ಪರ್ವ, ೫ ಸಂಧಿ, ೧೬ ಪದ್ಯ
)

ತಾತ್ಪರ್ಯ:
ದುರ್ಯೋಧನನು ಕೌರವ ಸೈನ್ಯವನ್ನು ನೋಡಿ, ಪದ್ಮವ್ಯೂಹವು ಆಕಾರ ಕೆಟ್ಟು ಪಲಾಯನ ಮಾಡಿತು. ಆನೆ ಕುದುರೆ ರಥ ಕಾಲಾಳುಗಳು ಯುದ್ಧಮಾಡಿ ಬದುಕಿ ಬರಲಿಲ್ಲ. ಕೌರವ ಸೈನ್ಯವು ಪುದಿಪುಡಿಯಾಯಿತು. ನಾಯಕರಾದ ದ್ರೋಣನೇ ಮೊದಲಾದವರು ತಮ್ಮ ಕೈಯ ಚಾತುರ್ಯವನ್ನೇ ಮರೆತರು. ಅಭಿಮನ್ಯುವಿಗೆ ಸರಿಸಮಾನ ವೀರನಾರು ಎಂದು ಉದ್ಗರಿಸಿದರು.

ಅರ್ಥ:
ಜರಿ: ಓಡಿಹೋಗು, ಪಲಾಯನ ಮಾಡು; ಅಬ್ಜ: ತಾವರೆ; ವ್ಯೂಹ: ಗುಂಪು; ನೂಕು: ತಳ್ಳು; ಕರಿ: ಆನೆ; ತುರಗ: ಅಶ್ವ; ಕಾಲಾಳು: ಸೈನಿಕ; ತೇರು: ಬಂಡಿ, ರಥ; ಮರಳು: ಹಿಂದಿರುಗು; ನೆರೆ: ಪಕ್ಕ, ಪಾರ್ಶ್ವ, ಮಗ್ಗುಲು; ನುಗ್ಗು: ತಳ್ಳು; ದೊರೆ: ರಾಜ; ಆದಿ: ಮುಂತಾದ; ಮರೆ: ನೆನಪಿನಿಂದ ದೂರ ಮಾಡು; ಕಳೆ: ವ್ಯಯಿಸು; ತನಯ: ಮಗ; ಒರೆ: ಗುಣ, ಉಜ್ಜು, ತಿಕ್ಕು; ಭಟ: ಸೈನಿಕ; ರಾಯ: ರಾಜ;

ಪದವಿಂಗಡಣೆ:
ಜರಿದುದ್+ಅಬ್ಜವ್ಯೂಹ +ನೂಕಿದ
ಕರಿ +ತುರಗ +ಕಾಲಾಳು +ತೇರಿನ
ಮರಳುದಲೆ+ ತಾನಿಲ್ಲ +ನೆರೆ +ನುಗ್ಗಾಯ್ತು +ಕುರುಸೇನೆ
ದೊರೆಗಳಹ+ ದ್ರೋಣಾದಿಗಳು +ಕೈ
ಮರೆದು +ಕಳೆದರು+ ಪಾರ್ಥ+ತನಯನ
ಸರಿಯೊರೆಗೆ +ಭಟನಾವನ್+ಎಂದನು +ಕೌರವರ+ ರಾಯ

ಅಚ್ಚರಿ:
(೧) ಸೋತರು ಎಂದು ಹೇಳುವ ಪರಿ – ದೊರೆಗಳಹ ದ್ರೋಣಾದಿಗಳು ಕೈಮರೆದು ಕಳೆದರು

ಪದ್ಯ ೯೨: ವಿದುರನು ಧರ್ಮರಾಯನಿಗೆ ಯಾರ ಅಭಿಪ್ರಾಯವನ್ನು ಕೇಳಲು ಹೇಳಿದನು?

ಕರೆಸಿ ನಿಮ್ಮಯ ಮಂತ್ರಿಜನ ಮು
ಖ್ಯರ ಪಸಾಯ್ತರ ಕೇಳುವುದು ಮನ
ದೊರೆಗೆ ತೂಕಕೆ ಬಹರೆ ಭೀಮಾದಿಗಳ ಮತವಿಡಿದು
ಅರಸ ನಿಶ್ಚೈಸುವುದೆನಲು ನೀ
ಮರುಳೆ ವಿದುರ ಭವದ್ವಚೋವಿ
ಸ್ತರಕೆ ಪಡಿಸಣವುಂಟೆ ಶಿವ ಶಿವಯೆಂದನಾ ಭೂಪ (ಸಭಾ ಪರ್ವ, ೧೩ ಸಂಧಿ, ೯೨ ಪದ್ಯ)

ತಾತ್ಪರ್ಯ:
ಯುಧಿಷ್ಠಿರ ನಿಮ್ಮಯ ಮಂತ್ರಿವರ್ಗದವರನ್ನು, ಸಾಮಂತರಾಜರು, ಕರೆದು ನಿನ್ನ ವಿಚಾರವು ಅವರೊಂದಿಗೆ ಒಂದಾದರೆ, ನಿನ್ನ ಅನುಜರಾದ ಭೀಮಾದಿಯರ ಅಭಿಪ್ರಾಯದಂತೆ ನಿಶ್ಚಯಿಸು ಎಂದು ವಿದುರನು ತಿಳಿಸಿದನು. ಅದಕ್ಕೆ ಧರ್ಮರಾಯನು ವಿದುರ ಇದೇನು ಮೂರ್ಖತನ, ನಿನ್ನ ಮಾತನ್ನು ಪರೀಕ್ಷೆ ಮಾಡುವುದುಂಟೆ ಶಿವ ಶಿವಾ ಎಂದನು.

ಅರ್ಥ:
ಕರೆಸು: ಬರೆಮಾಡು; ಮಂತ್ರಿ: ಸಚಿವ; ಮುಖ್ಯ: ಪ್ರಮುಖರು; ಪಸಾಯ್ತ: ಸಾಮಂತರಾಜ; ಕೇಳು: ಆಲಿಸು; ಮನ: ಮನಸ್ಸು; ಒರೆ: ಪರೀಕ್ಷೆಸುವ ಕಲ್ಲು; ತೂಕ: ಭಾರ, ಗುರುತ್ವ; ಬಹರೆ: ಬರುವರೆ; ಆದಿ: ಮುಂತಾದ; ಮತ: ವಿಚಾರ; ಅರಸ: ರಾಜ; ನಿಶ್ಚೈಸು: ನಿರ್ಣಯ; ಮರುಳು: ಬುದ್ಧಿಭ್ರಮೆ, ಹುಚ್ಚು; ಭವದ್: ನಿಮ್ಮ; ವಚೋವಿಸ್ತರ: ಮಾತಿನ ವಿಸ್ತಾರ; ಪಡಿಸಣ: ಪರೀಕ್ಷೆ,ಪರಿಶೀಲನೆ; ಭೂಪ: ರಾಜ;

ಪದವಿಂಗಡಣೆ:
ಕರೆಸಿ +ನಿಮ್ಮಯ +ಮಂತ್ರಿಜನ+ ಮು
ಖ್ಯರ +ಪಸಾಯ್ತರ +ಕೇಳುವುದು +ಮನದ್
ಒರೆಗೆ +ತೂಕಕೆ+ ಬಹರೆ +ಭೀಮಾದಿಗಳ +ಮತವಿಡಿದು
ಅರಸ+ ನಿಶ್ಚೈಸುವುದ್+ಎನಲು +ನೀ+
ಮರುಳೆ+ ವಿದುರ+ ಭವದ್+ವಚೋವಿ
ಸ್ತರಕೆ +ಪಡಿಸಣವುಂಟೆ +ಶಿವ ಶಿವ+ಎಂದನಾ +ಭೂಪ

ಅಚ್ಚರಿ:
(೧) ವಿದುರನ ಮೇಲಿನ ವಿಶ್ವಾಸ – ಭವದ್ವಚೋವಿಸ್ತರಕೆ ಪಡಿಸಣವುಂಟೆ ಶಿವ ಶಿವಯೆಂದನಾ ಭೂಪ