ಪದ್ಯ ೨೦: ಧೃತರಾಷ್ಟ್ರನ ಒಳ ಮನಸ್ಸು ಏನನ್ನು ಬಯಸುತ್ತದೆ?

ಮರುಳು ಮಗನೇ ಶಿವ ಶಿವಾ ಮನ
ಬರಡನೇ ತಾನಕಟ ನಿಮ್ಮೈ
ಶ್ವರಿಯ ಹಗೆ ದಾಯಾದ್ಯರುಗಳಭ್ಯುದಯದಲಿ ಸೊಗಸೆ
ದುರುಳರವದಿರು ದೈವಮುಖದೆ
ಚ್ಚರಿಕೆ ಘನ ಕೆಡರೆಂದು ಮೇಗರೆ
ಹೊರಮನದ ಸೂಸಕದ ನೇಹವನರಸುತಿಹೆನೆಂದ (ಸಭಾ ಪರ್ವ, ೧೭ ಸಂಧಿ, ೨೦ ಪದ್ಯ)

ತಾತ್ಪರ್ಯ:
ಮಗ ದುರ್ಯೋಧನನೇ, ನಿನಗೆಲ್ಲೋ ಹುಚ್ಚು ಶಿವ ಶಿವಾ, ನಾನು ಬರಡು ಮನಸ್ಸಿನವನಲ್ಲ. ನನಗೆ ನಿಮ್ಮ ಐಶ್ವರ್ಯದ ಮೇಲೆ ದ್ವೇಷ ದಾಯಾದಿಗಳ ಅಭ್ಯುಯದಲ್ಲಿ ಸಂತೋಷವಿದೆಯೆಂದು ತಿಳಿದಿರುವೆಯಾ? ಅವರು ದುಷ್ಟರು, ದೈವ ಸದಾಜಾಗ್ರತವಾಗಿರುತ್ತದೆ, ಅವರು ಕೆಡುವುದಿಲ್ಲ ಎಂದು ಬಾಯಿತುದಿಯ ಮಾತಾಡುತ್ತಾ, ಸ್ನೇಹದ ಲೇಪವನ್ನು ನಾನು ನಟಿಸುತ್ತಿದ್ದೇನೆ ಎಂದನು.

ಅರ್ಥ:
ಮರುಳು: ಹುಚ್ಚು, ತಿಳಿಗೇಡಿ; ಮಗ: ಸುತ; ಮನ: ಮನಸ್ಸು; ಬರಡು: ಒಣಗಿದ್ದು, ನಿರುಪಯುಕ್ತ; ಅಕಟ: ಅಯ್ಯೋ; ಐಶ್ವರ್ಯ: ಸಿರಿ, ಸಂಪತ್ತು; ಹಗೆ: ವೈರ; ದಾಯಾದಿ: ಅಣ್ಣ ತಮ್ಮಂದಿರ ಮಕ್ಕಳು; ಅಭ್ಯುದಯ: ಏಳಿಗೆ; ಸೊಗಸು: ಚೆಲುವು; ದುರುಳ: ದುಷ್ತ; ಅವದಿರು: ಅವರು; ದೈವ: ಭಗವಂತ; ಮುಖ: ಆನನ; ಎಚ್ಚರ: ಜಾಗರೂಕತೆ; ಘನ: ಹಿರಿಯ, ದೊಡ್ಡ; ಕೆಡರು: ಹಾಳು; ಮೇಗರೆ: ವ್ಯರ್ಥವಾಗಿ; ಹೊರ: ಆಚೆ; ಮನ: ಮನಸ್ಸು; ಸೂಸು: ಎರಚು, ಚಲ್ಲು; ನೇಹ: ಗೆಳೆತನ, ಸ್ನೇಹ; ಅರಸು: ಹುಡುಕು;

ಪದವಿಂಗಡಣೆ:
ಮರುಳು +ಮಗನೇ +ಶಿವ+ ಶಿವಾ+ ಮನ
ಬರಡನೇ+ ತಾನ್+ಅಕಟ +ನಿಮ್
ಐಶ್ವರಿಯ +ಹಗೆ +ದಾಯಾದ್ಯರುಗಳ್+ಅಭ್ಯುದಯದಲಿ +ಸೊಗಸೆ
ದುರುಳರ್+ಅವದಿರು +ದೈವ+ಮುಖದೆ
ಚ್ಚರಿಕೆ+ ಘನ+ ಕೆಡರೆಂದು +ಮೇಗರೆ
ಹೊರಮನದ+ ಸೂಸಕದ+ ನೇಹವನ್+ಅರಸುತಿಹೆನೆಂದ

ಅಚ್ಚರಿ:
(೧) ಧೃತರಾಷ್ಟ್ರನ ಇಂಗಿತವನ್ನು ಹೇಳುವ ಪರಿ – ದೈವಮುಖದೆಚ್ಚರಿಕೆ ಘನ ಕೆಡರೆಂದು ಮೇಗರೆ
ಹೊರಮನದ ಸೂಸಕದ ನೇಹವನರಸುತಿಹೆನೆಂದ

ಪದ್ಯ ೧೮: ಯುಧಿಷ್ಠಿರನು ಧೌಮ್ಯನಿಗೆ ಏನೆಂದು ಹೇಳಿದ?

ಪುರದೊಳೆಲ್ಲಿಯ ಶಾಂತಿ ನಾರದ
ನೊರೆದನುತ್ಪಾತ ಪ್ರಬಂಧದ
ಹೊರಿಗೆಯನು ನಿಮ್ಮೈಶ್ವರಿಯ ವಿಧ್ವಂಸಕರವೆಂದು
ಇರುಳು ನಾನಾ ಸ್ವಪ್ನಕಾನನ
ಗಿರಿ ಪರಿಭ್ರಮಣೈಕ ಚಿಂತಾ
ಭರಿತನಾದೆನು ದೈವಕೃತವುಪಭೋಗವೆನಗೆಂದ (ಸಭಾ ಪರ್ವ, ೧೪ ಸಂಧಿ, ೧೮ ಪದ್ಯ)

ತಾತ್ಪರ್ಯ:
ಧೌಮ್ಯನು ಊರಿಗೆ ತೆರಳಿದ ಮೇಲೆ ಶಾಂತಿಕಾರ್ಯವನ್ನು ಮಾಡಿಸೋಣ ಎಂದುದಕ್ಕೆ, ಯುಧಿಷ್ಠಿರನು ಊರಿಗೆ ತೆರಳಿದ ಮೇಲೆ ಶಾಂತಿ ಕಾರ್ಯ ಮಾಡಿಸಿ ಏನು ಪ್ರಯೋಜನ. ಅಲ್ಲಿರುವಾಗ ನಾರದನು ನನ್ನ ಸ್ವಪ್ನಗಳ ವಿಷಯವನ್ನು ಕೇಳಿ ಇದು ನಿಮ್ಮ ಐಶ್ವರ್ಯನಾಶವನ್ನು ಸೂಚಿಸುತ್ತದೆ ಎಂದನು. ನಿನ್ನೆ ರಾತ್ರಿ ಕನಸಿನಲ್ಲಿ ಬೆಟ್ಟ ಅಡವಿಗಳಲ್ಲಿ ತಿರುಗಾಡಿದಂತೆ ಕನಸನ್ನು ಕಂಡೆ. ದೈವಚಿತ್ತದಿಂದ ಬಂದುದನ್ನು ಉಪಭೋಗಿಸೋಣ ಎಂದನು.

ಅರ್ಥ:
ಪುರ: ಊರು; ಒರೆ: ಹೇಳು; ಉತ್ಪಾತ: ಅಪಶಕುನ; ಪ್ರಬಂಧ: ವ್ಯವಸ್ಥೆ, ಏರ್ಪಾಡು; ಹೊರಿಗೆ: ಭಾರ, ಹೊರೆ; ಐಶ್ವರ್ಯ: ಸಂಪತ್ತು, ಸಿರಿ; ವಿಧ್ವಂಸಕ: ವಿನಾಶ; ಇರುಳು: ಕತ್ತಲೆ; ಸ್ವಪ್ನ: ಕನಸು; ಕಾನನ: ಅಡವಿ; ಗಿರಿ: ಬೆಟ್ಟ; ಪರಿಭ್ರಮಣೆ: ತಿರುಗು; ಚಿಂತೆ: ಯೋಚನೆ; ಭರಿತ: ಮುಳುಗು; ದೈವ: ಭಗವಂತ; ಕೃತ: ನಿರ್ಮಿಸಿದ; ಉಪಭೋಗ: ವಿಷಯಾನುಭವ;

ಪದವಿಂಗಡಣೆ:
ಪುರದೊಳ್+ಎಲ್ಲಿಯ +ಶಾಂತಿ +ನಾರದನ್
ಒರೆದನ್+ಉತ್ಪಾತ +ಪ್ರಬಂಧದ
ಹೊರಿಗೆಯನು +ನಿಮ್+ಐಶ್ವರಿಯ +ವಿಧ್ವಂಸಕರವೆಂದು
ಇರುಳು +ನಾನಾ +ಸ್ವಪ್ನ+ಕಾನನ
ಗಿರಿ+ ಪರಿಭ್ರಮಣೈಕ+ ಚಿಂತಾ
ಭರಿತನಾದೆನು+ ದೈವಕೃತವ್+ಉಪಭೋಗವೆನಗೆಂದ

ಅಚ್ಚರಿ:
(೧) ಮನಸ್ಸಿನ ಸ್ಥೈರ್ಯವನ್ನು ಹೆಚ್ಚಿಸುವ ನುಡಿ – ದೈವಕೃತವುಪಭೋಗವೆನಗೆಂದ