ಪದ್ಯ ೧೮: ಸರ್ಪಾಸ್ತ್ರವು ಹೇಗೆ ಮುನ್ನುಗ್ಗಿತು?

ಏನಹೇಳುವೆ ಬಳಿಕ ಭುವನ
ಗ್ಲಾನಿಯನು ತೆಗೆದೊಡಿದರು ವೈ
ಮಾನಿಕರು ವೆಂಠಣಿಸಿತುರಿಯಪ್ಪಳಿಸಿತಂಬರವ
ಕಾನಿಡುವ ಕಬ್ಬೊಗೆಯ ಚೂರಿಸು
ವಾನನದ ಕಟವಾಯ ಲೋಳೆಯ
ಜೇನಹುಟ್ಟಿಯ ಬಸಿವ ವಿಷದಲಿ ಬಂದುದುರಗಾಸ್ತ್ರ (ಕರ್ಣ ಪರ್ವ, ೨೫ ಸಂಧಿ, ೧೮ ಪದ್ಯ)

ತಾತ್ಪರ್ಯ:
ಕರ್ಣನು ಸರ್ಪಾಸ್ತ್ರವನ್ನು ಬಿಟ್ಟ ನಂತರ ಲೋಕದ ಕ್ಷೋಭೆಯನ್ನು ಏನೆಂದು ಹೇಳಲಿ? ದೇವತೆಗಳು ಆಕಾಶದಲ್ಲಿ ದೂರಕ್ಕೋಡಿದರು, ಅಸ್ತ್ರಾ ಉರಿಯು ಎಲ್ಲಾ ದಿಕ್ಕುಗಳನ್ನ್ನು ಆವರಿಸಿತು, ಹೇಡೆಯನ್ನು ಚಾಚಿ ಜೇನಿನ ಗೂಡಿನಿಂದ ಜಿನುಗುವ ಜೇನುತುಪ್ಪದಂತೆ ಸರ್ಪಾಸ್ತ್ರವು ವಿಷವನ್ನು ಸುರಿಸುತ್ತಾ ಮುನ್ನುಗ್ಗಿತು.

ಅರ್ಥ:
ಬಳಿಕ: ನಂತರ; ಭುವನ: ಜಗತ್ತು; ಗ್ಲಾನಿ: ಅವನತಿ, ನಾಶ; ಓಡು: ಪಲಾಯನ; ವೈಮಾನಿಕ: ದೇವತೆ; ವಂಠಣ: ಮುತ್ತಿಗೆಹಾಕು, ಸುತ್ತುವರಿ; ಉರಿ: ಬೆಂಕಿಯ ಕಿಡಿ; ಅಪ್ಪಳಿಸು: ತಟ್ಟು, ತಾಗು; ಅಂಬರ: ಆಗಸ; ಕಾನಿಡು: ದಟ್ಟವಾಗು, ಸಾಂದ್ರವಾಗು; ಕಬ್ಬೊಗೆ: ಕರಿಯಾದ ಹೊಗೆ; ಚೂರಿಸು: ಕತ್ತರಿಸು; ಆನನ: ಮುಖ; ಕಟವಾಯಿ: ಬಾಯಿ ಕೊನೆ; ಲೋಳೆ: ಅ೦ಟುಅ೦ಟಾಗಿರುವ ದ್ರವ್ಯ; ಜೇನು: ದುಂಬಿ; ಹುಟ್ಟಿ: ಜೇನಿನ ಗೂಡು; ಬಸಿ:ಜಿನುಗು ; ವಿಷ: ನಂಜು; ಉರಗಾಸ್ತ್ರ: ಸರ್ಪಾಸ್ತ್ರ;

ಪದವಿಂಗಡಣೆ:
ಏನಹೇಳುವೆ+ ಬಳಿಕ+ ಭುವನ
ಗ್ಲಾನಿಯನು +ತೆಗೆದ್+ಓಡಿದರು +ವೈ
ಮಾನಿಕರು+ ವೆಂಠಣಿಸಿತ್+ಉರಿ +ಅಪ್ಪಳಿಸಿತ್+ಅಂಬರವ
ಕಾನಿಡುವ +ಕಬ್ಬೊಗೆಯ +ಚೂರಿಸುವ್
ಆನನದ +ಕಟವಾಯ +ಲೋಳೆಯ
ಜೇನಹುಟ್ಟಿಯ +ಬಸಿವ+ ವಿಷದಲಿ+ ಬಂದುದ್+ಉರಗಾಸ್ತ್ರ

ಅಚ್ಚರಿ:
(೧) ವಿಷವು ಹೊರಹೊಮ್ಮುತ್ತಿತ್ತು ಎಂದು ಹೇಳಲು ಜೇನಿನ ಉಪಮಾನವನ್ನು ಬಳಸಿದ ಪರಿ
(೨) ಉಪಮಾನದ ಪ್ರಯೋಗ – ಕಾನಿಡುವ ಕಬ್ಬೊಗೆಯ ಚೂರಿಸುವಾನನದ ಕಟವಾಯ ಲೋಳೆಯ ಜೇನಹುಟ್ಟಿಯ ಬಸಿವ ವಿಷದಲಿ ಬಂದುದುರಗಾಸ್ತ್ರ
(೩) ದೇವತೆಗಳನ್ನು ವೈಮಾನಿಕರು ಎಂದು ಕರೆದಿರುವುದು

ಪದ್ಯ ೪: ಕರ್ಣನು ಯಾವ ಅಸ್ತ್ರದ ಪ್ರಯೋಗ ಮಾಡಿದನು?

ಉಗಿದನುರಗಾಸ್ತ್ರವನು ಹೊಮ್ಮೂ
ಡಿಗೆಯೊಳಗೆ ಹೊರಕಯ್ಯ ಗಾಳಿಗೆ
ಹೊಗೆಯ ಹೊದರ್ನ ಹೊರಳಿ ಹಬ್ಬಿತು ಕೂಡೆ ಕಿಡಿಯಿದು
ಗಗನ ಗಮನದ ನಿಖಿಳವಿಹಗಾ
ಳಿಗಳು ಬೆಂದವು ಗಾಢ ಗರಳದ
ಸೊಗಡ ಸೋಹಿಗೆ ಕಂಠಣಿಸಿತೆರಡೊಡ್ಡು ಕಳವಳಿಸಿ (ಕರ್ಣ ಪರ್ವ, ೨೫ ಸಂಧಿ, ೪ ಪದ್ಯ)

ತಾತ್ಪರ್ಯ:
ಕುಪಿತನಾದ ಕರ್ಣನು ತನ್ನ ಚಿನ್ನದ ಬತ್ತಳಿಕೆಯಿಂದ ಸರ್ಪಾಸ್ತ್ರವನ್ನು ಹೊರತೆಗೆದನು. ಅದನ್ನು ತೆಗೆದ ವೇಗಕ್ಕೆ ಗಾಳಿಯಲ್ಲಿ ಹೊಗೆಯು ಎಲ್ಲೆಡೆ ಹಬ್ಬಿತು. ಅಸ್ತ್ರದ ತುದಿಯಿಂದ ಹೊರಬಂದ ಕಿಡಿಗಳ ತಾಪಕ್ಕೆ ಹಾರಾಡುತ್ತಿದ್ದ ಪಕ್ಷಿಗಳು ಬೆಂದುಹೋದವು. ವಿಷದ ಸೊಗಡು ಎಲ್ಲೆಲ್ಲೂ ಹಬ್ಬಿತು, ಎರಡು ಸೇನೆಗಳು ಈ ಗಾಳಿಯನ್ನು ಕುಡಿದು ತಾಪದಿಂದ ಬೆಂದು ಕಳವಳಗೊಂಡರು.

ಅರ್ಥ:
ಉಗಿ: ಹೊರಹಾಕು; ಉರಗ: ಸರ್ಪ, ಹಾವು; ಅಸ್ತ್ರ: ಆಯುಧ, ಶಸ್ತ್ರ; ಹೊಮ್ಮು: ಹೊರಚಿಮ್ಮು; ಹೊರಕಯ್ಯಿ: ಕೈ ಮೇಲ್ಭಾಗ; ಗಾಳಿ: ವಾಯು; ಹೊಗೆ: ಧೂಮ; ಹೊದರು: ತೊಡಕು, ತೊಂದರೆ, ಗುಂಪು; ಹೊರಳು: ತಿರುವು, ಬಾಗು; ಹಬ್ಬು: ಆವರಿಸು; ಕೂಡು: ಸೇರು; ಕಿಡಿ: ಬೆಂಕಿ; ಗಗನ: ಆಗಸ; ಗಮನ: ನಡಗೆ, ಚಲನೆ; ನಿಖಿಳ: ಎಲ್ಲಾ; ವಿಹಗ: ಪಕ್ಷಿ; ಆಳಿ: ಆವಳಿ, ಗುಂಪು; ಬೆಂದು: ಸುಟ್ಟು ಹೋಗು; ಗಾಢ: ಬಹಳ, ತುಂಬ; ಗರಳ: ವಿಷ; ಸೊಗಡು: ವಾಸನೆ; ಸೋಹಿ: ಅಟ್ಟು, ಓಡಿಸು; ಕಂಠ: ಕೊರಳು; ಒಡ್ಡು: ಸೈನ್ಯ, ಪಡೆ ; ಕಳವಳ: ಆತಂಕ;

ಪದವಿಂಗಡಣೆ:
ಉಗಿದನ್+ಉರಗಾಸ್ತ್ರವನು +ಹೊಮ್ಮೂ
ಡಿಗೆಯೊಳಗೆ +ಹೊರಕಯ್ಯ +ಗಾಳಿಗೆ
ಹೊಗೆಯ+ ಹೊದರಿನ+ ಹೊರಳಿ +ಹಬ್ಬಿತು +ಕೂಡೆ +ಕಿಡಿಯಿದು
ಗಗನ+ ಗಮನದ+ ನಿಖಿಳ+ವಿಹಗಾ
ಳಿಗಳು +ಬೆಂದವು +ಗಾಢ +ಗರಳದ
ಸೊಗಡ +ಸೋಹಿಗೆ +ಕಂಠಣಿಸಿತ್+ಎರಡ್+ಒಡ್ಡು +ಕಳವಳಿಸಿ

ಅಚ್ಚರಿ:
(೧) ಹ ಕಾರದ ಸಾಲು ಪದ – ಹೊಗೆಯ ಹೊದರ್ನ ಹೊರಳಿ ಹಬ್ಬಿತು
(೨) ಪಕ್ಷಿಗಳ ಮೇಲೆ ಇದರ ಪರಿಣಾಮ – ಗಗನ ಗಮನದ ನಿಖಿಳವಿಹಗಾಳಿಗಳು ಬೆಂದವು
(೩) ಆಗಸದಲ್ಲಿ ಹಾರುತ್ತಿದ್ದ ಎಂದು ಹೇಳಲು – ಗಗನ ಗಮನದ