ಪದ್ಯ ೪೦: ಅರ್ಜುನನು ಯುದ್ಧದಲ್ಲಿ ಯಾರ ಎದುರು ಬಂದನು?

ಉರಿಯ ಬಂದಿಯ ಹಿಡಿದು ಹೆಚ್ಚುವ
ದೊರೆಯಲೇ ದಿಟ ಪಾದರಸವೆಲೆ
ಯರಸ ನಿನ್ನ ಕುಮಾರನೇಸರ ಪಾಡು ಪಾರ್ಥಂಗೆ
ತೆರಳಿದನು ನಿನ್ನಾತ ಸೂಠಿಯೊ
ಳುರವಣಿಸಿತಾ ತೇರು ನರನೈ
ತರಲು ಕಂಡನು ಶಸ್ತ್ರವಿದ್ಯಾಭಾಳಲೋಚನನ (ದ್ರೋಣ ಪರ್ವ, ೯ ಸಂಧಿ, ೪೦ ಪದ್ಯ)

ತಾತ್ಪರ್ಯ:
ಅರ್ಜುನನಾದರೋ ಉರಿಯನ್ನು ಹಿಡಿದು ಗೆಲ್ಲುವ ವೀರ, ಪಾದರಸದಂತೆ ಚುರುಕಾದವನು. ನಿನ್ನ ಮಗನಾದ ದುಶ್ಯಾಸನನು ಅವನಿಗೆ ಯಾವ ಪಾಡು! ದುಶ್ಯಾಸನನು ಜಾರಿ ಹೋದನು. ರಥವಉ ಮಹಾವೇಗದಿಂದ ಬರುತ್ತಿರಲು ಅರ್ಜುನನು ದ್ರೋಣನನ್ನು ಕಂಡನು.

ಅರ್ಥ:
ಉರಿ: ಬೆಂಕಿ; ಬಂದಿ: ಸೆರೆ, ಬಂಧನ; ಹಿಡಿ: ಗ್ರಹಿಸು; ಹೆಚ್ಚು: ಬಹಳ; ದೊರಕು: ಪಡೆ; ದಿಟ: ನಿಜ; ಪಾದರಸ: ಪಾರಜ; ಅರಸ: ರಾಜ; ಏಸು: ಎಷ್ಟು; ಪಾಡು: ರೀತಿ, ಬಗೆ; ತೆರಳು: ಹೋಗು; ಸೂಠಿ: ವೇಗ; ಉರವಣಿಸು: ಉತ್ಸಾಹದಿಂದಿರು; ತೇರು: ರಥ; ಐತರು: ಬಂದು ಸೇರು; ಕಂಡು: ನೋಡು; ಶಸ್ತ್ರ: ಆಯುಧ; ಭಾಳ: ಹಣೆ; ಲೋಚನ: ಕಣ್ಣು;

ಪದವಿಂಗಡಣೆ:
ಉರಿಯ +ಬಂದಿಯ +ಹಿಡಿದು +ಹೆಚ್ಚುವ
ದೊರೆಯಲೇ +ದಿಟ+ ಪಾದರಸವ್+ಎಲೆ
ಅರಸ +ನಿನ್ನ +ಕುಮಾರನ್+ಏಸರ +ಪಾಡು +ಪಾರ್ಥಂಗೆ
ತೆರಳಿದನು +ನಿನ್ನಾತ +ಸೂಠಿಯೊಳ್
ಉರವಣಿಸಿತಾ +ತೇರು +ನರನೈ
ತರಲು +ಕಂಡನು +ಶಸ್ತ್ರವಿದ್ಯಾ+ಭಾಳಲೋಚನನ

ಅಚ್ಚರಿ:
(೧) ದ್ರೋಣನನ್ನು ಶಸ್ತ್ರವಿದ್ಯಾಭಾಳಲೋಚನ ಎಂದು ಕರೆದಿರುವುದು
(೨) ಅರ್ಜುನನನ್ನು ಹೋಲಿಸುವ ಪರಿ – ಉರಿಯ ಬಂದಿಯ ಹಿಡಿದು ಹೆಚ್ಚುವ
ದೊರೆಯಲೇ ದಿಟ ಪಾದರಸವೆಲೆ

ಪದ್ಯ ೧೫: ಕರ್ಣನ ಪ್ರತಾಪವು ಹೇಗಿತ್ತು?

ಉರಿಯ ಮಳೆಗಾಲದಲಿ ದಡ್ಡಿಯ
ನರಗಿನಲಿ ಮಾಡಿದರೊ ಗಡ ಕಾ
ರಿರುಳ ಕೋಟೆಯ ರಚಿಸಿದರು ಗಡ ರವಿಯ ಮುತ್ತಿಗೆಗೆ
ಹರಿಗೆ ಸೀಸಕ ಜೋಡು ಕಾವವೆ
ಕೆರಳಿದಡೆ ಕರ್ಣಾಸ್ತ್ರವನು ನಿ
ಬ್ಬರದ ರಣದುಬ್ಬಟೆಯ ಕಂಡುಬ್ಬಿದನು ಕುರುರಾಯ (ಕರ್ಣ ಪರ್ವ, ೨೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ಉರಿಯ ಮಳೆ ಬೀಳುವಾಗ ಅರಗಿನ ಗೋಡೆ ಉಳಿದೇತೆ? ಸೂರ್ಯನ ದಾಳಿಗೆ ಕತ್ತಲೆಯ ಕೋಟೆ ರಕ್ಷಣೆ ಕೊಟ್ಟೀತೆ? ಗುರಾಣಿ, ಶಿರಸ್ತ್ರಾಣ, ಕವಚಗಳು, ಕರ್ಣನ ನಿಷ್ಠುರ ಬಾಣಪ್ರಯೋಗಕ್ಕೆ ರಕ್ಷಣೆಯನ್ನಿತ್ತಾವೇ? ಕರ್ಣನ ಇಂತಹ ಪ್ರತಾಪವನ್ನು ನೋಡಿದ ಕೌರವನು ಸಂತೋಷದಿಂದ ಉಬ್ಬಿದನು.

ಅರ್ಥ:
ಉರಿ: ಜ್ವಾಲೆ; ಮಳೆಗಾಲ: ವರ್ಷ ಸಮಯ; ದಡ್ಡಿ: ತೆರೆ, ಜವನಿಕೆ; ಅರಗು: ಜೀರ್ಣವಾಗು, ಲಾಕ್ಷ; ಮಾಡಿ: ಅಲ್ಲವೆ; ತ್ವರಿತವಾಗಿ; ಕಾರಿರುಳ: ಗಾಢ ಕತ್ತಲೆ; ಕೋಟೆ: ದುರ್ಗ; ರಚಿಸು: ನಿರ್ಮಿಸು; ರವಿ: ಸೂರ್ಯ; ಮುತ್ತಿಗೆ: ಆಕ್ರಮಣ; ಹರಿಗೆ: ಗುರಾಣಿ; ಸೀಸಕ: ಶಿರಸ್ತ್ರಾಣ; ಜೋಡು: ಜೊತೆ; ಕಾವ:ಹಿಡಿ, ಕಾವಲು; ಕೆರಳು: ಕೆದರು, ಹರಡು; ಅಸ್ತ್ರ: ಶಸ್ತ್ರ; ನಿಬ್ಬರ: ಅತಿಶಯ, ಹೆಚ್ಚಳ; ರಣ: ಯುದ್ಧ; ಉಬ್ಬಟೆ: ಅತಿಶಯ, ಹಿರಿಮೆ; ಕಂಡು: ನೋಡಿ; ರಾಯ: ರಾಜ;

ಪದವಿಂಗಡಣೆ:
ಉರಿಯ+ ಮಳೆಗಾಲದಲಿ+ ದಡ್ಡಿಯನ್
ಅರಗಿನಲಿ +ಮಾಡಿದರೊ +ಗಡ +ಕಾ
ರಿರುಳ +ಕೋಟೆಯ +ರಚಿಸಿದರು +ಗಡ +ರವಿಯ +ಮುತ್ತಿಗೆಗೆ
ಹರಿಗೆ+ ಸೀಸಕ+ ಜೋಡು +ಕಾವವೆ
ಕೆರಳಿದಡೆ+ ಕರ್ಣಾಸ್ತ್ರವನು +ನಿ
ಬ್ಬರದ+ ರಣದುಬ್ಬಟೆಯ +ಕಂಡ್+ಉಬ್ಬಿದನು +ಕುರುರಾಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಉರಿಯ ಮಳೆಗಾಲದಲಿ ದಡ್ಡಿಯ
ನರಗಿನಲಿ ಮಾಡಿದರೊ; ಕಾರಿರುಳ ಕೋಟೆಯ ರಚಿಸಿದರು ಗಡ ರವಿಯ ಮುತ್ತಿಗೆಗೆ

ಪದ್ಯ ೧೫: ಭೀಮನ ಆಗಮನವು ಹೇಗಿತ್ತು?

ಉರಿಯ ಚೂಣಿಯಲುಸುರ ಹೊಗೆಯು
ಬ್ಬರಿಸುತದೆ ಕೆಂಪೇರಿದಕ್ಷಿಯ
ಲೆರಡು ಕೋಡಿಯಲೊಗುತಲದೆ ಕಿಡಿಗಳ ತುಷಾರಚಯ
ಸ್ಫುರದಹಂಕಾರಪ್ರತಾಪ
ಜ್ವರದಿ ಮೈ ಕಾಹೇರುತದೆ ನಿ
ಬ್ಬರದ ಬರವಿಂದೀತನದು ಕಲಿಕರ್ಣ ನೋಡೆಂದ (ಕರ್ಣ ಪರ್ವ, ೧೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೀಮನು ಹೊರಹೊಮ್ಮುತ್ತಿರುವ ಉಸಿರಿನಲ್ಲಿ ಹೊಗೆಯು ಗೋಚರವಾಗುತ್ತಿದೆ. ಕೆಂಪೇರಿದ ಕಣ್ಣುಗಳ ಎರಡು ಕೊನೆಗಳಲ್ಲೂ ಕಿಡಿಗಳು ಕಾಣುತ್ತಿವೆ. ಪರಾಕ್ರಮದ ಅಹಂಕಾರ ಜ್ವರವೇರಿ ಮೈಬಿಸಿಯಾಗಿದೆ. ಇವನ ಬರುವಿಕೆಯಲ್ಲಿ ಕಠೋರತೆಯು ಎದ್ದುಕಾಣುತ್ತಿದೆ ಎಂದು ಶಲ್ಯನು ಕರ್ಣನಿಗೆ ಹೇಳಿದನು.

ಅರ್ಥ:
ಉರಿ: ಬೆಂಕಿ; ಚೂಣಿ:ಮುಂಭಾಗ; ಉಸುರು: ಶ್ವಾಸ; ಹೊಗೆ: ಧೂಮ; ಉಬ್ಬರ: ಅತಿಶಯ, ಹೆಚ್ಚಳ; ಕಂಪು: ರಕ್ತವರ್ಣ; ಅಕ್ಷಿ: ಕಣ್ಣು; ಕೋಡಿ: ಪ್ರವಾಹ; ಒಗು: ಹೊರಹೊಮ್ಮುವಿಕೆ ; ಕಿಡಿ: ಬೆಂಕಿಯ ಜ್ವಾಲೆ; ತುಷಾರ: ತಂಪಾದ, ಶೀತಲವಾದ, ಹಿಮ; ಚಯ: ಸಮೂಹ, ರಾಶಿ, ಗುಂಪು; ಸ್ಫುರಿತ: ಹೊಳೆದ; ಅಹಂಕಾರ: ದರ್ಪ, ಗರ್ವ; ಪ್ರತಾಪ: ಪರಾಕ್ರಮ; ಜ್ವರ: ಕಾವು; ಮೈ: ತನು; ಕಾವು: ತಾಪ, ಬಿಸಿ; ಏರು: ಹೆಚ್ಚಾಗು; ನಿಬ್ಬರ: ಅತಿಶಯ, ಹೆಚ್ಚಳ, ತುಂಬಿದ; ಬರವು: ಆಗಮನ; ಕಲಿ: ಶೂರ; ನೋಡು: ವೀಕ್ಷಿಸು;

ಪದವಿಂಗಡಣೆ:
ಉರಿಯ +ಚೂಣಿಯಲ್+ಉಸುರ +ಹೊಗೆ
ಉಬ್ಬರಿಸುತದೆ +ಕೆಂಪೇರಿದ್+ಅಕ್ಷಿಯಲ್
ಎರಡು +ಕೋಡಿಯಲ್+ಒಗುತಲ್+ಅದೆ+ ಕಿಡಿಗಳ+ ತುಷಾರಚಯ
ಸ್ಫುರದ್+ಅಹಂಕಾರ+ಪ್ರತಾಪ
ಜ್ವರದಿ+ ಮೈ +ಕಾಹೇರುತದೆ+ ನಿ
ಬ್ಬರದ +ಬರವಿಂದ್+ಈತನದು +ಕಲಿಕರ್ಣ+ ನೋಡೆಂದ

ಅಚ್ಚರಿ:
(೧) ಉಸಿರು, ಕಣ್ಣು, ತನುವಿನ ತಾಪ – ಕೋಪವನ್ನು ವರ್ಣಿಸಲು ಬಳಸಿದ ಸಾಧನಗಳು

ಪದ್ಯ ೩೩: ಕುಪಿತನಾದ ಅರ್ಜುನನು ಅಂಗಾರವರ್ಮನ ಮೇಲೆ ಯಾವ ಅಸ್ತ್ರ ಪ್ರಯೋಗಿಸಿದನು?

ಕನಲಿ ಫಲುಗುಣನಾದಡಿದ ಕೊ
ಳ್ಳೆನುತ ಕೊಳ್ಳಿಯೊಳಿಟ್ಟನಗ್ನಿಯ
ನೆನೆದು ಮಂತ್ರಿಸಲುರಿಮುಖದ ಕಾರ್ಬೊಗೆಯ ಮಬ್ಬಿನಲಿ
ಹೊನಲುಗಿಡಿಗಳ ತಗಡುರಿಯ ಕೊಂ
ಡಿನಲಿ ಮುತ್ತಿತು ರಥವನಾತನ
ಧನುವನಾತನ ತನುವನಾತನ ಸರಳ ಸಾರಥಿಯ (ಆದಿ ಪರ್ವ, ೧೧ ಸಂಧಿ, ೩೩ ಪದ್ಯ)

ತಾತ್ಪರ್ಯ:
ಮನುಷ್ಯರಾದವರು ಪೂರ್ವಾರ್ಧ ರಾತ್ರಿಯಲ್ಲಿ ಓಡಾಡಬೇಕು, ನಿಮ್ಮ ದರ್ಪಕ್ಕೆ ಬುದ್ಧಿಕಲಿಸುತ್ತೀನಿ ಎಂದು ಹೇಳಿದ ಅಂಗಾರವರ್ಮನ ಮಾತು ಅರ್ಜುನನನ್ನು ಕೆರಳಿಸಿತು, ಹಾಗದರೆ ಇದನ್ನು ಸ್ವೀಕರಿಸು, ಎಂದು ಅಗ್ನಿಯನ್ನು ನೆನೆನು ಅದನ್ನು ಅಭಿಮಂತ್ರಿಸಿ ಕೈಯಲ್ಲಿದ್ದ ಕೊಳ್ಳಿಯನ್ನೇ ಅಂಗಾರವರ್ಮನ ಮೇಲೆಸೆದನು. ಆ ಕೊಳ್ಳಿಯು ತುದಿಯಲ್ಲಿ ಉರಿಯುತ್ತಿತ್ತು, ಸುತ್ತಲೂ ಕಪ್ಪು ಹೊಗೆ ಹಬ್ಬಿತ್ತು, ಕಿಡಿಗಳ ಪ್ರವಾಹ ಹರಿಯುತ್ತಿತ್ತು, ಉರಿಯ ತಗಡುಗಳು ಚೂಪಾಗಿ ಮುಂದುವರಿದು ಅಂಗಾರವರ್ಮನ ರಥ, ಬಿಲ್ಲು, ಬಾಣಗಳು ದೇಹ ಸಾರಥಿಗಳನ್ನು ಮುತ್ತಿತ್ತು.

ಅರ್ಥ:
ಕನಲಿ: ಕೋಪಗೊಳ್ಳು; ಫಲುಗುಣ: ಅರ್ಜುನ; ಆಡಿದ: ಮಾತಾಡು; ಕೊಳ್: ತೆಗೆದುಕೊ; ಕೊಳ್ಳಿ: ಪಂಜು; ಅಗ್ನಿ: ಬೆಂಕಿ; ನೆನೆದು: ನೆನಪಿಸಿಕೊ, ಜ್ಞಾಪಿಸಿಕೊ; ಮಂತ್ರಿಸಿ: ಶ್ಲೋಕ, ಪ್ರಾರ್ಥನೆ ಮೂಲಕ ದೇವತೆಗಳನ್ನು ಕರೆಯುವುದು; ಉರಿ: ಜ್ವಲಿಸು, ಸುಡು; ಮುಖ: ಆನನ; ಕಾರ್ಬೊಗೆ: ದಟ್ಟವಾದ ಹೊಗೆ; ಮಬ್ಬು: ಮಂಜಾಗಿ ಕಾಣಿಸು, ಸ್ಪಷ್ಟತೆಯಿಲ್ಲದ; ಹೊನಲು: ಪ್ರವಾಹ, ಹೊಳೆ; ಗಿಡ: ವೃಕ್ಷ; ತಗಡು: ದಟ್ಟಣೆ, ಸಾಂದ್ರತೆ; ಕೊಂಡಿ: ಕೊಕ್ಕೆ, ತುದಿ; ಮುತ್ತಿತು: ಸುತ್ತುವರೆ; ರಥ: ತೇರು, ಬಂಡಿ; ಧನು: ಬಿಲ್ಲು; ತನು: ದೇಹ; ಸರಳ: ಸುಲಭ; ಸಾರಥಿ: ರಥಿಕ;

ಪದವಿಂಗಡನೆ:
ಕನಲಿ +ಫಲುಗುಣನ್+ಆದಡ್+ಇದ+ ಕೊಳ್
ಎನುತ+ ಕೊಳ್ಳಿಯೊಳ್+ಇಟ್ಟನ್+ಅಗ್ನಿಯ
ನೆನೆದು+ ಮಂತ್ರಿಸಲ್+ಉರಿ+ಮುಖದ+ ಕಾರ್ಬೊಗೆಯ+ ಮಬ್ಬಿನಲಿ
ಹೊನಲು+ಗಿಡಿಗಳ+ ತಗಡ್+ಉರಿಯ+ ಕೊಂ
ಡಿನಲಿ+ ಮುತ್ತಿತು +ರಥವನ್+ಆತನ
ಧನುವನ್+ಆತನ +ತನುವನ್+ಆತನ +ಸರಳ +ಸಾರಥಿಯ

ಅಚ್ಚರಿ:
(೧) ಆತನ – ೩ ಬಾರಿ ಪ್ರಯೋಗ; ಉರಿ: ೨ ಬಾರಿ ಪ್ರಯೋಗ
(೨) ಕೊಳ್, ಕೊಳ್ಳಿ – ಪದಗಳನ್ನು ಜೋಡಿಯಾಗಿ ಬಳೆಸಿರುವುದು