ಪದ್ಯ ೩೮: ಘಟೋತ್ಕಚನ ಮುಂದೆ ಯಾರು ನಿಲ್ಲಬಲ್ಲರು?

ನಿಲುವಡಸುರನ ಮುಂದೆ ಕರ್ಣನೆ
ನಿಲಲು ಬೇಹುದು ಕರ್ಣನುರುಬೆಗೆ
ನಿಲುವಡೀಯಮರಾರಿಗೊಪ್ಪುವುದೈ ಮಹಾದೇವ
ಉಳಿದ ಭೂರಿಯ ಬಣಗುಗಳು ವೆ
ಗ್ಗಳೆಯವೆರಸರಿಗೆ ನೋಂತರೇ ಕುರು
ಬಲದೊಳರಿಬಲದೊಳಗೆ ಸರಿಯಿನ್ನಿವರಿಗಿಲ್ಲೆಂದ (ದ್ರೋಣ ಪರ್ವ, ೧೬ ಸಂಧಿ, ೩೮ ಪದ್ಯ)

ತಾತ್ಪರ್ಯ:
ಘಟೋತ್ಕಚನ ಮುಂದೆ ನಿಂತರೆ ಕರ್ಣನೇ ನಿಲ್ಲಬೇಕು. ಶಿವ ಶಿವಾ, ಕರ್ಣನ ದಾಳಿಯನ್ನು ಸೈರಿಸಿ ನಿಲ್ಲಲು ಘಟೋತ್ಕಚನಿಗೆ ಮಾತ್ರ ಸಾಧ್ಯ, ಉಳಿದ ಮಹಾವೀರರೆನ್ನಿಸಿಕೊಳ್ಳುವವರು ಕೇವಲ ಶಕ್ತಿದರಿದ್ರರು, ವೀರರೆನ್ನಿಸಿಕೊಳ್ಳುವುದಕ್ಕೆ ಅನರ್ಹರು. ಇವರಿಗೆ ಸರಿಯಾದವರು ಉಭಯ ಸೈನ್ಯಗಳಲ್ಲೂ ಇಲ್ಲ.

ಅರ್ಥ:
ನಿಲುವು: ನಿಲ್ಲು; ಅಡ್: ಅಡ್ಡ, ನಡುವೆ; ಅಸುರ: ರಾಕ್ಷಸ; ಮುಂದೆ: ಎದುರು; ಬೇಹುದು: ಬೇಕು; ಉರುಬೆ: ಅಬ್ಬರ; ಅಮರಾರಿ: ದೇವತೆಗಳ ವೈರಿ (ರಾಕ್ಷಸ); ಒಪ್ಪು: ಒಪ್ಪಿಗೆ, ಸಮ್ಮತಿ; ಉಳಿದ: ಮಿಕ್ಕ; ಭೂರಿ: ಹೆಚ್ಚಾದ, ಅಧಿಕವಾದ; ಬಣಗು: ಅಲ್ಪವ್ಯಕ್ತಿ, ತಿಳಿಗೇಡಿ; ವೆಗ್ಗಳೆ: ಶ್ರೇಷ್ಠ; ಬಲ: ಸೈನ್ಯ; ಅರಿ: ವೈರಿ;

ಪದವಿಂಗಡಣೆ:
ನಿಲುವಡ್+ಅಸುರನ +ಮುಂದೆ +ಕರ್ಣನೆ
ನಿಲಲು +ಬೇಹುದು +ಕರ್ಣನ್+ಉರುಬೆಗೆ
ನಿಲುವಡ್+ಈ+ ಅಮರಾರಿಗ್+ಒಪ್ಪುವುದೈ +ಮಹಾದೇವ
ಉಳಿದ +ಭೂರಿಯ+ ಬಣಗುಗಳು+ ವೆ
ಗ್ಗಳೆಯವೆರಸರಿಗೆ +ನೋಂತರೇ+ ಕುರು
ಬಲದೊಳ್+ಅರಿಬಲದೊಳಗೆ +ಸರಿಯಿನ್ನಿವರಿಗಿಲ್ಲೆಂದ

ಅಚ್ಚರಿ:
(೧) ಕುರುಬಲ, ಅರಿಬಲ – ಬಲ ಪದದ ಬಳಕೆ
(೨) ನಿಲುವಡ್, ನಿಲಲು – ೧-೩ ಸಾಲಿನ ಮೊದಲ ಪದಗಳು

ಪದ್ಯ ೧೨: ಅರ್ಜುನನನ್ನು ಎದುರಿಸಲು ಯಾರು ಮುಂದೆ ಬಂದರು?

ಮುರಿವಡೆದು ಚತುರಂಗವರ್ಜುನ
ನುರುಬೆಗಾರದೆ ನಿಲೆ ಶ್ರುತಾಯುಧ
ನಿರಿಯಲುತ್ಸಾಹಿಸಿದನಿದಿರಾದನು ಧನಂಜಯನ
ಮುರಿಯೆಸುತ ಮುಂಕೊಂಡು ಪಾರ್ಥನ
ತರುಬಿದನು ಬಳಿಕೀತನಾತನ
ನೆರೆವಣಿಗೆ ಲೇಸೆನುತ ತುಳುಕಿದನಂಬಿನಂಬುಧಿಯ (ದ್ರೋಣ ಪರ್ವ, ೧೦ ಸಂಧಿ, ೧೨ ಪದ್ಯ)

ತಾತ್ಪರ್ಯ:
ಚತುರಂಗ ಸೈನ್ಯವು ಅರ್ಜುನನ ದಾಳಿಯನ್ನು ಸಹಿಸಲಾರದೆ ಹೋಗಲು, ಶ್ರುತಾಯುಧನು ಯುದ್ಧೋತ್ಸಾಹದಿಂದ ಅರ್ಜುನನಿಗಿದಿರಾದನು. ಬಾಣಗಳನ್ನು ಬಿಡುತ್ತಾ ಅರ್ಜುನನನ್ನು ತಡೆದು ನಿಲ್ಲಿಸಿದನು. ಅವನ ಶಸ್ತ್ರ ಪ್ರಯೋಗ ಉತ್ತಮವಾಗಿದೆಯೆಂದು ಅರ್ಜುನನು ಬಾಣಗಳ ಸಮುದ್ರವನ್ನೇ ಅವನ ಮೇಲೆ ಬಿಟ್ಟನು.

ಅರ್ಥ:
ಮುರಿ: ಸೀಳು; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಉರು: ಅತಿಶಯವಾದ ವೇಗ; ನಿಲೆ: ನಿಲ್ಲು; ಇರಿ: ಚುಚ್ಚು; ಉತ್ಸಾಹ: ಶಕ್ತಿ, ಬಲ, ಹುರುಪು; ಇದಿರು: ಎದುರು; ಮುರಿ: ಸೀಳು; ಎಸು: ಬಾಣ ಪ್ರಯೋಗ ಮಾಡು; ತರುಬು: ತಡೆ, ನಿಲ್ಲಿಸು; ಬಳಿಕ: ನಂತರ; ಎರವು: ದೂರವಾಗುವಿಕೆ; ಲೇಸು: ಒಳಿತು; ತುಳುಕು: ಹೊರಸೂಸುವಿಕೆ; ಅಂಬು: ಬಾಣ; ಅಂಬುಧಿ: ಸಾಗರ;

ಪದವಿಂಗಡಣೆ:
ಮುರಿವಡೆದು +ಚತುರಂಗವ್+ಅರ್ಜುನನ್
ಉರುಬೆಗಾರದೆ +ನಿಲೆ +ಶ್ರುತಾಯುಧನ್
ಇರಿಯಲ್+ಉತ್ಸಾಹಿಸಿದನ್+ಇದಿರಾದನು +ಧನಂಜಯನ
ಮುರಿಯೆಸುತ+ ಮುಂಕೊಂಡು +ಪಾರ್ಥನ
ತರುಬಿದನು +ಬಳಿಕೀತನ್+ಆತನನ್
ಎರೆವಣಿಗೆ +ಲೇಸೆನುತ +ತುಳುಕಿದನ್+ಅಂಬಿನ್+ಅಂಬುಧಿಯ

ಅಚ್ಚರಿ:
(೧) ಬಾಣಗಳ ಸಾಗರ ಎಂದು ಕರೆದ ಪರಿ – ತುಳುಕಿದನಂಬಿನಂಬುಧಿಯ

ಪದ್ಯ ೫: ರಣಭೂಮಿ ಹೇಗೆ ತೋರಿತು?

ವ್ರಣದ ಬಲುವೊನಲೊಳಗೆ ತಲೆಗಳು
ಕುಣಿದವರ್ಜುನನಂಬಿನುರುಬೆಗೆ
ಹೆಣನ ದಾವಣಿ ಹಾಸಿದವು ಸೂಸಿದವು ದೊಂಡೆಗಳು
ತಣಿದನಂತಕನಟ್ಟೆಗಳ ರಿಂ
ಗಣದ ನಾಟಕದೊಳಗೆ ಸಮರಾಂ
ಗಣದ ರೌರವ ರೌದ್ರವಾಯಿತು ಕಳನ ಚೌಕದಲಿ (ದ್ರೋಣ ಪರ್ವ, ೧೦ ಸಂಧಿ, ೫ ಪದ್ಯ
)

ತಾತ್ಪರ್ಯ:
ಶತ್ರು ಸೈನ್ಯವು ಗಾಯಗೊಂಡು ಅದರಿಂದ ಹರಿದ ರಕ್ತ ಪ್ರವಾಹದಲ್ಲಿ ರುಂಡಗಳು ಕುಣಿದವು. ಹೆಣಗಳ ಸಾಲುಗಳು ಹಾಸಿದವು. ಮಾಂಸ ಮಿದುಳು ಕರುಳುಗಳು ತುಂಬಿ ಬಂದವು. ಯಮನು ತೃಪ್ತನಾದನು. ಬಾಣಗಳ, ತಲೆಗಳ ದೇಹಗಳ ಕುಣಿತದಿಂದ ಮಹಾ ಭಯಂಕರವಾಗಿ ರಣಭೂಮಿ ಕಾಣಿಸಿತು.

ಅರ್ಥ:
ವ್ರಣ: ಹುಣ್ಣು, ಗಾಯ; ಬಲು: ಬಹಳ; ತಲೆ: ಶಿರ; ಕುಣೀ: ನರ್ತಿಸು; ಅಂಬು: ಬಾಣ; ಉರುಬೆ: ಅಬ್ಬರ; ಹೆಣ: ಜೀವವಿಲ್ಲದ ಶರೀರ; ದಾವಣಿ: ಮೂಗುದಾರ, ಅಂಕೆ, ನಿಯಂತ್ರಣ; ಹಾಸು: ಹಾಸಿಗೆ, ಶಯ್ಯೆ; ಸೂಸು: ಹರಡು; ದೊಂಡೆ: ಗಂಟಲು, ಕಂಠ; ತಣಿದು: ತೃಪ್ತಿಹೊಂದು; ಅಂತಕ: ಯಮ; ಅಟ್ಟೆ: ತಲೆಯಿಲ್ಲದ ದೇಹ; ರಿಂಗಣ: ಚಟುವಟಿಕೆ, ಚಲನೆ; ನಾಟಕ: ರೂಪಕ; ಸಮರ: ಯುದ್ಧ; ರೌರವ: ಒಂದು ಬಗೆಯ ಭಯಂಕರ ನರಕ; ರೌದ್ರ: ಸಿಟ್ಟು, ರೋಷ; ಕಳ: ರಣರಂಗ; ಚೌಕ: ಚತು ಷ್ಕೋಣಾಕೃತಿಯಾದ ಅಂಗಳ;

ಪದವಿಂಗಡಣೆ:
ವ್ರಣದ +ಬಲುವೊನಲ್+ಒಳಗೆ+ ತಲೆಗಳು
ಕುಣಿದವ್+ಅರ್ಜುನನ್+ಅಂಬಿನ್+ಉರುಬೆಗೆ
ಹೆಣನ +ದಾವಣಿ +ಹಾಸಿದವು +ಸೂಸಿದವು +ದೊಂಡೆಗಳು
ತಣಿದನ್+ಅಂತಕನ್+ಅಟ್ಟೆಗಳ +ರಿಂ
ಗಣದ +ನಾಟಕದೊಳಗೆ +ಸಮರಾಂ
ಗಣದ +ರೌರವ +ರೌದ್ರವಾಯಿತು +ಕಳನ +ಚೌಕದಲಿ

ಅಚ್ಚರಿ:
(೧) ತುಂಬ ಜನರು ಸತ್ತರು ಎಂದು ಹೇಳುವ ಪರಿ – ತಣಿದನಂತಕನ್
(೨) ರಣಾಂಗಣವನ್ನು ನಾಟಕಕ್ಕೆ ಹೋಲಿಸುವ ಪರಿ – ಅಟ್ಟೆಗಳ ರಿಂಗಣದ ನಾಟಕದೊಳಗೆ ಸಮರಾಂ
ಗಣದ ರೌರವ ರೌದ್ರವಾಯಿತು ಕಳನ ಚೌಕದಲಿ

ಪದ್ಯ ೩೦: ಭೀಮನಿಗೆ ಹೆದರಿ ಹಂದಿಯು ಎಲ್ಲಿ ಅಡಗಿಕೊಂಡಿತು?

ಈತನುರುಬೆಗೆ ಬೆದರಿತುರು ಸಂ
ಘಾತದಲಿ ಹೆಬ್ಬಂದಿಯೊಂದು ವಿ
ಘಾತದಲಿ ಹಾಯ್ದುದು ಕಿರಾತವ್ರಜವನೊಡೆತುಳಿದು
ಈತನರೆಯಟ್ಟಿದನು ಶಬರ
ವ್ರಾತವುಳಿದುದು ಹಿಂದೆ ಭೀಮನ
ಭೀತಿಯಲಿ ಹೊಕ್ಕುದು ಮಹಾಗಿರಿಗಹನ ಗಹ್ವರವ (ಅರಣ್ಯ ಪರ್ವ, ೧೪ ಸಂಧಿ, ೩೦ ಪದ್ಯ)

ತಾತ್ಪರ್ಯ:
ಮೃಗಗಳ ಗುಂಪಿನಲ್ಲಿದ್ದ ದೊಡ್ಡ ಹಂದಿಯೊಂದು ಭೀಮನು ಮೇಲೆ ಬೀಳುವುದನ್ನು ಕಂಡು, ಬೇಡರನ್ನು ತುಳಿದು ಓಡಿ ಹೋಯಿತು. ಭೀಮನು ಅದನ್ನು ಹಿಂಬಾಲಿಸಿ ಮುಂದೆ ಹೋದನು, ಬೇಡರ ಗುಂಪು ಹಿಂದೆಯೇ ಉಳಿಯಿತು. ಆ ಹಂದಿಯು ಭೀಮನಿಗೆ ಹೆದರಿ ಬೆಟ್ಟದ ತಪ್ಪಲಿನಲ್ಲಿದ್ದ ದಟ್ಟವಾದ ಕಾಡನ್ನು ಸೇರಿತು.

ಅರ್ಥ:
ಉರುಬೆ: ಅಬ್ಬರ; ಬೆದರು: ಹೆದರು; ಉರು: ಹೆಚ್ಚಾದ; ಸಂಘಾತ: ಗುಂಪು, ಸಮೂಹ; ಹೆಬ್ಬಂದಿ: ದೊಡ್ಡ ಹಂದಿ; ವಿಘಾತ: ಏಟು, ಹೊಡೆತ; ಹಾಯ್ದು: ಹೊಡೆತ; ಕಿರಾತ: ಬೇಡ; ವ್ರಜ: ಗುಂಪು; ಒಡೆ:ಸೀಳು, ಬಿರಿ; ತುಳಿ: ಮೆಟ್ಟು; ಅರೆ: ಅರ್ಧಭಾಗ; ಅಟ್ಟು: ಹಿಂಬಾಲಿಸು; ಶಬರ: ಬೇಡ; ವ್ರಾತ: ಗುಂಪು; ಉಳಿ: ಹೊರತಾಗು; ಹಿಂದೆ: ಹಿಂಭಾಗ; ಭೀತಿ: ಭಯ; ಹೊಕ್ಕು: ಸೇರು; ಮಹಾ: ದೊಡ್ಡ; ಗಿರಿ: ಬೆಟ್ಟ; ಗಹನ: ಕಾಡು, ಅಡವಿ; ಗಹ್ವರ: ಗವಿ, ಗುಹೆ;

ಪದವಿಂಗಡಣೆ:
ಈತನ್+ಉರುಬೆಗೆ +ಬೆದರಿತ್+ಉರು +ಸಂ
ಘಾತದಲಿ +ಹೆಬ್+ಹಂದಿಯೊಂದು +ವಿ
ಘಾತದಲಿ+ ಹಾಯ್ದುದು +ಕಿರಾತ+ವ್ರಜವನ್+ಒಡೆ+ತುಳಿದು
ಈತನ್+ಅರೆ+ಅಟ್ಟಿದನು +ಶಬರ
ವ್ರಾತವ್+ಉಳಿದುದು + ಹಿಂದೆ+ ಭೀಮನ
ಭೀತಿಯಲಿ +ಹೊಕ್ಕುದು +ಮಹಾಗಿರಿ+ಗಹನ+ ಗಹ್ವರವ

ಅಚ್ಚರಿ:
(೧) ಸಂಘಾತ, ವಿಘಾತ – ಪ್ರಾಸ ಪದ
(೨) ವ್ರಜ, ವ್ರಾತ; ಕಿರಾತ, ಶಬರ – ಸಮನಾರ್ಥಕ ಪದ

ಪದ್ಯ ೩೭: ಕರ್ಣನು ಅಶ್ವಸೇನ ಸರ್ಪನಿಗೆ ಏನು ಹೇಳಿದ?

ಅರಿಯೆ ನಾ ನೀನೆಂದು ಲೋಗರ
ಮರೆಯಲರಿಗಳ ಗೆಲುವ ಕರ್ಣನೆ
ಯರಿಯಲಾ ನೀನೆನ್ನ ಹವಣನು ತೊಡುವುದಿಲ್ಲೆನಲು
ಮರುಗಿದನು ಶಲ್ಯನು ನೃಪಾಲನ
ನಿರಿದೆಯೋ ರಾಧೇಯ ನೀನೆಂ
ದುರುಬೆಯಲಿ ಕೋಪಿಸುತ ಕರ್ಣನ ಬಯ್ದು ಗಜರಿದನು (ಕರ್ಣ ಪರ್ವ, ೨೫ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕರ್ಣನು ಅಶ್ವಸೇನ ಸರ್ಪರಾಜನನ್ನು ಉದ್ದೇಶಿಸುತ್ತಾ, ನನಗೆ ನೀನಾರೆಂದು ತಿಳಿದಿರಲಿಲ್ಲ. ಈ ಕರ್ಣನು ಜನರ ಮರೆಯಲ್ಲಿ ನಿಂತು ಶತ್ರುಗಳನ್ನು ಕೊಲ್ಲುವವನಲ್ಲ. ನಿನ್ನನ್ನು ನಾನು ಮತ್ತೆ ತೊಡುವುದಿಲ್ಲ ಎಂದನು. ಇದನ್ನು ಕೇಳಿದ ಶಲ್ಯನು ಅತೀವ ಸಂಕಟಪಟ್ಟು, ಕರ್ಣ ನೀನು ದುರ್ಯೋಧನನನ್ನು ಕೊಂದೆ, ಎಂದು ಕೋಪಿಸುತ್ತ ಕರ್ಣನನ್ನು ಗದರಿ ಬಯ್ದನು.

ಅರ್ಥ:
ಅರಿ: ತಿಳಿ; ಲೋಗರ:ಜನತೆ, ಸಾಮಾನ್ಯ; ಮರೆ: ಗುಟ್ಟು, ರಹಸ್ಯ; ಅರಿ: ವೈರಿ; ಗೆಲುವ: ಜಯಿಸುವ; ಅರಿ: ಹವಣ: ಸಿದ್ಧತೆ, ಉಪಾಯ; ತೊಡು: ಧರಿಸು; ಮರುಗು: ತಳಮಳ, ಸಂಕಟ; ನೃಪಾಲ: ರಾಜ; ಇರಿ: ಚುಚ್ಚು; ಉರುಬು:ಅತಿಶಯವಾದ ವೇಗ; ಕೋಪ: ಸಿಟ್ಟುಗೊಳ್ಳು; ಬಯ್ದು: ಜರಿದು; ಗದರು: ಅಬ್ಬರಿಸು, ಗರ್ಜಿಸು;

ಪದವಿಂಗಡಣೆ:
ಅರಿಯೆ +ನಾ +ನೀನೆಂದು +ಲೋಗರ
ಮರೆಯಲ್+ಅರಿಗಳ +ಗೆಲುವ +ಕರ್ಣನೆ
ಅರಿಯಲಾ +ನೀನೆನ್ನ +ಹವಣನು+ ತೊಡುವುದಿಲ್+ಎನಲು
ಮರುಗಿದನು +ಶಲ್ಯನು +ನೃಪಾಲನನ್
ಇರಿದೆಯೋ +ರಾಧೇಯ +ನೀನೆಂದ್
ಉರುಬೆಯಲಿ +ಕೋಪಿಸುತ +ಕರ್ಣನ +ಬಯ್ದು +ಗಜರಿದನು

ಅಚ್ಚರಿ:
(೧) ಕರ್ಣನ ದಿಟ್ಟ ನುಡಿ: ಲೋಗರ ಮರೆಯಲರಿಗಳ ಗೆಲುವ ಕರ್ಣನೆ ಯರಿಯಲಾ
(೨) ಶಲ್ಯನ ಕೋಪದ ನುಡಿ: ನೃಪಾಲನನಿರಿದೆಯೋ ರಾಧೇಯ

ಪದ್ಯ ೨೮: ಶಲ್ಯನು ರಥವನ್ನು ಏಕೆ ಬೇರೆಕಡೆ ತಿರುಗಿಸಲು ಕೇಳಿದನು?

ಎಲೆಲೆ ಕರ್ಣ ಕಿರೀಟಿಯುರುಬೆಗೆ
ನಿಲುವುದರಿದೈ ಹಾವನರೆಗಡಿ
ದುಳುಹಿ ಕೆಡಿಸಿದೆ ಪಾಪಿ ರಾಯನ ರಾಜಕಾರಿಯವ
ತೊಲಗಿಸುವೆನೇ ರಥವನೆನೆ ಹೆ
ಕ್ಕಳಿಸಿ ಜರೆದನು ಕರ್ಣ ಶಲ್ಯನ
ನೆಲವೊ ಫಡ ನೊಡೆನುತ ತೆಗೆದೆಚ್ಚನು ಧನಂಜಯನ (ಕರ್ಣ ಪರ್ವ, ೨೪ ಸಂಧಿ, ೨೮ ಪದ್ಯ)

ತಾತ್ಪರ್ಯ:
ಅರ್ಜುನನ ರಥದ ವೇಗವನ್ನು ನೋಡಿದ ಶಲ್ಯನು ಎಲೇ ಕರ್ಣ ಅರ್ಜುನನ ರಥದ ದಾಳಿಯ ರಭಸಕ್ಕೆ ಇದಿರಾಗಿ ನಿಲ್ಲಲು ಆಗುವುದಿಲ್ಲ, ಹಾವನ್ನು ಗಾಯಮಾಡಿ ಬಿಟ್ಟಂತೆ, ಅರ್ಜುನನನ್ನು ಕೊಲ್ಲದೆ ಅರೆಪೆಟ್ಟುಕೊಟ್ಟು ದುರುಳ ದುರ್ಯೋಧನನ ರಾಜಕಾರ್ಯವನ್ನು ಕೆಡಿಸಿದೆ. ರಥವನ್ನು ನಾನು ಬೇರೆಡೆಗೆ ತಿರುಗಿಸಲೇ ಎಂದು ಕೇಳಲು, ಕರ್ಣನು ಎಲವೋ ಶಲ್ಯ ಛೇ ಏನು ಮಾತಾಡುತ್ತಿರುವೆ ಎಂದು ಹೇಳುತ್ತಾ ಅರ್ಜುನನ ಮೇಲೆ ಬಾಣಗಳನ್ನು ಬಿಟ್ಟನು.

ಅರ್ಥ:
ಎಲೆಲೆ: ಓಹೋ!; ಕಿರೀಟಿ: ಅರ್ಜುನ; ಉರುಬೆ: ಅಬ್ಬರ; ನಿಲುವು: ತಡೆ; ಅರಿ: ತಿಳಿ; ಅರೆ: ಅರ್ಧ; ಕಡಿ: ಸೀಳು; ಉಳುಹು: ಉಳಿಸು; ಕೆಡಿಸು: ಹಾಳುಮಾಡು; ಪಾಪಿ: ದುರುಳ; ರಾಯ: ರಾಜ; ರಾಜಕಾರಿ: ರಾಜಕಾರಣ; ತೊಲಗಿಸು: ಹೋಗಲಾಡಿಸು; ರಥ: ಬಂಡಿ; ಹೆಕ್ಕಳಿಸು: ಅಧಿಕವಾಗು, ಹೆಚ್ಚಾಗು; ಜರೆ: ಬಯ್ಯು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ನೋಡು: ವೀಕ್ಷಿಸು; ತೆಗೆದು: ಈಚೆಗೆ ತರು, ಹೊರತರು; ಎಚ್ಚು: ಬಾಣ ಬಿಡು;

ಪದವಿಂಗಡಣೆ:
ಎಲೆಲೆ +ಕರ್ಣ +ಕಿರೀಟಿ+ಉರುಬೆಗೆ
ನಿಲುವುದ್+ಅರಿದೈ +ಹಾವನ್+ಅರೆ+ಕಡಿದ್
ಉಳುಹಿ +ಕೆಡಿಸಿದೆ+ ಪಾಪಿ+ ರಾಯನ +ರಾಜಕಾರಿಯವ
ತೊಲಗಿಸುವೆನೇ+ ರಥವನೆನೆ +ಹೆ
ಕ್ಕಳಿಸಿ +ಜರೆದನು +ಕರ್ಣ +ಶಲ್ಯನನ್
ಎಲವೊ +ಫಡ +ನೊಡೆನುತ+ ತೆಗೆದೆಚ್ಚನು+ ಧನಂಜಯನ

ಅಚ್ಚರಿ:
(೧) ಎಲೆ, ಎಲವೋ – ೧, ೬ ಸಾಲಿನ ಮೊದಲ ಪದ
(೨) ಉಪಮಾನದ ಪ್ರಯೊಗ – ಹಾವನರೆಗಡಿದುಳುಹಿ ಕೆಡಿಸಿದೆ
(೩) ದುರ್ಯೋಧನನನ್ನು ಕರೆದ ಬಗೆ – ಪಾಪಿ ರಾಯನ

ಪದ್ಯ ೨೭: ಪಾಂಡವರ ಸೇನೆಗೆ ಜೀವವೇಕೆ ಬಂದಿತು?

ಹರಿಸು ರಥವನು ವೈರಿಯುರುಬೆಗೆ
ತೆರಳುತದೆ ನಮ್ಮವರು ಕರ್ಣನ
ಕೊರಳ ಬಾರಲಿ ನಿಲುಕಿಸುವೆನೀ ಶರಸಲಾಕೆಗಳ
ಅರಸ ಕೇಳೈ ಮಾತು ಹಿಂಚಿತು
ನರನ ರಥ ಜೋಡಿಸಿತು ಕರ್ಣನ
ಸರಿಸದಲಿ ಜೀವಿಸಿತು ಪಾಂಡವಸೇನೆ ನಿಮಿಷದಲಿ (ಕರ್ಣ ಪರ್ವ, ೨೪ ಸಂಧಿ, ೨೭ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಶಕ್ತಿಯನ್ನು ಮರಳಿ ಪಡೆಯಲು ಶ್ರೀಕೃಷ್ಣನಿಗೆ, ನಮ್ಮ ರಥವನ್ನು ವೈರಿಯ ಎದುರು ತೆಗೆದುಕೊಂಡು ಹೋಗಿ ನಿಲ್ಲಿಸು, ವೈರಿಯ ದಾಳಿಗ ನಮ್ಮವರು ಹಿಮ್ಮೆಟ್ಟುತ್ತಿದ್ದಾರೆ. ಕರ್ಣನ ಉದ್ದವಾದ ಕೊರಳಲ್ಲಿ ಈ ಬಾಣಗಳ ಸಾಲುಗಳನ್ನು ಸಿಲುಕಿಸುತ್ತೇನೆ ಎಂದು ಹೇಳುತ್ತಿದ್ದಂತೆಯೇ ಧೃತರಾಷ್ಟ್ರ ಕೇಳು, ಅವನ ರಥವು ಕರ್ಣನ ಅಭಿಮುಖವಾಗಿ ನಿಂತಿತು. ಸಾಯುತ್ತಿದ್ದ ಪಾಂಡವರ ಸೇನೆಗೆ ಜೀವಬಂದಂತಾಯಿತು.

ಅರ್ಥ:
ಹರಿಸು: ಚಲಿಸು, ಸಾಗು; ರಥ: ಬಂಡಿ; ವೈರಿ: ರಿಪು, ಅರಿ; ಉರುಬೆ:ಅಬ್ಬರ; ತೆರಳು: ಹೋಗು, ನಡೆ; ಕೊರಳು: ಕಂಠ; ಬಾರು: ಉದ್ದ, ನೀಳ; ನಿಲುಕು: ಕೈಚಾಚಿ ಹಿಡಿ, ಎಟುಕಿಸಿಕೊಳ್ಳು; ಶರ: ಬಾಣ; ಸಲಾಕೆ: ಈಟಿ, ಭರ್ಜಿ; ಅರಸ: ರಾಜ; ಮಾತು: ನುಡಿ; ಹಿಂಚಿತು: ತಡವಾಗು, ಹಿಂದೆ ಉಳಿ; ನರ: ಅರ್ಜುನ; ರಥ: ಬಂಡಿ; ಜೋಡು: ಜೊತೆ; ಸರಿಸ: ಮುಂಭಾಗ, ಸಮ್ಮುಖ; ಜೀವಿಸು: ಉಸಿರಾಡು; ನಿಮಿಷ: ಕಾಲ ಪ್ರಮಾಣ;

ಪದವಿಂಗಡಣೆ:
ಹರಿಸು +ರಥವನು +ವೈರಿ+ಉರುಬೆಗೆ
ತೆರಳುತದೆ +ನಮ್ಮವರು+ ಕರ್ಣನ
ಕೊರಳ +ಬಾರಲಿ +ನಿಲುಕಿಸುವೆನ್+ಈ+ ಶರ+ಸಲಾಕೆಗಳ
ಅರಸ +ಕೇಳೈ +ಮಾತು +ಹಿಂಚಿತು
ನರನ +ರಥ+ ಜೋಡಿಸಿತು +ಕರ್ಣನ
ಸರಿಸದಲಿ +ಜೀವಿಸಿತು +ಪಾಂಡವ+ಸೇನೆ +ನಿಮಿಷದಲಿ

ಅಚ್ಚರಿ:
(೧) ಅರ್ಜುನನ ವೀರದ ನುಡಿ – ಕರ್ಣನ ಕೊರಳ ಬಾರಲಿ ನಿಲುಕಿಸುವೆನೀ ಶರಸಲಾಕೆಗಳ

ಪದ್ಯ ೧೭: ಸಹದೇವನು ವೃಷಸೇನನ ರಥವನ್ನು ಹೇಗೆ ಮುತ್ತಿದನು?

ಮುರಿದು ನಕುಲನ ಭೀಮಸೇನನ
ನರಸಿ ಹಿಡಿದನು ಬವರವನು ಭಟ
ನುರುಬೆ ಬಲುಹೋ ದಿಟ್ಟನಿವ ಕೌರವರ ಥಟ್ಟಿನಲಿ
ತೆರಹುಗೊಡದಿರಿ ನೂಕುನೂಕೆನು
ತುರುಬಿದನು ಸಹದೇವನೀತನ
ತರುಬಿ ಮೂದಲಿಸಿದನು ಮುಸುಕಿದನಂಬಿನಲಿ ರಥವ (ಕರ್ಣ ಪರ್ವ, ೨೦ ಸಂಧಿ, ೧೭ ಪದ್ಯ)

ತಾತ್ಪರ್ಯ:
ನಕುಲನನ್ನು ಸೋಲಿಸಿ, ಭೀಮನನ್ನು ಹುಡುಕಿ ಹಿಡಿದಿದ್ದಾನೆ ಇವನು ಕುರುಸೇನೆಯಲ್ಲಿ ದಿಟ್ಟ, ಇವನ ಹಾವಳಿ ಹೆಚ್ಚಿದೆ, ಇವನಿಗೆ ದಾರಿಕೊಡಬೇಡಿರಿ, ನುಗ್ಗಿರಿ ನುಗ್ಗಿರಿ ಎನ್ನುತ್ತಾ ವೃಷಸೇನನನ್ನು ಮೂದಲಿಸಿ ಅವನ ರಥವನ್ನು ಬಾಣಗಳಿಂದ ಮುಚ್ಚಿದನು.

ಅರ್ಥ:
ಮುರಿ: ಸೀಳು; ಅರಸಿ: ಹುಡುಕಿ; ಹಿಡಿ: ಬಂಧಿಸು; ಬವರ: ಕಾಳಗ, ಯುದ್ಧ; ಭಟ: ಸೈನಿಕ; ಉರುಬೆ: ಅಬ್ಬರ; ಬಲು: ಬಲ, ಶಕ್ತಿ; ದಿಟ್ಟ: ಧೈರ್ಯಶಾಲಿ, ಸಾಹಸಿ; ಥಟ್ಟು: ಪಕ್ಕ, ಗುಂಪು; ತೆರಹು: ಎಡೆ, ಜಾಗ; ಕೊಡು: ನೀಡು; ನೂಕು: ತಳ್ಳು; ಉರುಬು:ಮೇಲೆ ಬೀಳು; ತರುಬು: ತಡೆ, ನಿಲ್ಲಿಸು; ಮೂದಲಿಸು: ಹಂಗಿಸು; ಮುಸುಕು: ಆವರಿಸು; ಅಂಬು: ಬಾಣ; ರಥ: ಬಂಡಿ;

ಪದವಿಂಗಡಣೆ:
ಮುರಿದು +ನಕುಲನ +ಭೀಮಸೇನನನ್
ಅರಸಿ +ಹಿಡಿದನು +ಬವರವನು +ಭಟನ್
ಉರುಬೆ +ಬಲುಹೋ +ದಿಟ್ಟನಿವ+ ಕೌರವರ+ ಥಟ್ಟಿನಲಿ
ತೆರಹುಗೊಡದಿರಿ+ ನೂಕು+ನೂಕೆನುತ್
ಉರುಬಿದನು +ಸಹದೇವನ್+ಈತನ
ತರುಬಿ +ಮೂದಲಿಸಿದನು +ಮುಸುಕಿದನ್+ಅಂಬಿನಲಿ +ರಥವ

ಅಚ್ಚರಿ:
(೧) ವೃಷಸೇನನನ್ನು ಹೊಗಳುವ ಪರಿ – ಮುರಿದು ನಕುಲನ ಭೀಮಸೇನನ
ನರಸಿ ಹಿಡಿದನು ಬವರವನು ಭಟನುರುಬೆ ಬಲುಹೋ ದಿಟ್ಟನಿವ ಕೌರವರ ಥಟ್ಟಿನಲಿ
(೨) ಉರುಬೆ, ಉರುಬಿ, ತರುಬಿ – ಪದಗಳ ಬಳಕೆ