ಪದ್ಯ ೩೭: ಶಲ್ಯ ಧರ್ಮಜರ ಬಾಣ ಪ್ರಯೋಗ ಹೇಗಿತ್ತು?

ಧರಣಿಪತಿಯಂಬುಗಳನೆಡೆಯಲಿ
ತರಿದು ತುಳುಕಿದನಂಬಿನುಬ್ಬಿನ
ಗರಿಯ ಗಾಳಿಯ ದಾಳಿ ಪೈಸರಿಸಿದುದು ಪರ್ವತವ
ಮೊರೆವ ಕಣೆ ಮಾರ್ಗಣೆಗಳನು ಕ
ತ್ತರಿಸಿದವು ಬಳಿಯಂಬುಗಳು ಪಡಿ
ಸರಳ ತೂಳಿದಡೆಚ್ಚರೆಚ್ಚರು ಮೆಚ್ಚಲುಭಯಬಲ (ಶಲ್ಯ ಪರ್ವ, ೩ ಸಂಧಿ, ೩೭ ಪದ್ಯ)

ತಾತ್ಪರ್ಯ:
ಯುಧಿಷ್ಠಿರನ ಬಾಣಗಳನ್ನು ಶಲ್ಯನು ಕತ್ತರಿಸಿ, ಅವನ ಮೇಲೆ ಬಾಣಗಳನ್ನು ಬಿಟ್ಟನು. ಆ ಬಾಣಗಳ ಗಾಳಿಗೆ ಪರ್ವತವೂ ಹಿಂದಕ್ಕೆ ಸರಿಯಬೇಕೆನ್ನುವಷ್ಟು ಶಕ್ತಿಯಿತ್ತು. ಅವರಿಬ್ಬರ ಅಬ್ಬರದ ಬಾಣ ಪ್ರತಿಬಾಣಗಳು ಒಂದನ್ನೊಂದು ಕತ್ತರಿಸಿ ಹಾಕಿದವು. ಹಿಂದೆ ಮತ್ತೆ ಬಾಣಗಳು ಅದಕ್ಕೆದುರಾಗಿ ಬೇರೆಯ ಬಾಣಗಳು ಬಿಡುವುದನ್ನು ಕಂಡ ಎರಡು ಕಡೆಯ ಸೈನಿಕರು ಇಬ್ಬರನ್ನು ಮೆಚ್ಚಿದರು.

ಅರ್ಥ:
ಧರಣಿಪತಿ: ರಾಜ; ಅಂಬು: ಬಾಣ; ಎಡೆ: ಸುಲಿ, ತೆಗೆ; ತರಿ: ಕಡಿ, ಕತ್ತರಿಸು; ತುಳುಕು: ಹೊರಸೂಸುವಿಕೆ; ಉಬ್ಬು: ಹಿಗ್ಗು; ಗರಿ: ಬಾಣದ ಹಿಂಭಾಗ; ಗಾಳಿ: ವಯು; ದಾಳಿ: ಆಕ್ರಮಣ; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ಪರ್ವತ: ಬೆಟ್ಟ; ಮೊರೆ: ಗುಡುಗು,ಝೇಂಕರಿಸು; ಕಣೆ: ಬಾಣ; ಮಾರ್ಗಣೆ: ಪ್ರತಿಯಾಗಿ ಬಿಡುವ ಬಾಣ, ಎದುರು ಬಾಣ; ಕತ್ತರಿಸು: ಚೂರು ಮಾಡು; ಬಳಿ: ಹತ್ತಿರ; ಪಡಿಸರಳ: ಸಮಾನವಾದುದು ಬಾಣ; ತೂಳು: ಆವೇಶ, ಹಿಂಬಾಲಿಸು; ಎಚ್ಚು: ಬಾಣ ಪ್ರಯೋಗ ಮಾಡು; ಮೆಚ್ಚು: ಪ್ರಶಂಶಿಸು; ಉಭಯ: ಎರಡು; ಬಲ: ಸೈನ್ಯ;

ಪದವಿಂಗಡಣೆ:
ಧರಣಿಪತಿ+ಅಂಬುಗಳನ್+ಎಡೆಯಲಿ
ತರಿದು +ತುಳುಕಿದನ್+ಅಂಬಿನ್+ಉಬ್ಬಿನ
ಗರಿಯ +ಗಾಳಿಯ +ದಾಳಿ +ಪೈಸರಿಸಿದುದು +ಪರ್ವತವ
ಮೊರೆವ +ಕಣೆ +ಮಾರ್ಗಣೆಗಳನು+ ಕ
ತ್ತರಿಸಿದವು +ಬಳಿ+ಅಂಬುಗಳು+ ಪಡಿ
ಸರಳ +ತೂಳಿದಡ್+ಎಚ್ಚರ್+ಎಚ್ಚರು +ಮೆಚ್ಚಲ್+ಉಭಯಬಲ

ಅಚ್ಚರಿ:
(೧) ಎಚ್ಚರೆಚ್ಚರು ಮೆಚ್ಚಲುಭಯಬಲ – ಚ್ಚ ಕಾರದ ಪದಗಳ ಬಳಕೆ
(೨) ರೂಪಕದ ಪ್ರಯೋಗ – ಗರಿಯ ಗಾಳಿಯ ದಾಳಿ ಪೈಸರಿಸಿದುದು ಪರ್ವತವ

ಪದ್ಯ ೧೮: ನಾರಾಯಣಾಸ್ತ್ರದ ಪ್ರಖರತೆ ಹೇಗಿತ್ತು?

ಗುಳವ ಕೊಯ್ದಿಳುಹಿದರು ಕರಿಸಂ
ಕುಳದಲಾರೋಹಕರು ಜೋಡನು
ಕಳಚಿ ಬಿಸುಟರು ರಾವುತರು ಹಕ್ಕರಿಕೆಗಳು ಸಹಿತ
ಝಳದ ಝಾಡಿಗೆ ಬೆವರಿ ವಸನಾಂ
ಚಲದ ಗಾಳಿಗೆ ಮೊಗವನೆತ್ತಿದ
ರಳುಕಿ ಕಣ್ ಕೋರೈಸಿ ಮಮ್ಮಲ ಮರುಗಿತುಭಯಬಲ (ದ್ರೋಣ ಪರ್ವ, ೧೯ ಸಂಧಿ, ೧೮ ಪದ್ಯ)

ತಾತ್ಪರ್ಯ:
ಎರಡೂ ಸೈನ್ಯಗಳಲ್ಲಿ ಕಾದುಹೋಗಿದ್ದ ಆನೆಗಳ ಕವಚವನ್ನು ಜೋದರು ಕೊಯ್ದೆಸೆದರು. ರಾವುತರು ಕುದುರೆಗಳ ಕವಚ ತಡಿಗಳನ್ನು ಕಳಚಿ ಎಸೆದರು. ಝಳವನ್ನು ತಡೆಯಲಾರದೆ ಉತ್ತರೀಯದ ತುದಿಗಳಿಂದ ಗಾಳಿಯನ್ನು ಯೋಧರು ಹಾಕಿಕೊಂಡರು. ಎರಡೂ ಸೇನೆಗಳು ಒದಗಿದ ದುರ್ಗತಿಗೆ ಮರುಗಿದವು. ಅಸ್ತ್ರದ ಕಾಂತಿಯಿಂದ ಅವರ ಕಣ್ಣುಗಳು ಕುಕ್ಕಿದಂತಾದವು.

ಅರ್ಥ:
ಗುಳ: ಆನೆ ಕುದುರೆಗಳ ಪಕ್ಷರಕ್ಷೆ; ಕೊಯ್: ಸೀಳು; ಇಳುಹಿ: ಕೆಳಕ್ಕೆ ಇಳಿಸು; ಕರಿ: ಆನೆ; ಸಂಕುಳ: ಗುಂಪು; ಆರೋಹಕ: ಜೋದರು, ಮಾವುತ; ಜೋಡು: ಜೊತೆ, ಜೋಡಿ; ಕಳಚು: ಬಿಚ್ಚು; ಬಿಸುಟು: ಹೊರಹಾಕು; ರಾವುತ: ಕುದುರೆ ಸವಾರ, ಅಶ್ವಾರೋಹಿ; ಹಕ್ಕರಿಕೆ: ಆನೆ ಕುದುರೆಗಳ ಪಕ್ಕವನ್ನು ರಕ್ಷಿಸುವ ಸಾಧನ; ಸಹಿತ: ಜೊತೆ; ಝಳ: ಪ್ರಕಾಶ; ಝಾಡಿ: ಕಾಂತಿ; ಬೆವರು: ಸ್ವೇದಗೊಳ್ಳು, ಭಯಗೊಳ್ಳು; ವಸನ: ಬಟ್ಟೆ, ವಸ್ತ್ರ; ಅಂಚಲ: ಸೀರೆಯ ಸೆರಗು; ಗಾಳಿ: ವಾಯು; ಮೊಗ: ಮುಖ; ಎತ್ತು: ಮೇಲೇರು; ಅಳುಕು: ಭಯ; ಕಣ್: ನಯನ; ಕೋರೈಸು: ಕಣ್ಣು ಕುಕ್ಕು; ಮಮ್ಮಲ: ಅತಿಶಯವಾಗಿ, ವಿಶೇಷವಾಗಿ; ಮರುಗು:ತಳಮಳ, ಸಂಕಟ, ಕಷ್ಟಪಡು; ಉಭಯ: ಎರಡು; ಬಲ: ಸೈನ್ಯ;

ಪದವಿಂಗಡಣೆ:
ಗುಳವ +ಕೊಯ್ದ್+ಇಳುಹಿದರು +ಕರಿ+ಸಂ
ಕುಳದಲ್+ಆರೋಹಕರು +ಜೋಡನು
ಕಳಚಿ +ಬಿಸುಟರು +ರಾವುತರು +ಹಕ್ಕರಿಕೆಗಳು +ಸಹಿತ
ಝಳದ +ಝಾಡಿಗೆ+ ಬೆವರಿ+ ವಸನಾಂ
ಚಲದ +ಗಾಳಿಗೆ +ಮೊಗವನ್+ಎತ್ತಿದರ್
ಅಳುಕಿ +ಕಣ್ +ಕೋರೈಸಿ +ಮಮ್ಮಲ +ಮರುಗಿತ್+ಉಭಯಬಲ

ಅಚ್ಚರಿ:
(೧) ಗುಳ, ಸಂಕುಳ, ಝಳ – ಪ್ರಾಸ ಪದಗಳು
(೨) ಝ ಕಾರದ ಜೋಡಿ ಪದ – ಝಳದ ಝಾಡಿಗೆ

ಪದ್ಯ ೧: ದುಃಖದ ವಿಷಯವನ್ನು ಯಾರು ತಂದರು?

ತೆಗೆದುದರಿಪರಿವಾರ ಕಹಳಾ
ದಿಗಳ ಸನ್ನೆಯಲುಭಯಬಲ ಕಾ
ಳೆಗವನುಳಿದುದು ಬಂದು ಹೊಕ್ಕರು ತಮ್ಮ ಪಾಲಯವ
ಮಗನು ರಣದಲಿ ಮಡಿದ ಹದ ಬೀ
ಡುಗಳೊಳಾದುದು ವಾರ್ತೆ ದೂತರು
ದುಗುಡ ಭರದಲಿ ಬಂದು ಹೊಕ್ಕರು ರಾಜಮಂದಿರವ (ದ್ರೋಣ ಪರ್ವ, ೭ ಸಂಧಿ, ೧ ಪದ್ಯ)

ತಾತ್ಪರ್ಯ:
ಕಹಳೆಗಳು ಸನ್ನೆಮಾಡಲು ಎರಡೂ ಸೇರ್ನೆಗಳು ಯುದ್ಧವನ್ನು ನಿಲ್ಲಿಸಿ ತಮ್ಮ ಪಾಳೆಯಗಳಿಗೆ ಹೋಗಿ ಸೇರಿದರು. ಅಭಿಮನ್ಯುವು ರಣದಲ್ಲಿ ಮಡಿದ ಸುದ್ದಿ ಎಲ್ಲಾ ಗೂಡಾರಗಳಲ್ಲೂ ಹಬ್ಬಿತು. ದುಃಖಭರದಿಂದ ನೊಂದ ದೂತರು ರಾಜಮಂದಿರಕ್ಕೆ ಬಂದರು.

ಅರ್ಥ:
ತೆಗೆ: ಹೊರತರು; ಅರಿ: ವೈರಿ; ಪರಿವಾರ: ಸುತ್ತಲಿನವರು, ಪರಿಜನ; ಕಹಳೆ: ತುತ್ತೂರಿ; ಆದಿ: ಮುಂತಾದ; ಸನ್ನೆ: ಗುರುತು; ಉಭಯ: ಎರದು; ಬಲ: ಸೈನ್ಯ; ಕಾಳೆಗ: ಯುದ್ಧ; ಉಳಿದ: ಮಿಕ್ಕ; ಹೊಕ್ಕು: ಸೇರು; ಪಾಳಯ: ಬಿಡಾರ; ಮಗ: ಪುತ್ರ; ರಣ: ಯುದ್ಧ; ಮಡಿದ: ಸತ್ತ; ಹದ: ರೀತಿ; ಬಿಡು: ಬಿಡಾರ; ವಾರ್ತೆ: ಸುದ್ದಿ; ದೂತ: ಸೇವಕ; ದುಗುಡ: ದುಃಖ; ಭರ: ಹೊರೆ, ಭಾರ; ಹೊಕ್ಕು: ಸೇರು; ರಾಜಮಂದಿರ: ಅರಮನೆ;

ಪದವಿಂಗಡಣೆ:
ತೆಗೆದುದ್+ಅರಿ+ಪರಿವಾರ +ಕಹಳಾ
ದಿಗಳ +ಸನ್ನೆಯಲ್+ಉಭಯಬಲ +ಕಾ
ಳೆಗವನ್+ಉಳಿದುದು +ಬಂದು +ಹೊಕ್ಕರು +ತಮ್ಮ +ಪಾಳಯವ
ಮಗನು +ರಣದಲಿ +ಮಡಿದ +ಹದ +ಬೀ
ಡುಗಳೊಳ್+ಆದುದು +ವಾರ್ತೆ +ದೂತರು
ದುಗುಡ +ಭರದಲಿ +ಬಂದು +ಹೊಕ್ಕರು +ರಾಜಮಂದಿರವ

ಅಚ್ಚರಿ:
(೧) ಬೀಡು, ಪಾಳಯ – ಸಮಾನಾರ್ಥಕ ಪದ

ಪದ್ಯ ೨೫: ಯಾವ ರೀತಿಯ ಯುದ್ಧವು ನಡೆಯಿತು?

ಒದೆದುದಬುಧಿಯನಬುಧಿಯೆನೆ ಹೊ
ಕ್ಕುದು ಚತುರ್ಬಲ ಹೊಯ್ದು ತಲೆಯೊ
ತ್ತಿದುದು ಕೇಶಾಕೇಶಿ ಖಾಡಾಖಾಡಿಯಲಿ ಭಟರು
ಕೆದರಿತರಿಬಲ ಮತ್ತೆ ಹೊದರೆ
ದ್ದುದು ವಿಘಾತಿಯಲಳಿದು ಹುರಿಗೊಂ
ಡೊದಗಿ ಹಾಣಾಹಾಣಿಯಲಿ ಹೊಯ್ದಾಡಿತುಭಯಬಲ (ದ್ರೋಣ ಪರ್ವ, ೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ಸಮುದ್ರವು ಸಮುದ್ರವನ್ನು ಒದೆಯಿತೋ ಎಂಬಂತೆ ಚತುರಂಗ ಸೈನ್ಯವು ತಲೆಗೆ ತಲೆಯೊತ್ತಿ ಖಾಡಾಖಾಡಿಯಿಂದ ಯುದ್ಧಾರಂಭಮಾಡಿತು. ಶತ್ರುಸೈನ್ಯಗಳು ಚದುರಿ ಚಲ್ಲಾಪಿಲ್ಲಿಯಾಗಿ ಮತ್ತೆ ಜೊತೆಗೂಡಿ ಹಾಣಾಹಾಣಿಯಿಂದ ಕಾದಿದವು.

ಅರ್ಥ:
ಒದೆ: ತುಳಿ, ಮೆಟ್ಟು, ನೂಕು; ಅಬುಧಿ: ಸಾಗರ; ಹೊಕ್ಕು: ಸೇರು; ಚತುರ್ಬಲ: ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಬಗೆಯ ಸೈನ್ಯ; ಹೊಯ್ದು: ಹೋರಾಡು; ತಲೆ: ಶಿರ; ಒತ್ತು: ಮುತ್ತು, ಚುಚ್ಚು; ಕೇಶ: ಕೂದಲು; ಕೇಶಾಕೇಶಿ: ಕೂದಲು ಹಿಡಿದು ಯುದ್ಧ; ಖಾಡಾಖಾಡಿ: ದ್ವಂದ್ವಯುದ್ಧ, ಮಲ್ಲಯುದ್ಧ; ಭಟ: ಸೈನಿಕ; ಕೆದರು: ಹರಡು; ಅರಿಬಲ: ವೈರಿಸೈನ್ಯ; ಹೊದರು: ಗುಂಪು, ಸಮೂಹ; ಎದ್ದು: ಮೇಲೇಳು; ವಿಘಾತ: ನಾಶ, ಧ್ವಂಸ; ಅಳಿ: ನಾಶ; ಹುರಿ: ಕಾಯಿಸು; ಒದಗು: ಲಭ್ಯ, ದೊರೆತುದು; ಹಾಣಾಹಾಣಿ: ಒಬ್ಬನು ತನ್ನ ಹಣೆಯಿಂದ ಇನ್ನೊಬ್ಬನ ಹಣೆಗೆ ಹೊಡೆದು ಮಾಡುವ ಯುದ್ಧ; ಹೊಯ್ದಾಡು: ಹೋರಾಡು; ಉಭಯ: ಎರಡು; ಬಲ: ಸೈನ್ಯ;

ಪದವಿಂಗಡಣೆ:
ಒದೆದುದ್+ಅಬುಧಿಯನ್+ಅಬುಧಿ+ಎನೆ +ಹೊ
ಕ್ಕುದು +ಚತುರ್ಬಲ +ಹೊಯ್ದು +ತಲೆ+
ಒತ್ತಿದುದು +ಕೇಶಾಕೇಶಿ +ಖಾಡಾಖಾಡಿಯಲಿ +ಭಟರು
ಕೆದರಿತ್+ಅರಿಬಲ+ ಮತ್ತೆ +ಹೊದರ್
ಎದ್ದುದು +ವಿಘಾತಿಯಲ್+ಅಳಿದು +ಹುರಿಗೊಂಡ್
ಒದಗಿ +ಹಾಣಾಹಾಣಿಯಲಿ +ಹೊಯ್ದಾಡಿತ್+ಉಭಯಬಲ

ಅಚ್ಚರಿ:
(೧) ಉಪಮಾನದ ಪ್ರಯೋಗ – ಒದೆದುದಬುಧಿಯನಬುಧಿಯೆನೆ
(೨) ಯುದ್ಧದ ಪರಿ – ಕೇಶಾಕೇಶಿ – ಕೂದಲು ಹಿಡಿದೆಳೆದು ಮಾಡುವ ಕದನ; ಖಾಡಾಕಾಡಿ – ಖಡ್ಗಕ್ಕೆ ಖಡ್ಗವನ್ನೋಡ್ಡಿ ಮಾಡುವ ಕದನ, ಹಾಣಾಹಾಣಿ – ಹಣೆಗೆ ಹಣೆಯನ್ನು ಕೊಟ್ಟು ಮಾಡುವ ಯುದ್ಧ;

ಪದ್ಯ ೧೭: ಭೀಷ್ಮರ ಸಾವಿಗೆ ಯಾರು ಕಣ್ಣೀರಿಟ್ಟರು?

ಕುದುರೆ ಕಂಬನಿಯಿಕ್ಕಿದವು ಮೈ
ಬಿದಿರಿದವು ದಂತಿಗಳು ಕಾಲಾ
ಳೊದರಿ ಕೆಡೆದವು ಕುಂದಿದವು ಕೈಮನದ ಕಡುಹುಗಳು
ಬೆದರ ಬಂದಿಗೆ ಸಿಲುಕಿತವನಿಪ
ನದಟು ವಿಕ್ರಮವಹ್ನಿ ತಂಪೇ
ರಿದುದು ಕಡುದುಮ್ಮಾನ ಕೇಣಿಯ ಹಿಡಿದುದುಭಯಬಲ (ಭೀಷ್ಮ ಪರ್ವ, ೧೦ ಸಂಧಿ, ೧೭ ಪದ್ಯ)

ತಾತ್ಪರ್ಯ:
ಕುದುರೆಗಳು ಕಂಬನಿಗರೆದವು. ಆನೆಗಳು ಮೈ ಕೊಡವಿದವು. ಕಾಲಾಳುಗಳು ಒದರಿ ಕೆಳಕ್ಕೆ ಬಿದ್ದರು. ಮೈಯ ಸತ್ವ ಮನಸ್ಸಿನ ಪರಾಕ್ರಮಗಳು ಕುಂದಿಹೋದವು. ಕೌರವನ ಪರಾಕ್ರಮವು ಹೆದರಿಕೆಗೆ ಸೆರೆಯಾಯಿತು. ವಿಕ್ರಮಾಗ್ನಿಯು ತಣ್ಣಗಾಯಿತು ಎರಡೂ ಸೈನ್ಯಗಳು ದುಃಖದಲ್ಲಿ ಮುಳುಗಿದವು.

ಅರ್ಥ:
ಕುದುರೆ: ಅಶ್ವ; ಕಂಬನಿ: ಕಣ್ಣೀರು; ಮೈ: ದೇಹ; ಬಿದಿರು: ಕೆದರು; ದಂತಿ: ಆನೆ; ಕಾಲಾಳು: ಸೈನಿಕ; ಒದರು: ಕೊಡಹು; ಕೆಡೆ:ಬೀಳು, ಕುಸಿ; ಕುಂದು: ಕೊರತೆ, ನೂನ್ಯತೆ; ಕೈ: ಹಸ್ತ; ಮನ: ಮನಸ್ಸು; ಕಡುಹು: ಸಾಹಸ, ಹುರುಪು; ಬೆದರು: ಹೆದರು; ಬಂದಿ: ಸೆರೆ, ಬಂಧನ; ಸಿಲುಕು: ಕಟ್ಟು; ಅವನಿಪ: ರಾಜ; ಅದಟು: ಪರಾಕ್ರಮ, ಶೌರ್ಯ; ವಿಕ್ರಮ: ಶೌರ್ಯ; ವಹ್ನಿ: ಬೆಂಕಿ; ತಂಪು: ತಣಿವು, ಶೈತ್ಯ; ಏರು: ಹೆಚ್ಚಾಗು; ಕದು: ಬಹಳ; ದುಮ್ಮಾನ: ದುಃಖ; ಕೇಣಿ: ಗುತ್ತಿಗೆ, ಗೇಣಿ, ಗೆಳೆತನ; ಹಿಡಿ: ಗ್ರಹಿಸು; ಉಭಯ: ಎರಡು; ಬಲ: ಸೈನ್ಯ;

ಪದವಿಂಗಡಣೆ:
ಕುದುರೆ+ ಕಂಬನಿ+ಇಕ್ಕಿದವು +ಮೈ
ಬಿದಿರಿದವು +ದಂತಿಗಳು +ಕಾಲಾಳ್
ಒದರಿ +ಕೆಡೆದವು +ಕುಂದಿದವು +ಕೈ+ಮನದ +ಕಡುಹುಗಳು
ಬೆದರ +ಬಂದಿಗೆ +ಸಿಲುಕಿತ್+ಅವನಿಪನ್
ಅದಟು +ವಿಕ್ರಮ+ವಹ್ನಿ +ತಂಪ್
ಏರಿದುದು +ಕಡು+ದುಮ್ಮಾನ +ಕೇಣಿಯ +ಹಿಡಿದುದ್+ಉಭಯಬಲ

ಅಚ್ಚರಿ:
(೧) ಕ ಕಾರದ ಸಾಲು ಪದ – ಕಾಲಾಳೊದರಿ ಕೆಡೆದವು ಕುಂದಿದವು ಕೈಮನದ ಕಡುಹುಗಳು
(೨) ದುಃಖಿತರಾದರು ಎಂದು ಹೇಳುವ ಪರಿ – ಕಡುದುಮ್ಮಾನ ಕೇಣಿಯ ಹಿಡಿದುದುಭಯಬಲ
(೩) ಕೌರವನ ಪರಾಕ್ರಮ ತಣ್ಣಗಾಯಿತು ಎಂದು ಹೇಳುವ ಪರಿ – ಅವನಿಪನದಟು ವಿಕ್ರಮವಹ್ನಿ ತಂಪೇರಿದುದು
ರಿದುದು

ಪದ್ಯ ೧೦: ಯುದ್ಧದಲ್ಲಿ ಸತ್ತವರ ಸಂಖ್ಯೆ ಎಷ್ಟಿತ್ತು?

ಜೋಳವಾಳಿಯೊಳುಂಡು ಮಾಡಿದ
ಸಾಲವನು ತಲೆಗಳಲಿ ತಿದ್ದಿದ
ರಾಳ ತರುಬುವ ಪತಿಗೆ ಹರುಷವ ಮಾಡಿ ತಮತಮಗೆ
ಕಾಲನೂರೈದದು ಸುರಸ್ತ್ರೀ
ಜಾಲ ನೆರೆಯದು ಗಗನ ಸುಭಟರ
ಸಾಲೊಳಡಗಿತು ಚಿತ್ರವೆನೆ ಹೊಯ್ದಾಡಿತುಭಯಬಲ (ಭೀಷ್ಮ ಪರ್ವ, ೬ ಸಂಧಿ, ೧೦ ಪದ್ಯ)

ತಾತ್ಪರ್ಯ:
ಸರದಿಯಲ್ಲಿ ನಿಂತು ಜೋಳವನ್ನು ತಂದು ಉಂಡು ಒಡೆಯನಲ್ಲಿ ಮಾಡಿದ್ದ ಸಾಲಗಲನ್ನು ತಮ್ಮ ತಲೆಗಳನ್ನೇ ಕೊಟ್ಟು ತೀರಿಸಿದರು. ಇಂತಹ ಸೈನಿಕರನ್ನು ಸಾಕಿದ್ದ ರಾಜರು ಅವರ ಪರಾಕ್ರಮವನ್ನು ಕಂಡು ಸಂತೋಷಪಟ್ಟರು. ಸತ್ತ ಯೋಧರಿಗೆ ಸ್ವರ್ಗದಲ್ಲಿ ನಿಲ್ಲಲು ಜಾಗವಿರಲಿಲ್ಲ. ಅವರನ್ನು ಕರೆದುಕೊಂಡು ಹೋಗಲು ಅಪ್ಸರೆಯರೇ ಸಾಕಾಗಲಿಲ್ಲ. ಆಕಾಶದಲ್ಲೆಲ್ಲಾ ವೀರಸ್ವರ್ಗವನ್ನು ಪಡೆದವರ ಸಾಲೇ ತುಂಬಿತ್ತು.

ಅರ್ಥ:
ಜೋಳವಾಳಿ: ಒಡೆಯನ ಋಣವನ್ನು ತೀರಿಸುವವನು; ಉಂಡು: ತಿಂದು; ಸಾಲ: ಎರವು; ತಲೆ: ಶಿರ; ತಿದ್ದು: ಸರಿಪಡಿಸು; ಆಳ:ಗಾಢತೆ, ಅಂತರಾಳ; ತರುಬು: ತಡೆ, ನಿಲ್ಲಿಸು; ಪತಿ: ಒಡೆಯ; ಹರುಷ: ಸಂತಸ; ಕಾಲು: ಪಾದ; ಊರು: ನೆಲೆಸು; ಸುರಸ್ತ್ರೀ; ಅಪ್ಸರೆ; ಜಾಲ: ಗುಂಪು; ನೆರೆ: ಸೇರು; ಗಗನ: ಆಗಸ; ಸುಭಟ: ಪರಾಕ್ರಮಿ; ಸಾಲು: ಸರದಿ, ಆವಳಿ; ಅಡಗು: ಮುಚ್ಚು; ಚಿತ್ರ: ಪಟ; ಹೊಯ್ದಾಡು: ಹೋರಾಡು; ಬಲ: ಸೈನ್ಯ;

ಪದವಿಂಗಡಣೆ:
ಜೋಳವಾಳಿಯೊಳ್+ಉಂಡು +ಮಾಡಿದ
ಸಾಲವನು +ತಲೆಗಳಲಿ +ತಿದ್ದಿದರ್
ಆಳ+ ತರುಬುವ+ ಪತಿಗೆ+ ಹರುಷವ+ ಮಾಡಿ +ತಮತಮಗೆ
ಕಾಲನ್+ಊರೈದದು+ ಸುರಸ್ತ್ರೀ
ಜಾಲ+ ನೆರೆಯದು +ಗಗನ+ ಸುಭಟರ
ಸಾಲೊಳ್+ಅಡಗಿತು +ಚಿತ್ರವೆನೆ +ಹೊಯ್ದಾಡಿತ್+ಉಭಯಬಲ

ಅಚ್ಚರಿ:
(೧) ಅಸಂಖ್ಯಾತ ಸೈನಿಕರ ಸತ್ತರು ಎಂದು ಹೇಳುವ ಪರಿ – ಕಾಲನೂರೈದದು ಸುರಸ್ತ್ರೀ ಜಾಲ ನೆರೆಯದು ಗಗನ ಸುಭಟರ ಸಾಲೊಳಡಗಿತು ಚಿತ್ರವೆನೆ ಹೊಯ್ದಾಡಿತುಭಯಬಲ