ಪದ್ಯ ೪೦: ಸಂಜಯನೇಕೆ ಹೊರಳಾಡಿದನು?

ಚಾರು ಚಂದ್ರೋಪಲದ ರಮ್ಯಾ
ಗಾರದಲಿ ಮಣಿಮಯದ ಬಹುವಿ
ಸ್ತಾರ ಭದ್ರೋಪರಿಯ ಭವನದ ಚಿತ್ರಶಾಲೆಯಲಿ
ಸಾರಮಣಿ ಪರಿಯಂಕ ಪರಿಸಂ
ಸ್ಕಾರದಲಿ ಮಲಗುವ ಮಹೀಪತಿ
ನೀರೊಳೊರಗುವನೆಂದು ಸಂಜಯನೊರಲಿದನು ಹೊರಳಿ (ಗದಾ ಪರ್ವ, ೩ ಸಂಧಿ, ೪೦ ಪದ್ಯ)

ತಾತ್ಪರ್ಯ:
ಸುಂದರವಾದ ಚಂದ್ರಕಾಂತ ಶಿಲೆಯ ರಮ್ಯಭವನದಲ್ಲಿ, ವಿಸ್ತಾರವಾದ ಭದ್ರಗೃಹದ ಚಿತ್ರಶಾಲೆಯಲ್ಲಿ ಮಣಿಮಂಚದಲ್ಲಿ ಮಲಗುವ ಅರಸನು ಈಗ ನೀರಿನಲ್ಲಿ ಮಲಗುವನೆಂದು ಸಂಜಯನು ಅಳುತ್ತಾ ನೆಲದ ಮೇಲೆ ಹೊರಳಿದನು.

ಅರ್ಥ:
ಚಾರು: ಚೆಲುವು, ಸುಂದರ; ಆಗರ: ಆಶ್ರಯ; ಚಂದ್ರ: ಶಶಿ; ಉಪಲ: ಕಲ್ಲು, ಶಿಲೆ; ರಮ್ಯ: ಮನೋಹರ; ಮಣಿ: ಬೆಲೆಬಾಳುವ ರತ್ನ; ಬಹು: ಬಹಳ; ವಿಸ್ತಾರ: ವಿಶಾಲ; ಭದ್ರ: ದೃಢ, ಉತ್ತಮವಾದ ಪೀಠ; ಭವನ: ಆಲಯ; ಚಿತ್ರ: ಪಟ; ಶಾಲೆ: ಆಲಯ; ಸಾರ: ಶ್ರೇಷ್ಠವಾದ; ಪರಿಯಂಕ: ಹಾಸುಗೆ; ಸಂಸ್ಕಾರ: ಸಂಸ್ಕೃತಿ, ಸ್ವಭಾವ; ಮಲಗು: ನಿದ್ರಿಸು; ಮಹೀಪತಿ: ರಾಜ; ನೀರು: ಜಲ; ಒರಗು: ಮಲಗು; ಒರಲು: ಅರಚು, ಕೂಗಿಕೊಳ್ಳು; ಹೊರಳು: ಉರುಳಾಡು;

ಪದವಿಂಗಡಣೆ:
ಚಾರು+ ಚಂದ್ರೋಪಲದ +ರಮ್ಯಾ
ಗಾರದಲಿ +ಮಣಿಮಯದ +ಬಹು+ವಿ
ಸ್ತಾರ +ಭದ್ರೋಪರಿಯ +ಭವನದ +ಚಿತ್ರ+ಶಾಲೆಯಲಿ
ಸಾರಮಣಿ +ಪರಿಯಂಕ +ಪರಿ+ಸಂ
ಸ್ಕಾರದಲಿ +ಮಲಗುವ +ಮಹೀಪತಿ
ನೀರೊಳ್+ಒರಗುವನೆಂದು +ಸಂಜಯನ್+ಒರಲಿದನು +ಹೊರಳಿ

ಅಚ್ಚರಿ:
(೧) ಜೋಡಿ ಪದಗಳು – ಚಾರು ಚಂದ್ರೋಪಲದ; ಬಹುವಿಸ್ತಾರ ಭದ್ರೋಪರಿಯ ಭವನದ, ಪರಿಯಂಕ ಪರಿಸಂಸ್ಕಾರದಲಿ, ಮಲಗುವ ಮಹೀಪತಿ

ಪದ್ಯ ೩೬: ಕೌರವರ ಸೈನ್ಯವು ಏಕೆ ಅಬ್ಬರಿಸಿತು?

ಸೆರಗ ಬೀಸಿದರಾರಿದರು ಬೊ
ಬ್ಬಿರಿದರುರು ಗಂಭೀರಭೇರಿಯ
ಬಿರುದನಿಗಳುಬ್ಬರಿಸಿದವು ಗಬ್ಬರಿಸಿದವು ನಭವ
ತೆರಹ ಕೊಡು ಕೊಡು ಭಾಷೆಕಾರನು
ಮೆರೆದು ಹೋಗಲಿ ವಹ್ನಿ ಕುಂಡದೊ
ಳೊರಗುವದ ನೋಡುವೆವೆನುತ ತನಿಗೆದರಿತರಿಸೇನೆ (ದ್ರೋಣ ಪರ್ವ, ೧೪ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕೌರವ ಸೈನ್ಯದವರು ಉತ್ತರೀಯದ ಸೆರಗನ್ನು ಬೀಸಿದರು. ಕೂಗಿದರು. ಭೇರಿಗಳನ್ನು ಬಾರಿಸಿದರು. ದಾರಿಬಿಡು ಪ್ರತಿಜ್ಞೆ ಮಾದಿದವನು ಮೆರವಣಿಗೆಯಲ್ಲಿ ಹೋಗಿ ಅಗ್ನಿಕುಂಡದಲ್ಲಿ ಸಾಯುವುದನ್ನು ನೋಡುತ್ತೇವೆ ಎಂದು ಅಬ್ಬರಿಸಿದರು.

ಅರ್ಥ:
ಸೆರಗ: ಉತ್ತರೀಯ; ಆರು: ಘರ್ಷಿಸು; ಬೀಸು: ತೂಗುವಿಕೆ; ಬೊಬ್ಬಿರಿ: ಗರ್ಜಿಸು; ಗಂಭೀರ: ಆಳವಾದುದು; ಭೇರಿ: ಒಂದು ಬಗೆಯ ಚರ್ಮವಾದ್ಯ, ನಗಾರಿ, ದುಂದುಭಿ; ಬಿರುದನಿ: ಜೋರಾದ ಶಬ್ದ; ಉಬ್ಬರ: ಹೆಚ್ಚು, ಅಧಿಕ; ಗಬ್ಬರಿಸು: ತೋಡು, ಬಗಿ; ನಭ: ಆಗಸ; ತೆರಹು: ಬಿಚ್ಚು, ತೆರೆ; ಕೊಡು: ನೀಡು; ಭಾಷೆ: ನುಡಿ; ಮೆರೆ: ಹೊಳೆ, ಪ್ರಕಾಶಿಸು; ಹೋಗು: ತೆರಳು; ವಹ್ನಿ: ಅಗ್ನಿ; ಕುಂಡ: ಹೋಮಕಾರ್ಯಕ್ಕಾಗಿ ನೆಲದಲ್ಲಿ ಮಾಡಿದ ಕುಣಿ, ಗುಣಿ; ಒರಗು: ಸಾಯು, ಮರಣ ಹೊಂದು; ನೋಡು: ವೀಕ್ಷಿಸು; ತನಿ: ಚೆನ್ನಾಗಿ ಬೆಳೆದುದು; ಕೆದರು: ಹರಡು; ಅರಿಸೇನೆ: ವೈರಿ ಸೈನ್ಯ;

ಪದವಿಂಗಡಣೆ:
ಸೆರಗ +ಬೀಸಿದರ್+ಆರಿದರು+ ಬೊ
ಬ್ಬಿರಿದರ್+ಉರು +ಗಂಭೀರ+ಭೇರಿಯ
ಬಿರುದನಿಗಳ್+ಉಬ್ಬರಿಸಿದವು +ಗಬ್ಬರಿಸಿದವು+ ನಭವ
ತೆರಹ+ ಕೊಡು +ಕೊಡು +ಭಾಷೆಕಾರನು
ಮೆರೆದು +ಹೋಗಲಿ +ವಹ್ನಿ +ಕುಂಡದೊಳ್
ಒರಗುವದ +ನೋಡುವೆವೆನುತ+ ತನಿ+ಕೆದರಿತ್+ಅರಿಸೇನೆ

ಅಚ್ಚರಿ:
(೧) ಉಬ್ಬರಿಸಿ, ಗಬ್ಬರಿಸಿ – ಪ್ರಾಸ ಪದ
(೨) ಅರ್ಜುನನನ್ನು ಹಂಗಿಸುವ ಪರಿ – ಭಾಷೆಕಾರನು ಮೆರೆದು ಹೋಗಲಿ ವಹ್ನಿ ಕುಂಡದೊಳೊರಗುವದ ನೋಡುವೆ