ಪದ್ಯ ೭: ಖಡ್ಗಗಳ ಕಾಂತಿಯು ಹೇಗಿತ್ತು?

ಒದಗಿತೆಡಬಲವಂಕದೊಯ್ಯಾ
ರದಲಿ ರಾವ್ತರು ಮುಂದೆ ತಲೆದೋ
ರಿದರು ಮುಂಗುಡಿಯವರು ಚೂಣಿಯ ಹೊಂತಕಾರಿಗಳು
ಅದಿರ್ವ ಖಡುಗದ ಕಾಂತಿ ಸೂರ್ಯನ
ಹೊದಿಸಿದುದು ಹೊದರೆದ್ದು ಕೊಂತದ
ತುದಿಗಳಿತ್ತವು ರಾಹುಭಯವನು ರವಿಯ ಮಂಡಲಕೆ (ದ್ರೋಣ ಪರ್ವ, ೧೨ ಸಂಧಿ, ೭ ಪದ್ಯ)

ತಾತ್ಪರ್ಯ:
ಭೀಮನ ಮುಂದೆ ಮುಂಗುಡಿಯ ಸೈನ್ಯವು ಹೊರಟಿತು. ಎಡಬಲದಲ್ಲಿ ರಾವುತರು ಸಂಭ್ರಮಿಸಿದರು. ಸೈನ್ಯದ ಮದಗರ್ವಿತರು ಮುಂಗುಡಿಯೊಡನಿದ್ದರು. ಖಡ್ಗಗಳ ಕಾಂತಿ ಸೂರ್ಯನನ್ನು ಮುಚ್ಚಿತು. ಕುಂತಗಳ ತುದಿಗಳನ್ನು ಕಂಡು ಸೂರ್ಯಮಂಡಲವು ರಾಹು ಬಂದನೆಂದು ಬೆದರಿತು.

ಅರ್ಥ:
ಒದಗು: ಹೊಂದಿಸು; ಎಡಬಲ: ಅಕ್ಕಪಕ್ಕ; ಒಯ್ಯಾರ: ಅಂದ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಮುಂದೆ: ಎದುರು; ತಲೆ: ಶಿರ; ತೋರು: ಪ್ರದರ್ಶಿಸು; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ಚೂಣಿ: ಮುಂದಿನ ಸಾಲು, ಮುಂಭಾಗ; ಹೊಂತಕಾರಿ: ಮೋಸಗಾರ; ಅದಿರು: ಕಂಪಿಸು; ಖಡುಗ: ಕತ್ತಿ; ಕಾಂತಿ: ಪ್ರಕಾಶ; ಸೂರ್ಯ: ರವಿ; ಹೊದೆ: ಬತ್ತಳಿಕೆ, ಪೊದೆ; ಹೊದರು: ಗುಂಪು, ಸಮೂಹ; ಎದ್ದು: ಮೇಲೇಳು; ಕೊಂತು: ದಿಂಡು; ತುದಿ: ಮುಂದಿನ ಭಾಗ; ಭಯ: ಅಂಜಿಕೆ; ರವಿ: ಸೂರ್ಯ; ಮಂಡಲ: ವರ್ತುಲಾಕಾರ;

ಪದವಿಂಗಡಣೆ:
ಒದಗಿತ್+ಎಡಬಲವ್+ಅಂಕದ್+ಒಯ್ಯಾ
ರದಲಿ +ರಾವ್ತರು +ಮುಂದೆ +ತಲೆದೋ
ರಿದರು +ಮುಂಗುಡಿಯವರು +ಚೂಣಿಯ +ಹೊಂತಕಾರಿಗಳು
ಅದಿರ್ವ +ಖಡುಗದ+ ಕಾಂತಿ +ಸೂರ್ಯನ
ಹೊದಿಸಿದುದು +ಹೊದರೆದ್ದು +ಕೊಂತದ
ತುದಿಗಳ್+ಇತ್ತವು +ರಾಹು+ಭಯವನು+ ರವಿಯ +ಮಂಡಲಕೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಅದಿರ್ವ ಖಡುಗದ ಕಾಂತಿ ಸೂರ್ಯನ ಹೊದಿಸಿದುದು
(೨) ಉಪಮಾನದ ಪ್ರಯೋಗ – ಹೊದರೆದ್ದು ಕೊಂತದ ತುದಿಗಳಿತ್ತವು ರಾಹುಭಯವನು ರವಿಯ ಮಂಡಲಕೆ

ಪದ್ಯ ೮೨:ಭೀಮನು ದ್ರೌಪದಿಯನ್ನು ಏನು ಕೇಳಿದನು?

ಮುಡಿಗೆ ಹಾಯ್ದವನುದರರಕ್ತವ
ತೊಡೆದು ಕಬರಿಯ ಕಟ್ಟೆ ಕಟ್ಟುವೆ
ನುಡಿಗೆಯಳಿದನ ಚರ್ಮವನು ನೀನುಡಿಸಲುಟ್ಟಪೆನು
ಎಡೆಯಲೊಯ್ಯಾರದಲಿ ಕಟ್ಟೆನು
ಮುಡಿಯ ಮಡಿಯುಡೆನೆಂಬ ತೇಜದ
ನುಡಿದ ನುಡಿ ಸಲೆ ಸಂದುದೇ ತನ್ನಾಣೆ ಹೇಳೆಂದ (ಕರ್ಣ ಪರ್ವ, ೧೯ ಸಂಧಿ, ೮೨ ಪದ್ಯ)

ತಾತ್ಪರ್ಯ:
ನಿನ್ನ ತಲೆಗೂದಲಿಗೆ ಕೈ ಬಾಚಿದವನ ರಕ್ತವನ್ನು ಲೇಪಿಸಿ ಮುಡಿಯನ್ನು ಕಟ್ಟುತ್ತೇನೆ. ನನ್ನ ವಸ್ತ್ರವನ್ನೆಳೆದವನ ಚರ್ಮವನ್ನು ನೀನು ಉಡಿಸಿದರೆ ಉಡುತ್ತೇನೆ ಎಂದು ನೀನು ಘಂತಾಘ್ಷವಾಗಿ ಹೇಳಿದ ಮಾತು ಪೂರ್ಣವಾಯಿತೇ? ದ್ರೌಪದಿ ನನ್ನಾಣೆಯಾಗಿ ಹೇಳು, ಎಂದು ಭೀಮನು ದ್ರೌಪದಿಯನ್ನು ಕೇಳಿದನು.

ಅರ್ಥ:
ಮುಡಿ: ಶಿರ; ಹಾಯ್ದು: ಹೊಡೆದ, ಹಾಕಿದ; ಉದರ: ಹೊಟ್ಟೆ, ಜಠರ; ರಕ್ತ: ನೆತ್ತರು; ತೊಡೆ:ಲೇಪಿಸು, ಬಳಿ, ಸವರು; ಕಬರಿ: ಹೆರಳು, ಜಡೆ; ಕಟ್ಟು: ಬಂಧಿಸು; ನುಡಿ: ಮಾತು; ಅಳಿ: ಸಾವು; ಚರ್ಮ: ತೊಗಲು; ಉಡಿಸು: ತೊಡು; ಎಡೆ:ಬಹಳವಾಗಿ; ಒಯ್ಯಾರ: ಬೆಡಗು, ಬಿನ್ನಾಣ; ಮಡಿ: ಶುಭ್ರ, ನೈರ್ಮಲ್ಯ; ಉಡು: ತೊಡು; ತೇಜ: ಪ್ರಕಾಶ; ನುಡಿ: ಮಾತು; ಸಂದು: ಅವಕಾಶ, ಸಂದರ್ಭ; ಆಣೆ: ಪ್ರಮಾಣ; ಹೇಳು: ತಿಳಿಸು;

ಪದವಿಂಗಡಣೆ:
ಮುಡಿಗೆ +ಹಾಯ್ದವನ್+ಉದರ+ರಕ್ತವ
ತೊಡೆದು +ಕಬರಿಯ +ಕಟ್ಟೆ +ಕಟ್ಟುವೆ
ನುಡಿಗೆ+ಅಳಿದನ +ಚರ್ಮವನು +ನೀನ್+ಉಡಿಸಲ್+ಉಟ್ಟಪೆನು
ಎಡೆಯಲ್+ಒಯ್ಯಾರದಲಿ +ಕಟ್ಟೆನು
ಮುಡಿಯ +ಮಡಿಯುಡೆನೆಂಬ+ ತೇಜದ
ನುಡಿದ+ ನುಡಿ+ ಸಲೆ+ ಸಂದುದೇ +ತನ್ನಾಣೆ+ ಹೇಳೆಂದ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಬರಿಯ ಕಟ್ಟೆ ಕಟ್ಟುವೆ

ಪದ್ಯ ೧೮: ದ್ರೌಪದಿಯ ಸಭೆಗೆ ಹೇಗೆ ಬಂದಳು?

ಕವಿದ ಚಿತ್ರಾವಳಿಯ ದಡ್ಡಿಯ
ವಿವಿಧ ಭಟರುಗ್ಗಡಣೆಯಲಿ ವರ
ಯುವತಿ ಬಂದಳು ಸಖಿಯರೊಯ್ಯಾರದಲಿ ನೃಪಸಭೆಗೆ
ನವ ಬಲಾಹಕದೊಳಗೆ ಮಿಂಚಿನ
ಗವಿ ಸಹಿತ ಮರಿಮೋಡವಾವಿ
ರ್ಭವಿಸಿತೆನೆ ದಂಡಿಗೆಯ ನಿಳಿದಳು ಹೊಕ್ಕಳೋಲಗವ (ಉದ್ಯೋಗ ಪರ್ವ, ೬ ಸಂಧಿ, ೧೮ ಪದ್ಯ)

ತಾತ್ಪರ್ಯ:
ದ್ರೌಪದಿಯಿದ್ದ ಪಲ್ಲಕಿಯು ಬಟ್ಟೆಗಳಿಂದ ಆವೃತವಾಗಿ ಪಂಜರದಂತ್ತಿತ್ತು. ಆ ಚಿತ್ರಾವಳಿಯಿಂದ ಕವಿದ ಪಲ್ಲಕಿಯಲ್ಲಿ ಕುಳಿತಿದ್ದ ದ್ರೌಪದಿಯನ್ನು ಭಟ್ಟರು ಹಲವಾರು ಹೊಗಳಿಕೆಯಿಂದ ಕರೆತರುತ್ತಿದ್ದರು. ಅತಿ ಶ್ರೇಷ್ಠ ಹೆಣ್ಣಾದ ದ್ರೌಪದಿಯು ತನ್ನ ಒಯ್ಯಾರದ ಸಖಿಯರೊಡನೆ ಸಭೆಗೆ ಆಗಮಿಸಿದಳು. ತನ್ನ ಪಲ್ಲಕ್ಕಿಯ ಪರದೆಯನ್ನು ಸರಸಿ ಹೊರಕ್ಕೆ ಬರುವುದು, ಮಹಾಮೇಘದಿಂದ ಮಿಂಚನ್ನೊಳಗೊಂಡ ಮರಿಮೋಡವು ಬಂದಿತೋ ಎಂಬಂತೆ ಪಲ್ಲಕ್ಕಿಯಿಂದಿಳಿದು ಸಭಾಭವನಕ್ಕೆ ಬಂದಳು.

ಅರ್ಥ:
ಕವಿದ: ಮುಚ್ಚಿದ; ಚಿತ್ರ: ವಿಚಿತ್ರ, ಆಶ್ಚರ್ಯ; ಆವಳಿ: ಸಾಲು; ದಡ್ಡಿ: ಪಂಜರ, ತೆರೆ; ವಿವಿಧ: ಹಲವಾರು; ಭಟರು: ಸೇವಕರು; ಉಗ್ಗಡ: ಗಟ್ಟಿಯಾದ ಕೂಗು, ಬಿರುದಾವಳಿಯ ಹೊಗಳಿಕೆ; ವರ: ಶ್ರೇಷ್ಠ; ಯುವತಿ: ಹೆಣ್ಣು; ಬಂದಳು: ಆಗಮಿಸು; ಸಖಿ: ಸೇವಕಿ; ಒಯ್ಯಾರ: ಬೆಡಗು, ಬಿನ್ನಾಣ, ಸೊಗಸು;ನೃಪ: ರಾಜ; ಸಭೆ: ಓಲಗ; ನವ: ಹೊಸ; ಬಲಾಹಕ: ಮೋಡ; ಮಿಂಚು: ಹೊಳಪು, ಕಾಂತಿ; ಗವಿ: ಗುಹೆ; ಸಹಿತ: ಜೊರೆ; ಮರಿ: ಚಿಕ್ಕ; ಮೋಡ: ಮೇಘ; ಆವಿರ್ಭವಿಸು: ಹುಟ್ಟು, ಕಾಣಿಸಿಕೊಳ್ಳು; ದಂಡಿಗೆ: ಪಲ್ಲಕ್ಕಿ; ಇಳಿದು: ಕೆಳಗೆ ಬಂದು; ಹೊಕ್ಕು: ಸೇರು; ಓಲಗ: ದರ್ಬಾರು;

ಪದವಿಂಗಡಣೆ:
ಕವಿದ +ಚಿತ್ರಾವಳಿಯ +ದಡ್ಡಿಯ
ವಿವಿಧ +ಭಟರ್+ಉಗ್ಗಡಣೆಯಲಿ +ವರ
ಯುವತಿ +ಬಂದಳು +ಸಖಿಯರ್+ಒಯ್ಯಾರದಲಿ +ನೃಪಸಭೆಗೆ
ನವ +ಬಲಾಹಕದೊಳಗೆ+ ಮಿಂಚಿನ
ಗವಿ+ ಸಹಿತ+ ಮರಿಮೋಡವ್+ಆವಿ
ರ್ಭವಿಸಿತೆನೆ+ ದಂಡಿಗೆಯನ್ +ಇಳಿದಳು +ಹೊಕ್ಕಳ್+ಓಲಗವ

ಅಚ್ಚರಿ:
(೧) ದ್ರೌಪದಿಯ ಆಗಮನ ಮೋಡದಲಿ ಮಿಂಚಿನ ಪ್ರಕಾಶಕ್ಕೆ ಹೋಲಿಸಿರುವುದು
(೨) ಬಲಾಹಕ, ಮೋಡ – ಸಮನಾರ್ಥಕ ಪದ