ಪದ್ಯ ೭: ಕರ್ಣನು ದುರ್ಯೋಧನನಿಗೆ ಏನು ಹೇಳಿದ?

ಹೊಕ್ಕುತಾ ಬಳಿಸಲಿಸಿದೊಡೆ ಹಿಂ
ದಿಕ್ಕಿಕೊಂಬವರಾರು ಹಗೆವನ
ಸಿಕ್ಕಿದುರಗನ ಸೆಳೆವನಾವನು ಗರುಡ ತುಂಡದಲಿ
ಎಕ್ಕತುಳದಲಿ ವೈರಿ ಪಾರ್ಥನ
ನೊಕ್ಕಲಿಕ್ಕುವೆನರಸ ನಿನ್ನೀ
ಚುಕ್ಕಿಗಳ ಚಾಪಲವ ಕೇಳದಿರೆಂದನಾ ಕರ್ಣ (ವಿರಾಟ ಪರ್ವ, ೮ ಸಂಧಿ, ೭ ಪದ್ಯ)

ತಾತ್ಪರ್ಯ:
ನಾನು ಬೆನ್ನು ಹತ್ತಿದರೆ ಶತ್ರುವನ್ನು ಹಿಂದಿಟ್ಟುಕೊಂಡು ಕಾಪಾಡುವವನಾರು? ಗರುಡನ ಕೊಕ್ಕಿಗೆ ಸಿಕ್ಕ ಹಾವನ್ನು ಹಿಂದಕ್ಕೆಳೆದುಕೊಳ್ಳುವಾವರಾರು? ಪರಾಕ್ರಮದಿಂದ ಅರ್ಜುನನನ್ನು ಬಡಿದು ಕೆಡವುತ್ತೇನೆ, ಈ ಅಲ್ಪ ಬಲರ ಬಾಯಿ ಚಪಲದ ಮಾತುಗಳನ್ನು ಕೇಳಬೇಡ ಎಂದು ಕರ್ಣನು ದುರ್ಯೋಧನನಿಗೆ ಹೇಳಿದನು.

ಅರ್ಥ:
ಹೊಕ್ಕು: ಸೇರು; ಬಳಿಸಲಿಸು: ಹಿಂದೆಟ್ಟಿಕೊಂಡು ಹೋಗು; ಹಿಂದೆ: ಹಿಂಬದಿಯಲ್ಲಿ, ಹಿಂಭಾಗದಲ್ಲಿ; ಹಗೆ: ವೈರಿ; ಉರಗ: ಹಾವು; ಸಿಕ್ಕು: ಕಟ್ಟು, ಬಂಧನ; ಸೆಳೆ: ಜಗ್ಗು, ಎಳೆ; ತುಂಡ: ಮುಖ, ಕೊಕ್ಕು; ಎಕ್ಕತುಳ: ಸಮಾನರಾದವರ ದ್ವಂದ್ವಯುದ್ಧ; ವೈರಿ: ಶತ್ರು; ಒಕ್ಕಲಿಕ್ಕು: ಬಡಿ, ಹೊಡೆ; ಅರಸ: ರಾಜ; ಚುಕ್ಕಿ: ತಾರೆ; ಚಾಪಲ: ಚಂಚಲ ಸ್ವಭಾವದವನು; ಕೇಳು: ಆಲಿಸು;

ಪದವಿಂಗಡಣೆ:
ಹೊಕ್ಕುತಾ +ಬಳಿಸಲಿಸಿದೊಡೆ +ಹಿಂ
ದಿಕ್ಕಿಕೊಂಬವರಾರು+ ಹಗೆವನ
ಸಿಕ್ಕಿದ್+ಉರಗನ +ಸೆಳೆವನಾವನು+ ಗರುಡ +ತುಂಡದಲಿ
ಎಕ್ಕತುಳದಲಿ +ವೈರಿ +ಪಾರ್ಥನ
ನೊಕ್ಕಲಿಕ್ಕುವೆನ್+ಅರಸ +ನಿನ್ನೀ
ಚುಕ್ಕಿಗಳ +ಚಾಪಲವ+ ಕೇಳದಿರ್+ಎಂದನಾ +ಕರ್ಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಗೆವನ ಸಿಕ್ಕಿದುರಗನ ಸೆಳೆವನಾವನು ಗರುಡ ತುಂಡದಲಿ

ಪದ್ಯ ೮೨: ಅರ್ಜುನನು ಅಮರಾವತಿಯನ್ನು ಹೇಗೆ ಪ್ರವೇಶಿಸಿದನು?

ಹೊಕ್ಕನಮರಾವತಿಯನರ್ಜುನ
ಎಕ್ಕತುಳದಲುಪಾರ್ಜಿಸಿದಪು
ಣ್ಯಕ್ಕೆ ಸರಿಯೇ ನಳನಹುಷ ಭರತಾದಿ ಭೂಮಿಪರು
ಉಕ್ಕಿದವು ಪರಿಮಳದ ತೇಜದ
ತೆಕ್ಕೆಗಳು ಲಾವಣ್ಯ ಲಹರಿಯ
ಸೊಕ್ಕುಗಳ ಸುರಸೂಳೆಗೇರಿಗಳೊಳಗೆ ನಡೆ ತಂದ (ಅರಣ್ಯ ಪರ್ವ, ೮ ಸಂಧಿ, ೮೨ ಪದ್ಯ)

ತಾತ್ಪರ್ಯ:
ಅರ್ಜುನನು ಅಮರಾವತಿಯನ್ನು ಪ್ರವೇಶಿಸಿದನು. ತನ್ನ ಪರಾಕ್ರಮದಿಮ್ದ ಅವನು ಗಳಿಸಿದ ಪುಣ್ಯಕ್ಕೆ ಸರಿ ಸಮಾನವಾದುದು ಇಲ್ಲ. ನಳ ನಹುಷ ಭರತನೇ ಮೊದಲಾದವರ ಪುಣ್ಯವು ಇವನ ಪುಣ್ಯಕ್ಕೆ ಸಮವಲ್ಲ. ಅರ್ಜುನನು ಅಮರಾವತಿಯ ಸೂಳೆಕೇರಿಗಳಲ್ಲಿ ರಥದಲ್ಲಿ ಚಲಿಸಿದನು, ಅಲ್ಲಿ ಸುಗಂಧ, ಸೌಂದರ್ಯ ತೇಜದ ತೆಕ್ಕೆಗಳು ಲಾವಣ್ಯದ ತೆರೆಗಳು ಕೊಬ್ಬಿ ಕಂಗೊಳಿಸುತ್ತಿದ್ದವು.

ಅರ್ಥ:
ಹೊಕ್ಕು: ಸೇರು; ಎಕ್ಕತುಳ: ಪರಾಕ್ರಮ; ಆರ್ಜಿಸು: ಸಂಪಾದಿಸು; ಪುಣ್ಯ: ಸದಾಚಾರ; ಸರಿ: ಸಮಾನವಾದ; ಭೂಮಿಪ: ರಾಜ; ಉಕ್ಕು: ಸುರಿ; ಪರಿಮಳ: ಸುಗಂಧ; ತೇಜ: ಕಾಂತಿ; ತೆಕ್ಕೆ: ಗುಂಪು; ಲಾವಣ್ಯ: ಚೆಲುವು, ಸೌಂದರ್ಯ; ಲಹರಿ: ರಭಸ, ಆವೇಗ; ಸೊಕ್ಕು:ಅಮಲು, ಮದ; ಸುರ: ದೇವತೆ; ಸೂಳೆ: ವೇಶ್ಯೆ; ಕೇರಿ: ಬೀದಿ, ಓಣಿ; ನಡೆ: ಚಲಿಸು, ಹೋಗು;

ಪದವಿಂಗಡಣೆ:
ಹೊಕ್ಕನ್+ಅಮರಾವತಿಯನ್+ಅರ್ಜುನ
ಎಕ್ಕತುಳದಲು+ಪಾರ್ಜಿಸಿದ+ಪು
ಣ್ಯಕ್ಕೆ +ಸರಿಯೇ +ನಳ+ನಹುಷ+ ಭರತಾದಿ+ ಭೂಮಿಪರು
ಉಕ್ಕಿದವು+ ಪರಿಮಳದ +ತೇಜದ
ತೆಕ್ಕೆಗಳು +ಲಾವಣ್ಯ +ಲಹರಿಯ
ಸೊಕ್ಕುಗಳ+ ಸುರಸೂಳೆ+ಕೇರಿಗಳ್+ಒಳಗೆ +ನಡೆ ತಂದ

ಅಚ್ಚರಿ:
(೧) ಲಾವಣ್ಯ ಲಹರಿ, ಸೋಕ್ಕುಗಳ ಸುರಸೂಳೆಕೇರಿ; ಭರತಾದಿ ಭೂಮಿಪರು; ತೇಜದ ತೆಕ್ಕೆಗಳು – ಜೋಡಿ ಅಕ್ಷರದ ಪದಗಳು

ಪದ್ಯ ೪೭: ಭೀಮನ ಹೊಡೆತಕ್ಕೆ ಯಾರು ಓಡಿದರು?

ಸಿಕ್ಕಿದರೆ ಬಳಿಕೇನು ತಾಯಿಗೆ
ಮಕ್ಕಳಾಗರು ನಿನ್ನ ತನಯನ
ನಿಕ್ಕಿ ಹಾಯ್ದರು ಹಿಂಡೊಡೆದು ನೀ ಸಾಕಿದವರೆಲ್ಲ
ಹೊಕ್ಕು ಬಳಿಕೊಂದೆರಡು ಪಸರದ
ಲುಕ್ಕುಡಿಯಲೊದಗಿದನು ನಿನ್ನವ
ನೆಕ್ಕತುಳದಲಿ ಸರಿಮಿಗಿಲ ಕಾದಿದನು ಹಗೆಯೊಡನೆ (ಕರ್ಣ ಪರ್ವ, ೧೦ ಸಂಧಿ, ೪೭ ಪದ್ಯ)

ತಾತ್ಪರ್ಯ:
ಪೆಟ್ಟು ಬಿದ್ದರೆ ಮಕ್ಕಳೇ ತಾಯಿಯನ್ನು ಬಿಟ್ಟೋಡುತ್ತಾರೆ, ಹೀಗಿರುವಾಗ ಭೀಮನ ಪೆಟ್ಟು ತಿಂದ ಮಹಾರಥರೆಲ್ಲರೂ ಹಿಂಡು ಮುರಿದು ಓಡಿಹೋದರು. ಬಳಿಕ ದುಶ್ಯಾಸನು ಒಂದೆರಡು ಸೈನ್ಯದ ತುಕುಡಿಯನ್ನು ಸೇರಿಸಿ ಶತ್ರುಸೈನ್ಯವನ್ನು ಹೊಕ್ಕು ಏಕಾಂಗಿಯಾಗಿ ವೈರಿಯೊಡನೆ ಸರಿಮಿಗಿಲಾಗಿ ಕಾದಿದನು.

ಅರ್ಥ:
ಸಿಕ್ಕು: ಪಡೆ; ಬಳಿಕ: ನಂತರ; ತಾಯಿ: ಮಾತೆ; ಮಕ್ಕಳು: ಸುತರು; ತನಯ: ಮಗ; ಇಕ್ಕು: ಬಲವಾಗಿ ಗುದ್ದು; ಹಾಯ್ದು: ಹೊಡೆ; ಹಿಂಡು: ಹಿಸುಕು; ಸಾಕಿದ: ಪೋಷಿಸಿದ; ಹೊಕ್ಕು: ಸೇರು; ಪಸರ: ಸಮೂಹ; ಉಕ್ಕುಡಿ: ಸೈನ್ಯ; ಒದಗು: ಪಡೆ; ಎಕ್ಕುತಳ: ಪರಾಕ್ರಮ; ಸರಿಮಿಗಿಲ: ಸಮಾನವಾಗಿ; ಕಾದು: ಹೋರಾಡು; ಹಗೆ: ವೈರಿ;

ಪದವಿಂಗಡಣೆ:
ಸಿಕ್ಕಿದರೆ +ಬಳಿಕೇನು +ತಾಯಿಗೆ
ಮಕ್ಕಳಾಗರು+ ನಿನ್ನ +ತನಯನನ್
ಇಕ್ಕಿ +ಹಾಯ್ದರು +ಹಿಂಡೊಡೆದು +ನೀ +ಸಾಕಿದವರೆಲ್ಲ
ಹೊಕ್ಕು +ಬಳಿಕ್+ಒಂದೆರಡು ಪಸರದಲ್
ಉಕ್ಕುಡಿಯಲ್+ಒದಗಿದನು +ನಿನ್ನವನ್
ಎಕ್ಕತುಳದಲಿ+ ಸರಿಮಿಗಿಲ+ ಕಾದಿದನು+ ಹಗೆಯೊಡನೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸಿಕ್ಕಿದರೆ ಬಳಿಕೇನು ತಾಯಿಗೆ ಮಕ್ಕಳಾಗರು