ಪದ್ಯ ೯: ಧರ್ಮಜನಿಗೆ ಯಾವ ವಿದ್ಯೆಯನ್ನು ಬೋಧಿಸಲಾಯಿತು?

ನಳ ಮಹೀಪತಿ ಯಕ್ಷ ಹೃದಯವ
ತಿಳಿದು ಋತುಪರ್ಣನಲಿ ಕಾಲವ
ಕಳೆದು ಗೆಲಿದನು ಪುಷ್ಕರನ ವಿದ್ಯಾತಿ ಮಹಿಮೆಯಲಿ
ಗೆಲಿದು ಕೌರವ ಶಕುನಿಗಳು ನಿ
ನ್ನಿಳೆಯಕೊಂಡರು ಮರಳಿ ಜೂಜಿಂ
ಗಳುಕಬೇಡೆಂದಕ್ಷಹೃದಯವ ಮುನಿಪ ಕರುಣಿಸಿದ (ಅರಣ್ಯ ಪರ್ವ, ೧೦ ಸಂಧಿ, ೯ ಪದ್ಯ)

ತಾತ್ಪರ್ಯ:
ನಳನು ಋತುಪರ್ಣನಿಂದ ಅಕ್ಷಹೃದಯವನ್ನು ಕಲಿತನು, ಕಾಲವು ಕಳೆದ ಮೇಲೆ ಪುಷ್ಕರನನ್ನು ಅಕ್ಷಹೃದಯದ ಮಹಿಮೆಯಿಂದ ಗೆದ್ದನು. ಶಕುನಿ ಕೌರವರು ನಿನ್ನನ್ನು ಪಗಡೆಯಲ್ಲಿ ಸೋಲಿಸಿ ನಿನ್ನ ರಾಜ್ಯವನ್ನು ಗೆದ್ದುಕೊಂಡರು. ಮತ್ತೊಮ್ಮೆ ನಿನ್ನನ್ನು ಜೂಜಿಗೆ ಕರೆದರೂ ನೀನು ಹೆದರಬೇಡ ಎಂದು ಧರ್ಮಜನಿಗೆ ಅಕ್ಷಹೃದಯವನ್ನು ಬೋಧಿಸಿದನು.

ಅರ್ಥ:
ಮಹೀಪತಿ: ರಾಜ; ಹೃದಯ: ವಕ್ಷಸ್ಥಳ; ಅಕ್ಷ: ಪಗಡೆಯ ಜೂಜು; ಅಕ್ಷಹೃದಯ: ಪಗಡೆಯ ಆಟದ ಗುಟ್ಟು; ತಿಳಿ: ಅರ್ಥೈಸು; ಕಾಲ: ಸಮಯ; ಕಳೆ: ತೊರೆ, ಹೋಗಲಾಡಿಸು; ಗೆಲಿ: ಜಯಗಳಿಸು; ವಿದ್ಯ: ಜ್ಞಾನ; ಮಹಿಮೆ: ಶ್ರೇಷ್ಠತೆ, ಔನ್ನತ್ಯ; ಇಳೆ: ಭೂಮಿ; ಮರಳಿ: ಮತ್ತೆ; ಜೂಜು: ದ್ಯೂತ; ಅಳುಕು: ಹೆದರು; ಮುನಿಪ: ಋಷಿ; ಕರುಣಿಸು: ದಯಪಾಲಿಸು;

ಪದವಿಂಗಡಣೆ:
ನಳ +ಮಹೀಪತಿ+ ಅಕ್ಷಹೃದಯವ
ತಿಳಿದು +ಋತುಪರ್ಣನಲಿ +ಕಾಲವ
ಕಳೆದು +ಗೆಲಿದನು +ಪುಷ್ಕರನ +ವಿದ್ಯಾತಿ +ಮಹಿಮೆಯಲಿ
ಗೆಲಿದು+ ಕೌರವ+ ಶಕುನಿಗಳು+ ನಿನ್
ಇಳೆಯ+ಕೊಂಡರು +ಮರಳಿ +ಜೂಜಿಂಗ್
ಅಳುಕ+ಬೇಡೆಂದ್+ಅಕ್ಷಹೃದಯವ +ಮುನಿಪ +ಕರುಣಿಸಿದ

ಅಚ್ಚರಿ:
(೧) ಅಕ್ಷಹೃದಯ ವಿದ್ಯೆಯ ಮಹಿಮೆ ಬಗ್ಗೆ ತಿಳಿಸುವ ಪದ್ಯ

ಪದ್ಯ ೭: ನಳನು ಪುನಃ ರಾಜನಾದುದು ಹೇಗೆ?

ಬಳಿಕ ಕಾರ್ಕೋಟಕನ ದೆಸೆಯಿಂ
ದಳಿಯೆ ನಿಜ ಋತುಪರ್ಣಭೂಪನ
ನಿಳಯಕೋಲೈಸಿದನು ಬಾಹುಕನೆಂಬ ನಾಮದಲಿ
ಲಲನೆ ತೊಳಲಿದು ಬರುತ ತಮ್ದೆಯ
ನಿಳಯವನು ಸಾರಿದಳು ಬಳಿಕಾ
ನಳಿನಮುಖಿಯಿಂದಾಯ್ತು ನಳಭೂಪತಿಗೆ ನಿಜರಾಜ್ಯ (ಅರಣ್ಯ ಪರ್ವ, ೧೦ ಸಂಧಿ, ೭ ಪದ್ಯ)

ತಾತ್ಪರ್ಯ:
ನಂತರ ನಳನು ಕಾರ್ಕೋಟಕನ ದೆಸೆಯಿಂದ ರೂಪವನ್ನು ಕಳೆದುಕೊಂಡು ಬಾಹುಕನೆಂಬ ಹೆಸರಿನಿಂದ ಋತುಪರ್ಣನ ಸಾರಥಿಯಾದನು. ಬಳಿಕ ದಮಯಂತಿಯು ತನ್ನ ತಂದೆ ಮನೆಗೆ ಹೋದಳು, ಅವಳ ದೆಸೆಯಿಂದ ನಳನು ಮತ್ತೆ ತನ್ನ ರಾಜ್ಯವನ್ನು ಪಡೆದು ರಾಜನಾದನು.

ಅರ್ಥ:
ಬಳಿಕ: ನಂತರ; ದೆಸೆ: ಕಾರಣ; ಅಳಿ: ನಾಶ; ನಿಜ: ತನ್ನ, ದಿಟ; ಭೂಪ: ರಾಜ; ನಿಳಯ: ಆಲಯ; ಓಲೈಸು: ಉಪಚರಿಸು; ನಾಮ: ಹೆಸರು; ಲಲನೆ: ಹುಡುಗಿ; ತೊಳಲು: ಬವಣೆ, ಸಂಕಟ; ಬರುತ: ಆಗಮನ; ತಂದೆ: ಪಿತ; ಸಾರು: ಬಳಿ ಸೇರು, ಹತ್ತಿರಕ್ಕೆ ಬರು; ನಳಿನಮುಖಿ: ಸುಂದರಿ, ಕಮಲದಂತ ಮುಖವುಳ್ಳವಳು; ಭೂಪತಿ: ರಾಜ; ರಾಜ್ಯ: ದೇಶ;

ಪದವಿಂಗಡಣೆ:
ಬಳಿಕ +ಕಾರ್ಕೋಟಕನ +ದೆಸೆಯಿಂದ್
ಅಳಿಯೆ +ನಿಜ+ ಋತುಪರ್ಣ+ಭೂಪನ
ನಿಳಯಕ್+ಓಲೈಸಿದನು +ಬಾಹುಕನೆಂಬ +ನಾಮದಲಿ
ಲಲನೆ +ತೊಳಲಿದು +ಬರುತ+ ತಂದೆಯ
ನಿಳಯವನು +ಸಾರಿದಳು +ಬಳಿಕಾ
ನಳಿನಮುಖಿಯಿಂದ್+ಆಯ್ತು +ನಳ+ಭೂಪತಿಗೆ+ ನಿಜ+ರಾಜ್ಯ

ಅಚ್ಚರಿ:
(೧) ಕಾರ್ಕೋಟಕ, ಋತುಪರ್ಣ, ಬಾಹುಕ, ನಳ, ನಳಿನಮುಖಿ (ದಮಯಂತಿ), ತಂದೆ (ಭೀಮರಾಜ)
(೨) ಲಲನೆ, ನಳಿನಮುಖಿ; ಭೂಪ, ಭೂಪತಿ – ಸಮನಾರ್ಥಕ ಪದಗಳು