ಪದ್ಯ ೩೩: ಯಾವುದು ಪರಬ್ರಹ್ಮನ ಲೀಲಾ ವಿನೋದ?

ಏಕಮೇವಾದ್ವಿತಿಯವೆಂಬ ನಿ
ರಾಕುಳಿತ ತೇಜೋನಿಧಿಗೆ ಮಾ
ಯಾಕಳತ್ರದೊಳಾಯ್ತು ನಿಜಗುಣ ಭೇದವದರಿಂದ
ಆ ಕಮಲಭವನೀ ಮುಕುಂದ ಪಿ
ನಾಕಿಯೆಂಬಭಿದಾನದಲಿ ತ್ರಿಗು
ಣಾಕೃತಿಯ ಕೈಕೊಂಡನುರು ಲೀಲಾ ವಿನೋದದಲಿ (ಅರಣ್ಯ ಪರ್ವ, ೧೫ ಸಂಧಿ, ೩೩ ಪದ್ಯ)

ತಾತ್ಪರ್ಯ:
ತನಗೆರಡೆಯದಿಲ್ಲದ ಒಂದೇ ಆದ ನಿಶ್ಚಿಂತನಾದ ತೇಜೋ ರೂಪಿಯಾದವನಿಗೆ ಮಾಯೆಯೆಂಬ ಪತ್ನಿಯಿಂದ ತ್ರಿಗುಣಗಳ ಭೇದವಾದಂತೆ ತೋರುತ್ತದೆ. ಆದುದರಿಂದ ಬ್ರಹ್ಮ, ವಿಷ್ಣು, ಶಿವರೆಂಬ ಹೆಸರಿನಿಂದ ತ್ರಿಗುಣಾಕೃತಿಯನ್ನು ಪಡೆದಂತೆ ತೋರುತ್ತದೆ. ಇದು ಆ ಪರಬ್ರಹ್ಮನ ಮಹಾಲೀಲಾ ವಿನೋದ.

ಅರ್ಥ:
ಏಕಮೇವ: ಒಂದೇ ಒಂದು; ಅದ್ವಿತೀಯ: ಎರಡನೆಯದಿಲ್ಲದ, ತನಗೆ ಸಮನಾದ ಬೇರೊಂದಿಲ್ಲದ; ನಿರಾಕುಳ: ನಿರಾತಂಕ; ತೇಜಸ್ಸು: ಕಾಂತಿ; ನಿಧಿ: ಐಶ್ವರ್ಯ; ಮಾಯಾ: ಗಾರುಡಿ; ಕಳತ್ರ: ಹೆಂಡತಿ; ನಿಜಗುಣ: ತನ್ನ ಸ್ವಭಾವ; ಭೇದ: ಮುರಿ, ಬಿರುಕು; ಕಮಲಭವ: ಬ್ರಹ್ಮ; ಮುಕುಂದ: ಕೃಷ್ಣ; ಪಿನಾಕಿ: ಶಿವ; ಅಭಿದಾನ: ಹೆಸರು; ತ್ರಿಗುಣ: ಮೂರು ಗುಣಗಳು; ಆಕೃತಿ: ರೂಪ; ಕೈಕೊಂಡು: ಜವಾಬ್ದಾರಿ ವಹಿಸು; ಉರು: ಹೆಚ್ಚಿನ; ಲೀಲಾ: ವಿಲಾಸ, ಬೆಡಗು; ವಿನೋದ: ಸಂತೋಷ, ಹಿಗ್ಗು;

ಪದವಿಂಗಡಣೆ:
ಏಕಮೇವ+ಅದ್ವಿತಿಯವೆಂಬ +ನಿ
ರಾಕುಳಿತ +ತೇಜೋನಿಧಿಗೆ+ ಮಾ
ಯಾ+ಕಳತ್ರದೊಳ್+ಆಯ್ತು +ನಿಜಗುಣ+ ಭೇದವ್+ಅದರಿಂದ
ಆ +ಕಮಲಭವನ್+ಈ+ ಮುಕುಂದ +ಪಿ
ನಾಕಿ+ಎಂವ್+ಅಭಿದಾನದಲಿ+ ತ್ರಿಗು
ಣಾಕೃತಿಯ +ಕೈಕೊಂಡನ್+ಉರು +ಲೀಲಾ +ವಿನೋದದಲಿ

ಅಚ್ಚರಿ:
(೧) ಸಂಸ್ಕೃತ ನುಡಿಯ ಬಳಕೆ – ಏಕಮೇವಾದ್ವಿತಿಯ
(೨) ಗುಣಗಳು ಹುಟ್ಟಿದ ಪರಿ – ನಿರಾಕುಳಿತ ತೇಜೋನಿಧಿಗೆ ಮಾಯಾಕಳತ್ರದೊಳಾಯ್ತು ನಿಜಗುಣ ಭೇದವದರಿಂದ