ಪದ್ಯ ೯: ಸಂಜಯನು ಯಾರ ನಡಿಗೆಯನ್ನು ನೋಡಿದನು – ೨?

ಎಡಹುದಲೆಗಳ ದಾಂಟಿ ರಕುತದ
ಮಡುವಿನಲಿ ಗದೆಯೂರಿ ನೆಲೆಗಳ
ಪಡೆದು ಕಂಪಿಸಿ ಕುಣಿವ ಮುಂಡವ ಗದೆಯಲಪ್ಪಳಿಸಿ
ಅಡಿಗಡಿಗೆ ಹೇರಾನೆಗಳ ಹೇ
ರೊಡಲ ಹತ್ತಿಳಿದೇರಿ ಝೊಂಪಿಸಿ
ಮಿಡುಕಿ ನಿಲುವನು ಬಳಲಿದೂರ್ಧ್ವಶ್ವಾಸ ಲಹರಿಯಲಿ (ಗದಾ ಪರ್ವ, ೩ ಸಂಧಿ, ೯ ಪದ್ಯ)

ತಾತ್ಪರ್ಯ:
ಎಡವಿ ಬೀಳುವಂತಹ ಜಾಗಗಳನ್ನು ದಾಟಿ, ರಕ್ತದ ಮಡುವುಗಳಲ್ಲಿ ಗದೆಯನ್ನೂರಿ ಕಾಲಿಡಲು ಜಾಗವನ್ನು ಹುಡುಕಿಕೊಂಡು ನಡುಗುತ್ತಾ ಕುಣೀಯುವ ಮೂಂಡಗಳನ್ನು ಗದೆಯಿಂದ ಅಪ್ಪಳಿಸಿ ದೊಡ್ಡ ಆನೆಗಳ ದೇಹವನ್ನು ಹತ್ತಿಳಿದು ಹೊಯ್ದಾಡಿ ಬಳಲಿ ಮೇಲುಸಿರು ಹತ್ತಿ ನಡುಗುತ್ತಾ ನಿಲ್ಲುತ್ತಿದ್ದನು.

ಅರ್ಥ:
ಎಡಹು: ಬೀಳು; ತಲೆ: ಶಿರ; ದಾಂಟಿ: ದಾಟು; ರಕುತ: ನೆತ್ತರು; ಮಡು: ಹಳ್ಳ, ಕೊಳ್ಳ; ಗದೆ: ಮುದ್ಗರ; ಊರು: ನೆಲೆಸು; ನೆಲೆ: ಭೂಮಿ, ಜಾಗ; ಪಡೆದು: ದೊರಕಿಸು; ಕಂಪಿಸು: ನಡುಗು; ಕುಣಿ: ನರ್ತಿಸು; ಮುಂಡ: ಶಿರವಿಲ್ಲದ ದೇಹ; ಅಪ್ಪಳಿಸು: ತಟ್ಟು; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೆ; ಹೇರಾನೆ: ದೊಡ್ಡ ಗಜ; ಹೇರೊಡಲು: ದೊಡ್ಡದಾದ ಶರೀರ; ಹತ್ತಿಳಿ: ಮೇಲೇರಿ ಕೆಳಗಿಳಿ; ಝೊಂಪಿಸು: ಭಯಗೊಳ್ಳು; ಮಿಡುಕು: ನಡುಕ, ಕಂಪನ; ಬಳಲು: ಆಯಾಸಗೊಳ್ಳು; ಉರ್ಧ್ವಶ್ವಾಸ: ಏದುಸಿರು, ಮೇಲುಸಿರು; ಲಹರಿ: ರಭಸ, ಆವೇಗ;

ಪದವಿಂಗಡಣೆ:
ಎಡಹು+ತಲೆಗಳ +ದಾಂಟಿ +ರಕುತದ
ಮಡುವಿನಲಿ +ಗದೆಯೂರಿ +ನೆಲೆಗಳ
ಪಡೆದು +ಕಂಪಿಸಿ +ಕುಣಿವ +ಮುಂಡವ+ ಗದೆಯಲ್+ಅಪ್ಪಳಿಸಿ
ಅಡಿಗಡಿಗೆ +ಹೇರಾನೆಗಳ +ಹೇ
ರೊಡಲ +ಹತ್ತಿಳಿದ್+ಏರಿ+ ಝೊಂಪಿಸಿ
ಮಿಡುಕಿ +ನಿಲುವನು +ಬಳಲಿದ್+ಊರ್ಧ್ವಶ್ವಾಸ+ ಲಹರಿಯಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೇರಾನೆಗಳ ಹೇರೊಡಲ ಹತ್ತಿಳಿದೇರಿ
(೨) ನಿಲ್ಲಲು ಜಾಗವನ್ನು ವಿವರಿಸುವ ಪರಿ – ರಕುತದ ಮಡುವಿನಲಿ ಗದೆಯೂರಿ ನೆಲೆಗಳ ಪಡೆದು