ಪದ್ಯ ೪: ದುರ್ಯೋಧನನ ತನು ಮನಸ್ಸನ್ನು ಯಾವುದು ಆವರಿಸಿತು?

ಬೇಟೆ ನಿಂದುದು ಗಜ ತುರಗದೇ
ರಾಟಮಾದುದು ಖೇಳ ಮೇಳದ
ತೋಟಿಯಲ್ಲಿಯದಲ್ಲಿ ಕವಡಿಕೆ ನೆತ್ತ ಮೊದಲಾದ
ನಾಟಕದ ಮೊಗರಂಬವೆನಿಪ ಕ
ವಾಟ ತೆರೆಯದು ಹೊಕ್ಕಸೂಯದ
ಕೋಟಲೆಯ ಕಡುಹೂಟ ಕವರಿತು ನೃಪನ ತನುಮನವ (ಸಭಾ ಪರ್ವ, ೧೩ ಸಂಧಿ, ೪ ಪದ್ಯ)

ತಾತ್ಪರ್ಯ:
ದುರ್ಯೋಧನನ ವಿಲಾಸ ಕ್ರೀಡೆಗಳೆಲ್ಲವೂ ನಿಂತವು, ಬೇಟೆ, ಆನೆಕುದುರೆಗಳ ಏರಾಟ, ಜೊತೆಗಾರರೊಡನೆ ವಿನೋದ ಕಲಹ ಮೊದಲಾದವನ್ನೆಲ್ಲವನ್ನೂ ದುರ್ಯೋಧನನು ತ್ಯಜಿಸಿದನು. ಕವಡೆ, ಪಗಡೆ ಆಟಗಳು, ನಾಟಕ ಆಡಂಬರವು ಆರಂಭವೇ ಆಗಲಿಲ್ಲ. ಅಸೂಯೆಯು ಮನಸ್ಸಿನಲ್ಲಿ ಹೊಕ್ಕು ಅವನ ದೇಹ ಮನಸ್ಸುಗಳೆರಡನ್ನೂ ಆವರಿಸಿತು.

ಅರ್ಥ:
ಬೇಟೆ: ಮೃಗಗಳನ್ನು ಕೊಲ್ಲುವುದು; ನಿಂದುದು: ನಿಲ್ಲು; ಗಜ: ಆನೆ; ತುರಗ: ಕುದುರೆ; ಏರಾಟ: ಸ್ಪರ್ಧೆ, ಪೈಪೋಟಿ; ಖೇಳ: ಆಟ; ಮೇಳ: ಗುಂಪು; ತೋಟಿ: ಕಲಹ, ಜಗಳ; ಕವಡಿ: ಮೋಸಗಾರ; ನೆತ್ತ: ಪಂದ್ಯ; ಮೊದಲಾದ: ಆದಿ, ಮುಂತಾದ; ನಾಟಕ: ನಟನೆ; ಮೊಗ: ಮುಖ; ಕವಾಟ: ಬಾಗಿಲು; ತೆರೆ: ಬಿಚ್ಚು; ಹೊಕ್ಕು: ಸೇರು; ಅಸೂಯೆ: ಹೊಟ್ಟೆಕಿಚ್ಚು; ಕೋಟಲೆ: ತೊಂದರೆ; ಕಡು: ಹೆಚ್ಚು: ಯೋಜನೆ, ಉಪಾಯ; ಕವರು: ಆವರಿಸು; ನೃಪ: ರಾಜ; ತನು: ದೇಹ; ಮನ: ಮನಸ್ಸು;ಮೊಗರಂಬ: ಮೊಗಮುಟ್ಟು, ಮುಖಕ್ಕೆ ತೊಡಿಸುವ ಅಲಂಕಾರಸಾಧನ;

ಪದವಿಂಗಡಣೆ:
ಬೇಟೆ +ನಿಂದುದು +ಗಜ +ತುರಗದ್
ಏರಾಟ+ಮಾದುದು +ಖೇಳ +ಮೇಳದ
ತೋಟಿಯಲ್ಲಿಯದಲ್ಲಿ+ ಕವಡಿಕೆ+ ನೆತ್ತ+ ಮೊದಲಾದ
ನಾಟಕದ +ಮೊಗರಂಬವೆನಿಪ+ ಕ
ವಾಟ +ತೆರೆಯದು +ಹೊಕ್+ಅಸೂಯದ
ಕೋಟಲೆಯ +ಕಡುಹೂಟ +ಕವರಿತು +ನೃಪನ +ತನು+ಮನವ

ಅಚ್ಚರಿ:
(೧) ಏರಾಟ, ಕವಾಟ – ಪ್ರಾಸ ಪದ
(೨) ದುರ್ಯೋಧನನ ಸ್ಥಿತಿ – ಅಸೂಯದಕೋಟಲೆಯ ಕಡುಹೂಟ ಕವರಿತು ನೃಪನ ತನುಮನವ
(೩) ಕ ಕಾರದ ತ್ರಿವಳಿ ಪದ – ಕೋಟಲೆಯ ಕಡುಹೂಟ ಕವರಿತು