ಪದ್ಯ ೨೨: ಸಂಜಯನು ರಣರಸವನ್ನು ಹೇಗೆ ವಿವರಿಸಿದನು?

ಶಕುನಿ ಬಿದ್ದನು ಜೀಯ ಸಹದೇ
ವಕನ ಕೈಯಲುಳೂಕ ಮಡಿದನು
ನಕುಲನಂಬಿನಲಾ ತ್ರಿಗರ್ತ ಸುಶರ್ಮಕಾದಿಗಳು
ಸಕಲ ಗಜಹಯಸೇನೆ ಸಮಸ
ಪ್ತಕರು ಪಾರ್ಥನ ಶರದಲಮರೀ
ನಿಕರವನು ಸೇರಿದರು ಹೇಳುವುದೇನು ರಣರಸವ (ಗದಾ ಪರ್ವ, ೪ ಸಂಧಿ, ೨೨ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನ ಪ್ರಶ್ನೆಯನ್ನು ವಿವರಿಸುತ್ತಾ, ಎಲೈ ರಾಜನೇ ಯುದ್ಧರಂಗದ ಸಾರವನ್ನು ಹೇಳುತ್ತೇನೆ ಕೇಳು. ಸಹದೇವನ ಕೈಯಲ್ಲಿ ಶಕುನಿಯು ಇಹಲೋಕವನ್ನು ತ್ಯಜಿಸಿದನು. ನಕುಲನ ಬಾಣಗಳಿಂದ ಉಲೂಕನು ಮಡಿದನು. ಅರ್ಜುನನ ಬಾಣಗಳಿಂದ ತಮ್ಮ ಸಮಸ್ತ ಸೇನೆಯೊಂದಿಗೆ ತ್ರಿಗರ್ತ ದೇಶಾಧಿಪತಿಗಳಾದ ಸುಶರ್ಮನೇ ಮೊದಲಾದ ಪರಾಕ್ರಮಿಗಳು ಅಪ್ಸರೆಯರ ಗುಂಪನ್ನು ಸೇರಿದರು ಎಂದು ಸಂಜಯನು ವಿವರಿಸಿದನು.

ಅರ್ಥ:
ಬಿದ್ದು: ಬೀಳು, ಕುಸಿ; ಜೀಯ: ಒಡೆಯ; ಮಡಿ: ಸಾಯಿ, ಸಾವನಪ್ಪು; ಅಂಬು: ಬಾಣ; ಆದಿ: ಮುಂತಾದ; ಸಕಲ: ಎಲ್ಲಾ; ಗಜ: ಆನೆ; ಹಯ: ಕುದುರೆ; ಸೇನೆ: ಸೈನ್ಯ; ಸಮಸಪ್ತಕ: ಪ್ರಮಾಣ ಮಾಡಿ ಯುದ್ಧ ಮಾಡುವವ; ಶರ: ಬಾಣ; ಅಮರಿ: ಅಪ್ಸರೆ; ನಿಕರ: ಗುಂಪು; ಸೇರು: ಜೊತೆಗೂಡು; ಹೇಳು: ತಿಳಿಸು; ರಣ: ಯುದ್ಧ; ರಸ: ಸಾರ;

ಪದವಿಂಗಡಣೆ:
ಶಕುನಿ +ಬಿದ್ದನು +ಜೀಯ +ಸಹದೇ
ವಕನ +ಕೈಯಲ್+ಉಳೂಕ+ ಮಡಿದನು
ನಕುಲನ್+ಅಂಬಿನಲ್+ಆ ತ್ರಿಗರ್ತ+ ಸುಶರ್ಮಕ+ಆದಿಗಳು
ಸಕಲ+ ಗಜ+ಹಯ+ಸೇನೆ +ಸಮಸ
ಪ್ತಕರು +ಪಾರ್ಥನ +ಶರದಲ್+ಅಮರೀ
ನಿಕರವನು+ ಸೇರಿದರು +ಹೇಳುವುದೇನು+ ರಣರಸವ

ಅಚ್ಚರಿ:
(೧) ಸತ್ತರು ಎಂದು ಹೇಳುವ ಪರಿ – ಬಿದ್ದನು, ಮಡಿದನು, ಅಮರೀನಿಕರ ಸೇರಿದನು

ಪದ್ಯ ೩೦: ದುರ್ಯೋಧನನ ತನ್ನ ಪರಾಕ್ರಮವನ್ನು ಹೇಗೆ ಹೊಗಳಿಕೊಂಡನು?

ನರನ ಬಸುರಲಿ ಕರ್ಣನನು ಭೂ
ವರನ ಸೀಳಿದು ಶಲ್ಯನನು ಕಾ
ತರಿಸದಿರು ಶಕುನಿಯನುಳೂಕನ ಯಮಳರಿಬ್ಬರಲಿ
ಹರಿಬಕಿದಿರಾಗಲಿ ಮುರಾಂತಕ
ಹರಹಿಕೊಳಲಿ ಮದೀಯಬಾಹು
ಸ್ಫುರಣಶಕ್ತಿಗೆ ಭಂಗಬಾರದು ನೋಡು ನೀನೆಂದ (ಗದಾ ಪರ್ವ, ೩ ಸಂಧಿ, ೩೦ ಪದ್ಯ)

ತಾತ್ಪರ್ಯ:
ದುರ್ಯೋಧನನು ನುಡಿಯುತ್ತಾ, ಎಲೈ ಸಂಜಯ ನೋಡುತ್ತಿರು, ನಾನು ಅರ್ಜುನನ ಹೊಟ್ಟೆಯಿಂದ ಕರ್ಣನನ್ನು, ಧರ್ಮಜನನ್ನು ಸೀಳಿ ಶಲ್ಯನನ್ನು, ನಕುಲ ಸಹದೇವರಿಬ್ಬರಿಂದ ಶಕುನಿ ಉಲೂಕರನ್ನು ತೆಗೆಯುತ್ತೇನೆ. ಕೃಷ್ಣನೇ ಎದುರಾಗಿ ಪಾಂಡವರನ್ನು ರಕ್ಷಿಸಿದರೂ, ನನ್ನ ತೋಳ್ಬಲಕ್ಕೆ ಭಂಗ ಬರುವುದಿಲ್ಲ; ನೋಡು: ವೀಕ್ಷಿಸು;

ಅರ್ಥ:
ನರ: ಅರ್ಜುನ; ಬಸುರು: ಹೊಟ್ಟೆ; ಭೂವರ: ರಾಜ; ಸೀಳು: ಕತ್ತರಿಸು; ಕಾತರ: ಕಳವಳ; ಯಮಳ: ನಕುಲ ಸಹದೇವ; ಹರಿಬ: ಕೆಲಸ, ಕಾರ್ಯ; ಇದಿರು: ಎದುರು; ಮುರಾಂತಕ: ಕೃಷ್ಣ; ಹರಹು: ವಿಸ್ತಾರ, ವೈಶಾಲ್ಯ;ಮದೀಯ: ನನ್ನ; ಬಾಹು: ಭುಜ, ತೋಳು; ಸ್ಫುರಣ: ಹೊಳೆ, ಕಂಪನ; ಶಕ್ತಿ: ಬಲ; ಭಂಗ: ಮುರಿ, ಚೂರುಮಾಡು; ನೋಡು: ವೀಕ್ಷಿಸು;

ಪದವಿಂಗಡಣೆ:
ನರನ +ಬಸುರಲಿ +ಕರ್ಣನನು +ಭೂ
ವರನ +ಸೀಳಿದು +ಶಲ್ಯನನು +ಕಾ
ತರಿಸದಿರು +ಶಕುನಿಯನ್+ಉಳೂಕನ +ಯಮಳರ್+ಇಬ್ಬರಲಿ
ಹರಿಬಕ್+ಇದಿರಾಗಲಿ +ಮುರಾಂತಕ
ಹರಹಿಕೊಳಲಿ +ಮದೀಯ+ಬಾಹು
ಸ್ಫುರಣಶಕ್ತಿಗೆ+ ಭಂಗಬಾರದು+ ನೋಡು +ನೀನೆಂದ

ಅಚ್ಚರಿ:
(೧) ನರನ, ಭೂವರನ – ಪ್ರಾಸ ಪದ
(೨) ದುರ್ಯೋಧನನ ಶಕ್ತಿಯ ವಿವರ – ಮದೀಯಬಾಹು ಸ್ಫುರಣಶಕ್ತಿಗೆ ಭಂಗಬಾರದು

ಪದ್ಯ ೨೫: ಶಕುನಿಯ ಸೈನ್ಯವನ್ನು ಯಾರು ನಾಶಮಾಡಿದರು?

ಕೆಡಹಿ ದುರ್ಯೋಧನನ ತಮ್ಮನ
ನಡಗುದರಿ ಮಾಡಿದನುಳೂಕನ
ಕಡಿದು ಬಿಸುಟನು ನಕುಲನಿಪ್ಪತ್ತೈದು ಬಾಣದಲಿ
ತುಡುಕಿದನು ಸಹದೇವನಂಬಿನ
ಗಡಣದಲಿ ಸೌಬಲನ ಸೇನೆಯ
ಕಡಲ ಮೊಗೆದನು ಮೋದಿದನು ಶರಜಾಲ ಝಂಕೃತಿಯ (ಗದಾ ಪರ್ವ, ೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ಭೀಮನು ದುರ್ಯೋಧನನ ತಮ್ಮ ಸುದರ್ಶನನ ಮಾಂಸಖಂಡಗಳನ್ನು ತರಿದು ಕೊಂದನು. ನಕುಲನು ಇಪ್ಪತ್ತೈದು ಬಾಣಗಳಿಂದ ಉಲೂಕನನ್ನು ಸಂಹರಿಸಿದನು. ಸಹದೇವನು ಬಾಣಗಳ ಮೊಳಗಿನಿಂದ ಶಕುನಿಯ ಸೈನ್ಯವನ್ನು ಚಚ್ಚಿ ಸಂಹರಿಸಿದನು.

ಅರ್ಥ:
ಕೆಡಹು: ಬೀಳಿಸು; ತಮ್ಮ: ಸಹೋದರ; ಅಡಗು: ಮಾಂಸ; ಉದರು: ಹರಡು; ಉಳೂಕ: ಗೂಬೆ; ಕಡಿ: ಸೀಲು; ಬಿಸುಟು: ಹೊರಹಾಕು; ಬಾಣ: ಅಂಬು, ಶರ; ತುಡುಕು: ಹೋರಾಡು, ಸೆಣಸು; ಅಂಬು: ಬಾಣ; ಗಡಣ: ಗುಂಪು; ಸೌಬಲ: ಶಕುನಿ; ಸೇನೆ: ಸೈನ್ಯ; ಕಡಲ: ಸಾಗರ; ಮೊಗೆ: ತುಂಬಿಕೊಳ್ಳು, ಬಾಚು; ಮೋದು: ಪೆಟ್ಟು, ಹೊಡೆತ; ಶರಜಾಲ: ಬಾಣಗಳ ಗುಂಪು; ಝಂಕಿಸು: ಆರ್ಭಟಿಸು;

ಪದವಿಂಗಡಣೆ:
ಕೆಡಹಿ+ ದುರ್ಯೋಧನನ +ತಮ್ಮನನ್
ಅಡಗ್+ಉದರಿ +ಮಾಡಿದನ್+ಉಳೂಕನ
ಕಡಿದು +ಬಿಸುಟನು +ನಕುಲನ್+ಇಪ್ಪತ್ತೈದು +ಬಾಣದಲಿ
ತುಡುಕಿದನು +ಸಹದೇವನ್+ಅಂಬಿನ
ಗಡಣದಲಿ +ಸೌಬಲನ +ಸೇನೆಯ
ಕಡಲ +ಮೊಗೆದನು +ಮೋದಿದನು +ಶರಜಾಲ +ಝಂಕೃತಿಯ

ಅಚ್ಚರಿ:
(೧) ರೌದ್ರತೆಯ ವರ್ಣನೆ – ಕೆಡಹಿ ದುರ್ಯೋಧನನ ತಮ್ಮನನಡಗುದರಿ ಮಾಡಿದನು

ಪದ್ಯ ೧೮: ದುರ್ಯೋಧನನು ಎಲ್ಲಿ ನಿಂತಿದ್ದನು?

ಶಕುನಿ ಸಹದೇವನನುಳೂಕನು
ನಕುಲನನು ಕುರುರಾಯನನುಜರು
ಚಕಿತ ಚಾಪನ ಕೆಣಕಿದರು ಪವಮಾನನಂದನನ
ಅಕಟ ಫಲುಗುಣ ಎನುತ ಸಮಸ
ಪ್ತಕರು ಕವಿದರು ನೂರು ಗಜದಲಿ
ಸಕಲದಳಕೊತ್ತಾಗಿ ನಿಂದನು ಕೌರವರಾಯ (ಗದಾ ಪರ್ವ, ೨ ಸಂಧಿ, ೧೮ ಪದ್ಯ)

ತಾತ್ಪರ್ಯ:
ಶಕುನಿಯು ಸಹದೇವನನ್ನು, ಉಲೂಕನು, ನಕುಲನನ್ನು, ಕೌರವನ ತಮ್ಮಂದಿರು ಭೀಮನನ್ನೂ, ಸಂಶಪ್ತಕರು ಅರ್ಜುನನನ್ನೂ ಎದುರಿಸಿದರು. ಇವರ ಹಿಂದೆ ನೂರಾನೆಗಳ ನಡುವೆ ದುರ್ಯೋಧನನು ಬೆಂಬಲವಾಗಿ ನಿಂತನು.

ಅರ್ಥ:
ಅನುಜ: ತಮ್ಮ; ಚಕಿತ: ವಿಸ್ಮಿತನಾದ; ಚಾಪ: ಬಿಲ್ಲು; ಕೆಣಕು: ರೇಗಿಸು; ಪವಮಾನ: ವಾಯು; ನಂದನ: ಮಗ; ಅಕಟ: ಅಯ್ಯೋ; ಸಮಸಪ್ತಕ: ಪ್ರಮಾಣ ಮಾಡಿ ಹೋರಾಟ ಮಾಡುವವರು; ಕವಿ: ಆವರಿಸು; ನೂರು: ಶತ; ಗಜ: ಆನೆ; ಸಕಲ: ಎಲ್ಲ; ದಳ: ಸೈನ್ಯ; ಒತ್ತು: ಮುತ್ತು; ನಿಂದು: ನಿಲ್ಲು; ರಾಯ: ರಾಜ;

ಪದವಿಂಗಡಣೆ:
ಶಕುನಿ +ಸಹದೇವನನ್+ಉಳೂಕನು
ನಕುಲನನು +ಕುರುರಾಯನ್+ಅನುಜರು
ಚಕಿತ +ಚಾಪನ +ಕೆಣಕಿದರು +ಪವಮಾನ+ನಂದನನ
ಅಕಟ +ಫಲುಗುಣ +ಎನುತ +ಸಮಸ
ಪ್ತಕರು +ಕವಿದರು +ನೂರು +ಗಜದಲಿ
ಸಕಲ+ದಳಕೊತ್ತಾಗಿ +ನಿಂದನು +ಕೌರವರಾಯ

ಅಚ್ಚರಿ:
(೧) ಚ ಕಾರದ ಜೋಡಿ ಪದ – ಚಕಿತ ಚಾಪನ
(೨) ಕುರುರಾಯ, ಕೌರವರಾಯ – ದುರ್ಯೋಧನನನ್ನು ಕರೆದ ಪರಿ