ಪದ್ಯ ೪೨: ದ್ರೋಣನ ಕೋಪವನ್ನು ಎದುರಿಸಲು ಯಾರು ಬಂದರು?

ಮತ್ತೆ ಮಸೆದುದು ಖಾತಿ ಕರ್ಬೊಗೆ
ಸುತ್ತಿದುಸುರಲಿ ಮೀಸೆಗಡಿದೌ
ಡೊತ್ತಿ ಸೆಳೆದನು ಶರವನೆಚ್ಚನು ಪವನನಂದನನ
ಹತ್ತೆಗಡಿದನು ಭೀಮ ಮಗುಳಿವ
ನೊತ್ತಿ ಹೊಕ್ಕರೆ ಕೈ ನೆರವ ಹಾ
ರುತ್ತ ಮುರಿದನು ಬಳಿಕ ಧೃಷ್ಟದ್ಯುಮ್ನನಿದಿರಾದ (ದ್ರೋಣ ಪರ್ವ, ೧೮ ಸಂಧಿ, ೪೨ ಪದ್ಯ)

ತಾತ್ಪರ್ಯ:
ದ್ರೋಣನು ಮತ್ತೆ ಕೋಪಗೊಂಡು ಔಡೊತ್ತಿ, ಹೊಗೆಯುಗುಳುವ ಉಸಿರನ್ನು ಬಿಡುತ್ತ, ಭೀಮನ ಮೇಲೆ ಬಾಣವನ್ನು ಬಿಡಲು ಭೀಮನು ಅದನ್ನು ಕಡಿದನು. ದ್ರೋಣನು ಮತ್ತೆ ಮುನ್ನುಗ್ಗಲು, ಭೀಮನು ಸಹಾಯಕ್ಕಾಗಿ ಬೇರೆಡೆಗೆ ಹೋದನು. ಆಗ ಧೃಷ್ಟದ್ಯುಮ್ನನು ಎದುರಿಗೆ ಬಂದನು.

ಅರ್ಥ:
ಮಸೆ: ಹರಿತವಾದುದು; ಖಾತಿ: ಕೋಪ; ಕರ್ಬೊಗೆ: ದಟ್ಟವಾದ ಹೊಗೆ; ಸುತ್ತು: ಆವರಿಸು; ಉಸುರು: ಗಾಳಿ; ಕಡಿ: ಸೀಳು; ಔಡೊತ್ತು: ಹಲ್ಲಿನಿಂದ ತುಟಿಕಚ್ಚು; ಸೆಳೆ: ಎಳೆತ, ಸೆಳೆತ; ಶರ: ಬಾಣ; ಎಚ್ಚು: ಬಾಣ ಪ್ರಯೋಗ ಮಾಡು; ನಂದನ: ಮಗ; ಹತ್ತೆ: ಹತ್ತಿರ, ಸಮೀಪ; ಕದಿ: ಸೀಳು; ಮಗುಳು: ಪುನಃ, ಮತ್ತೆ; ಒತ್ತು: ತಳ್ಳು; ಹೊಕ್ಕು: ಸೇರು; ಕೈ: ಹಸ್ತ; ನೆರವು: ಸಹಾಯ; ಹಾರು: ಜಿಗಿ; ಮುರಿ: ಸೀಳು; ಬಳಿಕ: ನಂತರ; ಇರಿದು: ಎದುರು;

ಪದವಿಂಗಡಣೆ:
ಮತ್ತೆ +ಮಸೆದುದು +ಖಾತಿ +ಕರ್ಬೊಗೆ
ಸುತ್ತಿದ್+ಉಸುರಲಿ +ಮೀಸೆ+ಕಡಿದ್+ಔ
ಡೊತ್ತಿ +ಸೆಳೆದನು +ಶರವನ್+ಎಚ್ಚನು +ಪವನ+ನಂದನನ
ಹತ್ತೆ+ಕಡಿದನು +ಭೀಮ +ಮಗುಳಿವನ್
ಒತ್ತಿ +ಹೊಕ್ಕರೆ +ಕೈ +ನೆರವ+ ಹಾ
ರುತ್ತ +ಮುರಿದನು+ ಬಳಿಕ +ಧೃಷ್ಟದ್ಯುಮ್ನನ್+ಇದಿರಾದ

ಅಚ್ಚರಿ:
(೧) ಸುತ್ತಿ, ಔಡೊತ್ತಿ, ಒತ್ತಿ – ಪ್ರಾಸ ಪದಗಳು
(೨) ಕೋಪವನ್ನು ವರ್ಣಿಸುವ ಪರಿ – ಮತ್ತೆ ಮಸೆದುದು ಖಾತಿ ಕರ್ಬೊಗೆ ಸುತ್ತಿದುಸುರಲಿ