ಪದ್ಯ ೧೩: ಎರಡು ಸೈನ್ಯವು ಹೇಗೆ ಹೋರಾಡಿದರು?

ಆಯತಿಕೆಯಲಿ ಬಂದು ಪಾಂಡವ
ರಾಯದಳ ಮೋಹರಿಸಿ ನೀಮ್ದುದು
ರಾಯರಿಬ್ಬರ ಬೀಸುಗೈಗಳ ಸನ್ನೆ ಸಮವಾಗೆ
ತಾಯಿಮಳಲನು ತರುಬಿದಬುಧಿಯ
ದಾಯಿಗರು ತಾವಿವರೆನಲು ಬಿಡೆ
ನೋಯಬೆರಸಿದುದುಭಯಬಲ ಬಲುಖತಿಯ ಬಿಂಕದಲಿ (ಶಲ್ಯ ಪರ್ವ, ೨ ಸಂಧಿ, ೧೩ ಪದ್ಯ)

ತಾತ್ಪರ್ಯ:
ಪಾಂಡವರ ಸೇನೆಯು ಸನ್ನದ್ಧವಾಗಿ ಬಂದು ನಿಂತಿತು. ರಾಜರಿಬ್ಬರೂ ಕೈಬೀಸಿ ಯುದ್ಧಾರಂಭಕ್ಕೆ ಏಕಕಾಲದಲ್ಲಿ ಅನುಮತಿಕೊಟ್ಟರು. ಸಮುದ್ರದೊಳಗಿರುವ ಮರಳು ಮೇಲೆದ್ದು ಅಲ್ಲೋಲ ಕಲ್ಲೋಲವಾದ ಸಮುದ್ರಗಳಿಗೆ ಇವರು ದಾಯಾದಿಗಳೆನ್ನುವಂತೆ ಮಹಾಕೋಪದಿಂದ ಒಬ್ಬರೊಡನೊಬ್ಬರು ಹೋರಾಡಿದರು.

ಅರ್ಥ:
ಆಯತಿ: ವಿಸ್ತಾರ; ಬಂದು: ಆಗಮಿಸು; ರಾಯ: ರಾಜ; ದಳ: ಸೈನ್ಯ; ಮೋಹರ: ಯುದ್ಧ; ನಿಂದು: ನಿಲ್ಲು; ಬೀಸು: ಅಲ್ಲಾಡಿಸು; ಕೈ: ಹಸ್ತ; ಸನ್ನೆ: ಗುರುತು; ಸಮ: ಸರಿಸಮಾನವಾದುದು; ತಾಯಿಮಳಲು: ಸಮುದ್ರದಡಿಯಲ್ಲಿರುವ ಮರಳು; ತರುಬು: ತಡೆ, ನಿಲ್ಲಿಸು; ಅಬುಧಿ: ಸಾಗರ; ದಾಯಿಗ: ದಾಯಾದಿ; ನೋಯ: ನೋವು; ಬೆರಸು: ಕಲಿಸು; ಉಭಯ: ಎರದು; ಬಲು: ಬಹಳ; ಖತಿ: ಕೋಪ; ಬಿಂಕ: ಗರ್ವ, ಜಂಬ, ಠೀವಿ;

ಪದವಿಂಗಡಣೆ:
ಆಯತಿಕೆಯಲಿ +ಬಂದು +ಪಾಂಡವ
ರಾಯದಳ +ಮೋಹರಿಸಿ+ ನಿಂದುದು
ರಾಯರಿಬ್ಬರ +ಬೀಸುಗೈಗಳ +ಸನ್ನೆ+ ಸಮವಾಗೆ
ತಾಯಿಮಳಲನು +ತರುಬಿದ್+ಅಬುಧಿಯ
ದಾಯಿಗರು+ ತಾವಿವರೆನಲು +ಬಿಡೆ
ನೋಯ+ಬೆರಸಿದುದ್+ಉಭಯಬಲ+ ಬಲು+ಖತಿಯ +ಬಿಂಕದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ತಾಯಿಮಳಲನು ತರುಬಿದಬುಧಿಯ ದಾಯಿಗರು ತಾವಿವರೆನಲು

ಪದ್ಯ ೬೦: ದ್ರೋಣನೇಕೆ ರೋಮಾಂಚನಗೊಂಡನು?

ನನೆದುದಂತಃಕರಣ ರೋಮಾಂ
ಚನದಲಾನಂದಶ್ರುಜಲದಲಿ
ನನೆದು ಹೋಂಪುಳಿಯೋಗಿ ಕಣ್ಣೆವೆ ಮುಚ್ಚಿ ಹೊರೆಹೆಚ್ಚಿ
ನೆನೆದೆನೆನ್ನನು ನಿಮ್ಮ ಪದದರು
ಶನದಿ ಧನ್ಯನು ಬಿಜಯಮಾಡುವು
ದೆನುತ ಕಂದೆರೆದೀಕ್ಷಿಸಿದನಂದುಭಯಸೈನಿಕವ (ದ್ರೋಣ ಪರ್ವ, ೧೮ ಸಂಧಿ, ೬೦ ಪದ್ಯ)

ತಾತ್ಪರ್ಯ:
ಭಾರದ್ವಾಜರ ಆತ್ಮಬೋಧೆಯಿಂದ ದ್ರೋಣನ ಅಂತಃಕರಣವು ಕರಗಿತು. ಅವನು ರೋಮಾಂಚನಗೊಂಡು, ಆನಂದಾಶ್ರುಜಲದಿಂದ ನೆನೆದು ಹಿಗ್ಗಿದನು. ನಾನು ಆತ್ಮವನ್ನು ಧ್ಯಾನ ಮಾಡಿದೆನು, ನಿಮ್ಮ ಪಾದ ದರುಶನದಿಂದ ಧನ್ಯನಾದೆನು. ತಾವು ನಡೆಯಿರಿ ಎಂದವರಿಗೆ ನಮಸ್ಕರಿಸಿ ಕಣ್ಣು ತೆರೆದು ಉಭಯ ಸೈನ್ಯಗಳನ್ನು ನೋಡಿದನು.

ಅರ್ಥ:
ನನೆ: ತೋಯು, ಒದ್ದೆಯಾಗು; ಅಂತಃಕರಣ: ಮನಸ್ಸು; ರೋಮಾಂಚನ: ಆಶ್ಚರ್ಯ; ಆನಂದ: ಸಂತೋಷ; ಆಶ್ರು: ಕಣ್ಣೀರು; ಜಲ: ನೀರು; ಹೊಂಪುಳಿ: ರೋಮಾಂಚನ, ಪುಳಕ; ಕಣ್ಣೆವೆ: ಕಣ್ಣಿನ ರೆಪ್ಪೆ; ಮುಚ್ಚು: ಮರೆಮಾಡು; ಹೊರೆ: ಭಾರ; ಹೆಚ್ಚೆ: ಅಧಿಕ; ನೆನೆ: ಜ್ಞಾಪಿಸಿಕೊ; ಪದ: ಪಾದ; ದರುಶನ: ನೋಟ; ಧನ್ಯ: ಪುಣ್ಯವಂತ; ಬಿಜಯ: ಹೊರಡು; ಕಂದೆರೆ: ಕಣ್ಣನ್ನು ಬಿಟ್ಟು; ಈಕ್ಷಿಸು: ನೋಡು; ಉಭಯ: ಎರಡು;

ಪದವಿಂಗಡಣೆ:
ನನೆದುದ್+ಅಂತಃಕರಣ+ ರೋಮಾಂ
ಚನದಲ್+ಆನಂದ್+ಅಶ್ರು+ಜಲದಲಿ
ನನೆದು +ಹೊಂಪುಳಿಯೋಗಿ+ ಕಣ್ಣೆವೆ +ಮುಚ್ಚಿ +ಹೊರೆ+ಹೆಚ್ಚಿ
ನೆನೆದೆನ್+ಎನ್ನನು +ನಿಮ್ಮ +ಪದ+ದರು
ಶನದಿ +ಧನ್ಯನು +ಬಿಜಯ+ಮಾಡುವುದ್
ಎನುತ +ಕಂದೆರೆದ್+ಈಕ್ಷಿಸಿದನಂದ್+ಉಭಯ+ಸೈನಿಕವ

ಅಚ್ಚರಿ:
(೧) ನನೆ, ನೆನೆ – ಪದಗಳ ಬಳಕೆ
(೨) ರೋಮಾಂಚನ, ಹೊಂಪುಳಿ – ಸಮಾನಾರ್ಥಕ ಪದ

ಪದ್ಯ ೨೮: ಧರ್ಮಜನು ಭೀಷ್ಮನಿಗೆ ಏನೆಂದು ಉತ್ತರಿಸಿದನು?

ಕೌರವನ ಧನವೆಂಬ ಘನಸಂ
ಸಾರಗುಣದೊಳು ಬದ್ಧನಾದೆನು
ಧೀರ ನಾನೇಗೈವೆನೆನೆ ಯಮಸೂನು ಕೈಮುಗಿದು
ವೈರವೃತ್ತಿಯ ರಣದೊಳೆಮಗಿ
ನ್ನಾರು ಗತಿ ನೀನುಭಯನೃಪರಿಗೆ
ಕಾರಣಿಕ ನೀ ಮುನಿದಡೆಮಗಿನ್ನಾಸೆಯಿಲ್ಲೆಂದ (ಭೀಷ್ಮ ಪರ್ವ, ೨ ಸಂಧಿ, ೨೮ ಪದ್ಯ)

ತಾತ್ಪರ್ಯ:
ಎಲೈ ಧರ್ಮಜ, ಕೌರವನ ಐಶ್ವರ್ಯದಿಂದ ನಾನು ಬಂಧಿತನಾಗಿದ್ದೇನೆ, ಧರ್ಮಜ ನಾನು ಏನು ಮಾಡಲು ಸಾಧ್ಯ ಎಂದು ಭೀಷ್ಮರು ಕೇಳಲು, ಧರ್ಮಜನು ಕೈಮುಗಿದು, ತಾತ, ನೀವು ನಮ್ಮಿಬ್ಬರಿಗೂ ಹಿರಿಯರು, ಯುದ್ಧದಲ್ಲಿ ವೈರವೇ ಪ್ರಮುಖ, ಹೀಗಿರಲು ನಿನ್ನನ್ನು ಬಿಟ್ಟರೆ ನಮಗಿನ್ನಾರು ದಿಕ್ಕು ಎಂದು ಕೇಳಿದನು.

ಅರ್ಥ:
ಧನ: ಐಶ್ವರ್ಯ; ಘನ: ದೊಡ್ಡ, ಶ್ರೇಷ್ಠ; ಸಂಸಾರ: ಪರಿವಾರ, ಕುಟುಂಬ; ಗುಣ: ನಡತೆ; ಬದ್ಧ: ಕಟ್ಟಿದ, ಬಿಗಿದ; ಧೀರ: ಶೂರ; ಸೂನು: ಮಗ; ಕೈಮುಗಿ: ನಮಸ್ಕರಿಸು; ವೈರ: ಶತ್ರು; ವೃತ್ತಿ: ಕೆಲಸ; ರಣ: ಯುದ್ಧ; ಗತಿ: ದಾರಿ, ದಿಕ್ಕು; ಉಭಯ: ಎರಡು; ನೃಪ: ರಾಜ; ಕಾರಣಿಕ: ಮಹಿಮಾಪುರುಷ; ಮುನಿ: ಕೋಪ; ಆಸೆ:ಭರವಸೆ, ನಂಬಿಕೆ;

ಪದವಿಂಗಡಣೆ:
ಕೌರವನ +ಧನವೆಂಬ +ಘನ+ಸಂ
ಸಾರ+ಗುಣದೊಳು +ಬದ್ಧನಾದೆನು
ಧೀರ +ನಾನೇಗೈವೆನ್+ಎನೆ +ಯಮಸೂನು +ಕೈಮುಗಿದು
ವೈರವೃತ್ತಿಯ+ ರಣದೊಳ್+ಎಮಗಿ
ನ್ನಾರು +ಗತಿ +ನೀನ್+ಉಭಯ+ನೃಪರಿಗೆ
ಕಾರಣಿಕ+ ನೀ+ ಮುನಿದಡ್+ಎಮಗಿನ್ನಾಸೆ+ಇಲ್ಲೆಂದ

ಅಚ್ಚರಿ:
(೧) ಯುದ್ಧಕ್ಕೆ ಪ್ರಮುಖವಾದುದು – ವೈರವೃತ್ತಿಯ ರಣದೊಳ್
(೨) ಭೀಷ್ಮರನ್ನು ಹೊಗಳುವ ಪರಿ – ನೀನುಭಯನೃಪರಿಗೆ ಕಾರಣಿಕ ನೀ ಮುನಿದಡೆಮಗಿನ್ನಾಸೆಯಿಲ್ಲೆಂದ