ಪದ್ಯ ೧೫: ಕರ್ಣನಿಟ್ಟ ಗುರಿಬಗ್ಗೆ ಶಲ್ಯನು ಏನು ಹೇಳಿದ?

ಆಯಿತಿದು ಸರಳೊಳ್ಳಿತೈ ಕುರು
ರಾಯನಭ್ಯುದಯ ಪ್ರಪಂಚವಿ
ದಾಯಿತೌ ಸಂಧಾನವೊಡಬಡದೆನ್ನ ಚಿತ್ತದಲಿ
ಸಾಯಕವ ನೀ ತಿರುಗಿ ತೊಡು ನಿ
ರ್ದಾಯದಲಿ ನೆಲನಹುದಲಾ ರಾ
ಧೇಯ ಎಂದನು ಶಲ್ಯನವನೀಪಾಲ ಕೇಳೆಂದ (ಕರ್ಣ ಪರ್ವ, ೨೫ ಸಂಧಿ, ೧೫ ಪದ್ಯ)

ತಾತ್ಪರ್ಯ:
ಶಲ್ಯನು ಕರ್ಣನಿಗೆ ತನ್ನ ಮಾತನ್ನು ಮುಂದುವರಿಸುತ್ತಾ, ಈ ಅಸ್ತ್ರವೇನೋ ಅತಿ ಶ್ರೇಷ್ಠವಾದುದು, ಇದು ಕುರುರಾಯನ ಅಭ್ಯುದಯಕ್ಕೆ ಸಾಧನವಾಗಿದೆ. ಆದರೆ ನೀನಿಟ್ಟ ಗುರಿ ನನ್ನ ಮನಸ್ಸಿಗೆ ಒಪ್ಪಿಗೆಯಾಗಲಿಲ್ಲ. ನೀನು ಈ ಬಾಣವನ್ನು ಮತ್ತೆ ಹೂಡಿದರೆ ಕೌರವನಿಗೆ ನಿಶ್ಚಯವಾಗಿ ರಾಜ್ಯಾಧಿಪತ್ಯ ದೊರಕುತ್ತದೆ ಎಂದನು.

ಅರ್ಥ:
ಆಯಿತು: ತೀರಿತು, ಮುಗಿಯಿತು; ಸರಳು: ಬಾಣ; ರಾಯ: ರಾಜ; ಅಭ್ಯುದಯ: ಅಭಿವೃದ್ಧಿ; ಪ್ರಪಂಚ: ಜಗತ್ತು; ಸಂಧಾನ: ಸಂಯೋಗ, ಹೊಂದಿಸುವುದು; ಒಡಬಡಿಸು: ಒಪ್ಪಿಸು; ಚಿತ್ತ: ಮನಸ್ಸು; ಸಾಯಕ: ಬಾಣ; ತಿರುಗು: ಸುತ್ತು, ದಿಕ್ಕನ್ನು ಬದಲಾಯಿಸು; ತೊಡು: ಧರಿಸು; ನಿರ್ದಾಯದ: ಅಖಂಡ; ನೆಲ: ಭೂಮಿ; ಅಹುದು: ಸಮ್ಮತಿಸು, ಹೌದು; ರಾಧೇಯ: ಕರ್ಣ; ಅವನೀಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಆಯಿತ್+ಇದು +ಸರಳ್+ಒಳ್ಳಿತೈ +ಕುರು
ರಾಯನ್+ಅಭ್ಯುದಯ +ಪ್ರಪಂಚವಿದ್
ಆಯಿತೌ +ಸಂಧಾನವ್+ಒಡಬಡದ್+ಎನ್ನ +ಚಿತ್ತದಲಿ
ಸಾಯಕವ+ ನೀ +ತಿರುಗಿ +ತೊಡು +ನಿ
ರ್ದಾಯದಲಿ +ನೆಲನ್+ಅಹುದಲಾ +ರಾ
ಧೇಯ +ಎಂದನು +ಶಲ್ಯನ್+ಅವನೀಪಾಲ +ಕೇಳೆಂದ

ಅಚ್ಚರಿ:
(೧) ಸಮನಾರ್ಥಕ ಪದ – ರಾಯ, ಆವನೀಪಾಲ; ಸರಳು, ಸಾಯಕ

ಪದ್ಯ ೨೨: ಪಾಂಡವರ ಪ್ರೀತಿ ಬಗ್ಗೆ ದುರ್ಯೋಧನನ ಭಾವನೆ ಹೇಗಿತ್ತು?

ಧರ್ಮಜನ ಕಡುಮೋಹವೆಂಬುದು
ನಿಮ್ಮ ಚರಣದೊಳಿರಲಿ ಭೀಮನ
ಹಮ್ಮುತಮ್ಮೊಳಗಿರಲಿ ಫಲುಗುಣನೊಲುಮೆಯಂತಿರಲಿ
ಎಮ್ಮ ಭೂಮಿಯೊಳರೆಯ ಬೇಡುವ
ರೆಮ್ಮ ಬಂಧುಗಳಲ್ಲ ಸಂಧಿಗೆ
ತಮ್ಮನೊಡಬಡನೆಂದು ದುಶ್ಯಾಸನನ ನೋಡಿದನು (ಉದ್ಯೋಗ ಪರ್ವ, ೯ ಸಂಧಿ, ೨೨ ಪದ್ಯ)

ತಾತ್ಪರ್ಯ:
ಧರ್ಮರಾಯನ ಮೋಹವು ನಿಮ್ಮ ಪಾದಗಳ ಮೇಲಿರಲಿ, ಭೀಮನ ಹಮ್ಮು ನಿಮ್ಮೊಳಗಿರಲಿ, ಅರ್ಜುನನ ಪ್ರೀತಿ ಹಾಗೆಯೇ ಇರಲಿ, ನಮ್ಮ ಭೂಮಿಯಲ್ಲಿ ಅರ್ಧ ಭಾಗವನ್ನು ಕೇಳಲು ಬಂದಿರುವ ಪಾಂಡವರು ನಮ್ಮ ಬಂಧುಗಳಲ್ಲಿ. ಇಷ್ಟಕ್ಕೂ ಈ ಸಂಧಿಗೆ ನನ್ನ ತಮ್ಮನು ಒಪ್ಪುವುದಿಲ್ಲ ಎಂದು ಹೇಳುತ್ತಾ ದುರ್ಯೋಧನನು ದುಶ್ಯಾಸನ ಕಡೆಗೆ ನೋಡಿದನು.

ಅರ್ಥ:
ಧರ್ಮಜ: ಧರ್ಮರಾಯ; ಕಡುಮೋಹ: ಅತೀವ ಪ್ರೀತಿ; ಚರಣ: ಪಾದ; ಹಮ್ಮು: ಅಹಂಕಾರ; ಒಲುಮೆ: ಪ್ರೀತಿ; ಭೂಮಿ: ಅವನಿ; ಅರೆ: ಅರ್ಧ; ತಮ್ಮ: ಸೋದರ; ಒಡಬಡನು: ಒಪ್ಪನು; ನೋಡು: ವೀಕ್ಷಿಸು;

ಪದವಿಂಗಡಣೆ:
ಧರ್ಮಜನ +ಕಡುಮೋಹ+ವೆಂಬುದು
ನಿಮ್ಮ +ಚರಣದೊಳ್+ಇರಲಿ +ಭೀಮನ
ಹಮ್ಮು+ತಮ್ಮೊಳಗಿರಲಿ+ ಫಲುಗುಣನ್+ಒಲುಮೆ+ಯಂತಿರಲಿ
ಎಮ್ಮ+ ಭೂಮಿಯೊಳ್+ಅರೆಯ +ಬೇಡುವರ್
ಎಮ್ಮ +ಬಂಧುಗಳಲ್ಲ+ ಸಂಧಿಗೆ
ತಮ್ಮನ್+ಒಡಬಡನ್+ಎಂದು +ದುಶ್ಯಾಸನನ+ ನೋಡಿದನು

ಅಚ್ಚರಿ:
(೧) ನಿಮ್ಮ, ಎಮ್ಮ, ತಮ್ಮ – ಪ್ರಾಸ ಪದಗಳ ಬಳಕೆ