ಪದ್ಯ ೨೩: ಮಗುವಿನ ಬಳಿ ಯಾರು ಬಂದರು?

ಕೆದರಿ ಕಾಲಲಿ ಮಳಲ ರಾಶಿಯ
ನೊದೆದು ಕೈಗಳ ಕೊಡಹಿ ಭೋಯೆಂ
ದೊದರುತಿರ್ದನು ಶಿಶುಗಳರಸನು ರವಿಯನೀಕ್ಷಿಸುತ
ಇದನು ಕಂಡನು ಸೂತನೊಬ್ಬನು
ಮುದದ ಮದದಲಿ ತನ್ನ ಮರೆದು
ಬ್ಬಿದನಿದೆತ್ತಣ ನಿಧಿಯೊ ಶಿವಶಿವಯೆಂದು ನಡೆತಂದ (ಆದಿ ಪರ್ವ, ೩ ಸಂಧಿ, ೨೩ ಪದ್ಯ)

ತಾತ್ಪರ್ಯ:
ಆ ಮಗುವು ನದಿಯ ದಡದ ಮೇಲೆ ಮರಳಿನ ರಾಶಿಯನ್ನು ಕಾಲಲ್ಲಿ ಹೊಡೆಯುತ್ತಾ ಕೈಗಲನ್ನು ಕೊಡವುತ್ತಾ ಸೂರ್ಯನನ್ನೇ ನೋಡುತ್ತಾ ಜೊರಾಗಿ ಅಳುತ್ತಿತ್ತು. ಇದನ್ನು ನೋಡಿದ ಸಾರತಿಯನೊಬ್ಬನು ಸಂತೋಷಾತಿರೇಕದಿಂದ ಮೈಮರೆತು ಉಬ್ಬಿ, ಶಿವಶಿವಾ ಇದು ಎಲ್ಲಿಂದ ದೊರಕಿದ ನಿಧಿಯೆನ್ನುತ್ತಾ ಮಗುವಿನ ಬಳಿ ಬಂದನು.

ಅರ್ಥ:
ಕೆದರು: ಹರಡು; ಕಾಲು: ಪಾದ; ಮಳಲು: ಮರಳು; ರಾಶಿ: ಗುಂಪು; ಒದೆ: ನೂಕು; ಕೈ: ಹಸ್ತ; ಕೊಡಹು: ಅಲ್ಲಾಡಿಸು, ಕೊಡವು, ಜಾಡಿಸು ; ಒದರು: ಕಿರುಚು, ಗರ್ಜಿಸು; ಶಿಶು: ಮಗು; ಅರಸ: ರಾಜ; ರವಿ: ಸೂರ್ಯ; ಈಕ್ಷಿಸು: ನೋಡು; ಕಂಡು: ನೋಡು; ಸೂತ: ಸಾರಥಿ; ಮುದ: ಸಮ್ತಸ; ಮದ: ದರ್ಪ; ಮರೆ: ಎಚ್ಚರತಪ್ಪು; ಉಬ್ಬು: ಹಿಗ್ಗು, ಗರ್ವಿಸು; ನಿಧಿ: ಐಶ್ವರ್ಯ; ನಡೆ: ಚಲಿಸು;

ಪದವಿಂಗಡಣೆ:
ಕೆದರಿ +ಕಾಲಲಿ +ಮಳಲ +ರಾಶಿಯನ್
ಒದೆದು +ಕೈಗಳ +ಕೊಡಹಿ +ಭೋಯೆಂದ್
ಒದರುತಿರ್ದನು +ಶಿಶುಗಳ್+ಅರಸನು +ರವಿಯನ್+ಈಕ್ಷಿಸುತ
ಇದನು +ಕಂಡನು +ಸೂತನೊಬ್ಬನು
ಮುದದ +ಮದದಲಿ +ತನ್ನ+ ಮರೆದ್
ಉಬ್ಬಿದನ್+ಇದೆತ್ತಣ+ ನಿಧಿಯೊ +ಶಿವಶಿವಯೆಂದು +ನಡೆತಂದ

ಅಚ್ಚರಿ:
(೧) ಮಗುವನ್ನು ವರ್ಣಿಸುವ ಪರಿ – ಶಿಶುಗಳರಸನು, ಎತ್ತಣ ನಿಧಿಯೊ;

ಪದ್ಯ ೪: ಬ್ರಹ್ಮನ ಕಿವಿ ಏಕೆ ಕಿವುಡಾಯಿತು?

ತಿಗಡಲೊದರುವ ಹರಿಗೆಗಳ ಗೌ
ರಗಿವ ಹೆಗ್ಗಹಳೆಗಳ ಹೊನ್ನಾ
ಯುಗದ ಖಡುಗದ ಗಜರು ಡೊಂಕಣಿಗಳ ಝಣತ್ಕೃತಿಯ
ಬಿಗಿದ ಬಿಲು ಬೊಬ್ಬೆಗಳ ಬಿರುದರ
ವಿಗಡ ಮೂದಲೆಗಳ ಮಹಾಧ್ವನಿ
ಬಗಿದುದೈ ತಾವರೆಯ ತನಯನ ಕರ್ಣಕೋಟರವ (ಭೀಷ್ಮ ಪರ್ವ, ೨ ಸಂಧಿ, ೪ ಪದ್ಯ)

ತಾತ್ಪರ್ಯ:
ತಮ್ಮಟೆಗಳ ಹೊಡೆತ, ದೊಡ್ಡ ಕಹಳೆಗಳ ಕೂಗು, ಬಂಗಾರದ ಹಿಡಿಕೆಯುಳ್ಳ ಖಡ್ಗಗಳ ಆರ್ಭಟ, ಈಟಿಯ ಝಣತ್ಕಾರ, ಬಿಲ್ಲುಗಳ ಹೆದೆಯ ಸದ್ದು, ವೀರರ ಮೂದಲೆಯ ಸದ್ದುಗಳಿಂದ ಬ್ರಹ್ಮನ ಕಿವಿ ಕಿವುಡಿಕ್ಕಿತು.

ಅರ್ಥ:
ತಿಗಡು: ಹೊಡೆ, ಬಡಿ; ಒದರು: ಕೂಗು, ಕಿರುಚು; ಹರಿಗೆ: ಚಿಲುಮೆ, ತಲೆಪೆರಿಗೆ; ಹರಿ: ಕಮರಿ; ಚೆದುರು; ಗೌರಗಿ: ಆರ್ಭಟಿಸು; ಹೆಗ್ಗಹಳೆ:ದೊಡ್ಡದಾದ ಕಹಳೆ; ಹೊನ್ನ: ಚಿನ್ನ; ಖಡುಗ: ಕತ್ತಿ; ಗಜರು: ಆರ್ಭಟಿಸು; ಡೊಂಕಣಿ: ಈಟಿ; ಝಣತ್ಕೃತಿ: ಝಣಝಣ ಶಬ್ದ; ಬಿಗಿ: ಕಟ್ಟು, ಬಂಧಿಸು; ಬಿಲು: ಬಿಲ್ಲು; ಬೊಬ್ಬೆ: ಆರ್ಭಟ, ಜೋರಾದ ಕೂಗು; ಬಿರು: ಗಟ್ಟಿಯಾದುದು, ಬಿರುಸಾದುದು; ವಿಗಡ: ಶೌರ್ಯ, ಪರಾಕ್ರಮ; ಮೂದಲೆ: ಛೇಡಿಸುವಿಕೆ; ಮಹಾ: ದೊಡ್ಡ; ಧ್ವನಿ: ಶಬ್ದ; ಬಿಗಿದು: ಕಟ್ಟು, ಬಂಧಿಸು, ಭದ್ರ; ತಾವರೆ: ಕಮಲ; ತನಯ: ಮಗ; ಕರ್ಣ: ಕಿವಿ; ಕೋಟರ: ಬಿಲ, ರಂಧ್ರ;

ಪದವಿಂಗಡಣೆ:
ತಿಗಡಲ್+ಒದರುವ+ ಹರಿಗೆಗಳ+ ಗೌ
ರಗಿವ+ ಹೆಗ್ಗಹಳೆಗಳ+ ಹೊನ್ನಾ
ಯುಗದ +ಖಡುಗದ+ ಗಜರು +ಡೊಂಕಣಿಗಳ +ಝಣತ್ಕೃತಿಯ
ಬಿಗಿದ +ಬಿಲು +ಬೊಬ್ಬೆಗಳ +ಬಿರುದರ
ವಿಗಡ+ ಮೂದಲೆಗಳ+ ಮಹಾಧ್ವನಿ
ಬಗಿದುದೈ+ ತಾವರೆಯ +ತನಯನ+ ಕರ್ಣ+ಕೋಟರವ

ಅಚ್ಚರಿ:
(೧) ಬ ಕಾರದ ಸಾಲು ಪದ – ಬಿಗಿದ ಬಿಲು ಬೊಬ್ಬೆಗಳ ಬಿರುದರ
(೨) ಶಬ್ದಗಳ ವರ್ಣನೆ – ಒದರು, ಗೌರಗಿ, ಗಜರು, ಝಣತ್ಕೃತಿ, ಬೊಬ್ಬೆ, ಮಹಾಧ್ವನಿ
(೩) ಉಪಮಾನದ ಪ್ರಯೋಗ – ಬಿರುದರ ವಿಗಡ ಮೂದಲೆಗಳ ಮಹಾಧ್ವನಿ ಬಗಿದುದೈ ತಾವರೆಯ ತನಯನ ಕರ್ಣಕೋಟರವ
(೪) ಬ್ರಹ್ಮನನ್ನು ತಾವರೆಯ ತನಯ ಎಂದು ಕರೆದಿರುವುದು

ಪದ್ಯ ೨೭: ಮತ್ತಾವ ಅಪಶಕುನಗಳು ಕರ್ಣನನ್ನು ಆವರಿಸಿದವು?

ಒದರಿದವು ನರಿ ಮುಂದೆ ಕರ್ಣನ
ಕುದುರೆಗಳು ಮುಗ್ಗಿದವು ಪರಿವೇ
ಷದಲಿ ಸಪ್ತಗ್ರಹದ ವಕ್ರತೆ ಸೂರ್ಯಮಂಡಲಕೆ
ಇದಿರಿನಲಿ ಬಿರುಗಾಳಿ ಧೂಳಿಯ
ಕೆದರಿ ಬೀಸಿತು ನಿಖಿಳಬಲ ಮು
ಚ್ಚಿದುದು ಕಂಗಳನವನಿಪತಿ ಕಂಡನು ಮಹಾದ್ಭುತವ (ಕರ್ಣ ಪರ್ವ, ೮ ಸಂಧಿ, ೨೭ ಪದ್ಯ)

ತಾತ್ಪರ್ಯ:
ರಥದಲ್ಲಿ ಏರುತ್ತಿದ್ದಂತೆ ನರಿಗಳು ಅರಿಚಿಕೊಂಡವು, ರಥಕ್ಕೆ ಕಟ್ಟಿದ ಕುದುರೆಗಳು ಮುಗ್ಗುರಿಸಿದವು. ಸಪ್ತ ಗ್ರಹಗಳು ವಕ್ರಗತಿಯಲ್ಲಿ ಸೂರ್ಯನ ಸುತ್ತ ಸುಳಿದವು. ಬಿರುಗಾಳಿ ಬೀಸಿ ಧೂಳು ತುಂಬಲು ಸೈನ್ಯವು ಕಣ್ಣು ಮುಚ್ಚಿತು. ದೊರೆಯು ಈ ಆಶ್ಚರ್ಯ ಸಂಗತಿಯನ್ನು ನೋಡಿದನು.

ಅರ್ಥ:
ಒದರು: ಕಿರುಚು, ಗರ್ಜಿಸು; ಮುಂದೆ: ಎದುರು; ಕುದುರೆ: ಅಶ್ವ; ಮುಗ್ಗು: ಎಡವು; ಪರಿವೇಷ: ಸುತ್ತುವರಿದಿರುವುದು; ಸಪ್ತ: ಏಳು; ಗ್ರಹ: ಆಕಾಶಚರಗಳು; ವಕ್ರ: ಡೊಂಕಾದ, ಅಡ್ಡಿ; ಸೂರ್ಯ: ರವಿ; ಮಂಡಲ: ವರ್ತುಲಾಕಾರ; ಇದಿರು: ಎದುರು; ಬಿರುಗಾಳಿ: ಜೋರಾದ ಗಾಳಿ, ಸುಂಟರಗಾಳಿ; ಧೂಳು: ಮಣ್ಣಿನ ಪುಡಿ; ಕೆದರು: ಹರಡು; ಬೀಸು: ಹಾರು, ಹರಡು; ನಿಖಿಳ: ಎಲ್ಲಾ; ಬಲ: ಸೈನ್ಯ; ಮುಚ್ಚು: ಹೊದಿಸು; ಕಂಗಳು: ಕಣ್ಣು; ಅವನಿಪತಿ: ರಾಜ; ಕಂಡನು: ನೋಡಿದನು;

ಪದವಿಂಗಡಣೆ:
ಒದರಿದವು+ ನರಿ +ಮುಂದೆ +ಕರ್ಣನ
ಕುದುರೆಗಳು +ಮುಗ್ಗಿದವು +ಪರಿವೇ
ಷದಲಿ +ಸಪ್ತಗ್ರಹದ +ವಕ್ರತೆ +ಸೂರ್ಯ+ಮಂಡಲಕೆ
ಇದಿರಿನಲಿ +ಬಿರುಗಾಳಿ +ಧೂಳಿಯ
ಕೆದರಿ+ ಬೀಸಿತು +ನಿಖಿಳ+ಬಲ +ಮು
ಚ್ಚಿದುದು +ಕಂಗಳನ್+ಅವನಿಪತಿ+ ಕಂಡನು +ಮಹಾದ್ಭುತವ

ಅಚ್ಚರಿ:
(೧) ಅಪಶಕುನಗಳು – ಒದರಿದವು ನರಿ, ಕುದುರೆಗಳು ಮುಗ್ಗಿದವು, ಸಪ್ತಗ್ರಹದ ವಕ್ರತೆ, ಬಿರುಗಾಳಿ ಧೂಳಿ ಕೆದರಿ ಬೀಸಿತು

ಪದ್ಯ ೪: ಯಾವ ರೀತಿ ಪಾಂಡವರ ಪ್ರತಿಕ್ರಿಯೆ ಇತ್ತೆಂದು ಸಂಜಯ ಹೇಳಿದನು?

ಓಲಗದೊಳುಬ್ಬೆದ್ದು ನುಡಿಯಲಿ
ಹೂಳಿ ತಮತಮಗೆನ್ನ ಜರಿದರು
ಕಾಳಗಕೆ ಕೈಗಟ್ಟಿ ಹಿಂಡೆದ್ದೊದರಿತವನಿಪರು
ಮೇಲೆ ಸಂತೈಸಿದನು ಧರ್ಮನೃ
ಪಾಲನಲ್ಲಿಂ ಬಳಿಕ ಮುರಹರ
ನಾಲಯಕೆ ಪರಿಮಿತದೊಳರ್ಜುನನೆನ್ನ ಕರೆಸಿದನು (ಉದ್ಯೋಗ ಪರ್ವ, ೫ ಸಂಧಿ, ೪ ಪದ್ಯ)

ತಾತ್ಪರ್ಯ:
ನಾನು ಆ ದರ್ಬಾರಿನಲ್ಲಿ ನೀವು ಹೇಳಿದ ಮಾತುಗಳನ್ನು ಹೇಳಿದ ತಕ್ಷಣವೇ ಅಲ್ಲಿ ನೆರೆದಿದ್ದ ರಾಜರೆಲ್ಲರು ರೋಷದಿಂದ ಮೇಲೆದ್ದು ನನ್ನನ್ನು ಹಲವು ವಿಧವಾಗಿ ಮೂದಲಿಸಿದರು. ಅವರೆಲ್ಲರೂ ಒಟ್ಟಾಗಿ ‘ಯುದ್ಧಕ್ಕೆ ಬರಲಿ’ ಎಂದು ಗರ್ಜಿಸಿದರು. ಧರ್ಮಜನು ಅವರನ್ನು ಸಮಾಧಾನಪಡಿಸಿದನು. ಬಳಿಕ ಅರ್ಜುನನು ಸ್ವಲ್ಪಜನರೊಂದಿಗೆ ಇದ್ದ ಶ್ರೀಕೃಷ್ಣನ ಭವನಕ್ಕೆ ನನ್ನನ್ನು ಕರೆಸಿದನು.

ಅರ್ಥ:
ಓಲಗ: ದರ್ಬಾರು; ಉಬ್ಬು: ಗರ್ವಿಸು; ಎದ್ದು: ಮೇಲೇಳು; ನುಡಿ: ಮಾತು; ಹೂಳು: ಮುಳುಗಿಸು; ತಮತಮಗೆ: ಅವರವರಿಗೆ; ಜರಿ: ನಿಂದಿಸು, ತಿರಸ್ಕರಿಸು; ಕಾಳಗ: ಯುದ್ಧ; ಕೈಗಟ್ಟು: ಒದಗು, ಸಂಭವಿಸು, ಹೊಡೆದಾಡು; ಹಿಂಡು: ಗುಂಪು, ಸಮೂಹ; ಒದರು: ಗರ್ಜಿಸು, ಕೂಗು; ಅವನಿಪ: ರಾಜ; ಮೇಲೆ: ನಂತರ; ಸಂತೈಸು: ಸಮಾಧಾನ ಪಡಿಸು; ನೃಪಾಲ: ರಾಜ; ಬಳಿಕ: ನಂತರ; ಮುರಹರ: ಕೃಷ್ಣ; ಆಲಯ: ಮನೆ; ಪರಿಮಿತ: ಸೀಮಿತವಾದ, ಹೆಚ್ಚಿಲ್ಲದ; ಕರೆಸು: ಬರೆಮಾಡು;

ಪದವಿಂಗಡಣೆ:
ಓಲಗದೊಳ್+ಉಬ್ಬೆದ್ದು+ ನುಡಿಯಲಿ
ಹೂಳಿ +ತಮತಮಗ್+ಎನ್ನ+ ಜರಿದರು
ಕಾಳಗಕೆ+ ಕೈಗಟ್ಟಿ +ಹಿಂಡ್+ಎದ್+ಒದರಿತ್+ಅವನಿಪರು
ಮೇಲೆ +ಸಂತೈಸಿದನು +ಧರ್ಮ+ನೃ
ಪಾಲನ್+ಅಲ್ಲಿಂ+ ಬಳಿಕ +ಮುರಹರನ್
ಆಲಯಕೆ +ಪರಿಮಿತದೊಳ್+ಅರ್ಜುನನ್+ಎನ್ನ +ಕರೆಸಿದನು

ಅಚ್ಚರಿ:
(೧) ಅವನಿಪ, ನೃಪಾಲ – ಸಮನಾರ್ಥಕ ಪದ
(೨) ರಾಜರ ರೋಷವನ್ನು ವಿವರಿಸುವ ಪರಿ – ಎನ್ನ ಜರಿದರು ಕಾಳಗಕೆ ಕೈಗಟ್ಟಿ ಹಿಂಡೆದ್ದೊದರಿತವನಿಪರು

ಪದ್ಯ ೬: ಭೀಮನ ಪ್ರಯಾಣದ ದೃಶ್ಯ ಹೇಗಿತ್ತು?

ಪದದ ಬಲುಘಟ್ಟಣೆಗೆ ಭೂತಳ
ವದುರೆ ಹಸ್ತಾಂಗುಲಿಯು ತಾಕಿದೊ
ಡದುರಿ ಬೀಳಲು ಮೃಗನಿವಹತಾನಂಘ್ರಿಮೇಲಾಗಿ
ಗದೆಯ ತಿರುಹುತ ಸಿಂಹನಾದದೊ
ಳೊದರೆ ಮೃಗನಿವಹಂಗಳೆದೆಗಳು
ಅದುರೆ ಭರದಿಂ ಭೀಮ ಬಂದನು ವನದ ಮಧ್ಯದಲಿ (ಸಭಾ ಪರ್ವ, ೭ ಸಂಧಿ, ೬ ಪದ್ಯ)

ತಾತ್ಪರ್ಯ:
ಧರ್ಮರಾಯನ ಆಜ್ಞೆಮೇಲೆ ಭೀಮನು ಪುರುಷಾಮೃಗನನ್ನು ಭೇಟಿಯಾಗಲು ಹೊರಟನು. ಅವನ ನಡಿಗೆ ಹೇಗಿತ್ತು ಎಂದು ಈ ಪದ್ಯ ವರ್ಣಿಸುತ್ತದೆ. ಭೀಮನ ಕಾಲ್ನಡಿಗೆಯ ರಭಸಕ್ಕೆ ಭೂಮಿ ನಡುಗಿತು. ಅವನ ಕೈಬೆರಳುಗಳು ತಾಕಿದಾಗ ವನ್ಯಪಶುಗಳು ಕಾಲುಮೇಲಾಗಿ ಬಿದ್ದವು. ಸಿಂಹಗರ್ಜನೆ ಮಾಡುತ್ತಾ ಗದೆಯನ್ನು ತಿರುವುತ್ತಾ ಭೀಮನು ಕಾಡಿನಲ್ಲಿ ನಡೆಯುತ್ತಿರಲು, ಕಾಡು ಪ್ರಾಣಿಗಳು ಅದುರಿದವು.

ಅರ್ಥ:
ಪದ: ಪಾದ, ಚರಣ; ಬಲು: ಜೋರು; ಘಟ್ಟಣ: ತುಳಿತ, ಗಟ್ಟಿಮಾಡುವಿಕೆ; ಭೂತಳ: ಭೂಮಿ; ಅದುರು: ನಡುಗು, ಕಂಪಿಸು; ಹಸ್ತ: ಕೈ; ಅಂಗುಲಿ: ಬೆರಳು; ತಾಕು: ಮುಟ್ಟು; ಬೀಳು: ಕೆಳಕ್ಕೆ ಜಾರು; ಮೃಗ: ಪ್ರಾಣಿ; ನಿವಹ: ಗುಂಪು; ಅಂಘ್ರಿ: ಪಾದ; ಮೇಲಾಗು: ಕಾಲುಮೇಲೆ ಮಾಡು, ಉಲ್ಟ; ಗದೆ:ಮುದ್ಗರ; ತಿರುಹು: ಅಲ್ಲಾಡಿಸು; ಸಿಂಹ: ಕೇಸರಿ; ಸಿಂಹನಾದ: ಗರ್ಜಿಸು; ಒದರು: ಕೂಗು, ಕಿರುಚು, ಗರ್ಜಿಸು; ಎದೆ: ವಕ್ಷ; ಭರ: ಜೋರು;ಬಂದನು: ಆಗಮಿಸಿದನು; ವನ: ಕಾದು; ಮಧ್ಯ: ನಡುಭಾಗ;

ಪದವಿಂಗಡಣೆ:
ಪದದ +ಬಲುಘಟ್ಟಣೆಗೆ +ಭೂತಳವ್
ಅದುರೆ +ಹಸ್ತ+ಅಂಗುಲಿಯು +ತಾಕಿದೊಡ್
ಅದುರಿ +ಬೀಳಲು +ಮೃಗ+ನಿವಹತಾನ್+ಅಂಘ್ರಿ+ಮೇಲಾಗಿ
ಗದೆಯ+ ತಿರುಹುತ +ಸಿಂಹನಾದದೊಳ್
ಒದರೆ +ಮೃಗ+ನಿವಹಂಗಳ್+ಎದೆಗಳು
ಅದುರೆ +ಭರದಿಂ +ಭೀಮ +ಬಂದನು +ವನದ +ಮಧ್ಯದಲಿ

ಅಚ್ಚರಿ:
(೧) ಅದುರೆ, ಒದರೆ, – ಪ್ರಾಸ ಪದ ಕಂಪಿಸು, ಗರ್ಜಿಸು ಎಂದು ಅರ್ಥೈಸುವ ಪದ
(೨) ಮೃಗನಿವಹ – ೩, ೫ ಸಾಲಿನಲ್ಲಿ ಬರುವ ಪದ