ಪದ್ಯ ೫೦: ಇಂದ್ರನು ಅರ್ಜುನನನ್ನು ಹೇಗೆ ಸಂತೈಸಿದನು?

ಮಗನನಪ್ಪಿದನೆನ್ನ ತಂದೆಗೆ
ದುಗುಡವೇಕೆನ್ನಾನೆಗೆತ್ತಣ
ಬೆಡಗಿದೆನ್ನರಸಂಗಿದೆತ್ತಣದೆಸೆಯ ದುಮ್ಮಾನ
ಮೊಗದ ತನಿ ಹಳಹಳಿಕೆ ನೇತ್ರಾಂ
ಬುಗಳಲದ್ದುದು ನಿಜಮನೋವೃ
ತ್ತಿಗಳೊಳಗೆ ನುಡಿ ಮುಳುಗಿತೇನಿದು ಚಿತ್ರವಾಯ್ತೆಂದ (ಅರಣ್ಯ ಪರ್ವ, ೯ ಸಂಧಿ, ೫೦ ಪದ್ಯ)

ತಾತ್ಪರ್ಯ:
ಇಂದ್ರನು ಅರ್ಜುನನನ್ನು ಅಪ್ಪಿಕೊಂಡು, ನನ್ನಪ್ಪನಿಗೇನು ದುಃಖ, ನನ್ನಾನೆಗೆ ಏತರದ ಭಯ, ನನ್ನ ರಾಜನಿಗೆ ಏಕೆ ಬೇಸರ, ನಿನ್ನ ಕಳವಳವು ಕಣ್ಣೀರಾಗಿ ಬರುತ್ತಿದೆ, ನಿನ್ನ ಮನಸ್ಸಿನ ಕಳವಳದಲ್ಲಿ ಮಾತೇ ನಿಂತು ಹೋಗಿದೆ, ಇದೇನು ವಿಚಿತ್ರ ಎಂದು ಕೇಳಿದನು.

ಅರ್ಥ:
ಮಗ: ಸುತ; ಅಪ್ಪು: ಆಲಿಂಗಿಸು, ತಬ್ಬಿಕೊ; ತಂದೆ: ಪಿತ; ದುಗುಡ: ದುಃಖ, ಉಮ್ಮಳ; ಬೆಡಗು: ಅಂದ, ಸೊಬಗು; ಅರಸ: ರಾಜ; ದೆಸೆ: ಗತಿ, ದಿಕ್ಕು; ದುಮ್ಮಾನ: ದುಃಖ; ಮೊಗ: ಮುಖ; ತನಿ: ಹೆಚ್ಚಾಗು; ಹಳಹಳಿಕೆ: ಕಾಂತಿ, ತೇಜಸ್ಸು; ನೇತ್ರ: ಕಣ್ಣು; ಅಂಬು: ನೀರು; ಅದ್ದು: ತೋಯು, ಒದ್ದೆಯಾಗು; ಮನ: ಮನಸ್ಸು; ವೃತ್ತಿ: ಸ್ಥಿತಿ, ನಡತೆ; ನುಡಿ: ಮಾತಾಡು; ಮುಳುಗು: ನೀರಿನಲ್ಲಿ ಮೀಯು; ಚಿತ್ರ: ಆಶ್ಚರ್ಯ, ಚಮತ್ಕಾರ;

ಪದವಿಂಗಡಣೆ:
ಮಗನನ್+ಅಪ್ಪಿದನ್+ಎನ್ನ+ ತಂದೆಗೆ
ದುಗುಡವೇಕ್+ಎನ್+ಆನೆಗ್+ಎತ್ತಣ
ಬೆಡಗಿದ್+ಎನ್+ಅರಸಂಗ್+ಇದೆತ್ತಣ+ದೆಸೆಯ+ ದುಮ್ಮಾನ
ಮೊಗದ +ತನಿ +ಹಳಹಳಿಕೆ +ನೇತ್ರಾಂ
ಬುಗಳಲ್+ಅದ್ದುದು +ನಿಜ+ಮನೋವೃ
ತ್ತಿಗಳೊಳಗೆ+ ನುಡಿ+ ಮುಳುಗಿತೇನಿದು+ ಚಿತ್ರವಾಯ್ತೆಂದ

ಅಚ್ಚರಿ:
(೧) ಎನ್ನ ತಂದೆ, ಎನ್ನಾನೆ, ಎನ್ನರಸ – ಮಗನನ್ನು ಪ್ರೀತಿಯಿಂದ ಕರೆದ ಪರಿ
(೨) ಕಣ್ಣೀರನ್ನು ವಿವರಿಸುವ ಪದ – ನೇತ್ರಾಂಬು
(೩) ದುಗುಡ, ದುಮ್ಮಾನ – ಸಮನಾರ್ಥಕ ಪದ

ಪದ್ಯ ೨೦: ಧೃತರಾಷ್ಟ್ರನು ಧರ್ಮಜನನ್ನು ಹೇಗೆ ಬರೆಮಾಡಿಕೊಂಡನು?

ಬಂದು ಧೃತರಾಷ್ಟ್ರನ ಪದಾಬ್ಜಕ್ಕೆ
ವಂದಿಸಿದೊಡೆನ್ನಾನೆ ಬಾರೈ
ತಂದೆ ಬಾರೆಂದೆಳೆದು ಕುಳ್ಳಿರಿಸಿದನು ಮಂಚದಲಿ
ನಂದನರು ಭೀಮಾರ್ಜುನಾದಿಗ
ಳಂದು ಪರಿವೇಷ್ಠಿಸಿದರಿತ್ತಲು
ಕಂದು ಹೃದಯದ ಕೌರವೇಂದ್ರನ ಹದನ ಕೇಳೆಂದ (ಸಭಾ ಪರ್ವ, ೧೪ ಸಂಧಿ, ೨೦ ಪದ್ಯ)

ತಾತ್ಪರ್ಯ:
ಜನಮೇಜಯನಿಗೆ ಕಥೆಯನ್ನು ಹೇಳುತ್ತಾ, ಯುಧಿಷ್ಠಿರನು ಧೃತರಾಷ್ಟ್ರನ ಅರಮನೆಗೆ ಬಂದು ಅವನ ಪಾದಗಳಿಗೆ ವಂದಿಸಲು, ಧೃತರಾಷ್ಟ್ರನು ಯುಧಿಷ್ಠಿರನನ್ನು ಆಲಂಗಿಸಿ ಬಾ ಎನ್ನಾನೆ, ನನ್ನ ಕಂದ ಎಂದು ಪ್ರೀತಿಮಾತುಗಳಿಂದ ಬರೆಮಾಡಿಕೊಂಡು ಆಸನದಲ್ಲಿ ಕುಳ್ಳಿರಿಸಿದನು. ಅವನ ಸುತ್ತಲೂ ತಮ್ಮಂದಿರಾದ ಭೀಮಾರ್ಜುನರು ಆವರಿಸಿದರು. ಇತ್ತ ಕಳಂಕ ಹೃದಯದ ದುರ್ಯೋಧನನ ವಿಷಯವನ್ನು ಹೇಳುತ್ತೇನೆ ಕೇಳು ಎಂದು ವೈಶಂಪಾಯನರು ಕಥೆಯನ್ನು ಮುಂದುವರೆಸಿದರು.

ಅರ್ಥ:
ಬಂದು: ಆಗಮಿಸು; ಪದಾಬ್ಜ: ಪಾದ ಕಮಲಗಳು; ವಂದಿಸು: ನಮಸ್ಕರಿಸು; ಎನ್ನಾನೆ: ನನ್ನ ಆನೆಯೆ (ಮಕ್ಕಳನ್ನು ಪ್ರೀತಿಯಿಂದ ಕರೆಯುವ ಪದ); ಬಾ: ಆಗಮಿಸು; ಎಳೆದು: ಸೆಳೆದು; ಕುಳ್ಳಿರಿಸು: ಕೂರಿಸು, ಆಸೀನನಾಗು; ಮಂಚ: ಪಲ್ಲಂಗ; ನಂದನ: ಮಕ್ಕಳು; ಪರಿವೇಷ್ಟಿಸು: ಆವರಿಸು; ಕಂದು: ಕಳಂಕ; ಹೃದಯ: ಎದೆ; ಹದ: ಸ್ಥಿತಿ, ರೀತಿ; ಕೇಳು: ಆಲಿಸು;

ಪದವಿಂಗಡಣೆ:
ಬಂದು +ಧೃತರಾಷ್ಟ್ರನ +ಪದಾಬ್ಜಕ್ಕೆ
ವಂದಿಸಿದೊಡ್+ಎನ್ನಾನೆ +ಬಾರೈ
ತಂದೆ +ಬಾರೆಂದ್+ಎಳೆದು +ಕುಳ್ಳಿರಿಸಿದನು +ಮಂಚದಲಿ
ನಂದನರು +ಭೀಮಾರ್ಜುನಾದಿಗಳ್
ಅಂದು +ಪರಿವೇಷ್ಠಿಸಿದರ್+ಇತ್ತಲು
ಕಂದು +ಹೃದಯದ +ಕೌರವೇಂದ್ರನ+ ಹದನ+ ಕೇಳೆಂದ

ಅಚ್ಚರಿ:
(೧) ದುರ್ಯೋಧನನನ್ನು ಕರೆದ ಬಗೆ – ಕಂದು ಹೃದಯದ ಕೌರವೇಂದ್ರ
(೨) ಪ್ರೀತಿಯನ್ನು ತೋರುವ ಬಗೆ – ಎನ್ನಾನೆ ಬಾರೈ ತಂದೆ ಬಾರೆಂದೆಳೆದು

ಪದ್ಯ ೨೩: ಧೃತರಾಷ್ಟ್ರನು ಯಾವ ಪ್ರಶ್ನೆಗಳನ್ನು ಕೇಳಿದನು?

ಏನು ಶಕುನಿ ಮಗಂಗೆ ದುಗುಡವ
ದೇನು ಕಾರಣವಾರ ದೆಸೆಯಿಂ
ದೇನಸಾಧ್ಯವದೇನು ಭಯ ಮೇಣಾವುದಭಿಲಾಷೆ
ಏನುವನು ವಂಚಿಸದೆ ಹೇಳೆ
ನ್ನಾನೆಗೇಕೈ ಮರುಕವೆನೆ ನಿಜ
ಸೂನುವನು ನೀ ಕರೆಸಿ ಬೆಸಗೊಳ್ಳೆಂದನಾ ಶಕುನಿ (ಸಭಾ ಪರ್ವ, ೧೩ ಸಂಧಿ, ೨೩ ಪದ್ಯ)

ತಾತ್ಪರ್ಯ:
ಮಗನು ದುಃಖದಲ್ಲಿರುವನೆಂದು ತಿಳಿದು ಧೃತರಾಷ್ಟ್ರನು, ಶಕುನಿ ನನ್ನ ಮಗನಿಗೆ ಏನು ದುಃಖ, ಅದಕ್ಕೇನು ಕಾರಣ? ಯಾರ ದೆಸೆಯಿಂದ ಹೀಗಾಯಿತು? ಅವನು ಏನನ್ನು ಬಯಸುತ್ತಾನೆ, ಅದಾಗದಿರಲು ಏನು ಕಾರಣ? ಅವನಿಗೊದಗಿರುವ ಭಯವೇನು? ಇದೆಲ್ಲವನ್ನೂ ಬಿಚ್ಚಿ ಹೇಳು. ನನ್ನಾನೆಗೆ ಯಾವ ಅಳಲು ಬಂದಿದೆ? ಎನ್ನಲು ಶಕುನಿಯು ನೀನೇ ಕರೆಸಿಕೇಳು ಎಂದನು.

ಅರ್ಥ:
ಮಗ: ಪುತ್ರ; ದುಗುಡ: ದುಃಖ; ಕಾರಣ: ಉದ್ದೇಶ, ಆದುದರಿಂದ; ದೆಸೆ: ದಿಕ್ಕು, ಅವಸ್ಥೆ, ಸ್ಥಿತಿ; ಅಸಾಧ್ಯ: ಶಕ್ಯವಲ್ಲದುದು; ಭಯ: ಅಂಜಿಕೆ; ಮೇಣ್: ಮತ್ತು, ಹಾಗೂ; ಅಭಿಲಾಷೆ: ಆಸೆ, ಬಯಕೆ; ವಂಚಿಸು: ಮೋಸ; ಆನೆ: ಮಗನನ್ನು ಕರೆಯುವ ಪರಿ; ಮರುಕ: ಬೇಗುದಿ, ಅಳಲು; ಸೂನು: ಪುತ್ರ; ಕರೆಸು: ಬರೆಮಾಡು; ಬೆಸಸು: ಆಜ್ಞಾಪಿಸು, ಹೇಳು;

ಪದವಿಂಗಡಣೆ:
ಏನು+ ಶಕುನಿ+ ಮಗಂಗೆ +ದುಗುಡವದ್
ಏನು +ಕಾರಣವ್+ಆರ+ ದೆಸೆಯಿಂದ್
ಏನ್+ಅಸಾಧ್ಯವ್+ಅದೇನು +ಭಯ+ ಮೇಣ್+ ಅವುದ್+ಅಭಿಲಾಷೆ
ಏನುವನು +ವಂಚಿಸದೆ +ಹೇಳ್
ಎನ್ನಾನೆಗ್+ಏಕೈ +ಮರುಕವ್+ಎನೆ+ ನಿಜ
ಸೂನುವನು +ನೀ +ಕರೆಸಿ+ ಬೆಸಗೊಳ್ಳೆಂದನಾ+ ಶಕುನಿ

ಅಚ್ಚರಿ:
(೧) ಏನು – ೧-೫ ಸಾಲಿನ ಮೊದಲ ಪದ
(೨) ಮಗ, ಎನ್ನಾನೆ – ದುರ್ಯೋಧನನ್ನು ಕರೆಯುವ ಪರಿ

ಪದ್ಯ ೨೬: ಕೃಷ್ಣನು ಧರ್ಮರಾಯನಿಗೆ ಹೇಗೆ ಆಶೀರ್ವದಿಸಿದನು?

ಮಣಿದು ಹಿಡಿದೆತ್ತಿದನು ರಾಯನ
ಹಣೆಯನನುಪಮ ಕರುಣನಿಧಿ ಕಡು
ಗುಣಿಯೆ ಬಾಯೆನ್ನಾನೆ ಬಾಯೆಂದಪ್ಪಿ ಮೈದಡವಿ
ಗುಣವಹುದು ನಿನಗಿಂದುಕುಲ ದಿನ
ಮಣಿಯೆ ದೀಕ್ಷಿತನಾಗು ಮದವಾ
ರಣನೆ ದೀಕ್ಷಿತನಾಗೆನುತ ಬೋಳೈಸಿದನು ಹರಸಿ (ಸಭಾ ಪರ್ವ, ೮ ಸಂಧಿ, ೨೬ ಪದ್ಯ)

ತಾತ್ಪರ್ಯ:
ಧರ್ಮರಾಯನ ಬೇಡಿಕೆಯನ್ನು ಕೇಳಿ, ಸಂತೋಷಭರಿತನಾಗಿ ಕರುಣಾನಿಧಿಯಾದ ಶ್ರೀಕೃಷ್ಣನು ತಲೆ ಬಾಗಿ ಧರ್ಮಜನನ್ನು ಮೇಲೆತ್ತಿ, “ಮಹಾಸದ್ಗುಣಶಾಲಿಯೇ, ಬಾ, ಹಿರಿಯವನೆ ಬಾ, ಎಂದು ಪ್ರೀತಿಯಿಂದ ಅಪ್ಪಿ ಮೈದಡವಿ, ಚಂದ್ರವಂಶ ಕುಲದ ಸೂರ್ಯನೆ, ನೀನು ದೀಕ್ಷಿತನಾಗುವುದು ಎಲ್ಲಾ ರೀತಿಯಲ್ಲಿ ಸರಿಯಾಗಿದೆ. ನನ್ನ ಮದದಾನೆಯೆ ನೀನೆ ದೀಕ್ಷಿತನಾಗು ಎನ್ನುತ್ತಾ ಧರ್ಮರಾಯನ ತಲೆಯ ಮೇಲೆ ಕೈಯಾಡಿಸಿ ಪ್ರೀತಿಯಿಂದ ಹರಸಿದನು.

ಅರ್ಥ:
ಮಣಿದು: ಸಮ್ಮತಿಸು; ಹಿಡಿದು: ಗ್ರಹಿಸು; ಎತ್ತು: ಮೇಲೇಳಿಸು; ರಾಯ: ರಾಜ; ಹಣೆ: ಲಲಾಟ; ಅನುಪಮ: ಉತ್ಕೃಷ್ಟವಾದುದು; ಕರುಣ: ದಯೆ; ನಿಧಿ: ಸಂಪತ್ತು, ಸಮುದ್ರ; ಕಡು: ವಿಶೇಷ; ಗುಣಿ: ಗುಣಉಳ್ಳವ; ಬಾ: ಆಗಮನ, ಹತ್ತಿರಕ್ಕೆ ಕರೆ; ಆನೆ: ದೊಡ್ಡದು; ಅಪ್ಪಿ: ಅಪ್ಪುಗೆ, ತಬ್ಬಿಕೊಳ್ಳು; ಮೈ: ತನು; ಮೈದಡವಿ: ಮೈಯನ್ನು ಸವರಿ; ಗುಣ: ನಡತೆ, ಧರ್ಮ; ಇಂದು: ಚಂದ್ರ; ಕುಲ: ವಂಶ; ದಿನಮಣಿ: ಸೂರ್ಯ; ದೀಕ್ಷೆ:ಪವಿತ್ರ ಕಾರ್ಯಕ್ಕಾಗಿ ಆರಂಭದಲ್ಲಿ ನಡೆಸುವ ಸಂಸ್ಕಾರ; ವಾರಣ: ಆನೆ; ಮದ: ಸೊಕ್ಕು; ಬೋಳೈಸು: ಕೈಯಾಡಿಸು; ಹರಸು: ಆಶೀರ್ವದಿಸು;

ಪದವಿಂಗಡಣೆ:
ಮಣಿದು +ಹಿಡಿದ್+ಎತ್ತಿದನು +ರಾಯನ
ಹಣೆಯನ್+ಅನುಪಮ +ಕರುಣನಿಧಿ+ ಕಡು
ಗುಣಿಯೆ +ಬಾ +ಎನ್ನಾನೆ+ ಬಾ+ಯೆಂದ್+ಅಪ್ಪಿ+ ಮೈದಡವಿ
ಗುಣವಹುದು +ನಿನಗ್+ಇಂದುಕುಲ+ ದಿನ
ಮಣಿಯೆ +ದೀಕ್ಷಿತನಾಗು +ಮದವಾ
ರಣನೆ+ ದೀಕ್ಷಿತನಾಗ್+ಎನುತ+ ಬೋಳೈಸಿದನು+ ಹರಸಿ

ಅಚ್ಚರಿ:
(೧)ಬಾ ಮತ್ತು ದೀಕ್ಷಿತ ಪದಗಳ ಜೋಡಿ ಬಳಕೆ – ಕಡುಗುಣಿಯೆ ಬಾ, ಎನ್ನಾನೆ ಬಾ, ದೀಕ್ಷಿತನಾಗು ಮದವಾರಣೆ ದೀಕ್ಷಿತನಾಗು
(೨) ಧರ್ಮರಾಯನಿಗೆ ಬಳಸಿದ ಗುಣವಾಚಕಗಳು – ಕಡುಗುಣಿಯೆ, ಎನ್ನಾನೆ, ಇಂದುಕುಲ ದಿನಮಣಿ, ಮದವಾರಣ
(೩) ಬೋಳೈಸು, ಅಪ್ಪಿ, ಮೈದಡವಿ – ಪ್ರೀತಿ/ಸ್ನೇಹ ವನ್ನು ತೋರ್ಪಡಿಸುವ ಪದಗಳ ಬಳಕೆ