ಪದ್ಯ ೩೮: ಅಶ್ವತ್ಥಾಮನು ತನ್ನ ಪರಾಕ್ರಮದ ಬಗ್ಗೆ ಏನು ಹೇಳಿದನು?

ರಣದೊಳಾ ಗಾಂಗೇಯಗಿಮ್ಮಡಿ
ಗುಣವ ತೋರುವೆನಪ್ಪನವರಿಂ
ದೆಣಿಸಿಕೊಳು ಮೂವಡಿಯನಗ್ಗದ ಸೂತನಂದನನ
ರಣಕೆ ನಾಲ್ವಡಿ ಮಾದ್ರರಾಜನ
ಹೊಣಕೆಗೈದು ಸುಶರ್ಮ ಶಕುನಿಗ
ಳೆಣಿಸುವಡೆ ಪಾಡಲ್ಲ ನೋಡೇಳೆಂದನಾ ದ್ರೌಣಿ (ಗದಾ ಪರ್ವ, ೪ ಸಂಧಿ, ೩೮ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನ ನುಡಿಯುತ್ತಾ, ಭೀಷ್ಮನ ಯುದ್ಧ ಕೌಶಲ್ಯದ ಇಮ್ಮಡಿ ಕುಶಲತೆಯನ್ನೂ, ನನ್ನ ತಂದೆ ದ್ರೋಣನ, ಮೂರರಷ್ಟನ್ನೂ, ಕರ್ಣನ ಪರಾಕ್ರಮದ ನಾಲ್ಕರಷ್ಟನ್ನೂ, ಶಲ್ಯನ ಐದರಷ್ಟು ಚಾತುರ್ಯತೆಯನ್ನೂ ತೋರಿಸುತ್ತೇನೆ. ಸುಶರ್ಮ ಶಕುನಿಗಳಿಗೆ ಹೋಲಿಸಲಾಗದಂತಹ ರಣಕೌಶಲ ನನ್ನನು, ನೀನು ನೀರಿನಿಂದ ಹೊರಬಂದು ನೋಡು ಎಂದು ಅಶ್ವತ್ಥಾಮನು ಬೇಡಿದನು.

ಅರ್ಥ:
ರಣ: ಯುದ್ಧಭೂಮಿ; ಇಮ್ಮಡಿ: ಎರಡು ಪಟ್ಟು; ಗುಣ: ನಡತೆ; ತೋರು: ಪ್ರದರ್ಶಿಸು; ಅಪ್ಪ: ತಂದೆ; ಎಣಿಸು: ಲೆಕ್ಕ ಹಾಕು; ಮೂವಡಿ: ಮೂರ್ಪಟ್ಟು; ಅಗ್ಗ: ಶ್ರೇಷ್ಠ; ನಂದನ: ಮಗ; ನಾಲ್ವಡಿ: ನಾಲ್ಕರಷ್ಟು; ಹೊಣಕೆ: ಯುದ್ಧ; ಶೌರ್ಯ; ಪಾಡು: ಸಮಾನ, ಸಾಟಿ; ದ್ರೌಣಿ: ಅಶ್ವತ್ಥಾಮ;

ಪದವಿಂಗಡಣೆ:
ರಣದೊಳಾ +ಗಾಂಗೇಯಗ್+ಇಮ್ಮಡಿ
ಗುಣವ +ತೋರುವ್+ಎನಪ್ಪನ್+ಅವರಿಂದ್
ಎಣಿಸಿಕೊಳು +ಮೂವಡಿಯನ್+ಅಗ್ಗದ +ಸೂತ+ನಂದನನ
ರಣಕೆ +ನಾಲ್ವಡಿ +ಮಾದ್ರರಾಜನ
ಹೊಣಕೆಗ್+ಐದು +ಸುಶರ್ಮ+ ಶಕುನಿಗಳ್
ಎಣಿಸುವಡೆ+ ಪಾಡಲ್ಲ +ನೋಡ್+ಏಳ್+ಎಂದನಾ +ದ್ರೌಣಿ

ಅಚ್ಚರಿ:
(೧) ರಣ, ಗುಣ – ಪ್ರಾಸ ಪದಗಳು
(೨) ರಣ – ೧, ೪ ಸಾಲಿನ ಮೊದಲ ಪದ

ಪದ್ಯ ೯: ಕೌರವರು ಏಕೆ ಹರುಷಿಸಿದರು?

ಹಣುಗಿದರು ಭೀಮಾದಿಗಳು ಕ
ಟ್ಟೊಣಗಿಲಾದವು ಭಟರ ಮೋರೆಗ
ಳೆಣಿಸುತಿರ್ದರು ಜಪವನರ್ಜುನ ಕೃಷ್ಣರೆಂಬವರು
ಸೆಣಸುವನು ಗಡ ಕೌರವನೊಳಿ
ನ್ನುಣಲಿ ಧರೆಯನು ಧರ್ಮಸುತನೆಂ
ದಣಕವಾಡಿತು ನಿನ್ನ ದುಷ್ಪರಿವಾರ ಹರುಷದಲಿ (ಕರ್ಣ ಪರ್ವ, ೨೫ ಸಂಧಿ, ೯ ಪದ್ಯ)

ತಾತ್ಪರ್ಯ:
ಭೀಮನೇ ಮೊದಲಾದ ಪಾಂಡವ ವೀರರು ಹೊಂಚು ಹಾಕಿದರು. ಯೋಧರ ಮೋರೆಗಳು ಬಡವಾದವು. ಕೃಷ್ಣ ಅರ್ಜುನರ ನಾಮಸ್ಮರಣೆಮಾಡಲಾರಂಭಿಸಿದರು. ಎಲೈ ರಾಜ ಧೃತರಾಷ್ಟ್ರ ನಿನ್ನ ದುಷ್ಟಪರಿವಾರವು ಧರ್ಮರಾಯನಿಗೆ, ಇವನು ಕೌರವನೊಡನೆ ಯುದ್ಧಕ್ಕಿಳಿದನೋ, ಇನ್ನು ರಾಜ್ಯವನ್ನನುಭವಿಸಲಿ ಎಂದು ಅಣಕಿಸಿದರು.

ಅರ್ಥ:
ಹಣುಗು: ಹಿಂಜರಿ, ಹೊಂಚು; ಆದಿ: ಮುಂತಾದ; ಒಣಗು: ಬತ್ತಿದ, ಸತ್ತ್ವವಿಲ್ಲದ; ಭಟ: ಸೈನಿಕ; ಮೋರೆ: ಮುಖ; ಎಣಿಸು: ಗಣನೆ ಮಾಡು; ಜಪ: ನಾಮಸ್ಮರಣೆ; ಸೆಣಸು: ಯುದ್ಧಮಾದು; ಗಡ: ಅಲ್ಲವೆ; ತ್ವರಿತವಾಗಿ; ಉಣು: ಊಟಮಾಡು; ಧರೆ: ಭೂಮಿ; ಸುತ: ಮಗ; ಧರ್ಮ: ಯಮ; ಅಣಕ: ಹಂಗಿಸು; ಪರಿವಾರ: ಸುತ್ತಲಿನವರು, ಪರಿಜನ; ದುಷ್ಪರಿವಾರ: ದುಷ್ಟಪರಿಜನ; ಹರುಷ: ಸಂತೋಷ;

ಪದವಿಂಗಡಣೆ:
ಹಣುಗಿದರು +ಭೀಮಾದಿಗಳು +ಕಟ್
ಒಣಗಿಲಾದವು+ ಭಟರ+ ಮೋರೆಗಳ್
ಎಣಿಸುತಿರ್ದರು +ಜಪವನ್+ಅರ್ಜುನ +ಕೃಷ್ಣರ್+ಎಂಬವರು
ಸೆಣಸುವನು+ ಗಡ+ ಕೌರವನೊಳ್
ಇನ್ನುಣಲಿ +ಧರೆಯನು +ಧರ್ಮಸುತನೆಂದ್
ಅಣಕವಾಡಿತು +ನಿನ್ನ+ ದುಷ್ಪರಿವಾರ +ಹರುಷದಲಿ

ಅಚ್ಚರಿ:
(೧) ಪಾಂಡವರ ಸ್ಥಿತಿಯನ್ನು ವರ್ಣಿಸುವ ಪದಗಳು – ಹಣುಗು, ಕಟ್ಟೊಣಗು, ಜಪ
(೨) ಸಂಜಯನು ಧೃತರಾಷ್ಟ್ರನಿಗೆ ತನ್ನದು ದುಷ್ಟಪರಿವಾರ ಎಂದು ಹೇಳುತ್ತಿರುವುದು
(೩) ಎಣಿಸು, ಸೆಣಸು – ಪ್ರಾಸ ಪದ