ಪದ್ಯ ೫೩: ಅಧಮ ರಾಜರ ವಿನಾಶಕ್ಕೆ ಯಾವೆಂಟು ಕಾರಣಗಳು?

ಬುಧರೊಳಗೆ ಹಗೆಗೊಳುವ ಬುಧರನು
ನಿಧನವೈದಿಪ ಬುಧರನೇಳಿಪ
ಬುಧರ ಜರೆದೊಡೆ ನಲಿವ ಬುಧರನು ಹೊಗಳುವರ ಹಳಿವ
ಬುಧರನಧಮರ ಮಾಳ್ಪ ಬುಧರಂ
ವಿಧಿಗೊಳಿಪ ಬುಧರೆನಲು ಕನಲುವ
ನಧಮ ಭೂಪರಿಗೆಂಟು ಗುಣವು ವಿನಾಶಕರವೆಂದ (ಉದ್ಯೋಗ ಪರ್ವ, ೩ ಸಂಧಿ, ೫೩ ಪದ್ಯ)

ತಾತ್ಪರ್ಯ:
ಅಧಮ ರಾಜನ ವಿನಾಶಕ್ಕೆ ಈ ಎಂಟು ಗುಣಗಳನ್ನು ವಿದುರ ಇಲ್ಲಿ ಹೇಳುತ್ತಾರೆ. ಈ ಪದ್ಯದಲ್ಲಿ ವಿದ್ವಾಂಸರನ್ನು ರಾಜ್ಯದಲ್ಲಿ ಹೇಗೆ ನಡೆಸಿಕೊಳ್ಳಬೇಕೆಂದು ನಾವು ಅರ್ಥೈಸಬಹುದು. ಪಂಡಿತರನ್ನು ದ್ವೇಷಿಸುವುದು, ವಿದ್ವಾಂಸರನ್ನು ಕೊನೆಗೊಳಿಸುವುದು, ಬುಧರನ್ನು ಅಪಹಾಸ್ಯ ಮಾದುವುದು, ಜ್ಞಾನಿಗಳನ್ನು ಬೈದಾಗ ಸಂತೋಷಪಡುವುದು, ಅವರನ್ನು ಹೊಗಳುವವರನ್ನು ನಿಂದಿಸುವುದು, ಜ್ಞಾನಿಗಳನ್ನು ಅಧಮರೆಂದು ಪರಿಗಣಿಸುವುದು, ಅವರ ಮೇಲೆ ನಿಯಂತ್ರಣ ಸಾಧಿಸಲು ಆಜ್ಞೆಯನ್ನು ಮಾಡುವುದು, ತಿಳಿದವರೆಂದರೆ ಕೋಪಗೊಳ್ಳುವುದು, ಈ ಎಂಟು ಗುಣಗಳು ರಾಜನಲ್ಲಿ ವ್ಯಕ್ತವಾದರೆ ಆವನು ವಿನಾಶದ ಹಾದಿಯಲ್ಲಿದ್ದಾನೆ ಎಂದು ತಿಳಿಯಬಹುದು.

ಅರ್ಥ:
ಬುಧ: ಪಂಡಿತ, ವಿದ್ವಾಂಸ; ಹಗೆ: ದ್ವೇಷ, ವೈರತ್ವ; ನಿಧನ: ಕೊನೆಗೊಳ್ಳು, ಸಾವು; ಐದು: ಹೊಂದು; ಏಳು:ಜೀವವನ್ನು ಪಡೆ; ಜರಿ: ನಿಂದಿಸು; ನಲಿ: ಸಂತೋಷ ಪಡು; ಹೊಗಳು: ಗೌರವಿಸು; ಹಳಿ: ನಿಂದಿಸು, ದೂಷಿಸು; ಅಧಮ: ಕೀಳು; ಮಾಳ್ಪ: ಮಾಡು; ವಿಧಿ:ಆಜ್ಞೆ, ಆದೇಶ; ಎನಲು: ಹೇಳುತ್ತಲೆ; ಕನಲು:ಸಿಟ್ಟಿಗೇಳು; ಅಧಮ: ಕೀಳುದರ್ಜೆಯ; ಭೂಪ: ರಾಜ; ಗುಣ: ನಡತೆ, ಸ್ವಭಾವ; ವಿನಾಶ: ಅಂತ್ಯ;

ಪದವಿಂಗಡಣೆ:
ಬುಧರೊಳಗೆ+ ಹಗೆಗೊಳುವ +ಬುಧರನು
ನಿಧನವೈದಿಪ+ ಬುಧರನ್+ಏಳಿಪ
ಬುಧರ+ ಜರೆದೊಡೆ +ನಲಿವ +ಬುಧರನು+ ಹೊಗಳುವರ+ ಹಳಿವ
ಬುಧರನ್+ಅಧಮರ+ ಮಾಳ್ಪ +ಬುಧರಂ
ವಿಧಿಗೊಳಿಪ+ ಬುಧರೆನಲು +ಕನಲುವನ್
ಅಧಮ +ಭೂಪರಿಗೆಂಟು +ಗುಣವು +ವಿನಾಶಕರವೆಂದ

ಅಚ್ಚರಿ:
(೧) ಬುಧ – ೮ ಬಾರಿ ಪ್ರಯೋಗ
(೨) ೮ ಗುಣಗಳನ್ನು ವಿವರಿಸುವ ಪದ್ಯ, ಹಗೆ, ನಿಧನ, ಏಳು, ಜರೆ, ಹಳಿ, ಅಧಮ, ವಿಧಿ, ಕನಲು

ಪದ್ಯ ೪೭: ಅರ್ಜುನನು ಶತ್ರುರಾಜರ ಸೈನ್ಯವನ್ನು ಹೇಗೆ ಮುರಿದನು?

ಏಳು ಮನ್ನೆಯ ಗಂಡನಾಗು ನೃ
ಪಾಲ ಮದುವೆಯ ಮನೆಗೆ ರಾಯರ
ಧಾಳಿ ಬಿದ್ದಿನವಾಯ್ತು ನಡೆ ಸಂತೈಸು ಬೇಯಗರ
ಏಳೆನಲು ಕಳವಳವನರ್ಜುನ
ಕೇಳಿದನು ಹೊದೆಯಂಬುಗಳ ತರ
ಹೇಳೆನುತ ಕವಿದೆಚ್ಚು ಮುರಿದನು ಭಟರ ಮುಂಗುದಿಯ (ಆದಿ ಪರ್ವ, ೧೫ ಸಂಧಿ, ೪೭ ಪದ್ಯ)

ತಾತ್ಪರ್ಯ:
ಶತ್ರುರಾಜರು ರಾಜಬೀದಿಯಲ್ಲಿ ಮುನ್ನುಗ್ಗಲು, ದ್ರುಪದನ ಸೈನ್ಯದವರು ಆ ಕೌರವರ ದಾಳಿಯಿಂದ ಕಳವಳಗೊಂಡು, ಅರ್ಜುನನ ಬಳಿ ಹೋಗಿ, ಏಳು ಗೌರವಕ್ಕೆ ಪಾತ್ರನಾದ ಶೂರನಾಗು, ಶತ್ರುರಾಜರು ಮದುವೆಯ ಮನೆಗೆ ಧಾಳಿಯನ್ನಿಟ್ಟಿದ್ದಾರೆ, ನಡೆ ನೀನು ಅವರನ್ನು ನಿಲ್ಲಿಸಿ ನಿನ್ನ ಪರಾಕ್ರಮವನ್ನು ತೋರಿಸು. ಬೀಗರನ್ನು ಸಮಾಧಾನ ಪಡಿಸು, ಎಂದು ಹೇಳಲು, ಆ ಸದ್ದನ್ನು ಕೇಳಿದ ಅರ್ಜುನನು ಬಾಣಗಳ ಹೊಗೆಗಳನ್ನು ತರಲು ಹೇಳು, ಎನುತ್ತ ಶತ್ರುಸೈನ್ಯದ ಮುಂಊಣಿಯನ್ನು ಮುರಿದನು.

ಅರ್ಥ:
ಏಳು: ಎದ್ದೇಳು; ಮನ್ನೆಯ:ಗೌರವ, ಮರ್ಯಾದೆ; ಗಂಡ: ಶೂರ; ನೃಪ: ರಾಜ; ಮದುವೆ: ವಿವಾಹ; ಮನೆ: ಆಲಯ; ರಾಯ: ರಾಜ; ಧಾಳಿ: ಆಕ್ರಮಣ; ನಡೆ: ಮುನ್ನುಗ್ಗು; ಸಂತೈಸು: ಸಮಾಧಾನ ಪಡಿಸು; ಬೀಯಗರ: ಬೀಗರು, ಸಂಬಂಧಿಕರು; ಕಳವಳ: ತಳಮಳ, ಕಸಿವಿಸಿ; ಕೇಳು: ಆಲಿಸು; ಭಟರು: ಸೈನಿಕರು; ಕವಿ: ಮೇಳೈಸು, ಎರಗು, ಧಾಳಿ; ಮುರಿ: ಹಾಳುಮಾಡು; ಮುಂಗುಡಿ: ಮುಂಚೂಣಿ;

ಪದವಿಂಗಡಣೆ:
ಏಳು +ಮನ್ನೆಯ +ಗಂಡನಾಗು +ನೃ
ಪಾಲ +ಮದುವೆಯ +ಮನೆಗೆ +ರಾಯರ
ಧಾಳಿ +ಬಿದ್ದಿನವಾಯ್ತು +ನಡೆ +ಸಂತೈಸು +ಬೇಯಗರ
ಏಳ್+ಎನಲು +ಕಳವಳವನ್+ಅರ್ಜುನ
ಕೇಳಿದನು+ ಹೊದೆಯಂಬುಗಳ+ ತರ
ಹೇಳೆನುತ +ಕವಿದೆಚ್ಚು +ಮುರಿದನು +ಭಟರ +ಮುಂಗುದಿಯ

ಅಚ್ಚರಿ:
(೧) ಏಳು – ೧, ೪ ಸಾಲಿನ ಮೊದಲ ಪದ
(೨) ಏಳು, ಹೇಳು, ಕೇಳು – ೧, ೪, ೫, ೬ ಸಾಲಿನ ಮೊದಲ ಪದ, ಪ್ರಾಸ ಪದಗಳು
(೩) ನೃಪಾಲ, ರಾಜ – ಸಮಾನಾರ್ಥಕ ಪದ