ಪದ್ಯ ೨೦: ಪಾಂಡವರ ಸೈನ್ಯವು ಕರ್ಣನನ್ನು ಹೇಗೆ ಎದುರಿಸಿತು?

ಎಲೆಲೆ ರಾಯನ ಮೇಲೆ ಬಿದ್ದುದು
ಕಲಹವಕಟಾ ಹೋಗಬೇಡಿ
ಟ್ಟಳಿಸಿದವ ಹಗೆ ನಮ್ಮ ಭೀಷ್ಮ ದ್ರೋಣನಿವನಲ್ಲ
ಅಳುಕದಿರಿ ಕವಿಕವಿಯೆನುತ ಹೆ
ಬ್ಬಲ ಸಘಾಡದಲೌಕಿ ಕರ್ಣನ
ಹೊಲಬುಗೆಡಿಸಿದುದಂಬುಗಳ ಸಾಯಾರ ಸೋನೆಯಲಿ (ಕರ್ಣ ಪರ್ವ, ೧೧ ಸಂಧಿ, ೨೦ ಪದ್ಯ)

ತಾತ್ಪರ್ಯ:
ಓಹೋ ದೊರೆಗಳ ಮೇಲೇ ಯುದ್ಧವು ಬಿದ್ದಿದೆ, ಅಯ್ಯೋ ಸೈನಿಕರೇ ಯಾರು ಹಿಮ್ಮೆಟ್ಟಬೇಡಿ, ಎದುರಾಗಿರುವವನು ನಮ್ಮ ಭೀಷ್ಮನೂ ಅಲ್ಲ ದ್ರೋಣನು ಅಲ್ಲ. ಹೆದರದಿರಿ ಎಲ್ಲರೂ ಒಟ್ಟಾಗಿ ಇವನನ್ನು ಆವರಿಸಿ ಮುತ್ತಿಗೆ ಹಾಕಿರಿ ಎನ್ನುತ್ತಾ ಕರ್ಣನನ್ನು ಮುತ್ತಿ ಬಾಣಗಳ ಮಳೆಗೆರೆಯಲು ಕರ್ಣನ ದಾರಿಯನ್ನು ತಪ್ಪಿಸಿದರು.

ಅರ್ಥ:
ಎಲೆಲೆ: ಓಹೋ; ರಾಯ: ರಾಜ; ಬಿದ್ದು: ಆಕ್ರಮಣ; ಕಲಹ: ಯುದ್ಧ; ಅಕಟಾ: ಅಯ್ಯೋ; ಹೋಗು: ತೆರಳು; ಇಟ್ಟಳಿಸು: ದಟ್ಟವಾಗು, ಒತ್ತಾಗು; ಹಗೆ: ವೈರಿ; ಅಳುಕು: ಹೆದರು; ಕವಿ: ಆವರಿಸು, ಮುಚ್ಚು; ಹೆಬ್ಬಲ: ದೊಡ್ಡ ಸೈನ್ಯ; ಸಘಾಡ: ರಭಸ, ವೇಗ; ಔಕು: ಒತ್ತು; ಹೊಲಬು: ದಾರಿ, ಮಾರ್ಗ; ಕೆಡಿಸು: ತಪ್ಪಿಸು; ಅಂಬು: ಬಾಣ; ಸಾರಾಯ: ಸಾರವತ್ತಾದ, ರಸವತ್ತಾದ; ಸೋನೆ: ಮಳೆ;

ಪದವಿಂಗಡಣೆ:
ಎಲೆಲೆ +ರಾಯನ +ಮೇಲೆ +ಬಿದ್ದುದು
ಕಲಹವ್+ಅಕಟಾ +ಹೋಗಬೇಡ್
ಇಟ್ಟಳಿಸಿದವ+ ಹಗೆ +ನಮ್ಮ +ಭೀಷ್ಮ +ದ್ರೋಣನಿವನಲ್ಲ
ಅಳುಕದಿರಿ+ ಕವಿಕವಿಯೆನುತ +ಹೆ
ಬ್ಬಲ +ಸಘಾಡದಲ್+ಔಕಿ +ಕರ್ಣನ
ಹೊಲಬುಗೆಡಿಸಿದುದ್+ಅಂಬುಗಳ+ ಸಾಯಾರ +ಸೋನೆಯಲಿ

ಅಚ್ಚರಿ:
(೧) ಎಲೆಲೆ, ಅಕಟಾ, ಕವಿಕವಿ – ಪದಗಳ ಬಳಕೆ
(೨) ಬಾಣಗಳ ಆವರಿಸಿದವು ಎಂದು ಹೇಳಲು – ಅಂಬುಗಳ ಸಾಯಾರ ಸೋನೆಯಲಿ

ಪದ್ಯ ೧೧೬: ಕೃಷ್ಣನು ಭೀಮನಿಗೆ ಏನು ಹೇಳಿದನು?

ಎಲೆಲೆ ಪವನಜ ಮಾಗಧೇಶ್ವರ
ನಳವನರಿದಾ ನಿನ್ನ ತಂದೆಯ
ಬಲುಹಕೊಂಡೀ ರಿಪುವ ಮುರಿ ನೆನೆನೆನೆ ಸಮೀರಣನ
ಬಲುಮುಗಿಲ ಬಿರುಗಾಳಿಯೊಡ್ಡಿನೊ
ಳಳುಕದೇ ಫಡ ಬೇಗಮಾಡೆನೆ
ಕಲಿ ವೃಕೋದರನನಿಲರೂಪಧ್ಯಾನ ಪರನಾದ (ಸಭಾ ಪರ್ವ, ೨ ಸಂಧಿ, ಪದ್ಯ ೧೧೬)

ತಾತ್ಪರ್ಯ:
ಕೃಷ್ಣನು ಜರಾಸಂಧನ ಬಲವು ಜಾರುವುದನ್ನು ಅರಿತು, ಭೀಮನಿಗೆ “ಎಲೈ ಭೀಮನೆ, ಜರಾಸಂಧನ ರೀತಿಯನ್ನು ತಿಳಿದುಕೊಂಡೆಯಾ? ನಿನ್ನ ತಂದೆಯಾದ ವಾಯುದೇವನನ್ನು ಆಹ್ವಾನಿಸಿ ಅವನ ಬಲವನ್ನು ತಂದುಕೊಂಡು ಶತ್ರುಸಂಹಾರ ಮಾಡು, ಮೋಡಗಳು ಎಷ್ಟು ದಟ್ಟವಾಗಿದ್ದರೂ ಗಾಳಿಯ ಹೊಡೆತಕ್ಕೆ ಚದುರಿ ಹೋಗುವುದಿಲ್ಲವೇ? ಹೆದರದೆ ಬೇಗ ನಾನು ಹೇಳಿದಂತೆ ಮಾಡು, ವಾಯುದೇವರನ್ನು ನೆನೆ” ಎಂದು ಕೃಷ್ಣನು ಹೇಳಲು ಭೀಮನು ವಾಯುದೇವರನ್ನು ಧ್ಯಾನಿಸಿದನು.

ಅರ್ಥ:
ಪವನ: ಗಾಳಿ, ವಾಯು; ಪವನಜ; ಭೀಮ; ಈಶ್ವರ: ಪ್ರಭು, ಒಡೆಯ; ಅರಿ: ತಿಳಿ; ತಂದೆ: ಪಿತ; ಬಲುಹ: ಬಲ; ರಿಪು: ವೈರಿ; ಕೊಂಡು: ತೆಗೆದುಕೊಳ್ಳು; ಮುರಿ: ನಾಶ; ಸಮೀರಣ:ವಾಯುದೇವರು; ನೆನೆ: ಜ್ಞಾಪಿಸಿಕೊ; ಮುಗಿಲು: ಆಗಸ; ಬಿರುಗಾಳಿ: ಜೋರಾದ ಗಾಳಿ; ಅಳುಕು: ಭಯ; ಫಡ:ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಬೇಗ:
ತ್ವರೆ; ಶೀಗ್ರ; ಕಲಿ: ಶೂರ; ವೃಕೋದರ: ಭೀಮ; ಉದರ: ಹೊಟ್ಟೆ; ಅನಿಲ: ಗಾಳಿ; ರೂಪ: ಆಕಾರ; ಪರ: ಕಡೆ, ಪಕ್ಷ;

ಪದವಿಂಗಡಣೆ:
ಎಲೆಲೆ +ಪವನಜ +ಮಾಗಧೇಶ್ವರನ್
ಅಳವನ್+ಅರಿದ್+ಆ+ ನಿನ್ನ+ ತಂದೆಯ
ಬಲುಹ+ಕೊಂಡ್+ಈ+ ರಿಪುವ +ಮುರಿ +ನೆನೆನೆನೆ +ಸಮೀರಣನ
ಬಲುಮುಗಿಲ +ಬಿರುಗಾಳಿಯೊಡ್ಡಿನೊಳ್
ಅಳುಕದೇ +ಫಡ +ಬೇಗಮಾಡ್+ಎನೆ
ಕಲಿ +ವೃಕೋದರನ್+ಅನಿಲರೂಪಧ್ಯಾನ +ಪರನಾದ

ಅಚ್ಚರಿ:
(೧) ಆಡು ಭಾಷೆಯ ಪ್ರಯೋಗ: ಎಲೆಲೆ, ನೆನೆನೆನೆ
(೨) ಪವನ, ಸಮೀರಣ, ಅನಿಲರೂಪ – ವಾಯುದೇವನ ಸಮನಾರ್ಥಕ ಪದಗಳ ಬಳಕೆ