ಪದ್ಯ ೫೩: ದುರ್ಯೋಧನನು ಏನೆಂದು ಗರ್ಜಿಸಿದನು?

ಫಡ ನಿಶಾಚರ ಹೋಗು ಹೋಗಳ
ವಡದು ಕರೆ ನಿಮ್ಮಯ್ಯನನು ಹೇ
ರೊಡಲ ತೋರಿಸಿ ಬಲವ ಬೆದರಿಸಲಗ್ಗಳಿಕೆಯಹುದೇ
ಮಿಡುಕುವರೆ ಕರೆ ನಿಮ್ಮ ತೆತ್ತಿಗ
ನಡಗಲೇತಕೆ ಕೃಷ್ಣ ನಿಮಗಿ
ನ್ನೊಡಲ ಬಳಿನೆಳಲವಸಹಿತ ಬಾಯೆಂದು ಗರ್ಜಿಸಿದ (ದ್ರೋಣ ಪರ್ವ, ೧೫ ಸಂಧಿ, ೫೩ ಪದ್ಯ)

ತಾತ್ಪರ್ಯ:
ಎಲೋ ರಾಕ್ಷಸ, ನಿನ್ನಿಂದಾಗುವುದಿಲ್ಲ, ನಿಮ್ಮಪ್ಪನನ್ನು ಕರೆದುಕೊಂಡು ಯುದ್ಧಕ್ಕೆ ಬಾ. ನಿಮ್ಮ ಬೆಟ್ಟದಾಕಾರದ ದೇಹವನ್ನು ತೋರಿಸಿ ಸೈನ್ಯವನ್ನು ಹೆದರಿಸುವುದು ದೊಡ್ಡಸ್ತಿಕೆ ಎಂದುಕೊಳ್ಳಬೇಡ. ಪರಾಕ್ರಮದಿಂದ ಹೋರಾಡಲು ನಿಮ್ಮ ಒಡೆಯ ಕೃಷ್ಣನನ್ನು ಕರೆ. ಅವನೇಕೆ ಅವಿತುಕೊಂಡು ನಿನ್ನನ್ನು ಕಳಿಸಿದ. ಅವನ ಸಮೇತ ಬಾ ಎಂದು ದುರ್ಯೋಧನನು ಗರ್ಜಿಸಿದನು.

ಅರ್ಥ:
ಫಡ: ತಿರಸ್ಕಾರದ ಮಾತು; ನಿಶಾಚರ: ರಾತ್ರಿಯಲ್ಲಿ ಚಲಿಸುವ (ದೆವ್ವ); ಹೋಗು: ತೆರಳು; ಅಳವಡು: ಹೊಂದು, ಸೇರು; ಕರೆ: ಬರೆಮಾಡು; ಅಯ್ಯ: ತಂದೆ; ಒಡಲು: ದೇಹ; ತೋರು: ಪ್ರದರ್ಶಿಸು; ಬಲ: ಸೈನ್ಯ; ಬೆದರಿಸು: ಹೆದರಿಸು; ಅಗ್ಗಳಿಕೆ: ದೊಡ್ಡಸ್ತಿಕೆ, ಶ್ರೇಷ್ಠತೆ; ಮಿಡುಕು: ಅಲುಗಾಟ; ಕರೆ: ಬರೆಮಾಡು; ತೆತ್ತಿಗ: ಸೇವಕ, ಆಳು; ನೆಳಲು: ನೆರಳು, ಅನುಯಾಯಿ; ಸಹಿತ: ಜೊತೆ; ಬಾ: ಆಗಮಿಸು; ಗರ್ಜಿಸು: ಕೂಗು; ಹೇರು: ದೊಡ್ಡ;

ಪದವಿಂಗಡಣೆ:
ಫಡ +ನಿಶಾಚರ +ಹೋಗು +ಹೋಗ್+ಅಳ
ವಡದು +ಕರೆ +ನಿಮ್ಮಯ್ಯನನು +ಹೇರ್
ಒಡಲ+ ತೋರಿಸಿ +ಬಲವ +ಬೆದರಿಸಲ್+ಅಗ್ಗಳಿಕೆ+ಅಹುದೇ
ಮಿಡುಕುವರೆ+ ಕರೆ +ನಿಮ್ಮ +ತೆತ್ತಿಗನ್
ಅಡಗಲೇತಕೆ +ಕೃಷ್ಣ +ನಿಮಗಿನ್
ಒಡಲ +ಬಳಿ+ನೆಳಲವ+ಸಹಿತ +ಬಾಯೆಂದು +ಗರ್ಜಿಸಿದ

ಅಚ್ಚರಿ:
(೧) ರಾಕ್ಷಸರನ್ನು ಹಂಗಿಸುವ ಪರಿ – ಹೇರೊಡಲ ತೋರಿಸಿ ಬಲವ ಬೆದರಿಸಲಗ್ಗಳಿಕೆಯಹುದೇ
(೨) ಒಡಲ – ೩, ೬ ಸಾಲಿನ ಮೊದಲ ಪದ

ಪದ್ಯ ೪೪: ಘಟೋತ್ಕಚನು ಹೇಗೆ ಕಂಡನು?

ಜಡಿವ ಹಿರಿಯುಬ್ಬಣದ ಹೆಚ್ಚಿದ
ಮುಡುಹುಗಳ ಮುರಿದಲೆಯ ಚರಣದ
ತೊಡರ ಮೊಳಗಿನ ಬಾವುಲಿಗಳಲಿ ಘಣಘಣ ಧ್ವನಿಯ
ನಿಡಿಯೊಡಲ ಮುರಿಮೀಸೆಗಳ ಕೆಂ
ಪಡರ್ದ ಕಂಗಲ ಹೊಳೆವ ದಾಡೆಯ
ದಡಿಗ ದಾನವನವನಿ ಹೆಜ್ಜೆಗೆ ನೆಗ್ಗಲೈ ತಂದ (ದ್ರೋಣ ಪರ್ವ, ೧೫ ಸಂಧಿ, ೪೪ ಪದ್ಯ)

ತಾತ್ಪರ್ಯ:
ಕೈಯಲ್ಲಿ ಲಾಲವಿಂಡಿಗೆಯಂತಹ ಚೂಪಾದ ಆಯುಧವನ್ನು ಹಿಡಿದು, ಉಬ್ಬಿದ್ದ ತೋಳಿನ ಮಾಂಸಖಂಡಗಳ, ಕೊಂಕು ಕೂದಲಿನ ತಲೆಯ, ಕಾಲಿಗೆ ಕಟ್ಟಿದ ಬಳೆಯ ಧ್ವನಿ, ಪೆಂಡೆಯದ ಸದ್ದಿನ, ಉದ್ದ ದೇಹದ, ತಿರುವಿದ ಮೀಸೆಗಳ, ಕೆಂಗಣ್ಣುಗಳ, ಹೊಳೆವ ಹಲ್ಲುಗಳ ದೊಡ್ಡದೇಹದ ರಾಕ್ಷಸನು ಬಂದನು. ಅವನಿಡುವ ಹೆಜ್ಜೆಗೆ ಭೂಮಿಯು ಕುಗ್ಗಿತು.

ಅರ್ಥ:
ಜಡಿ: ಬೆದರಿಕೆ, ಹೆದರಿಕೆ; ಹಿರಿ: ಹೆಚ್ಚು; ಉಬ್ಬಣ: ಲಾಳವಂಡಿಗೆ, ಚೂಪಾದ ಆಯುಧ; ಹೆಚ್ಚು: ಅಧಿಕ; ಮುಡುಹು: ಹೆಗಲು, ಭುಜಾಗ್ರ; ಮುರಿ: ಸೀಳು; ತಲೆ: ಶಿರ; ಚರಣ: ಪಾದ; ತೊಡರು: ಸಂಕೋಲೆ, ಸರಪಳಿ; ಮೊಳಗು: ಧ್ವನಿಮಾಡು, ಶಬ್ದ ಮಾಡು; ಬಾವುಲಿ: ಒಂದು ಬಗೆಯ ಕಿವಿಯಾಭರಣ; ಘಣ: ಶಬ್ದವನ್ನು ಸೂಚಿಸುವ ಪದ; ಧ್ವನಿ: ಶಬ್ದ; ನಿಡಿ: ಉದ್ದವಾದ; ಒಡಲು: ದೇಹ; ಮುರಿ: ಸೀಳು; ಕಂಗಳು: ಕಣ್ಣು, ನಯನ; ಹೊಳೆ: ಪ್ರಕಾಶ; ದಾಡೆ: ದವಡೆ, ಒಸಡು; ದಡಿಗ: ಬಲಶಾಲಿ; ದಾನವ: ರಾಕ್ಷಸ; ಹೆಜ್ಜೆ: ಪಾದ; ನೆಗ್ಗು: ಕುಗ್ಗು, ಕುಸಿ; ಐತಂದು: ಬಂದು ಸೇರು;

ಪದವಿಂಗಡಣೆ:
ಜಡಿವ +ಹಿರಿ+ಉಬ್ಬಣದ +ಹೆಚ್ಚಿದ
ಮುಡುಹುಗಳ +ಮುರಿ+ತಲೆಯ +ಚರಣದ
ತೊಡರ +ಮೊಳಗಿನ+ ಬಾವುಲಿಗಳಲಿ +ಘಣಘಣ+ ಧ್ವನಿಯ
ನಿಡಿ+ಒಡಲ +ಮುರಿ+ಮೀಸೆಗಳ +ಕೆಂ
ಪಡರ್ದ+ ಕಂಗಳ +ಹೊಳೆವ +ದಾಡೆಯ
ದಡಿಗ +ದಾನವನ್+ಅವನಿ +ಹೆಜ್ಜೆಗೆ +ನೆಗ್ಗಲ್+ಐತಂದ

ಅಚ್ಚರಿ:
(೧) ಘಟೋತ್ಕಚನ ಆಗಮನದ ಶಬ್ದ – ತೊಡರ ಮೊಳಗಿನ ಬಾವುಲಿಗಳಲಿ ಘಣಘಣ ಧ್ವನಿಯ

ಪದ್ಯ ೨೭: ಭೀಷ್ಮರು ಯಾವ ನಿರ್ಧಾರಕ್ಕೆ ಬಂದರು?

ಆದಡೇನಿದಿರಾವ ರಿಪುಬಲ
ವಾದುದನು ಸಂಹರಿಸಿ ಮಕ್ಕಳ
ಕಾದು ಬಿಸುಡುವೆನೊಡಲನಾ ಸಂಗ್ರಾಮ ಭೂಮಿಯಲಿ
ಆದುದಾಗಲಿ ಬಳಿಕ ಮಾಡುವ
ಭೇದ ಬೇರಿಲ್ಲೆನುತ ಹೃತ್ಸಂ
ವಾದವನು ಬೀಳ್ಕೊಟ್ಟು ಗಂಗಾಸೂನು ಪವಡಿಸಿದ (ಭೀಷ್ಮ ಪರ್ವ, ೧ ಸಂಧಿ, ೨೭ ಪದ್ಯ)

ತಾತ್ಪರ್ಯ:
ಭೀಷ್ಮನು ಯೋಚಿಸುತ್ತಾ, ಸ್ಥಿತಿಯು ಹೀಗಿರಲು ನಾನೇನು ಮಾಡಲಿ, ಎದುರಿಗೆ ಬಂದ ಶತ್ರುಸೈನ್ಯವನ್ನು ಕೊಂದು, ಮಕ್ಕಳನ್ನು ಸಂರಕ್ಷಿಸಿ, ಯುದ್ಧದಲ್ಲಿ ಈ ದೇಹವನ್ನು ಬಿಡುತ್ತೇನೆ, ಆದುದಾಗಲಿ ನಂತರ ಮಾಡುವ ಭಿನ್ನಾಭಿಪ್ರಾಯಗಳು ಬೇರಿಲ್ಲವೆಂದು ತಿಳಿದು ತನ್ನ ಮನಸ್ಸಿನ ಸಂವಾದವನ್ನು ನಿಲ್ಲಿಸಿ ಮಲಗಿಕೊಂಡನು.

ಅರ್ಥ:
ಇದಿರು: ಎದುರು; ರಿಪುಬಲ: ವೈರಿಸೈನ್ಯ; ಸಂಹರಿಸು: ನಾಶಮಾಡು; ಮಕ್ಕಳು: ಸುತರು; ಕಾದು: ಹೋರಾಟ, ಯುದ್ಧ; ಬಿಸುಡು: ಹೊರಹಾಕು; ಸಂಗ್ರಾಮ: ಯುದ್ಧ; ಭೂಮಿ: ನೆಲ; ಬಳಿಕ: ನಂತರ; ಭೇದ: ಬಿರುಕು, ಛಿದ್ರ; ಬೇರೆ: ಅನ್ಯ; ಹೃತ್: ಹೃದಯ, ತನ್ನಜೊತೆ; ಸಂವಾದ: ಮಾತುಕತೆ; ಬೀಳ್ಕೊಡು: ತೆರಳು; ಪವಡಿಸು: ಮಲಗು; ಒಡಲು: ದೇಹ;

ಪದವಿಂಗಡಣೆ:
ಆದಡೇನ್+ಇದಿರಾವ +ರಿಪುಬಲವ್
ಆದುದನು +ಸಂಹರಿಸಿ+ ಮಕ್ಕಳ
ಕಾದು +ಬಿಸುಡುವೆನ್+ಒಡಲನ್+ಆ+ ಸಂಗ್ರಾಮ +ಭೂಮಿಯಲಿ
ಆದುದಾಗಲಿ +ಬಳಿಕ+ ಮಾಡುವ
ಭೇದ +ಬೇರಿಲ್ಲೆನುತ +ಹೃತ್ಸಂ
ವಾದವನು +ಬೀಳ್ಕೊಟ್ಟು +ಗಂಗಾಸೂನು +ಪವಡಿಸಿದ

ಅಚ್ಚರಿ:
(೧) ಭೀಷ್ಮರ ನಿರ್ಣಯ – ಮಕ್ಕಳ ಕಾದು ಬಿಸುಡುವೆನೊಡಲನಾ ಸಂಗ್ರಾಮ ಭೂಮಿಯಲಿ

ಪದ್ಯ ೫೪: ಕುದುರೆಗಳು ಹೇಗೆ ಓಡಿದವು?

ಸಡಿಲಬಿಡೆ ವಾಘೆಯನು ಚಿಮ್ಮಿದ
ವೊಡನೊಡನೆ ವೇಗಾಯ್ಲ ತೇಜಿಗ
ಳೊಡೆದುದಿಳೆಯೆನೆ ಗಜರುಮಿಗೆ ಗರ್ಜಿಸಿದವಳ್ಳಿರಿದು
ಕುಡಿನೊರೆಯ ಕಟವಾಯ ಲೋಳೆಯೊ
ಳೊಡಲ ಸಂಚದ ನುಡಿಯ ಘುಡು ಘುಡು
ಘುಡಿಪ ನಾಸಾಪುಟದ ಹುಂಕೃತಿ ಮಸಗೆ ಮುಂಚಿದವು (ವಿರಾಟ ಪರ್ವ, ೭ ಸಂಧಿ, ೫೪ ಪದ್ಯ)

ತಾತ್ಪರ್ಯ:
ಲಗಾಮನ್ನು ಸಡಿಲು ಬಿಡಲು, ವೇಗವರ್ತಿಗಳಾದ ಕುದುರೆಗಳು, ಹೇಷಾರವದೊಂದಿಗೆ ಚಿಮ್ಮಿ ಓಡಿದವು. ಅವುಗಳ ಬಾಯಿಯ ಕೊನೆಯಲ್ಲಿ ನೊರೆ ಕಾಣಿಸಿತು, ಮೂಗಿನಲ್ಲಿ ಘುಡು ಘುಡು ಶಬ್ದವು ಕೇಳಿತು.

ಅರ್ಥ:
ಸಡಿಲ: ಬಿಗಿಯಿಲ್ಲದಿರುವುದು; ವಾಘೆ: ಲಗಾಮು; ಚಿಮ್ಮು: ಹಾರು; ವೇಗಾಯ: ವೇಗವಾಗಿ ಚಲಿಸುವ; ತೇಜಿ: ಕುದುರೆ; ಇಳೆ: ಭೂಮಿ; ಗಜರು: ಬೆದರಿಸು; ಗರ್ಜಿಸು: ಆರ್ಭಟ; ಇರಿ: ತಿವಿ, ಚುಚ್ಚು; ಕುಡಿ: ತುದಿ, ಕೊನೆ; ನೊರೆ: ಬುರುಗು, ಫೇನ; ಕಟವಾಯಿ: ಬಾಯ ಕೊನೆ; ಲೋಳೆ: ಅ೦ಟುಅ೦ಟಾಗಿರುವ ದ್ರವ್ಯ; ಒಡಲು: ದೇಹ ಸಂಚ: ಮೊತ್ತ, ರಾಶಿ; ನುಡಿ: ಮಾತು; ಘುಡು: ಶಬ್ದವನ್ನು ವಿವರಿಸುವ ಪದ; ನಾಸ: ನಾಸಿಕ, ಮೂಗು; ಪುಟ: ಪುಟಿಗೆ, ನೆಗೆತ; ಹುಂಕೃತಿ: ಹೂಂಕಾರ; ಮಸಗು: ಕೆರಳು; ತಿಕ್ಕು; ಮುಂಚು: ಮೊದಲು, ಮುಂದು;

ಪದವಿಂಗಡಣೆ:
ಸಡಿಲಬಿಡೆ +ವಾಘೆಯನು +ಚಿಮ್ಮಿದವ್
ಒಡನೊಡನೆ +ವೇಗಾಯ್ಲ +ತೇಜಿಗಳ್
ಒಡೆದುದ್+ಇಳೆಯೆನೆ+ ಗಜರುಮಿಗೆ +ಗರ್ಜಿಸಿದವಳ್ಳ್+ಇರಿದು
ಕುಡಿನೊರೆಯ +ಕಟವಾಯ +ಲೋಳೆಯೊಳ್
ಒಡಲ +ಸಂಚದ +ನುಡಿಯ +ಘುಡು +ಘುಡು
ಘುಡಿಪ +ನಾಸಾಪುಟದ +ಹುಂಕೃತಿ +ಮಸಗೆ +ಮುಂಚಿದವು

ಅಚ್ಚರಿ:
(೧) ಕುದುರೆಯ ನಾಸಿಕದ ಶಬ್ದವನ್ನು ವಿವರಿಸುವ ಪರಿ – ಘುಡು ಘುಡುಘುಡಿಪ ನಾಸಾಪುಟದ ಹುಂಕೃತಿ ಮಸಗೆ ಮುಂಚಿದವು

ಪದ್ಯ ೭೭: ಸ್ವರ್ಗಕ್ಕೆ ಹೋಗುವವರ ಗುಣಗಳಾವುವು?

ಇತ್ತ ನೋಡೈ ಸ್ವಾಮಿ ಕಾರ್ಯಕೆ
ತೆತ್ತನೊಡಲನು ವರ ರಣಾಗ್ರದೊ
ಳಿತ್ತಲೈದನೆ ಭೂಮಿ ಕನ್ಯಾ ಗೋಧನಾವಳಿಯ
ಇತ್ತವನು ಸತ್ಪುತ್ರನನುತಾ
ಹೆತ್ತವನು ಗೋವಿಪ್ರಬಾಧೆಗೆ
ಸತ್ತವನ ನೆಲೆ ಪಾರ್ಥ ನೋಡುತ್ತಮ ವಿಮಾನದಲಿ (ಅರಣ್ಯ ಪರ್ವ, ೮ ಸಂಧಿ, ೭೭ ಪದ್ಯ)

ತಾತ್ಪರ್ಯ:
ಅರ್ಜುನ ವಿಮಾನದಲ್ಲಿ ಹೋಗುತ್ತಿರುವವರನ್ನು ಇತ್ತ ನೋಡು, ಇವನು ರಣರಂಗದಲ್ಲಿ ತನ್ನ ಒಡೆಯನಿಗಾಗಿ ಪ್ರಾಣವನ್ನು ಬಿಟ್ಟವನು, ಭೂದಾನ, ಕನ್ಯಾದಾನ, ಗೋದಾನಗಳನ್ನು ಕೊಟ್ಟವನಿವನು, ಇವನು ಸತ್ಪುತ್ರನನ್ನು ಪಡೆದವನು, ಇವನು ಗೋಗಳಿಗೆ ಬ್ರಾಹ್ಮಣರಿಗೆ ಬಾಧೆಯನ್ನು ಹೋಗಲಾಡಿಸಲು ಹೊರಟು ಸತ್ತವನು ಎಂದು ಮಾತಲಿಯು ಅರ್ಜುನನಿಗೆ ತೋರಿಸಿದನು.

ಅರ್ಥ:
ನೋಡು: ವೀಕ್ಷಿಸು; ಸ್ವಾಮಿ: ಒಡೆಯ; ಕಾರ್ಯ: ಕೆಲಸ; ತೆತ್ತ: ನೀಡು; ಒಡಲು: ಪ್ರಾಣ; ವರ: ಶ್ರೇಷ್ಠ; ರಣ: ಯುದ್ಧ; ಭೂಮಿ: ಧರಿತ್ರಿ; ಕನ್ಯ: ಹೆಣ್ಣು; ಗೋಧನ: ಗೋವು; ಆವಳಿ: ಗುಂಪು; ಸತ್ಪುತ್ರ: ಒಳ್ಳೆಯ ಮಗ; ಗೋ: ಗೋವು, ಹಸು; ವಿಪ್ರ: ಬ್ರಾಹ್ಮಣ; ಬಾಧೆ: ನೋವು; ಸತ್ತ: ಪ್ರಾಣ ಬಿಡು, ಅಳಿ; ನೆಲೆ: ಸ್ಥಾನ; ಉತ್ತಮ: ಶ್ರೇಷ್ಠ; ವಿಮಾನ: ಆಕಾಶದಲ್ಲಿ ಹಾರುವ ವಾಹನ;

ಪದವಿಂಗಡಣೆ:
ಇತ್ತ +ನೋಡೈ +ಸ್ವಾಮಿ +ಕಾರ್ಯಕೆ
ತೆತ್ತನ್+ಒಡಲನು +ವರ +ರಣಾಗ್ರದೊಳ್
ಇತ್ತಲೈದನೆ +ಭೂಮಿ +ಕನ್ಯಾ +ಗೋಧನ+ಆವಳಿಯ
ಇತ್ತವನು +ಸತ್ಪುತ್ರನನು+ತಾ
ಹೆತ್ತವನು +ಗೋ+ವಿಪ್ರ+ಬಾಧೆಗೆ
ಸತ್ತವನ +ನೆಲೆ +ಪಾರ್ಥ +ನೋಡ್+ಉತ್ತಮ +ವಿಮಾನದಲಿ

ಅಚ್ಚರಿ:
(೧) ಇತ್ತ, ತೆತ್ತ, ಸತ್ತ, ಹೆತ್ತ – ಪ್ರಾಸ ಪದಗಳು

ಪದ್ಯ ೪೪: ದುರ್ಯೋಧನನು ಹೇಗೆ ಸಾಯುತ್ತೇನೆಂದು ಹೇಳಿದನು?

ಸಿಂಗಿಯನು ಬಿತ್ತಿದೆನು ಪಾಂಡವ
ರಂಗದಲಿ ತತ್ಫಲದ ಬೆಳಸಿನ
ಸಿಂಗಿಯಲಿ ತಾ ಸಾವೆನಲ್ಲದೊಡಗ್ನಿ ಕುಂಡದಲಿ
ಭಂಗಿಸುವೆನಾ ಫಲದೊಳೆನ್ನನು
ನುಂಗಬೇಹುದು ವಹ್ನಿ ಮೇಣೀ
ಗಂಗೆಯಲಿ ಬಿದ್ದೊಡಲ ನೀಗುವೆನೆನುತ ಬಿಸುಸುಯ್ದ (ಸಭಾ ಪರ್ವ, ೧೩ ಸಂಧಿ, ೪೪ ಪದ್ಯ)

ತಾತ್ಪರ್ಯ:
ನಾನು ಪಾಂಡವರಿಗೆ ಘೋರವಾದ ವಿಷವನ್ನುಣಿಸಿದೆನು. ಅದರ ಫಲವು ಹಿರಿದಾಗಿ ಬೆಳೆದು ಆ ವಿಷದಿಂದಲೇ ನಾನು ಸಾಯುತ್ತೇನೆ. ಇಲ್ಲದಿದ್ದರೆ ಬೆಂಕಿಯ ಕುಂಡದಲ್ಲೋ ನೀರಿನಲ್ಲಿ ಬಿದ್ದೋ ಈ ದೇಹವನ್ನು ಬಿಡುತ್ತೇನೆ ಎಂದು ತನ್ನ ನೋವನ್ನು ತೋಡಿಕೊಂಡನು.

ಅರ್ಥ:
ಸಿಂಗಿ: ಒಂದು ಬಗೆಯ ಘೋರ ವಿಷ; ಬಿತ್ತು: ಉಂಟುಮಾಡು, ಪ್ರಚಾರ ಮಾಡು; ರಂಗ: ವೇದಿಕೆ; ಫಲ: ಪ್ರಯೋಜನ; ಬೆಳಸು: ವಿಕಸನಗೊಳ್ಳು; ಸಾವು: ಮರಣ; ಅಗ್ನಿ: ಬೆಂಕಿ; ಕುಂಡ: ಗುಣಿ, ಹೋಮದ ಗುಳಿ; ಭಂಗಿಸು: ಅಪಮಾನ ಮಾಡು, ನಾಶಮಾಡು, ಸೋಲಿಸು; ಫಲ: ಪ್ರಯೋಜನ; ನುಂಗು: ಸ್ವಾಹ ಮಾಡು; ವಹ್ನಿ: ಅಗ್ನಿ; ಮೇಣ್; ಅಥವ; ಗಂಗೆ: ನೀರು; ಬಿದ್ದು: ಬೀಳು; ನೀಗು: ಬಿಡು, ತೊರೆ, ತ್ಯಜಿಸು; ಬಿಸುಸುಯ್ದ: ನಿಟ್ಟುಸಿರು ಬಿಡು;

ಪದವಿಂಗಡಣೆ:
ಸಿಂಗಿಯನು +ಬಿತ್ತಿದೆನು +ಪಾಂಡವ
ರಂಗದಲಿ +ತತ್ಫಲದ +ಬೆಳಸಿನ
ಸಿಂಗಿಯಲಿ +ತಾ +ಸಾವೆನಲ್ಲದೊಡ್+ಅಗ್ನಿ +ಕುಂಡದಲಿ
ಭಂಗಿಸುವೆನಾ +ಫಲದೊಳ್+ಎನ್ನನು
ನುಂಗಬೇಹುದು +ವಹ್ನಿ +ಮೇಣ್
ಈ+ಗಂಗೆಯಲಿ +ಬಿದ್+ಒಡಲ +ನೀಗುವೆನ್+ಎನುತ +ಬಿಸುಸುಯ್ದ

ಅಚ್ಚರಿ:
(೧) ಸಾಯುವೆನು ಎನ್ನುವ ಪರಿ – ಭಂಗಿಸುವೆನಾ ಫಲದೊಳೆನ್ನನು ನುಂಗಬೇಹುದು ವಹ್ನಿ ಮೇಣೀ ಗಂಗೆಯಲಿ ಬಿದ್ದೊಡಲ ನೀಗುವೆನೆನುತ ಬಿಸುಸುಯ್ದ